ಮಂಗಳವಾರ, ನವೆಂಬರ್ 12, 2019
28 °C

ಹಾಸನ: ಗುಟ್ಟು ಬಿಟ್ಟು ಕೊಡದ ಮತದಾರ

Published:
Updated:

ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಮತದಾರರು ಮಾತ್ರ ಈ ಬಾರಿ ಗುಟ್ಟು ಬಿಟ್ಟುಕೊಡುವ ಸ್ಥಿತಿಯಲ್ಲಿಲ್ಲ. ಕ್ಷೇತ್ರಗಳ ಬಗ್ಗೆ ಸಮೀಕ್ಷೆಗಾಗಿ ಬರುತ್ತಿರುವ ಪತ್ರಕರ್ತರು ಹಾಗೂ ಇತರ ಕುತೂಹಲಿಗಳ ಮುಂದೆಯೂ `ಜಿದ್ದಾಜಿದ್ದಿ ಇದೆ ಸಾರ್, ನೋಡ್ಬೇಕು' ಎಂದಷ್ಟೇ ಹೇಳುತ್ತಿದ್ದಾರೆ.ವಿಶೇಷವಾಗಿ ಹೊಳೆನರಸೀಪುರ, ಅರಕಲಗೂಡು, ಹಾಸನ ಹಾಗೂ ಶ್ರವಣ ಬೆಳಗೊಳ ಕ್ಷೇತ್ರಗಳಲ್ಲಿ ಈ ಸ್ಥಿತಿ ಇದೆ. ಈ ಕಾರಣಕ್ಕಾಗಿಯೇ ಅಭ್ಯರ್ಥಿಗಳು ಊಟ ನಿದ್ದೆ ಬಿಟ್ಟು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಯಾವ ಅಭ್ಯರ್ಥಿಗೂ ಇದ್ದಂತೆ ಕಾಣುತ್ತಿಲ್ಲ.ಬಂಟಿಂಗ್, ಬ್ಯಾನರ್, ಪೋಸ್ಟರ್‌ಗಳ ಬದಲು ಈಗ ಕೆಲವು ಅಭ್ಯರ್ಥಿಗಳು ಪ್ರಚಾರಕ್ಕಾಗಿ ಸಾಮಾಜಿಕ ತಾಣಗಳ ಮೊರೆ ಹೋಗಿದ್ದಾರೆ. ಫೇಸ್‌ಬುಕ್‌ಗಳಲ್ಲಿ ಪ್ರಚಾರದ ಭರಾಟೆ ಜತೆಗೆ ದಿನಕ್ಕೆ ನಾಲ್ಕಾರು ಬಾರಿಯಾದರೂ ಅಭ್ಯರ್ಥಿಗಳ ಪರವಾಗಿ ಎಸ್‌ಎಂಎಸ್‌ಗಳು ಹರಿದಾಡುತ್ತಿವೆ.ಇವೆಲ್ಲವನ್ನೂ ನೋಡುತ್ತಿರುವ ಮತದಾರ ಮಾತ್ರ ಚುನಾವಣೆಯ ದಿನ ಬರುವವರೆಗೆ ಸುಮ್ಮನಿರುವ ನಿರ್ಧಾರ ತೆಗೆದುಕೊಂಡಂತಿದೆ.

ನಿಮ್ಮೂರಲ್ಲಿ ಚುನಾವಣಾ ಕಾವು ಹೇಗಿದೆ ಎಂದು ಗ್ರಾಮೀಣ ಭಾಗದ ಜನರನ್ನು ಕೇಳಿದರೆ, `ಏನೋ ಇದೆ, ಅಭ್ಯರ್ಥಿಗಳ ಪರ ವೋಟ್ ಕಾಳಾಕೆ ಬರ್ತಾರೆ' ಎಂದು ಸುಮ್ಮನಾಗುತ್ತಾರೆ. ಯಾರಿಗೆ ವೋಟ್ ಕೊಡಬೇಕು ಎಂತಿದ್ದೀರಿ ಎಂದರೆ ಮೌನಕ್ಕೆ ಶರಣಾಗುತ್ತಾರೆ.ಮತ್ತೆ ಮತ್ತೆ ಕೆಣಕಿದರೆ `ಯಾಕೋ ... ಅವರ ಪರ ಈಗ ಚೆನ್ನಾಗಿದೆ ಎಂತಿದ್ದಾರೆ, ನೋಡ್ಬೇಕು' ಅಂತಾರೆ. ಜನಸಾಮಾನ್ಯರಿಂದ ಬರುವ ಇಂಥ ಪ್ರತಿಕ್ರಿಯೆ ರಾಜಕಾರಣಿಗಳೂ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.ಇಂತಿಂಥ ಹಳ್ಳಿಯಲ್ಲಿ ಈ ಪಕ್ಷಕ್ಕೇ ಮುನ್ನಡೆ ಇದೆ ಎಂದು ನಿರೀಕ್ಷಿಸಬಹುದಾದ ಸ್ಥಿತಿ ಈಗ ಇಲ್ಲ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಅಥವಾ ಬದಲಾವಣೆ ಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದಾರೆ ಎಂಬಂತಿದೆ.ಹಾಸನದ ಸ್ಥಿತಿಯನ್ನೇ ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಭೂಮಿ ಯನ್ನು ಡಿನೋಟಿಫೈ ಮಾಡಿದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಯಿಸಿ, ಮೆರವಣಿಗೆ ಮಾಡಿ, ಬೆಳ್ಳಿ ಕಿರೀಟ ತೊಡಿಸಿ ಕಳುಹಿಸಿದ್ದ ದಾಸರಕೊಪ್ಪಲಿನ ಜನರೇ ಈಗ ಬೇರೆ ರಾಗ ಹಿಡಿದಿದ್ದಾರೆ. ಸಮೀಕ್ಷೆಗಾಗಿ ಈಚೆಗೆ ಕೆಲವರ ಮನೆಗೆ ಹೋದರೆ, `ಕೆಜೆಪಿಗೆ (ಬೆಂಬಲಿತ ಅಭ್ಯರ್ಥಿ) ಮತ ಕೊಟ್ಟರೆ ಅವರಂತೂ ಗೆಲ್ಲಲ್ಲ, ನಮ್ಮ ಉದ್ದೇಶ ಈಡೇರಲ್ಲ, ಅದಕ್ಕೆ ಕಾಂಗ್ರೆಸ್‌ಗೆ ವೋಟ್ ಕೊಡುವ ಬಗ್ಗೆ ಜನ ಚಿಂತನೆ ಮಾಡುತ್ತಿದ್ದಾರೆ' ಎನ್ನುತ್ತಾರೆ.ಹಲವು ಕ್ಷೇತ್ರಗಳಲ್ಲಿ ಈಗ ಈ ಸ್ಥಿತಿ ಇದೆ. ನೀರು, ಚರಂಡಿ, ಮೋರಿಗಳನ್ನು ಮರೆತು ಬೇರೆಯೇ ರೀತಿ ಚಿಂತನೆ ಮಾಡುತ್ತಿರುವುದೇ ಅಭ್ಯರ್ಥಿಗಳ ಗೊಂದಲಕ್ಕೆ ಕಾರಣ ವಾಗಿದೆ. ಮತದಾರರು ಒಂದು ನಿರ್ಧಾರಕ್ಕೆ ಬರಬೇಕಾದರೆ ಇನ್ನೂ ನಾಲ್ಕಾರು ದಿನಗಳು ಬೇಕಾಗಬಹುದು ಎಂದು ಅಭ್ಯರ್ಥಿಗಳು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ನುಡಿಯುತ್ತಿದ್ದಾರೆ. ಅಲ್ಲಿಯ ವರೆಗೆ ಪ್ರಚಾರದ ಕಾವು ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಪಕ್ಷಗಳ ಗುರಿ.

ಪ್ರತಿಕ್ರಿಯಿಸಿ (+)