ಹಾಸ್ಟೆಲ್ ಅವ್ಯವಸ್ಥೆಗೆ ಉಪಲೋಕಾಯುಕ್ತರ ತರಾಟೆ

7

ಹಾಸ್ಟೆಲ್ ಅವ್ಯವಸ್ಥೆಗೆ ಉಪಲೋಕಾಯುಕ್ತರ ತರಾಟೆ

Published:
Updated:

ಭಾಲ್ಕಿ: ಸೋಲಾರ್ ಹೀಟರ್ ಹಾಕಿಸಿದರೂ ಮಕ್ಕಳ ಸ್ನಾನಕ್ಕೆ ಬಿಸಿ ನೀರು ಲಭ್ಯವಿಲ್ಲ. ವಾರ್ಡನ್ ಹೇಳುವ ಮಕ್ಕಳ ಹಾಜರಾತಿಗೂ ಅಲ್ಲಿರುವ ಮಕ್ಕಳ ತಲೆ ಏಣಿಕೆಗೂ ಅಜಗಜಾಂತರ ವ್ಯತ್ಯಾಸ..! ದಿನಪತ್ರಿಕೆಗಳನ್ನು ತರಿಸದಿದ್ದರೂ ಪತ್ರಿಕೆಗಳ ಖರ್ಚು ವೆಚ್ಚ ಮಾತ್ರ ಕರೆಕ್ಟಾಗಿ ದಾಖಲಿಸಲಾಗಿದೆ.ಬಡ ಮಕ್ಕಳ ಹೊಟ್ಟೆಗೆ ಸೇರಬೇಕಾದ ಅನ್ನಕ್ಕೂ ಸುಳ್ಳು ಲೆಕ್ಕ ಬರೆದು  ಕನ್ನ ಹಾಕ್ತೀರಲ್ಲ.. ನಾಚಿಕೆಯಾಗಲ್ವೆ? ಹೀಗಂತ ತರಾಟೆ ತೆಗೆದುಕೊಂಡವರು ರಾಜ್ಯದ ಉಪ ಲೋಕಾಯುಕ್ತ ಎಸ್.ಬಿ. ಮಜಗೆಯವರು.ಭಾನುವಾರ ಭಾಲ್ಕಿಯ ವಿವಿಧ ಸರ್ಕಾರಿ ವಸತಿ ನಿಲಯಗಳಿಗೆ ಮಜಗೆಯವರು ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವೆಡೆ ವಾರ್ಡನ್‌ಗಳು ಇರಲಿಲ್ಲ. ನಂತರ ಸ್ಥಳಕ್ಕೆ ಕರೆಸಿ ಮಾಹಿತಿ ಕೇಳಿದರೆ, ಅವರು ನೀಡುವ ಹೇಳಿಕೆಗೂ ಮಕ್ಕಳು ಕೊಡುವ ದೂರಿಗೂ ಸಂಬಂಧವೇ ಇಲ್ಲದಷ್ಟು ಅವ್ಯವಸ್ಥೆ ಕಂಡು ಬಂತು.ಡಾ. ಅಂಬೇಡ್ಕರ್ ವೃತ್ತದಲ್ಲಿನ ಬಾಲಕರ ವಸತಿ ನಿಲಯದಲ್ಲಿ ಮಕ್ಕಳ ಸ್ನಾನಕ್ಕೆ ಬಿಸಿ ನೀರಿಗಾಗಿ ಸೋಲಾರ್ ವಾಟರ್ ಹೀಟರ್ ಇದೆ. ಅದು ಹಾಳಾಗಿ ಎಷ್ಟೋ ತಿಂಗಳು ಗತಿಸಿದರೂ ರಿಪೇರಿ ಕೂಡ ಮಾಡಿಸಿಲ್ಲ. ಮಾಳಿಗೆ ಏರಿ ಅದೆಲ್ಲವನ್ನು ಮಜಗೆಯವರು ಪರಿಶೀಲನೆ ಮಾಡಿದರು. ಅಲ್ಲಿನ ಎರಡಂತಸ್ತಿನ ಕಾಮಗಾರಿಯನ್ನು ವೀಕ್ಷಿಸಿದರು.ಅಡುಗೆ ದಾಖಲೆಯನ್ನು ನೋಡಿದರು. ಮಕ್ಕಳಿಗೆ ಪತ್ರಿಕೆ ಬಗ್ಗೆ ಕೇಳಿದಾಗ ಅವರು ಹೇಳಿದ್ದೇ ಒಂದು. ವಾರ್ಡನ್ ಕೇಳಿದ್ರೆ ಬೇರೆ ಪತ್ರಿಕೆಗಳ ಹೆಸರನ್ನು ಹೇಳಿದ್ದನ್ನು ಕೇಳಿ ಉಪಲೋಕಾಯುಕ್ತರು ಸಿಡಿಮಿಡಿಗೊಂಡರು. 100 ಮಕ್ಕಳು ಇದ್ದಾರೆಂದು ವಾರ್ಡನ್ ನುಡಿದರೆ, 30-40 ಮಕ್ಕಳು ಇರ‌್ತೇವೆ ಎಂದು ಮಕ್ಕಳು ಮಾಹಿತಿ ನೀಡಿದರು.

 

ಪಟ್ಟಣದ ಇತರೆಡೆಗೂ ಅನೇಕ ಕಡೆ ಮೂಲ ಸೌಕರ್ಯಗಳ ಕೊರತೆ ಕಂಡು ಬಂತು. ಕೆಲವು ಕಡೆ ಬಾಡಿಗೆ ಕಟ್ಟಡಗಳಲ್ಲಿ ವಸತಿ ನಿಲಯಗಳು ನಡೆಯುತ್ತಿವೆ. ಆದರೆ ಸಮರ್ಪಕ ಸ್ಥಳಾವಕಾಶದ ಕೊರತೆ ಇರುವ ಬಗ್ಗೆ ಸಾರ್ವಜನಿಕರು ದೂರಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry