ಹಾವೇರಿ ಸಮಾವೇಶಕ್ಕೆ ಬಿಜೆಪಿ ಯುವಪಡೆ

7

ಹಾವೇರಿ ಸಮಾವೇಶಕ್ಕೆ ಬಿಜೆಪಿ ಯುವಪಡೆ

Published:
Updated:

ಕುಷ್ಟಗಿ: ಹಾವೇರಿಯಲ್ಲಿ ಡಿ.9ರಂದು ನಡೆಯಲಿರುವ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಇಲ್ಲಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಬೆಂಬಲಿಗ ಯುವಕರ ಪಡೆ ಸಜ್ಜಾಗಿದ್ದು ಈ ಬಗ್ಗೆ ಸಿದ್ಧತೆಗಳನ್ನು ನಡೆಸಿರುವುದು ಕಂಡುಬಂದಿದೆ.ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ, ಕೆಜೆಪಿ ಸೇರುವುದಿಲ್ಲ ಎಂಬುದನ್ನು ದೊಡ್ಡನಗೌಡ ಪುನರುಚ್ಚರಿಸುತ್ತಿರುವುದರ ನಡುವೆಯೂ ಅವರ ನೂರಾರು ಯುವ ಬೆಂಬಲಿಗರು, ಮುಖಂಡರು ಕೆಜೆಪಿ ಸಮಾವೇಶಕ್ಕೆ ತೆರಳುವವರ ಪಟ್ಟಿಯಲ್ಲಿದ್ದು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ ಪ್ರತ್ಯೇಕ ವಾಹನಗಳ ಮೂಲಕ ತೆರಳಲಿದ್ದಾರೆ ಎಂದು ತಿಳಿಸಲಾಗಿದೆ.ಬುಧವಾರ ಇಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿಧರ ಕವಲಿ, ಯುವ ಮುಖಂಡ ಮತ್ತು ಪೀಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಭುಶಂಕರಗೌಡ ಪಾಟೀಲ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಭವಿಷ್ಯವೇ ಇಲ್ಲ, ಹಾಗಾಗಿ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರುವ ತವಕದಲ್ಲಿದ್ದಾರೆ, ಅಲ್ಲದೇ ಕೆಜೆಪಿ ಸೇರುವಂತೆ ದೊಡ್ಡನಗೌಡರ ಮನ ಒಲಿಸುವಲ್ಲಿ ನಿರತರಾಗಿದ್ದೇವೆ ಎಂದರು.ದೊಡ್ಡನಗೌಡರು ಎಲ್ಲಿ ಇರುತ್ತಾರೊ ನಾವು ಅಲ್ಲಿರುತ್ತೇವೆ, ನಮ್ಮದು ವ್ಯಕ್ತಿನಿಷ್ಟೆ, ಬಿಜೆಪಿಗೆ ದುಡಿದರೂ ದೊಡ್ಡನಗೌಡರಿಗೆ ಯಾವುದೇ ಸ್ಥಾನಮಾನಗಳು ದೊರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿಯಿಂದ ಮತ್ತೆ ಕಣಕ್ಕಿಳಿದರೆ ಗೆಲುವು ಅಸಾಧ್ಯ ಎಂದ ಕವಲಿ, ಹಾಗಂತ ಹಾವೇರಿ ಸಮಾವೇಶಕ್ಕೆ ತೆರಳಲು ದೊಡ್ಡನಗೌಡರ ಸಮ್ಮತಿ ಇಲ್ಲ ಇದು ಸ್ವಂತ ನಿರ್ಧಾರ ಎಂದು ಸ್ಪಷ್ಟಪಡಿಸಿದರು.ದೊಡ್ಡನಗೌಡ ಪಾಟೀಲ ಎಲ್ಲಿರುತ್ತಾರೊ ನಾವು ಅಲ್ಲಿ ಎಂದು ಬಿಜೆಪಿ ಮುಖಂಡರಾದ ಕವಲಿ, ವೀರಣ್ಣ ಗಜೇಂದ್ರಗಡ, ಚನ್ನಬಸಯ್ಯ ಗುರುವಿನ ಹೇಳಿದರೆ ದೊಡ್ಡನಗೌಡರು ಸೇರಿದಂತೆ ಅವರ ಬೆಂಬಲಿಗರ ಸಮೂಹ, ಎಲ್ಲ ಸಂಸ್ಥೆಗಳಲ್ಲಿನ ಚುನಾಯಿತ ಬಿಜೆಪಿ ಸದಸ್ಯರು ಕೆಜೆಪಿ ಸೇರುವುದರಲ್ಲಿ ಅನುಮಾನ ಇಲ್ಲ ಎಂದು ಪ್ರಭುಶಂಕರಗೌಡ ತಿಳಿಸಿದರು.ಅಲ್ಲದೇ ಬರಲಿರುವ ಪುರಸಭೆ ಚುನಾವಣೆಯಲ್ಲಿ ಬಹಳಷ್ಟು ಅಭ್ಯರ್ಥಿಗಳು ಕೆಜೆಪಿ ಅಭ್ಯರ್ಥಿಗಳಾಗಿಯೇ ಕಣಕ್ಕಿಳಿಯಲಿದ್ದಾರೆ, ಎಲ್ಲ ವಾರ್ಡ್‌ಗಳಲ್ಲಿಯೂ ಕಾರ್ಯಕರ್ತರಿಂದ ಇದೇ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಯುವ ಮೋರ್ಚಾ ಅಧ್ಯಕ್ಷ ಹೇಳಿದರು.ಹಾವೇರಿ ಸಮಾವೇಶಕ್ಕೆ ಕೊಪ್ಪಳ ಜಿಲ್ಲೆಯಿಂದ ಸುಮಾರು 15 ಸಾವಿರ ಜನರನ್ನು ಕರೆದೊಯ್ಯುವ ಜವಾಬ್ದಾರಿಯನ್ನು ಸಂಸದ ಶಿವರಾಮಗೌಡ, ಶಾಸಕರಾದ ಸಂಗಣ್ಣ ಕರಡಿ, ಪರಣ್ಣ ಮನವಳ್ಳಿ ಅವರಿಗೆ ವಹಿಸಲಾಗಿದೆ ಎಂದು ವಿವರಿಸಿದ ಈ ಮುಖಂಡರು, ಗಂಗಾವತಿಯಿಂದ ಸುಮಾರು 40ಕ್ಕೂ ಅಧಿಕ ಸಾರಿಗೆ ಬಸ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿ ಅಚ್ಚರಿ ಮೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry