ಹಾಸ್ಟೆಲ್ ಸೇರುವ ಮುನ್ನ

7

ಹಾಸ್ಟೆಲ್ ಸೇರುವ ಮುನ್ನ

Published:
Updated:
ಹಾಸ್ಟೆಲ್ ಸೇರುವ ಮುನ್ನ

ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಮುದ್ದಾಗಿ ಬೆಳೆಸಿದ ಮಕ್ಕಳನ್ನು ವಿವಿಧ ಕಾರಣಗಳಿಗಾಗಿ ಹಾಸ್ಟೆಲ್‌ಗೆ ಸೇರಿಸುವಾಗ ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ. ತಮ್ಮ ಹತ್ತಿರವೇ ಇದ್ದಾಗ ಮಕ್ಕಳ ಪ್ರತಿ ಅವಶ್ಯಕತೆಯನ್ನೂ ಪೂರೈ­ಸುವುದು, ಅವರ ಚಲನವಲನಗಳನ್ನು-, ಗೆಳೆಯರ ಬಳಗವನ್ನು ಗಮನಿಸುವುದು ಸುಲಭ. ಆದರೆ ದೂರದ ಹಾಸ್ಟೆಲ್‌ನಲ್ಲಿ ಮಕ್ಕಳನ್ನು ಗಮನಿಸುವವರಾರು? ಹಾಗಾಗಿ ಹಾಸ್ಟೆಲ್ ಎಂದೊಡನೆ ಪಾಲಕರಿಗೆ ಒಂದು ರೀತಿಯ ಭಯ, ಕಳವಳ.ಕೆಲವರಂತೂ ಮಕ್ಕಳಿಗೆ ಹಾಸ್ಟೆಲ್ ಜೀವನವೇ ಬೇಡವೆಂದು ನಿರ್ಧರಿಸಿ, ಅವರ ಜೊತೆಯಲ್ಲಿ ತಮ್ಮ ಕುಟುಂಬವನ್ನೇ ಬೇರೆ ಊರಿಗೆ ವರ್ಗಾಯಿಸುವ ಯೋಚನೆಯನ್ನೂ ಮಾಡುತ್ತಾರೆ. ಆದರೆ ಎಲ್ಲರ ಮನೆಯ ಪರಿಸ್ಥಿತಿಯೂ ಇದಕ್ಕೆ ಪೂರಕವಾಗಿ ಇರುವುದಿಲ್ಲ. ಕುಟುಂಬದ ಇತರ ಸದಸ್ಯರ ಉದ್ಯೋಗ, ಉದ್ಯಮ, ವಿದ್ಯಾಭ್ಯಾಸವನ್ನು ದಿಢೀರನೆ ಬೇರೊಂದು ಊರಿಗೆ ವರ್ಗಾಯಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಹಾಗಾಗಿ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಹಾಸ್ಟೆಲ್‌ನಲ್ಲಿ ಬಿಡುವುದು ಅನಿವಾರ್ಯ ಆಗುತ್ತದೆ. ಆದರೆ ಆ ಬಗ್ಗೆ ಪೋಷಕರು ಅನವಶ್ಯಕವಾಗಿ ಚಿಂತೆಗೀಡಾಗ ಬೇಕಾದ ಅಗತ್ಯವಿಲ್ಲ.ಏಕೆಂದರೆ ಹಾಸ್ಟೆಲ್‌ಗಳಲ್ಲೂ ಮಕ್ಕಳ ಬೇಕು ಬೇಡಗಳನ್ನು ಗಮನಿಸಲು ಮೇಲ್ವಿಚಾರಕರು ಇರುತ್ತಾರೆ, ವಾರ್ಡನ್‌ಗಳು ಇರುತ್ತಾರೆ. ಅಲ್ಲಿಯ ನಿರ್ವಾಹಕರೂ ಹೊಸದಾಗಿ ಬರುವ ಮಕ್ಕಳ ಆಗಮನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುತ್ತಾರೆ. ಆದ್ದರಿಂದ ಭಯವಿಲ್ಲದೆ, ನಿರಾತಂಕವಾಗಿ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸಬಹುದು. ಅಂತಹ ಸಂದರ್ಭದಲ್ಲಿ ಪೋಷಕರು ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿ ಇಡಬೇಕು ಮತ್ತು ಮಕ್ಕಳಿಗೆ ಕೆಲವು ಸಲಹೆಗಳನ್ನು ಕೊಡಬೇಕು.ಆರೋಗ್ಯ: ಎಲ್ಲಕ್ಕಿಂತ ಮುಖ್ಯವಾದದ್ದು ಆರೋಗ್ಯ. ಅದರಲ್ಲೂ ಮಕ್ಕಳ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಪೋಷಕರ ಕಳವಳ ಹೇಳತೀರದು. ಹಾಸ್ಟೆಲ್‌ಗಳಲ್ಲಿ ಕೆಲವೊಮ್ಮೆ ನೀರು ಹಾಗೂ ಆಹಾರ ಸುರಕ್ಷಿತವಾಗಿರದೇ ಇರಬಹುದು. ಆಹಾರ ಮತ್ತು ನೀರಿನ ಮೂಲದಿಂದ ಉಂಟಾಗುವ ಕಾಯಿಲೆಗಳು ಸದಾ ಅಪಾಯ. ಅಂತಹ ಕಾಯಿಲೆಗಳಲ್ಲಿ ಪ್ರಮುಖವಾದ ಜಾಂಡೀಸ್ (ಹೆಪಟೈಟಿಸ್ ಎ) ಮತ್ತು ಟೈಫಾಯ್ಡ್ ವಿರುದ್ಧ ಲಸಿಕೆಗಳು ಲಭ್ಯ.ಹಾಸ್ಟೆಲ್‌ಗೆ ಸೇರಿಸುವ ಮುನ್ನ ವೈದ್ಯರ ಸಲಹೆ ಪಡೆದು ನಿಮ್ಮ ಮಕ್ಕಳಿಗೆ ಈ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿ. ಅದು ಮಕ್ಕಳನ್ನು ಈ ಎರಡೂ ಕಾಯಿಲೆ­ಗಳಿಂದ ರಕ್ಷಿಸಬಲ್ಲದು. ರಸ್ತೆ ಬದಿ ಮಾರಾಟ ಮಾಡುವ ತಿಂಡಿ ತಿನಿಸುಗಳು ಅಸುರಕ್ಷಿತ. ಆದ್ದರಿಂದ ಮಕ್ಕಳಿಗೆ ಅವುಗಳಿಂದ ಆದಷ್ಟೂ ದೂರವಿರಲು ತಿಳಿಸಿ.ಸ್ವಚ್ಛತೆ: ಹಾಸ್ಟೆಲ್ ಕೋಣೆಯನ್ನು ಮಕ್ಕಳು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯಲ್ಲಾದರೆ ಅಮ್ಮ ಹಾಗೂ ಮನೆಯ ಇತರ ಸದಸ್ಯರು ನಿಮ್ಮ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇಡಲು ಸಹಕರಿಸುತ್ತಾರೆ. ಆದರೆ ಹಾಸ್ಟೆಲ್‌ನಲ್ಲಿ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು. ಹೀಗಾಗಿ ನೀವೇ ನಿಮ್ಮ ಬಟ್ಟೆಗಳನ್ನು, ಪುಸ್ತಕಗಳನ್ನು ಅವುಗಳಿಗೆ ಮೀಸಲಾಗಿರುವ ಜಾಗದಲ್ಲಿ ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ಜೋಡಿಸಿಕೊಳ್ಳಬೇಕು. ಇದರಿಂದ ನಿಮಗೆ ಬೇಕಾದ ವಸ್ತುಗಳು ತಕ್ಷಣವೇ ದೊರಕುತ್ತವೆ.ಎಲ್ಲಕ್ಕಿಂತ ಮಿಗಿಲಾಗಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಇರಲಿ. ನೀವು ಉಪಯೋಗಿಸುವ ಟವೆಲ್, ಸಾಬೂನು, ಬಾಚಣಿಗೆಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಉಡುಪುಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದು ಬೇಡ. ಇದರಿಂದ ಚರ್ಮಕ್ಕೆ ಸಂಬಂಧಪಟ್ಟ ಸೋಂಕುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ರಾತ್ರಿ ಮಲಗುವ ಮೊದಲು ಕಡ್ಡಾಯವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಇದು ಬಾಯಿಯಲ್ಲಿನ ಸೂಕ್ಷ್ಮಾಣುಗಳನ್ನು ನಿಯಂತ್ರಿಸುತ್ತದೆ.ಆಹಾರ: ಹಾಸ್ಟೆಲ್ ಆಹಾರವೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಚೆನ್ನಾಗಿ ಓದಲು, ಸದಾ ಕ್ರಿಯಾಶೀಲರಾಗಿರಲು ನಿಮಗೆ ಶಕ್ತಿ ಬೇಕು. ಈ ಶಕ್ತಿಗೆ ಮೂಲ ಸಮತೋಲನ ಆಹಾರವಲ್ಲವೇ? ಹಾಗಾಗಿ ಊಟ ತಿಂಡಿಯ ವಿಷಯ ಬಂದಾಗ, ರುಚಿಗೆ ಮಹತ್ವ ಕೊಡದಿರಿ. ಯಾವುದೇ ಪದಾರ್ಥವಿದ್ದರೂ ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬುವಷ್ಟು ತಿನ್ನುವುದು ಜಾಣ ಮಕ್ಕಳ ಲಕ್ಷಣ.ಹೆಚ್ಚು ನೀರನ್ನು ಕುಡಿಯಲು ಮರೆಯಬೇಡಿ. ವಾರಕ್ಕೊಮ್ಮೆ ಹೊರಗೆ ಹೋದಾಗ ಮಾರುಕಟ್ಟೆಯಲ್ಲಿ ದೊರಕುವ ಆಯಾ ಕಾಲದ ತಾಜಾ ಹಣ್ಣುಗಳನ್ನು ಕೋಣೆಯಲ್ಲಿ ತಂದಿಟ್ಟುಕೊಂಡು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಹಣ್ಣುಗಳ ಹೇರಳವಾದ ಸೇವನೆ ನಿಮ್ಮನ್ನು ಆರೋಗ್ಯವಾಗಿ ಇಡುವುದಲ್ಲದೆ, ಸದಾ ಚಟುವಟಿಕೆಯಿಂದ ಇರಲೂ ಸಹಕರಿಸುತ್ತದೆ.ಎಲೆಕ್ಟ್ರಾನಿಕ್ ಉಪಕರಣ: ಮೊಬೈಲ್, ಐ- ಪಾಡ್‌ನಂತಹ ಎಲೆಕ್ಟ್ರಾನಿಕ್ ಉಪಕರ­ಣ­ಗಳನ್ನು ಹಾಸ್ಟೆಲ್‌ಗೆ ಒಯ್ಯದಿದ್ದರೇ ಒಳಿತು. ಇವು ನಿಮ್ಮ ಅಭ್ಯಾಸಕ್ಕೆ ಮಾರಕ. ಪೋಷಕ­ರೊಂದಿಗೆ ಮಾತನಾಡಬೇಕು ಎನಿಸಿದಾಗ ಹಾಸ್ಟೆಲ್‌ ಫೋನನ್ನೇ ಬಳಸಿ.ನಿಯಮಗಳು: ಹಾಸ್ಟೆಲ್‌ನ ನಿಯಮಗಳಿಗೆ ಸದಾ ಬದ್ಧರಾಗಿರಿ. ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬೇಡಿ. ಮೇಲ್ವಿಚಾರಕರು ಹೇಳಿದಂತೆ ಕೇಳಿ, ಅವರಿಗೆ ವಿಧೇಯರಾಗಿರಿ.ಸಮಯ ಪರಿಪಾಲನೆ: ಹಾಸ್ಟೆಲ್‌ನಲ್ಲಿ ನಿಗದಿಪಡಿಸಿರುವ ಸಮಯದಲ್ಲೇ ಆಯಾಯ ಚಟುವಟಿಕೆಗಳನ್ನು ಮಾಡಿ ಮುಗಿಸಲು ಪ್ರಯತ್ನಿಸಿ.ಆಟ: ಆಟ, ಯೋಗ, ಧ್ಯಾನ, ಮತ್ತಿತರ ಪಠ್ಯೇತರ ಚಟುವಟಿಕೆಗಳಿಗೆ ಸಮಯಾವಕಾಶ ಇದ್ದಲ್ಲಿ ಅದರ ಸದುಪಯೋಗ ಪಡೆಯಿರಿ. ಮನಸ್ಸಿಗೆ ಉಲ್ಲಾಸ ನೀಡುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ.ಮುಖ್ಯವಾದದ್ದು: ಎಲ್ಲಕ್ಕಿಂತ ಮುಖ್ಯವಾಗಿ ನೀವು ಅಲ್ಲಿ ಹೋಗಿರುವ ಉದ್ದೇಶವನ್ನು ಸದಾ ನೆನಪಿನಲ್ಲಿಡಿ. ಸಮಯವನ್ನು ಹಾಳು ಮಾಡದೆ ಅದರ ಸದುಪಯೋಗವನ್ನು ಪಡೆದುಕೊಳ್ಳಿ. ಅಭ್ಯಾಸಕ್ಕೆ ಪೂರಕವಾಗುವ ಗ್ರಂಥಾಲಯ ಮತ್ತಿತರ ಸೌಲಭ್ಯಗಳ ಗರಿಷ್ಠ ಬಳಕೆ ಮಾಡಿಕೊಳ್ಳಿ. ಈ ಮೇಲಿನ ಎಲ್ಲ ಅಂಶಗಳನ್ನೂ ಗಮನದಲ್ಲಿಡಿ ಹಾಗೂ ನಿರಾತಂಕವಾಗಿ ಹಾಸ್ಟೆಲ್‌ನತ್ತ ಹೆಜ್ಜೆ ಇಡಿ.ಗೆಳೆಯರ ಬಗ್ಗೆ ಎಚ್ಚರ

ಗೆಳೆಯ- ಗೆಳತಿಯರನ್ನು ಮಾಡಿ­ಕೊಳ್ಳುವಾಗ ಎಚ್ಚರ­ದಿಂದ ಇರಬೇಕು. ನಿಮ್ಮ ಗುಣ ಸ್ವಭಾವ, ಮನೋಭಾವಕ್ಕೆ ಹೊಂದಿ­ಕೊಳ್ಳುವಂತಹವರೊಂದಿಗೆ ಗೆಳೆತನ ಬೆಳೆಸಿ. ಗೆಳೆತನದಲ್ಲಿ ಪರಸ್ಪರ ವಿಶ್ವಾಸ, ಸಹಕಾರ ಹಾಗೂ ಹೊಂದಾಣಿಕೆ ಇರಲಿ. ದ್ವೇಷ, ಅಸೂಯೆಗಳಂತಹ ಭಾವನೆಗಳಿಗೆ ಅಲ್ಲಿ ಸ್ಥಳಾವಕಾಶ ಕೊಡಬೇಡಿ.ಗುಟ್ಟು ಬೇಡ

ಹಾಸ್ಟೆಲ್‌ನಲ್ಲಿ ಇರುವಾಗ ಯಾವುದೇ ತೊಂದರೆ ಎದುರಾದಲ್ಲಿ ನಿಸ್ಸಂಕೋಚ­ವಾಗಿ ಕೂಡಲೇ ಮೇಲ್ವಿ­ಚಾ­ರಕರ ಗಮನಕ್ಕೆ ತನ್ನಿ. ಪೋಷಕರಿಗೂ ಆ ಬಗ್ಗೆ ತಿಳಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry