ಹಾಸನ ಜಿಪಂ: ಚಂದ್ರೇಗೌಡ ಅಧ್ಯಕ್ಷ, ಪಾರ್ವತಮ್ಮ ಉಪಾಧ್ಯಕ್ಷೆ

7

ಹಾಸನ ಜಿಪಂ: ಚಂದ್ರೇಗೌಡ ಅಧ್ಯಕ್ಷ, ಪಾರ್ವತಮ್ಮ ಉಪಾಧ್ಯಕ್ಷೆ

Published:
Updated:

ಹಾಸನ: ಹಾಸನ ಜಿಲ್ಲಾ ಪಂಚಾಯಿತಿಯ ಮೊದಲ ಅವಧಿಗೆ ಅಧ್ಷಕ್ಷರಾಗಿ ಜೆಡಿಎಸ್ ಪಕ್ಷದ ಬಿ.ಡಿ. ಚಂದ್ರೇಗೌಡ (ಕೋಗಿಲಮನೆ ಕ್ಷೇತ್ರ) ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಅರಕಲಗೋಡು ಕ್ಷೇತ್ರದ ಸದಸ್ಯೆ ಪಾರ್ವತಮ್ಮ ನಂಜುಂಡಾಚಾರ್ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.ಬೆಳಿಗ್ಗೆ 11ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು.1 ಗಂಟೆಯವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಬಿ.ಡಿ. ಚಂದ್ರೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ಅವರನ್ನು ಬಿಟ್ಟರೆ ಬೇರೆ ನಾಮಪತ್ರಗಳೇ ಬಂದಿರಲಿಲ್ಲ. ಮಧ್ಯಾಹ್ನ 3 ಗಂಟೆಗೆ ನಡೆದ ಸಭೆಯಲ್ಲಿ ಜಯಂತಿ ಇವರಿಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸಭಾಂಗಣದೊಳಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದರೆ ಹೊರಗೆ ಬಿ.ಎಂ. ರಸ್ತೆಯಲ್ಲಿ ಅಧ್ಯಕ್ಷ ಸ್ಥಾನಾಕಾಂಕ್ಷಿ ಸತ್ಯನಾರಾಯಣ ಅವರ ಬೆಂಬಲಿಗರ ಪ್ರತಿಭಟನೆ ನಡೆಯುತ್ತಿತ್ತು. ಆಯ್ಕೆ ಪ್ರಕ್ರಿಯೆ ಮುಗಿದ ಮೇಲೆ ಚಂದ್ರೇಗೌಡ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.ಅಪರ ಆಯುಕ್ತ ಮಂಜುನಾಥ ನಾಯಕ್, ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್, ಜಿ.ಪಂ. ಸಿಇಓ ಎಸ್.ಟಿ.ಅಂಜನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕರ್ತರ ವಿರೋಧ: ಅಧ್ಯಕ್ಷ ಸ್ಥಾನಕ್ಕೆ ಸಾಲಗಾಮೆ ಕ್ಷೇತ್ರದ ಸತ್ಯನಾರಾಯಣ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ಕಾರ್ಯಕರ್ತರು ಪಕ್ಷದ ಮುಖಂಡರು ಚಂದ್ರೇಗೌಡರನ್ನು ಆಯ್ಕೆಮಾಡಲು ತೀರ್ಮಾನಿಸುತ್ತಿದ್ದಂತೆ ಪ್ರತಿಭಟನೆ ನಡೆಸಿ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕರು ಸಚಿವರು ಸಮಾಧಾನಪಡಿಸಿದರೂ ಪ್ರತಿಭಟನೆ ಮುಂದುವರಿಸಿದ್ದರು. ಮಧ್ಯಾಹ್ನವೂ ಗದ್ದಲ ಮುಂದುವರಿಸಿದ್ದರಿಂದ ಓಕೆಲವರು ಪೊಲೀಸರ ಲಾಠಿಯ ರುಚಿ ನೋಡುವಂತಾಯಿತು.

5ನೇ  ಬಾರಿ ಒಲಿದ ಅದೃಷ್ಟಬೇಲೂರು ವರದಿ: ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿ.ಡಿ.ಚಂದ್ರೇಗೌಡ ಅವರನ್ನು ಬೆಂಬಲಿಗರು ಗುರುವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಚಂದ್ರೇಗೌಡರ ಆಯ್ಕೆಯಿಂದ ಬೇಲೂರು ತಾಲ್ಲೂಕಿಗೆ ಐದನೇ ಬಾರಿಗೆ ಅಧ್ಯಕ್ಷ ಸ್ಥಾನ ಒಲಿದಂತಾಗಿದೆ. ಬೇಲೂರು ತಾಲ್ಲೂಕಿನ ಕೋಗಿಲಮನೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಟ್ಟಣಕ್ಕೆ ಆಗಮಿಸಿದಾಗ ಅಭಿಮಾನಿಗಳು ನೆಹರು ನಗರದಲ್ಲಿ ಅದ್ದೂರಿಯಿಂದ ಸ್ವಾಗತಿಸಿದರು. ಅಭಿಮಾನಿಗಳು ಪಟ್ಟಣದಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಚೆನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ವಿ.ಹೇಮಾವತಿ, ಜಿ.ಟಿ.ಇಂದಿರಾ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ್ ಹಾಜರಿದ್ದರು. 5ನೇ  ಬಾರಿ ಒಲಿದ ಅದೃಷ್ಟ: ಹಾಸನ ಜಿಪಂ ಅಸ್ತಿತ್ವಕ್ಕೆ ಬಂದಾಗಿನಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಐದನೇ ಬಾರಿ ಬೇಲೂರಿಗೆ ಲಭಿಸಿದಂತಾಗಿದೆ. ಬೇಲೂರಿನ ಹಾಲಿ ಶಾಸಕ ವೈ.ಎನ್.ರುದ್ರೇಶ್‌ಗೌಡ ಪ್ರಥಮ ಬಾರಿಗೆ ಜೆಡಿಎಸ್ ವತಿಯಿಂದ ಜಿಪಂ ಅಧ್ಯಕ್ಷರಾಗಿದ್ದರು. ನಂತರ ಕಾಂಗ್ರೆಸ್‌ನ ಹಾಲಿ ಜಿ.ಪಂ. ಸದಸ್ಯೆ ಜಿ.ಟಿ.ಇಂದಿರಾ ಅಧ್ಯಕ್ಷರಾಗಿದ್ದರಲ್ಲದೆ,10 ತಿಂಗಳ ಅವಧಿ ಮುಗಿದ ನಂತರ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ನ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದರು. ಕಳೆದ ಅವಧಿಯಲ್ಲಿ ಕೋಗಿಲಮನೆ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿದ್ದ ಕಾಮಾಕ್ಷಿ ರಾಜು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ  ಕೋಗಿಲಮನೆ ಕ್ಷೇತ್ರದ ಬಿ.ಡಿ.ಚಂದ್ರೇಗೌಡ 5ನೇ ಬಾರಿಗೆ ಜಿ.ಪಂ. ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬೇಲೂರು ತಾಲ್ಲೂಕಿಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಲಭಿಸಿದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry