ಹಾವಿನ ಬೈಕ್ `ಸವಾರಿ'

7

ಹಾವಿನ ಬೈಕ್ `ಸವಾರಿ'

Published:
Updated:

ಗಂಗಾವತಿ: ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳನ್ನು ಅವುಗಳ ಯಜಮಾನರು ವಾಹನಗಳಲ್ಲಿ ಆಗೊಮ್ಮ, ಈಗೊಮ್ಮೆ ಸವಾರಿಗೆ ಕರೆದೊಯ್ಯುವುದು ನೋಡುತ್ತೇವೆ. ಹೆಚ್ಚೆಂದರೆ ಕೋರ್ಟ್ ಕಚೇರಿಗಳ ಮುಂದೆ ನಿಲ್ಲಿಸಿದ ವಾಹನಗಳನ್ನು ಏರುವ ಕೋತಿಗಳು ಕೆಲವೊಮ್ಮೆ ಚೇಷ್ಠೆ ಮಾಡಿ ಗಮನ ಸೆಳೆಯುವುದು ಉಂಟು. ಆದರೆ ಮರಿ ಉರಗವೊಂದು ಬೈಕಲ್ಲಿ ಊರು ಸುತ್ತಿ ಕೊನೆಗೆ ಕಿಡಿಗೇಡಿಗಳ ಕೈಗೆ ಸಿಕ್ಕು ಬಿದ್ದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.ಆ ಮರಿ ಉರಗಕ್ಕೆ ಏನನಿಸಿತೊ ಏನೋ. ಬೈಕಲ್ಲಿ ಒಮ್ಮೆ ಜಾಲಿಯಾಗಿ ಬತ್ತದ ಕಣಜ, ವಾಣಿಜ್ಯ ನಗರಿ ಗಂಗಾವತಿಯನ್ನು ಜೀವಮಾನದಲ್ಲೊಮ್ಮೆ ಸುತ್ತು ಹಾಕಬೇಕೆನಿಸಿದ್ದಿರಬೇಕು. ತಡ ಮಾಡದ ಮರಿ ಉರಗ ಮರದಿಂದ ಸರಸರ ಇಳಿದು ಮರದಡಿ ನಿಲ್ಲಿಸಿದ ದ್ವಿಚಕ್ರ ವಾಹನ ಏರಿತು. ವಾಹನ ಮಾಲಿಕನ ಕಣ್ಣಿಗೆ ಕಾಣದಂತೆ ವಾಹನದ ಡೈನಾಮೊ, ಇಂಡಿಕೇಟರ್ ಮಧ್ಯ ಇರುವ ಹೆಡ್‌ಲೈಟ್ ಬಾ      ಕ್ಸ್‌ನ ಗೂಡಿಗೆ ಸೇರಿ ವಾಯು ವಿವಾರಕ್ಕಿಳಿಯಿತು. ಇದರ ಅರಿವಿರದ ವಾಹನ ಮಾಲಿಕ ಜಮಾಪುರದ ವಿರೇಶಪ್ಪ ಸಹಜವಾಗಿ ನಗರದಲ್ಲಿ ವಾಹನವನ್ನು ಓಡಿಸಿದ್ದಾರೆ.ಇಣಕಿದ್ದೆ ತಪ್ಪಾಯಿತು: ಊರೆಲ್ಲ ಸುತ್ತಿದ ವಿರೇಶಪ್ಪ ಕೆಲಸದ ನಿಮಿತ್ತ ನ್ಯಾಯಾಲಯದ ಎದುರು ಇರುವ ಪೊಲೀಸ್ ಠಾಣೆಯ ಸಮೀಪದ ಮರದಡಿ ವಾಹನವನ್ನು ನಿಲ್ಲಿಸಿ ಸ್ನೇಹಿತರ ಜೊತೆ ಹರಟೆಗೆ ನಿಂತರು. ಇತ್ತ ಮರಿ ಉರಗಕ್ಕೂ ಹೆಡ್‌ಲೈಟ್ ಬಾಕ್ಸಲ್ಲಿ ಎಷ್ಟು ಹೊತ್ತು ಬಚಿಟ್ಟುಕೊಂಡು ಕೂರುವುದು ಎನಿಸಿರಬೇಕು.ನಿಧಾನವಾಗಿ ಹೆಡ್‌ಲೈಟ್ ಬಾಕ್ಸಿಂದ ಹೊರ ಬರಲು ಒಮ್ಮೆ ಉರಗ ಹೊರಗೆ ಇಣಕಿತು. ಅತ್ತ ಹೊರ ಬರಲು ಹೊಂಚು ಹಾಕುತ್ತಿದ್ದ ಹಾವನ್ನು ಆಕಸ್ಮಿಕವಾಗಿ ನೋಡಿದ ಬೈಕ್‌ಸವಾರ, ಒಮ್ಮೆ ಬೆಚ್ಚಿ ಬಿದ್ದು ಬೈಕಿಂದ ಅಡಿ ದೂರಕ್ಕೆ ಹಾರಿದರು.ಪ್ರಾಣಕ್ಕೆ ಸಂಚಕಾರ: ವಿಷಯ ತಿಳಿಯುತ್ತಿದ್ದಂತೆಯೆ ಹತ್ತಾರು ಜನ ಬೈಕಿನ ಸುತ್ತ ನೆರೆದರು. ಹೊರ ಬರಲು ಇಣಕಿದ್ದ ಮರಿ ಉರಗ, ಏಕಾಏಕಿ ಬೈಕಿನ ಸುತ್ತ ಜನಜಂಗುಳಿ ಏರ್ಪಡುತ್ತಿದ್ದಂತೆಯೆ ದಿಗಿಲುಗೊಂಡು ಮತ್ತೆ ಹೆಡ್‌ಲೈಟ್ ಬಾಕ್ಸಿನೊಳಗೆ ನುಸುಳಿಕೊಂಡಿತು. 

ಬೈಕಿನ ಸುತ್ತ ನೆರೆದವರ ಪೈಕಿ ಯುವಕನೊಬ್ಬ ಹಾವನ್ನು ಹೊರ ಬರಿಸಲು ಹರಸಾಹಸ ಮಾಡಿದ. ಕೊನೆಗೆ ವಾಹನ ಚಾಲೂ ಮಾಡಿ ಎಕ್ಸಲೈಟರ್ ಅದುಮಿಟ್ಟ. ಕೆಲ ಕ್ಷಣಗಳ ಬಳಿಕ ಹಾವು ಹೊರ ಬಂದು ಹ್ಯಾಂಡಲ್ ಮೇಲೆ ಏರಿತು. ಕಿಡಿಗೇಡಿಯೊಬ್ಬ ಕೋಲು ಎತ್ತಿ ಹಾವಿನ ನೆತ್ತಿಯ ಮೇಲೆ ಹಾಕುತ್ತಿದ್ದಂತೆಯೆ ಮರಿ ಉರಗದ `ನಗರ ಸುತ್ತ ಒಂದು ಸುತ್ತು' ಅಂತಿಮ ಯಾತ್ರೆ ಕೊನೆಗೊಂಡಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry