ಮಂಗಳವಾರ, ಮಾರ್ಚ್ 9, 2021
29 °C

ಹಾಸ್ಯ ನಾಟಕಗಳ ಸುಗ್ಗಿ

ದಯಾನಂದ Updated:

ಅಕ್ಷರ ಗಾತ್ರ : | |

ಹಾಸ್ಯ ನಾಟಕಗಳ ಸುಗ್ಗಿ

ಕಳೆದ ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ವೃತ್ತಿ ರಂಗತಂಡ ‘ಅಮರೇಶ್ವರ ವಿಜಯ ನಾಟಕ ಮಂಡಳಿ’ ನಗರದಲ್ಲಿ ಏಳು ದಿನಗಳ ಹಾಸ್ಯ ನಾಟಕೋತ್ಸವ ಆಯೋಜಿಸಿದೆ.ಮಂಗಳವಾರದಿಂದ (ಆಗಸ್ಟ್‌ 2) ನಾಟಕೋತ್ಸವ ಆರಂಭ. ಮಲ್ಲೇಶ್ವರ– ಶೇಷಾದ್ರಿಪುರ ನಡುವಿನ ಲಿಂಕ್‌ ರಸ್ತೆಯಲ್ಲಿರುವ ‘ಕೇಶವಕಲ್ಪ’ದಲ್ಲಿ ಪ್ರತಿದಿನ ರಾತ್ರಿ 7 ಗಂಟೆಗೆ ಹಾಸ್ಯ ನಾಟಕಗಳು ಪ್ರದರ್ಶನಗೊಳ್ಳಲಿವೆ.ಮಂಗಳವಾರ ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ರಂಗ ಪ್ರಯೋಗಗಳಲ್ಲಿ ಹಾಸ್ಯಪ್ರಜ್ಞೆ’ ವಿಷಯದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ರಂಗ ನಿರ್ದೇಶಕ ಎಚ್‌.ಎನ್‌. ಆನಂದಮೂರ್ತಿ, ಲೇಖಕಿ ಡಾ. ಕವಿತಾ ಕೃಷ್ಣ ಅವರು ವಿಚಾರ ಮಂಡಿಸಲಿದ್ದಾರೆ. ರಂಗ ವಿಮರ್ಶಕ ಎಂ. ಪ್ರಕಾಶ್‌ಮೂರ್ತಿ ಮತ್ತು ಬೆಳಕು ತಜ್ಞ ಕೆ. ಪ್ರಭಾಕರಬಾಬು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.‘ವೃತ್ತಿ ರಂಗತಂಡಗಳು ಹಿಂದೆಲ್ಲಾ ಪೌರಾಣಿಕ ನಾಟಕಗಳ ಜತೆಗೆ ಹಾಸ್ಯ ನಾಟಕಗಳನ್ನೂ ಪ್ರದರ್ಶಿಸುತ್ತಿದ್ದವು. ಹಾಸ್ಯ ನಾಟಕಗಳಿಗೆ ಜನರ ಸ್ಪಂದನೆಯೂ ಹೆಚ್ಚಾಗಿತ್ತು. ಆದರೆ, ವೃತ್ತಿ ರಂಗತಂಡಗಳ ಉಳಿವೇ ಕಷ್ಟವಾದಾಗ ಪೌರಾಣಿಕ ನಾಟಕಗಳ ಜತೆಗೆ ಹಾಸ್ಯ ನಾಟಕಗಳೂ ತೆರೆಮರೆಗೆ ಸರಿದವು. ಈಗ ಜನರಲ್ಲಿ ಹಾಸ್ಯ ನಾಟಕಗಳ ಬಗ್ಗೆ ಅಭಿರುಚಿ ಬೆಳೆಸುವ ಹಾಗೂ ಜನರಿಗೆ ಹಾಸ್ಯದ ರಸದೌತಣ ನೀಡುವ ಉದ್ದೇಶದಿಂದ ಹಾಸ್ಯ ನಾಟಕೋತ್ಸವ ಆಯೋಜಿಸಿದ್ದೇವೆ’ ಎನ್ನುತ್ತಾರೆ ಅಮರೇಶ್ವರ ವಿಜಯ ನಾಟಕ ಮಂಡಳಿಯ ಅಧ್ಯಕ್ಷ ಚನ್ನಬಸವಯ್ಯ ಗುಬ್ಬಿ.‘ಬೇರೆ ಬೇರೆ ಹವ್ಯಾಸಿ ರಂಗತಂಡಗಳ ಕಲಾವಿದರು ಈ ನಾಟಕೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಂಭೀರ ವಿಷಯದ ನಾಟಕಗಳ ಮಧ್ಯೆ ಇಂಥ ಹಾಸ್ಯ ನಾಟಕಗಳನ್ನೂ ಜನ ನೋಡಬೇಕು. ಹಾಸ್ಯ ನಾಟಕಗಳಿಗೆ ಒಂದು ಪರಂಪರೆ ಇದೆ. ಆ ಪರಂಪರೆಯ ತಂತು ಇತ್ತೀಚೆಗೆ ಸವೆಯುತ್ತಿದೆ. ನಗೆ ನಾಟಕಗಳ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ಈ ಹಾಸ್ಯ ನಾಟಕೋತ್ಸವ’ ಎನ್ನುವುದು ಅವರ ಮಾತು.ನಾಟಕೋತ್ಸವದ ಉದ್ಘಾಟನಾ ನಾಟಕವಾಗಿ ಯು.ಗೋವಿಂದೇಗೌಡ ರಚಿಸಿ, ನಿರ್ದೇಶಿಸಿರುವ ‘ಪಳೆಂಕರು’ ನಾಟಕ ಪ್ರದರ್ಶನಗೊಳ್ಳಲಿದೆ. ‘ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ’ದ ಕಲಾವಿದರು ಈ ನಾಟಕವನ್ನು ರಂಗದ ಮೇಲೆ ತರಲಿದ್ದಾರೆ.ನಗೆ ನಾಟಕಗಳ ಪ್ರಯೋಗಗಳು ವಿರಳವಾಗುತ್ತಿರುವ ದಿನಗಳಲ್ಲಿ ನಗರದಲ್ಲಿ ಆಯೋಜನೆಯಾಗಿರುವ ಈ ನಾಟಕೋತ್ಸವ ರಂಗಾಸಕ್ತರ ಪಾಲಿಗೆ ಹಾಸ್ಯ ರಸಾಯನವಾಗಲಿದೆ. ಅಂದಹಾಗೆ ಈ ನಾಟಕೋತ್ಸವಕ್ಕೆ ಪ್ರವೇಶ ಉಚಿತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.