ಶನಿವಾರ, ಜನವರಿ 18, 2020
26 °C

ಹಾವೇರಿಯಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 32ನೇ ರಾಜ್ಯ ಮಟ್ಟದ ಕೃಷಿ ಮೇಳದ ಪ್ರಮುಖ ಆಕರ್ಷಣೆಯಲ್ಲಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಕೂಡಾ ಒಂದಾಗಿದೆ.ಕೃಷಿ ಮೇಳದಲ್ಲಿ ಸ್ಥಾಪಿಸಲಾದ 600 ಮಳಿಗೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳನ್ನು ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿಯೇ ಮೀಸಲಿರಿಸಲಾಗಿದೆ. ಈ ಮೇಳದಲ್ಲಿ ಕೃಷಿಗೆ ಪೂರಕವಾದ ಹತ್ತು ಹಲವು ಹೊಸ ಯಂತ್ರಗಳು ಮೇಳದಲ್ಲಿ ವ್ಯಾಪಿಸಿದ್ದರೂ, ಜಿಲ್ಲೆಯ ರೈತರನ್ನು ಹೆಚ್ಚು ಆಕರ್ಷಿಸಿದ ಒಂದೇ ಒಂದು ಯಂತ್ರವೆಂದರೆ ಹತ್ತಿ ಬಿಡಿಸುವ ಯಂತ್ರ.ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಬಿ.ಟಿ ಹತ್ತಿಯನ್ನು ದೇಶದಲ್ಲಿಯೇ ಅತಿ ಹೆಚ್ಚು ಬೆಳೆಯುವ ಜಿಲ್ಲೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಬಿ.ಟಿ ಹತ್ತಿ ಬೆಳೆಯುವ ಕ್ಷೇತ್ರ ಹೆಚ್ಚಾಗುತ್ತಲೇ ಸಾಗಿದೆ. ಆದರೆ, ಬೆಳೆ ಹೆಚ್ಚಾದಂತೆ ಅದನ್ನು ಬಿಡಿಸಲು ಕೂಲಿಯಾಳುಗಳು ಸಿಗದೇ ರೈತರು ತೀವ್ರ ತೊಂದರೆ ಅನುಭವಿಸುವುದು ಕೂಡಾ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೂಲಿಗಳ ಬೇಡಿಕೆ ಹೆಚ್ಚಾದಂತೆ ಕೂಲಿಯೂ ಪ್ರತಿ ಕೆ.ಜಿ.ಗೆ ಹತ್ತಿ ಬಿಡಿಸಲು 3 ರಿಂದ 5 ರೂಪಾಯಿಗೆ ಹೆಚ್ಚಾಗಿದೆ. ಇದರಿಂದ ಪ್ರತಿ ಕ್ವಿಂಟಲ್ ಹತ್ತಿ ಬಿಡಿಸಲು ಕನಿಷ್ಠ 500 ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ಜಿಲ್ಲೆಯಲ್ಲಿದೆ.ಈ ಎಲ್ಲ ಸಮಸ್ಯೆಗಳಿಂದ ಬೇಸತ್ತಿರುವ ಹತ್ತಿ ಬೆಳೆಯುವ ರೈತರು, ಈ ಬೆಳೆಯನ್ನು ಬೆಳೆಯುವುದೇ ಬೇಡ .ಎನ್ನುವ ಸ್ಥಿತಿಗೆ ತಲುಪಿದ್ದಾನೆ. ಆದರೆ ಈ ಕೃಷಿ ಮೇಳದಲ್ಲಿ ಹತ್ತಿ ಬಿಡಿಸಲು ಒಂದು ಯಂತ್ರವಿದೆ ಎಂಬುದು ಗೊತ್ತಾಗುತ್ತಿದ್ದಂತೆ ತಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಂತಾಯಿತು ಎಂದುಕೊಂಡು ಅದನ್ನು ನೋಡಲು ಮತ್ತು ಕೊಳ್ಳಲು ಮುಗಿ    ಬಿದ್ದಿದ್ದಾನೆ.ಕೇವಲ 8,500 ರೂಪಾಯಿಗೆ ಈ ಪುಟ್ಟ ಯಂತ್ರ ದೊರೆಯುತ್ತಿದ್ದು, ವಿದ್ಯುತ್ ಚಾರ್ಜ್‌ನಿಂದ ತನ್ನ ಕಾರ್ಯವನ್ನು ನಿರ್ವಹಿಸಲಿರುವ ಈ ಯಂತ್ರವನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 6 ತಾಸುಗಳ ಕಾಲ ನಿರಂತರವಾಗಿ ಕನಿಷ್ಠ ಒಂದೂವರೆ ಕ್ವಿಂಟಲ್ ಹತ್ತಿ ಬಿಡಿಸಿ ಕೊಡುತ್ತದೆ. ಹೀಗಾಗಿ ಜಿಲ್ಲೆಯ ರೈತರನ್ನು ಸೂಜಿಗಲ್ಲಿನಂತೆ ತನ್ನಡೆ ಸೆಳೆಯುತ್ತದೆ.`ನಾವು ಕೆಲವೇ ಯಂತ್ರಗಳನ್ನು ತಂದಿದ್ದೆವು. ಅವುಗಳಲ್ಲಿ ಬಹುತೇಕ ಈಗಾಗಲೇ ಮಾರಾಟವಾಗಿವೆ. ಇಷ್ಟೊಂದು ಬೇಡಿಕೆ ಬರಬಹುದೆಂಬ ನಿರೀಕ್ಷಿಸಿರಲಿಲ್ಲ. ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೈತರು ಮುಂಗಡ ನೀಡಿ ಯಂತ್ರವನ್ನು ಕಾಯ್ದಿರಿಸಿದ್ದಾರೆ. ಊರಿಗೆ ಹೋದ ಮೇಲೆ ಅವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು~ ಎಂದು ಹೇಳುತ್ತಾರೆ ಅಗ್ರಿಕೇರ್ ಸಂಸ್ಥೆ  ಮಾಲೀಕ ರಾಮಕೃಷ್ಣ.ಅದೇ ರೀತಿ ಅಡಿಕೆ ಬಿಡಿಸುವ ಯಂತ್ರ, ಅಡಿಕೆ ಹಾಳೆಗಳನ್ನು ಪ್ಲೇಟ್ ಮಾಡುವ ಯಂತ್ರ, ಭತ್ತ ಕಟಾವ್ ಮಾಡುವ ಹಾಗೂ ನಾಟಿ ಮಾಡುವ ಯಂತ್ರಗಳು ಕೂಡ ರೈತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.ಕಂಪೆನಿಗಳಿಗೆ ಹೆಚ್ಚಿನ ಲಾಭವನ್ನು ತಂದುಕೊಟ್ಟಿವೆ. ಹತ್ತಿ ಬಿಡಿಸುವ ಯಂತ್ರ ದೊರೆಯುವ ವಿಳಾಸ, ಅಗ್ರಿಕೇರ್, ಸಿಂಧನೂರು.         ಮೊ:  948056620.

 

ಪ್ರತಿಕ್ರಿಯಿಸಿ (+)