ಮಂಗಳವಾರ, ಜನವರಿ 21, 2020
20 °C
ಮಾತ್‌ಮಾತಲ್ಲಿ

ಹಾಸ್ಯ ಅದ್ದಿದ ಮಾತಿನಿಂದ...

ನಿರೂಪಣೆ: ಸುಮಲತಾ ಎನ್‌. Updated:

ಅಕ್ಷರ ಗಾತ್ರ : | |

ಒಬ್ಬೊಬ್ಬ ವ್ಯಕ್ತಿಗೂ ತನ್ನದೇ ವಿಶೇಷ ವ್ಯಕ್ತಿತ್ವವಿರುತ್ತದೆ. ಅದನ್ನು ಅವರು ಅಭಿವ್ಯಕ್ತಪಡಿಸಬೇಕಾಗಿರುವುದು ಮಾತಿನ ಮೂಲಕ. ಮಾತು ಬಿಟ್ಟರೆ ಈ ಜೀವನದಲ್ಲಿ ಇನ್ನೇನಿದೆ? ಎಲ್ಲವೂ ಅಡಗಿರುವುದು ಮಾತೆಂಬ ಮಾಯೆಯಲ್ಲಿ. ಕೋಪ, ತಾಳ್ಮೆ, ಪ್ರೀತಿ, ಹಾಸ್ಯ ಎಲ್ಲ ಭಾವಗಳಿಗೂ ಮಾತೇ ಮೂಲ. ನನ್ನ ಮಾತನ್ನು ಹೆಚ್ಚು ಆವರಿಸಿದ್ದು ಹಾಸ್ಯ. ಬಾಯಿ ಬಿಟ್ಟು ಮಾತನಾಡಿದರೆ ಮಾತ್ರ ನಗಿಸಲು ಸಾಧ್ಯ ಎನ್ನುವುದು ನನ್ನ ನಂಬಿಕೆ.ನಾನು ಹುಟ್ಟಿದ್ದು ಮೈಸೂರಿನ ಹಳ್ಳಿಯೊಂದರಲ್ಲಿ. ಸ್ಕೂಲು, ಕಾಲೇಜು ಎಲ್ಲವೂ ಅಲ್ಲೇ. ನಟಿಸಬೇಕೆಂಬ ಬಯಕೆ ಚಿಕ್ಕಂದಿನಿಂದಲೇ ಇತ್ತು. ಹೀಗೆ ಗಣೇಶನ ಹಬ್ಬದಲ್ಲಿ ಊರಿನಲ್ಲಿ ‘ನಾನೊಬ್ಬ ಕಳ್ಳ’ ಎಂಬ ಹಾಸ್ಯ ನಾಟಕವೊಂದಕ್ಕೆ ಅಕಸ್ಮಾತ್‌ ಆಗಿ ನಟಿಸುವ ಅವಕಾಶ ಸಿಕ್ಕಿತ್ತು. ಹಾಸ್ಯವೆಂದರೆ ಪೂರ್ವಾಪರ ತಿಳಿಯದಿದ್ದ ನನಗೆ ಮಾತಿನ ಬೆಲೆ ಗೊತ್ತಾಗಿದ್ದು ಅಲ್ಲಿಯೇ.ಮುಂದೆ ನನ್ನ ಪಯಣ ಸಾಗಿದ್ದು ದೃಶ್ಯ ಕಲಾವೇದಿಕೆಯತ್ತ. ದೊಡ್ಡ ದೊಡ್ಡ ಹಾಸ್ಯ ಕಲಾವಿದರನ್ನು ತುಂಬಾ ಹತ್ತಿರದಿಂದ ನೋಡಿದ ಕ್ಷಣವದು. ಬಹುಶಃ ಆಗಿನಿಂದಲೇ ನನ್ನಲ್ಲಿ ಹಾಸ್ಯ ಪ್ರಜ್ಞೆ ಜಾಗೃತಗೊಂಡಿದ್ದು ಎನಿಸುತ್ತದೆ.ನಮ್ಮ ಪ್ರತಿ ಮಾತಿನೊಂದಿಗೆ ಹಾವಭಾವವೂ ತಾಳೆ ಆಗಬೇಕು. ಜೊತೆಗೆ ಅದರಲ್ಲಿ ಹಾಸ್ಯವಿರದಿದ್ದರೆ ಅದು ಸಹಜತೆಯನ್ನೇ ಮರೆಮಾಚುತ್ತದೆ.ಇದುವರೆಗೂ ಸುಮಾರು 50 ಹಾಸ್ಯ ತುಣುಕುಗಳನ್ನು ಪ್ರಸ್ತುತಪಡಿಸಿದ್ದೇನೆ. ಆದರೆ ಎಂದಿಗೂ ಅದಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ. ಸಹಜವಾಗಿ ಮಾತನಾಡಿದರೆ  ಸುಂದರವಾಗಿ ಇರುತ್ತದೆ. ನಟನೆ ಎನಿಸುವುದಿಲ್ಲ. ಮಾತನಾಡಲೇಬೇಕು ಎಂಬ ಉದ್ದೇಶದಿಂದ ಅರುಹಿದರೆ ಖಂಡಿತ ಅದು ನಕಲಿ ಎನಿಸುತ್ತದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಸಹಜವಾಗಿ ಮಾತನಾಡುತ್ತೇನೆ.

ಪ್ರಯತ್ನಪೂರ್ವಕವಾಗಿ ಎಂದಿಗೂ ಮಾತನಾಡಿಲ್ಲ. ಏಕೆಂದರೆ ಮಾತಿನ ಮೂಲಕವೇ ಜನರನ್ನು ತಲುಪುವ ಉದ್ದೇಶ ನನ್ನದು. ಹಾಗಾಗಿ ಸಹಜತೆಗೆೇ ಹೆಚ್ಚಿನ ಪ್ರಾಶಸ್ತ್ಯ.ಇನ್ನು ಹಾಸ್ಯ ಕಾರ್ಯಕ್ರಮಗಳಲ್ಲಿ ಯೋಚಿಸಿ ಮಾತನಾಡುವ ಅವಕಾಶ ಕಡಿಮೆ. ಅಲ್ಲಲ್ಲಿಯೇ ಮಾತಿಗೆ ಮಾತು ಪೋಣಿಸಬೇಕು. ಕೆಲವೊಮ್ಮೆ ಹಾಸ್ಯ ಮಾಡಲು ಹೋಗಿ ಹಾಸ್ಯಾಸ್ಪದ ಆಗಬಾರದಲ್ಲವೇ? ಆದ್ದರಿಂದ ಮಾತಿನ ಬಗ್ಗೆ ಎಚ್ಚರವಿರಬೇಕು. ಕಾಮಿಡಿ ಕಾರ್ಯಕ್ರಮ ನಿರೂಪಿಸುವುದು ಸ್ವಲ್ಪ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನನಗೆ ಯಾವತ್ತೂ ಹಾಗನಿಸಿಲ್ಲ. ಕಾಮಿಡಿ ಕಾರ್ಯಕ್ರಮಗಳ ಹೊರತಾಗಿ ಧಾರಾವಾಹಿಗಳಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ‘ಹೂಮಾಲೆ’, ‘ಸಿಲ್ಲಿ ಲಲ್ಲಿ’, ‘ಶ್ರೀಮತಿ’, ‘ಕ್ಲಾಸ್‌ಮೇಟ್ಸ್‌’ ಧಾರಾವಾಹಿಗಳಲ್ಲಿ ನಟಿಸಿದೆ. ‘ಸಿಲ್ಲಿ ಲಲ್ಲಿ’ಯಲ್ಲಿ ಮೂರು ವರ್ಷ ಆಗಾಗ ಬಂದು ಹೋಗುವ ನಟನೆ ನನ್ನದಾಗಿತ್ತು. ನನ್ನ ಮಾತು ಒಂದಿಷ್ಟು ಪಳಗಿದ್ದು ಅಲ್ಲಿ. ‘ಕ್ಲಾಸ್‌ಮೇಟ್ಸ್‌’ ಧಾರಾವಾಹಿಯಲ್ಲಿ ನನ್ನದು ನೆಗಟಿವ್ ಪಾತ್ರ. ಹಾಸ್ಯದ ಹೊರತು ಆ ಪಾತ್ರ ನನಗೆ ಹೆಚ್ಚು ಆಕರ್ಷಣೆ ಎನಿಸಿತ್ತು. ನಮ್ಮ ಮಾತಿನಲ್ಲಿ ನಮ್ಮದೇ ವಿಶೇಷತೆ ಇರಬೇಕು. ಎಲ್ಲರ ಮಾತೂ ಒಂದೇ ರೀತಿ ಆದರೆ ಏನು ಚೆಂದ? ವ್ಯಕ್ತಿಯ ಆತ್ಮವಿಶ್ವಾಸ ಕಾಣುವುದೇ ಮಾತಿನಲ್ಲಿ. ಆದ್ದರಿಂದ ಮನಸ್ಸು ತುಂಬಿ ಮಾತನಾಡಬೇಕು.ಮಾತು ಎದುರಿಗಿರುವವರಿಗೆ ಖುಷಿ ಕೊಡಬೇಕು. ಸ್ವಲ್ಪ ಕಾಲೆಳೆಯುವಂತಿರಬೇಕು, ಆದರೆ  ನೋವುಂಟುಮಾಡಬಾರದು. ಏನೋ ಮಾತನಾಡಲು ಹೋಗಿ ಏನೋ ಮಾತಾಡಿ ಬೇಜಾರು ಮಾಡಿದ ಸಂದರ್ಭವೂ ಇದೆ. ಆದ್ದರಿಂದ ಯೋಚಿಸಿ ಮಾತನಾಡಿದರೆ ಒಳ್ಳೆಯದು.

ನನ್ನನ್ನು ಜನ ನನ್ನ ಮಾತಿನ ಶೈಲಿಯಿಂದಲೇ ಗುರುತಿಸುತ್ತಾರೆ, ಮೆಚ್ಚುತ್ತಾರೆ. ಅದೇ ನನಗೂ ಖುಷಿ ನೀಡಿರುವುದು. ಧಾರಾವಾಹಿಗಳ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದೆ. ನನ್ನ ಮಾತಿಗೆ ಕುಮ್ಮಕ್ಕು ನೀಡಿದ್ದು ‘ಕಿರಾತಕ’ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ‘ರಾಜಾಹುಲಿ’ಯಲ್ಲೂ ನನ್ನ ನಟನೆ ನೋಡಿ ಮೆಚ್ಚಿದ್ದಾರೆ.ತುಂಬಾ ಚಿತ್ರಗಳಲ್ಲಿ ನಟಿಸುವ ಬಯಕೆಯಿದೆ. ಆದರೆ ನಮ್ಮಿಷ್ಟ ಬಂದಂತೆ ಇಲ್ಲಿ ಇದ್ದರೆ ಆಗದು. ಜನರಿಗೆ ಇಷ್ಟವಾಗುವಂತೆ ನಟಿಸಬೇಕು. ಒಂದೇ ರೀತಿಗೆ ಅಂಟಿಕೊಳ್ಳದೆ, ವಿಭಿನ್ನ ಪಾತ್ರಗಳಲ್ಲೂ ತೊಡಗಿಕೊಳ್ಳಬೇಕು. ಏನೇ ಆದರೂ, ಎಲ್ಲಿಗೇ ಹೋದರೂ ನಮ್ಮ ಮಾತನ್ನು ನಾವು ಕಳೆದುಕೊಳ್ಳಬಾರದು.

 

ಪ್ರತಿಕ್ರಿಯಿಸಿ (+)