ಹಾಳು ಹಂಪಿಯಲ್ಲೆಗ ಬಿಕೋ...

7

ಹಾಳು ಹಂಪಿಯಲ್ಲೆಗ ಬಿಕೋ...

Published:
Updated:
ಹಾಳು ಹಂಪಿಯಲ್ಲೆಗ ಬಿಕೋ...

ಹೊಸಪೇಟೆ: ಹಂಪಿಯಲ್ಲಿ ನ್ಯಾಯಾಲಯದ ಆದೇಶದಂತೆ ಬಹುತೇಕ ಅಕ್ರಮ ಕಟ್ಟಡಗಳು ನೆಲಸಮಗೊಂಡಿದ್ದು, ಜನವಸತಿ ರಹಿತವಾಗಿ `ಬಿಕೊ~ ಎನ್ನುತ್ತಿದೆ.ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು, ದೇಶವಿದೇಶಗಳಿಂದ ಬರುವ ಪ್ರವಾಸಿಗರು ಕನಿಷ್ಠ ಮೂಲಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಹೂವು ಹಣ್ಣು ಕಾಯಿ ಸೇರಿದಂತೆ ಪೂಜಾ ಪರಿಕರಗಳು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.ಖಾಲಿ: ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ಸ್ವಯಂ ಖಾಲಿ ಮಾಡಿರುವ ನಿವಾಸಿಗಳು, ತಮ್ಮ ಅನುಕೂಲಕ್ಕಾಗಿ ಕಮಲಾಪುರ, ಕಡ್ಡಿರಾಮಪುರ ಮತ್ತು ಹೊಸಪೇಟೆಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.`ಆರ್ಥಿಕ ಸಂಕಷ್ಟದಲ್ಲಿರುವ ಸುಮಾರು 80 ಕುಟುಂಬಗಳು ನಿತ್ಯವೂ ದುಡಿದು ಜೀವನ ಸಾಗಿಸಬೇಕು. ಬಾಡಿಗೆ ಕೊಟ್ಟು ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲದ ಕಾರಣ ಬೀದಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಪ್ರತಿದಿನವೂ ಹಂಪಿಯ ಸುತ್ತಲಿನ ಹೊಲಗದ್ದೆಗಳಿಗೆ ಬಂದು ದುಡಿಯುವುದು ಕಷ್ಟವಾಗುತ್ತಿದೆ. ಮೂಲಸೌಕರ್ಯಗಳೊಂದಿಗೆ ವಸತಿಗೃಹ ನಿರ್ಮಿಸುವವರೆಗೆ ಬೀದಿಪಾಲಾಗುವಂತಾಗಿದೆ ನಮ್ಮ ಬದುಕು~ ಎಂಬುದು ಸಂತ್ರಸ್ತರ ಆರೋಪ.ವಸತಿ ನೆಲೆಗಳ ತೆರವಿನಿಂದಾಗಿ ಖಾಲಿಯಾಗಿರುವ ಹಂಪಿಯಲ್ಲಿ ದೇವಸ್ಥಾನದ ಪ್ರವೇಶದ್ವಾರ ಹಾಗೂ ಪೊಲೀಸ್ ಠಾಣೆ ಎದುರು ಬಸವಣ್ಣ ಮಂಟಪದ ಬಳಿ ಎರಡು ದೀಪ ಕಾಣುತ್ತಿವೆ. ಉಳಿದಂತೆ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದೆ ಭಯಾನಕ ವಾತಾವರಣ ನಿರ್ಮಾಣ ವಾಗಿದೆ ಎಂದು ಪ್ರವಾಸಿಗರ ಆರೋಪ.ಪ್ರವಾಸಿಗರ ಅನಿಸಿಕೆಗಳು :ಐತಿಹಾಸಿಕ ಹಂಪಿಯಲ್ಲಿ ಅಕ್ರಮಗಳ ತೆರವು ಮಾಡಿರುವುದು ಸರಿ, ಆದರೆ ಹಂಪಿಗೆ ಬರುವಂತಹ ಪ್ರವಾಸಿಗರಿಗೆ, ಭಕ್ತರಿಗೆ ಮೂಲಸೌಕರ್ಯಗಳನ್ನು ನೀಡಬೇಕು.  `ಇಂದು ಏನೂ ದೊರೆಯದ ಸ್ಥಿತಿ ನಿರ್ಮಾಣವಾದಂತಾಗಿದೆ~ ಎಂದು ಪ್ರವಾಸಿಗ ಎಸ್.ಎನ್. ಪಾಟೀಲ್ ಹೇಳಿದರು.ಬೆಂಗಳೂರಿನ ಪ್ರವಾಸಿ ಪ್ರಕಾಶ್, `ಹಂಪಿ ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದು, ದೇಶವಿದೇಶಗಳಿಂದ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಕನಿಷ್ಠ ಮೂಲಸೌಲಭ್ಯವೂ ಇಲ್ಲದೆ ಪ್ರಯಾಣ ಪ್ರಯಾಸ ಎನಿಸುತ್ತಿದೆ. ಇಂಥ ವಾತಾವರಣದಿಂದ ಹಂಪಿಯನ್ನು ಮುಕ್ತಗೊಳಿಸಬೇಕು~ ಎಂದು ಹೇಳಿದರು.

ಅನಂತ ಜೋಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry