ಭಾನುವಾರ, ಏಪ್ರಿಲ್ 18, 2021
33 °C

ಹಾಸ್ಟೆಲ್: ಕೊಡಗಿನಲ್ಲಿ ಉತ್ತಮ ಸ್ಥಿತಿ- ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಉಪ ಸಮಿತಿಯ ಅಧ್ಯಕ್ಷ ತನ್ವೀರ್ ಸೇಠ್ ಶ್ಲಾಘಿಸಿದರು.ನಗರದ ಕೋಟೆ ವಿಧಾನಸಭಾಂಗಣದಲ್ಲಿ ಗುರುವಾರ ನಡೆದ ಇಲಾಖೆಗಳ ವಿದ್ಯಾರ್ಥಿನಿಲಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾಜಕಲ್ಯಾಣ ಇಲಾಖೆ ನಿರ್ವಹಿಸುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ 23 ಹಾಸ್ಟೆಲ್‌ಗಳಲ್ಲಿ ಒಂದನ್ನು ಬಿಟ್ಟರೆ ಇನ್ನುಳಿದ 22 ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ, ನಿವೇಶನ ಇದೆ. ಬಿಸಿಎಂ ಇಲಾಖೆಯ 41 ಹಾಸ್ಟೆಲ್‌ಗಳ ಪೈಕಿ ಕೇವಲ ನಾಲ್ಕು ಹಾಸ್ಟೆಲ್‌ಗಳಿಗೆ ಸ್ವಂತ ಜಾಗ ಇಲ್ಲ.

 

ಬಾಕಿ ಎಲ್ಲಾ ಹಾಸ್ಟೆಲ್‌ಗಳು ಸ್ವಂತ ನಿವೇಶನ, ಕಟ್ಟಡ ಹೊಂದಿದ್ದು, ಉತ್ತಮ ಪ್ರಗತಿಯಲ್ಲಿವೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರಿಗೆ ಅಭಿನಂದನೆಗಳು. ಮೈಸೂರು ವಿಭಾಗದ ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳ ವಿದ್ಯಾರ್ಥಿನಿಲಯಗಳಿಗೆ ಹೋಲಿಸಿದರೆ ಕೊಡಗಿನ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು.ಇನ್ನುಳಿದಂತೆ ವಿದ್ಯಾರ್ಥಿನಿಲಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೇಡಿಕೆಗಳೇನಾದರೂ ಇದ್ದರೆ ಅವುಗಳ ಕುರಿತಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಿ, ಮುಂದಿನ ತಿಂಗಳು ಅಧಿವೇಶನದ ನಂತರ ನಡೆಯಲಿರುವ ಸಮಿತಿಯ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಮಿತಿ ರಚಿಸಲು ಸಲಹೆ

ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿಲಯಗಳಿಗೆ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಅಧಿಕಾರಿಗಳ ತಂಡವನ್ನು ರಚಿಸಬೇಕೆಂದು ತನ್ವೀರ್ ಸೇಠ್ ಅವರು ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.ವಿದ್ಯಾರ್ಥಿನಿಲಯಗಳ ಅಭಿವೃದ್ಧಿಗಾಗಿ ಸರ್ಕಾರ 100 ಕೋಟಿ ರೂಪಾಯಿ ನೀಡಿ ದ್ದು, ಆರ್ಥಿಕ ತೊಂದರೆ ಇಲ್ಲ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಇದರ ಸದ್ಬಳಕೆಯಾಗಲಿ ಎಂದು ಆಶಿಸಿದರು.ಆಹಾರ ಪದ್ಧತಿ

ಪ್ರತಿಯೊಂದು ಜಿಲ್ಲೆಯಲ್ಲಿ ವಿಭಿನ್ನವಾದ ಆಹಾರ ಪದ್ಧತಿ ಇದ್ದು, ಇದನ್ನು ಆಯಾ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿನಿಲಯಗಳಲ್ಲೂ ಅಳವಡಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಉತ್ತರ ಕರ್ನಾಟಕದಲ್ಲಿ ಜೋಳ, ಕೊಡಗಿನಲ್ಲಿ ಅಕ್ಕಿ ಹೆಚ್ಚಾಗಿ ಬಳಸುತ್ತಾರೆ. ಇದರ ಆಧಾರದ ಮೇಲೆ ಆಯಾ ಜಿಲ್ಲೆಯಲ್ಲೂ ಅವರದ್ದೇ ಆದ ಆಹಾರ ಪದ್ಧತಿಯನ್ನು ಬಳಸಲು ಚಿಂತನೆ ನಡೆದಿದೆ ಎಂದು ನುಡಿದರು.ಜಾಗದ ಸಮಸ್ಯೆ

ಕುಶಾಲನಗರದಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಲು ನಿವೇಶನದ ಕೊರತೆ ಎದುರಾಗಿದೆ. ಸರ್ಕಾರಿ ಜಾಗ ಅಲ್ಲಿಲ್ಲ, ಖಾಸಗಿಯವರು ಕೂಡ ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಅಲ್ಲಿರುವ ಸಿ ಆ್ಯಂಡ್ ಡಿ ಜಾಗವನ್ನು ಇದಕ್ಕಾಗಿ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ನುಡಿದರು.ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ನೀಡಿ

ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೂ 75:25 ಅನುಪಾತದಲ್ಲಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಿ ಎಂದು ಸಮಿತಿ ಸದಸ್ಯ, ಶಾಸಕ ವಿಜಯಶಂಕರ್ ಹೇಳಿದರು.ವಿದ್ಯಾರ್ಥಿನಿಲಯಗಳಲ್ಲಿ ಶಾಲಾ ಪಠ್ಯಕ್ರಮದ ಜೊತೆಗೆ ಕ್ರೀಡೆಗೂ ಒತ್ತು ನೀಡಿ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಈ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಯಾಗಿ ರೂಪುಗೊಳ್ಳಬೇಕೆಂದು ಆಶಿಸಿದರು.

ಸಮಿತಿಯ ಸದಸ್ಯರಾದ ಪಿ.ಎ. ಗಣಪತಿ, ಎಂ.ಶ್ರೀನಿವಾಸ, ಕಾಳೆ,  ಎಚ್.ಬಿ. ಮಂಜುನಾಥ ಹಾಜರಿದ್ದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಲ್.ಜಿ. ಗಂಟಿ, ಬಿಸಿಎಂ ಅಧಿಕಾರಿ ಪುಟ್ಟರಾಜು, ದೇವರಾಜ ಅರಸು ಅಭಿವೃದ್ಧಿ ನಿಗಮದ ಶೋಭಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಯ್ಯದುಲ್ಲಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.