ಹಾಸ್ಟೆಲ್ ವಿದ್ಯಾರ್ಥಿಗಳ ಗೋಳು

7

ಹಾಸ್ಟೆಲ್ ವಿದ್ಯಾರ್ಥಿಗಳ ಗೋಳು

Published:
Updated:

ಬಳ್ಳಾರಿ: ನಗರದ ಹೊರ ವಲಯದಲ್ಲಿರುವ ಈ ಹಾಸ್ಟೆಲ್‌ನಲ್ಲಿ ಅಂದಾಜು 200 ವಿದ್ಯಾರ್ಥಿಗಳಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ತರಗತಿಗಳಿಗೆ ಹಾಜರಾಗಲು 7 ಗಂಟೆಗೆಲ್ಲ ಹಾಸ್ಟೆಲ್‌ನಿಂದ ಹೊರಡಬೇಕು. ಮತ್ತೆ ಮರಳುವುದು ಮಧ್ಯಾಹ್ನದ 3 ಗಂಟೆಗೇ.ಈ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7ಕ್ಕೆ ನೀಡಬೇಕಿರುವ ತಿಂಡಿಯನ್ನು 8.30ಕ್ಕೆ ನೀಡಲಾಗುತ್ತದೆ. ತಿಂಡಿ ತಿನ್ನಲು ಕುಳಿತರೆ, ತರಗತಿಗೆ ಗೈರು ಹಾಜರಾಗಬೇಕು. ಇಲ್ಲದಿದ್ದರೆ ತಿಂಡಿ ತಿರಸ್ಕರಿಸಬೇಕು. ತಿಂಡಿ ತಿನ್ನದಿದ್ದರೆ ಮಧ್ಯಾಹ್ನದವರೆಗೂ ಉಪವಾಸ.ಇದು ಕೊಳಗಲ್ ರಸ್ತೆಯಲ್ಲಿರುವ ಗೌತಮ ನಗರದಲ್ಲಿನ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಅನೇಕ ದಿನಗಳಿಂದ ಎದುರಿಸುತ್ತಿರುವ ಸಮಸ್ಯೆ.ಈ ವಿದ್ಯಾರ್ಥಿಗಳು ಬೆಳಿಗ್ಗೆ ಕಾಲೇಜಿಗೆ ತೆರಳಲೂ ಪರದಾಡಬೇಕಿದೆ. ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಇಲ್ಲದ್ದರಿಂದ ನಡೆದುಕೊಂಡೇ ಮುಖ್ಯರಸ್ತೆಗೆ ಬಂದು, ಅಲ್ಲಿಂದ ಸಿಕ್ಕ ವಾಹನಗಳಲ್ಲಿ ತೆರಳಬೇಕು.ಅಷ್ಟೇ ಅಲ್ಲದೆ, ಈ ಹಾಸ್ಟೆಲ್‌ನಲ್ಲಿ ಕುಡಿಯುವುದಕ್ಕೆ ಶುದ್ಧ ನೀರೂ ಇಲ್ಲ. ಕಳೆದ ನಾಲ್ಕು ದಿನಗಳಿಂದ ಕೊಳಾಯಿಯಲ್ಲಿ ನೀರು ಬಂದಿಲ್ಲ. ನೀರೆತ್ತುವ ಮೋಟರ್ ಸುಟ್ಟು ಹೋಗಿದ್ದು, ದುರಸ್ತಿ ಮಾಡಿಸಿಲ್ಲ. ನೀರು ಕುಡಿಯಲು ಪಕ್ಕದಲ್ಲೇ ಹರಿಯುವ ತುಂಗಭದ್ರಾ ಬಲದಂಡೆಯ ಎಚ್‌ಎಲ್‌ಸಿ ಕಾಲುವೆಗೇ ಹೋಗಬೇಕು.

ತುಂಬಿ ಹರಿಯುವ ಕಾಲುವೆಯ ನೀರಿನಲ್ಲಿ ಕಾಲು ಜಾರಿ ಬಿದ್ದರೂ ಕೇಳುವವರಿಲ್ಲ. ಅನೇಕರಿಗೆ ಈಜು ಬರದಿದ್ದರೂ ಅನಿವಾರ್ಯವಾಗಿ ಕಾಲುವೆಗೆ ಹೋಗುತ್ತಿದ್ದಾರೆ.`ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೆ ಪರದಾಡುವಂತಾಗಿದೆ. ಸ್ನಾನಗೃಹಗಳಲ್ಲಿ ಸ್ವಚ್ಛತೆಯೂ ಇಲ್ಲ. ನೀರಿನ ಟ್ಯಾಂಕ್‌ಗಳನ್ನೂ ಸ್ವಚ್ಛಗೊಳಿಸುವುದಿಲ್ಲ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಅನೇಕ ವಿದ್ಯಾರ್ಥಿಗಳು ಸಾಂಕ್ರಾಮಿಕ ಕಾಯಿಲೆಯಿಂದ ನರಳುವಂತಾಗಿದೆ. ಕೆಲವರು ಜ್ವರ ಕಡಿಮೆಯಾಗದೆ ಊರಿಗೆ ಮರಳಿದ್ದಾರೆ~ ಎಂದು ವಿದ್ಯಾರ್ಥಿಗಳಾದ ಡಿ.ಉಮೇಶ, ಲಕ್ಷ್ಮಿಕಾಂತ, ಶ್ರೀನಿವಾಸ್, ಸದ್ದಾಮ್ ಹುಸೇನ್, ಜೆ.ಗಾದಿಲಿಂಗಪ್ಪ, ಜೆ.ಮಂಜುನಾಥ, ಜೆ.ಬಸವರಾಜ್, ಶರಣ ಬಸವ ಮತ್ತಿತರರು ತಿಳಿಸಿದ್ದಾರೆ.ಹಾಸ್ಟೆಲ್‌ನಲ್ಲಿ ಸಮರ್ಪಕವಾಗಿ ಊಟವನ್ನೂ ನೀಡುತ್ತಿಲ್ಲ. ಹಾಸ್ಟೆಲ್ ಮೇಲ್ವಿಚಾರಕ ಲಿಂಗಪ್ಪ ಅವರ ಪತ್ತೆಯಿಲ್ಲ. ಅವರು ಕೆಲಸಕ್ಕೇ ಬರುವುದಿಲ್ಲ. ಅಡುಗೆಯವರಾದ ಮಲ್ಲಿಕಾರ್ಜುನ ಮತ್ತು ನಾಗಭೂಷಣ ಅವರೇ ಇಲ್ಲಿ ಮೇಲ್ವಿಚಾರಕರಂತೆ ವರ್ತಿಸುತ್ತಾರೆ ಎಂದು ಅವರು ಆರೋಪಿಸುತ್ತಾರೆ.ಹಾಸ್ಟೆಲ್‌ನ ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳನ್ನೂ ನೀಡುವವರಿಲ್ಲ ಎಂದು ತಿಳಿಸುವ ವಿದ್ಯಾರ್ಥಿಗಳು, ಕೂಡಲೇ ಜಿಲ್ಲಾಧಿಕಾರಿಗಳೇ ಈ ಕಡೆ ಗಮನಹರಿಸಿ, ವಿದ್ಯಾರ್ಥಿಗಳ ಸಂಕಷ್ಟವನ್ನು ದೂರ ಮಾಡಬೇಕು ಎಂದು ಕೋರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry