ಮಂಗಳವಾರ, ಜನವರಿ 21, 2020
19 °C
ಮಾಯಕೊಂಡ: ಪುರಾತತ್ವ ಇಲಾಖೆ ನಿರ್ಲಕ್ಷ್ಯ, ಅಕ್ರಮ ಚಟುವಟಿಕೆಗಳ ತಾಣ

ಹಾಳು ಕೊಂಪೆಯಾದ ಅಹೋಬಳೇಶ್ವರ

ಪ್ರಜಾವಾಣಿ ವಾರ್ತೆ / -ಜಿ.ಜಗದೀಶ್‌. Updated:

ಅಕ್ಷರ ಗಾತ್ರ : | |

ಹಾಳು ಕೊಂಪೆಯಾದ ಅಹೋಬಳೇಶ್ವರ

ಮಾಯಕೊಂಡ: ಮುತ್ತಿಕೊಂಡಿರುವ ಜಾಲಿ ಪೊದೆ, ಪಾಳು ಬಿದ್ದ ಗೋಡೆ, ಒಳಗೆ ಪ್ರವೇಶಿಸಿದರೆ ತಡೆಯಲೆತ್ನಿಸುವ ಬಾವಲಿ ಮತ್ತು ಜೇಡರ ಬಲೆ..... ಇವು  ಸಮೀಪದಲ್ಲಿರುವ ಅಹೋಬಳೇಶ್ವರ ಸ್ವಾಮಿ ದೇವಾಲಯದ  ಪರಿಸರದಲ್ಲಿರುವ ಕಂಡುಬರುವ ಚಿತ್ರಣಗಳು. 11ನೇ ಶತಮಾನದ್ದು ಎನ್ನಲಾದ ಈ ಐತಿಹಾಸಿಕ ದೇವಾಲಯ ಹಾಳುಕೊಂಪೆಯಾಗಿದೆ.

ಮಾಯಕೊಂಡದಿಂದ ಅನತಿ ದೂರದಲ್ಲಿರುವ ಅಹೋಬಳೇಶ್ವರ ಸ್ವಾಮಿ ದೇವಾಲಯ ಚಿತ್ರದುರ್ಗದ ಪಾಳೆಗಾರರ ಕುಲ ದೇವರಾಗಿತ್ತು ಎಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಳೆ, ಗಾಳಿ, ಜನರಿಂದ ಹಾಳಾಗಿ ಅವಶೇಷಗಳಾಗಿ ಉಳಿದಿರುವ ಇಲ್ಲಿನ ವಿಗ್ರಹಗಳು ಮತ್ತು ಬಿತ್ತಿಚಿತ್ರಗಳು ಹಿಂದೆ ಈ ದೇವಾಲಯವ ಶಿಲ್ಪಸೌಂದರ್ಯದಿಂದ ಕಂಗೊಳಿಸಿತ್ತು ಎಂಬುದಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ. ದೇವಾಲಯದ ಮುಂಭಾಗದಲ್ಲಿ ಎತ್ತರವಾದ ದೀಪಮಾಲೆಯ ಸ್ತಂಬ ಮತ್ತು ದೇವಾಲಯದಲ್ಲಿ ನವರಂಗ, ಗರ್ಭಗುಡಿ, ಸುಕನಾಸಿ ಮತ್ತು ಮುಖಮಂಟಪ ಮಾತ್ರ ಉಳಿದಿವೆ. ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ಎರಡು ಪ್ರವೇಶ ದ್ವಾರಗಳು ಇವೆ. ಗರ್ಭಗುಡಿಯಲ್ಲಿ ಭಾಗಶಃ ಭಗ್ನಗೊಂಡ ಕಪ್ಪುಶಿಲೆಯಲ್ಲಿ ನಿರ್ಮಿಸಲಾದ ಅಹೋಬಳೇಶ್ವರ ಸ್ವಾಮಿಯಮೂರ್ತಿ ಇದೆ. ಎರಡೂ ಪ್ರವೇಶ ದ್ವಾರದ ಬಳಿ ದ್ವಾರಪಾಲಕರ ವಿಗ್ರಹಗಳಿವೆ. ಗೋಡೆಗಳು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿತಗೊಂಡಿವೆ. ನವರಂಗದಲ್ಲೂ ಅಪೂರ್ವವಾದ ಕೆತ್ತನೆಗಳು ಕಂಡು ಬರುತ್ತವೆ.ಶಯನಾವಸ್ಥೆಯಲ್ಲಿರುವ ಅಹೋಬಳೇಶ್ವರ ಸ್ವಾಮಿಯ ಕಪ್ಪು ಶಿಲೆಯ ಮೂರ್ತಿ ನಿರ್ಮಾಣಗೊಂಡಾಗ ಅದರ ಎತ್ತರ ಸುಮಾರು 8ರಿಂದ 10 ಅಡಿ ಇದ್ದು, ಈಗ 2 ಅಡಿ ಮಾತ್ರ ಉಳಿದಿದೆ. ದೇವಾಲಯ 11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ವಿಜಯ ನಗರದ ಅರಸರ ಕಾಲದಲ್ಲಿ ಜೀರ್ಣೋದ್ಧಾರ ಆಗಿರಬಹುದು. ವಿಜಯನಗರ ಕಾಲದ ಸಿಂಹ ಮುದ್ರೆ ಮತ್ತು ಹೊಯ್ಸಳರ ಲಾಂಛನಗಳೂ ಈ ದೇವಾಲಯದಲ್ಲಿ ಕಂಡು ಬರುತ್ತವೆ ಎನ್ನುತ್ತಾರೆ ಇತಿಹಾಸ ಸಂಶೋಧಕ ಬರುಡೆಕಟ್ಟೆ ಮಂಜಪ್ಪ.

ದೇವಾಲಯದ ಶಿಖರ ಕುಸಿದು ಬಿದ್ದಿದ್ದು, ದೇಗುಲದ ಎರಡು ದ್ವಾರಬಾಗಿಲುಗಳು ದುಸ್ಥಿತಿಯಲ್ಲಿವೆ. ಸುಖನಾಸಿ ಭಾಗಶಃ ಶಿಥಿಲವಾಗಿ ನೀರು ಜಿನುಗುತ್ತಿದೆ. ದೇವಾಲಯದ ಸುತ್ತಲೂ ಜಾಲಿ ಪೊದೆಗಳು ಬೆಳೆದಿದ್ದು, ನಾಯಿ–ನರಿಗಳ, ಕಿಡಿಗೇಡಿಗಳ ಅಕ್ರಮ ಚಟವಟಿಕೆಗಳ ತಾಣವಾಗಿದೆ. ಪುರಾತತ್ವ ಇಲಾಖೆ ಇದನ್ನು ಸಂರಕ್ಷಿತ ಸ್ಮಾರಕವನ್ನಾಗಿಸಬೇಕು. ದೇವಾಲಯದ ಉಳಿದ ಭಾಗಗಳು ಹಾಳಾಗುವುದನ್ನು ತಡೆದು, ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು. ಜನಪ್ರತಿನಿಧಿಗಳು  ಅನುದಾನ ಮಂಜೂರು ಮಾಡಿಸಿ ಜೀರ್ಣೋದ್ಧಾರಕ್ಕಾಗಿ ಪ್ರಯತ್ನಿಸಬೇಕು ಎನ್ನುತ್ತಾರೆ ಗ್ರಾಮದ ಯುವಕ ಸಾರಾಯದ ಕುಮಾರ ಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ, ಮಲ್ಲೇಶ್‌ ಮತ್ತು ಕನ್ನಡ ಯುವಶಕ್ತಿ ಕೇಂದ್ರದ ಪದಾಧಿಕಾರಿಗಳು. 

-ಜಿ.ಜಗದೀಶ್‌.

ಪ್ರತಿಕ್ರಿಯಿಸಿ (+)