ಬುಧವಾರ, ನವೆಂಬರ್ 20, 2019
20 °C

ಹಾಳಾದ ರಸ್ತೆ; ಕಾಣದ ದುರಸ್ತಿ

Published:
Updated:

ಚಿಂತಾಮಣಿ: ನಗರದಿಂದ ಚೇಳೂರು ಮೂಲಕ ಬಾಗೇಪಲ್ಲಿಗೆ ತೆರಳುವ ರಸ್ತೆಯಲ್ಲಿ ಗುಡಿಸಲಹಳ್ಳಿ ಕ್ರಾಸ್‌ನಿಂದ ಚಿಂತಮಾಕಲಹಳ್ಳಿ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಚಾಲನೆ ಮಾಡುವಂತಾಗಿದೆ.ನಗರದಿಂದ ಗುಡಿಸಲುಹಳ್ಳಿವರೆಗೆ ಮತ್ತು ಚಿಂತಮಾಕಲಹಳ್ಳಿ ಕ್ರಾಸ್‌ನಿಂದ ಚೇಳೂರು ವರೆಗೆ ರಸ್ತೆ ಉತ್ತಮವಾಗಿದೆ. ಆದರೆ ನಡುವೆ ಬರುವ ಈ ಭಾಗದ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಎರಡು ಬದಿಯಲ್ಲಿ ಕೊರಕಲುಗಳಿದ್ದು, ವಾಹನಗಳನ್ನು ರಸ್ತೆ ಬದಿಗೆ ಇಳಿಸಲು ಹರಸಾಹಸ ಪಡಬೇಕಾಗುತ್ತದೆ. ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರವಾಹನ ಚಾಲಕರಂತೂ ಕಣ್ಣಲ್ಲಿ ಕಣ್ಣಿಟ್ಟು ವಾಹನ ಚಾಲನೆ ಮಾಡಬೇಕು.ಈ ರಸ್ತೆಯಲ್ಲಿ ವಾಹನಗಳ ಸಂಚಾರವೂ ಅಧಿಕವಾಗಿರುತ್ತದೆ. ಚಿಂತಾಮಣಿಯಿಂದ ಚೇಳೂರು ಮೂಲಕ ಬಾಗೇಪಲ್ಲಿ ಹಾಗೂ ಚೇಳೂರು ಮೂಲಕ ಆಂಧ್ರಪ್ರದೇಶದ ಕದಿರಿ, ರಾಯಚೂಟಿ, ಫುಲಿವೆಂದಲು ಕಡೆಗೆ ಹೋಗುವ ವಾಹನಗಳು ಸಹ ಇದೇ ರಸ್ತೆಯಲ್ಲಿ ತೆರಳುತ್ತವೆ.ಹಲವು ಬಾರಿ ಅನಾಹುತಗಳು ಸಂಭವಿಸಿವೆ. ಸಾರ್ವಜನಿಕರು ಹಾಗೂ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಾಲಕರು ಸದಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ಈ ಭಾಗ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ನೂರಾರು ಹಳ್ಳಿಗಳ ಜನರು ಖಾಸಗಿ ಬಸ್‌ಗಳನ್ನೇ ಹೆಚ್ಚಾಗಿ ಆಶ್ರಯಿಸುತ್ತಾರೆ. ಟಾಪ್‌ನಲ್ಲಿ ಪ್ರಯಾಣ ಮಾಡುವುದಂತೂ ದಿನನಿತ್ಯದ ದೃಶ್ಯವಾಗಿದೆ.ಚೇಳೂರಿನಿಂದ ಹಿಡಿದು ನಗರದ ವರೆಗೂ ಈ ರಸ್ತೆಯಲ್ಲಿ ಬರುವ ಹಳ್ಳಿಗಳಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಿರುತ್ತಾರೆ. ಸುಮಾರು 15 ವರ್ಷಗಳ ಹಿಂದೆ ರಸ್ತೆಯ ಎರಡು ಬದಿಯಲ್ಲಿ ಒಂದೊಂದು ಅಡಿ ವಿಸ್ತರಣೆ ಮಾಡಿರುವುದನ್ನು ಹೊರತುಪಡಿಸಿದರೆ ದುರಸ್ತಿಯನ್ನೇ ಕಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ದೂರು, ಮನವಿ ನೀಡಲಾಗಿದೆ. ಸಾರ್ವಜನಿಕರ ಪ್ರಾಣದೊಂದಿಗೆ ಅಧಿಕಾರಿಗಳು ಚೆಲ್ಲಾಟವಾಡದೆ ಇನ್ನಾದರೂ ರಸ್ತೆ ದುರಸ್ತಿ ಮಾಡಬೇಕು.

ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)