ಸೋಮವಾರ, ಮೇ 23, 2022
28 °C

ಹಾವೇರಿ, ರಾಣೆಬೆನ್ನೂರಿನಲ್ಲಿ ರಂಗಿನಾಟ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದು, ಮಾ. 21 ರಂದು ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರ ನಗರಗಳಲ್ಲಿ ರಂಗ ಪಂಚಮಿ ನಡೆಯಲಿದೆ.ಈಗಾಗಲೇ ಗಲ್ಲಿಗಲ್ಲಿಗಳಲ್ಲಿ ಕಾಮನ ಪ್ರತಿಷ್ಠಾಪನೆ ಮಾಡಲಾಗಿದ್ದು, ನಗರದ ರೈಲು ನಿಲ್ದಾಣದ ಬಳಿ 18 ಅಡಿ ಎತ್ತರದ ದೊಡ್ಡ ಕಾಮನನ್ನು ಪ್ರತಿಷ್ಠಾಪಿಸಲಾಗಿದೆ. ನಗರದ ಕಲ್ಲು ಮಂಟಪ, ಯಾಲಕ್ಕಿ ಓಣಿ, ಗದಿಗೇರ ಓಣಿ ಸೇರಿದಂತೆ ಅನೇಕ ಕಡೆಗಳಲ್ಲಿ ಅಲಂಕರಿಸಿದ ಮಂಟಪಗಳಲ್ಲಿ ರತಿ-ಕಾಮರನ್ನು ಪ್ರತಿಷ್ಠಾಪನೆ ಮಾಡಲಾಗಿದೆ.ಹೋಳಿ ಹಬ್ಬವನ್ನು ಸ್ವಾಗತಿಸುವ ಕಮಾನ್‌ಗಳು, ಬ್ಯಾನರ್‌ಗಳು, ಭಗವಾ ಧ್ವಜಗಳು ನಗರದೆಲ್ಲಡೆ ರಾರಾಜಿಸುತ್ತಿವೆ. ಆಟೋ, ಕಾರು, ಜೀಪ್‌ಗಳ ಮೇಲೆ ಭಗವಾ ಧ್ವಜಗಳನ್ನು ಕಟ್ಟಿಕೊಂಡು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿವೆ. ಓಕುಳಿ ಹಿನ್ನೆಲೆಯಲ್ಲಿ ಮಧ್ಯೆ ಗುಲಾಲು, ಹಲಗೆಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಸೋಮವಾರ ಬೆಳಗಿನ ಜಾವ ಕಾಮದಹನ ನಂತರ ಓಕುಳಿಯಾಟ ಆರಂಭವಾಗಲಿದೆ. ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಸಾಂಪ್ರದಾಯಿಕ ಸೋಗಿನ ಬಂಡಿಯ ಮೆರವಣಿಗೆ ಜರುಗಲಿದೆ.ಅದೇ ರೀತಿ ರಾಣೆಬೆನ್ನೂರಲ್ಲಿ ಸಹ ರಂಗ ಪಂಚಮಿ ಸೋಮವಾರ ನಡೆಯಲಿದ್ದು, ಜೀವಂತ ಕಾಮನ ಮಹೋತ್ಸವವು 53 ವರ್ಷ ಪೂರ್ಣಗೊಂಡ 54ನೇ ವರ್ಷಕ್ಕೆ ಕಾಲಿಟ್ಟಿದೆ. ಕೆಲ ತಾಲ್ಲೂಕುಗಳಲ್ಲಿ ಸೋಮವಾರ ಓಕುಳಿಯಾಟ ನಡೆದರೆ, ಕೆಲ ತಾಲ್ಲೂಕುಗಳಲ್ಲಿ ಬುಧವಾರ ಓಕುಳಿ ನಡೆಯಲಿದೆ. ಹೋಳಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಈ ಮಧ್ಯೆ ರಾಣೆಬೆನ್ನೂರಲ್ಲಿ ಜೀವಂತ ರತಿಕಾಮರನ್ನು ಪ್ರತಿಷ್ಠಾಪಿಸಿ ಅವರನ್ನು ನಗಿಸುವ ಸ್ಪರ್ಧೆ ಈ ವರ್ಷವೂ ನಡೆಯುತ್ತಿದ್ದು, ಜೀವಂತ ರತಿ ಕಾಮರನ್ನು ನಗಿಸಿದರೆ, ನಗದು ಬಹುಮಾನ ನೀಡುವ ಕಾರ್ಯಕ್ರಮ ಭಾನುವಾರ ನಡೆಯಲಿದೆ. ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮಗಳಲ್ಲಿ ಮಾರ್ಚ್ 19ರಿಂದ 27ರವರೆಗೆ ಹೋಳಿ ಹಬ್ಬ ಜರುಗಲಿದ್ದು, ಈ ಸಮಯದಲ್ಲಿ ಶಾಂತಿಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ.ಮಾ. 20ರ ಬೆಳಗ್ಗೆ 6 ಗಂಟೆಯಿಂದ 22ರ ಬೆಳಗ್ಗೆ 6ಗಂಟೆ ವರೆಗೆ ಹಾವೇರಿ ಶಹರ, ಮಾ. 20ರ ಬೆಳಗ್ಗೆ 6ಗಂಟೆಯಿಂದ 21ರ ಬೆಳಗ್ಗೆ 6 ಗಂಟೆ ವರೆಗೆ ಹಾವೇರಿ ಗ್ರಾಮೀಣ, ರಾಣೆಬೆನ್ನೂರು ನಗರದಲ್ಲಿ ಮಾ 20ರ ಬೆಳಗ್ಗೆ 6 ಗಂಟೆಯಿಂದ 22ರ ಬೆಳಗ್ಗೆ 6ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಆದೇಶ ಹೊರಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.