ಶುಕ್ರವಾರ, ಡಿಸೆಂಬರ್ 6, 2019
17 °C

ಹಾ, ಹೋ ಅಲಾ..!

Published:
Updated:
ಹಾ, ಹೋ ಅಲಾ..!

ರವಿ, ವಯಸ್ಸು 33. ನೂರ ನಲವತ್ತು ಮೀಟರ್ ಉದ್ದ ಕೆಸರಿನ ಟ್ರ್ಯಾಕ್ ಕ್ರಮಿಸಲು ಇವರು ತೆಗೆದುಕೊಳ್ಳುವ ಅವಧಿ 13 ಸೆಕೆಂಡ್. ಸ್ವಲ್ಪ ಜೋರಾಗಿ ಓಡಿದ್ದರೆ 200 ಮೀಟರ್ ಓಟದ ಭಾರತೀಯ ದಾಖಲೆ ಮುರಿಯುತ್ತಿದ್ದರಲ್ಲ ಎಂದು ನಮಗನ್ನಿಸಬಹುದು.ಆದರೆ ನೂರು, ಇನ್ನೂರು ಮೀಟರ್ ಟ್ರ್ಯಾಕ್‌ನಲ್ಲಿ ಇವರು ಈ ತನಕ ಅದೃಷ್ಟ ಪರೀಕ್ಷಿಸಿಲ್ಲ. ಇವರದ್ದೇನಿದ್ದರೂ ಕಂಬಳದ ಕರೆಯಲ್ಲಿ ಕೋಣಗಳ ಹಿಂದಿನ ಓಟ.ಕ್ರಿಕೆಟಿಗರು, ವೇಟ್‌ಲಿಫ್ಟರ್‌ಗಳು, ಅಥ್ಲೀಟ್‌ಗಳು ಹೇಗೆ ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳುತ್ತಾರೆ ಎಂದು ನಮಗೆ ಗೊತ್ತಿದೆ. 35ರಲ್ಲೂ 15ರ ಚೆಲುವು ಉಳಿಸಿಕೊಳ್ಳಲು ಸಿನಿಮಾ ನಟಿಯರು, ರೂಪದರ್ಶಿಯರು ಮಾಡುವ ಫಿಟ್‌ನೆಸ್ ಕಸರತ್ತುಗಳೂ ಗೊತ್ತು.ಆದರೆ ಇವರ‌್ಯಾರಿಗೂ ಕಡಿಮೆ ಇಲ್ಲದಂತಹ ಸಾಹಸ ಮೆರೆಯುವ, ಕೆರಳಿ ಓಡುವ ಬಲಿಷ್ಠ ಕೋಣಗಳ ಜತೆಗೆ ಓಡಿ ಸೈ ಎನ್ನಿಸಿಕೊಳ್ಳುವ ನಮ್ಮವರ ಬಗ್ಗೆ ನಮಗೆಷ್ಟು ಗೊತ್ತಿದೆ?ಹಾ, ಹೋ, ಅಲಾ... ಎಂದೆಲ್ಲ ಅಲ್ಲಿ ಗೌಜು, ಗದ್ದಲದ ಮಧ್ಯೆ ಮೀಯಾರು ಕಂಬಳ ಕರೆಯಲ್ಲಿ ನೇಗಿಲು ಕಟ್ಟಿಕೊಂಡ ಎರಡು ಕೋಣಗಳನ್ನು ಹಿಡಿದುಕೊಳ್ಳಲು ಮತ್ತು ಓಟದ ಟ್ರ್ಯಾಕ್‌ನಲ್ಲಿ ಅವುಗಳನ್ನು ತಂದು ನಿಲ್ಲಿಸಲು ಅಲ್ಲಿ ನಾಲ್ಕಾರು ಮಂದಿ ಇದ್ದರು. ಸಣ್ಣ ಲುಂಗಿ, ತಲೆಗೆ ಮುಂಡಾಸು ಕಟ್ಟಿಕೊಂಡಿದ್ದ ಅಳದಂಗಡಿಯ ರವಿ ಓಟಕ್ಕೆ ಸಿದ್ಧವಾಗುತ್ತಿದ್ದರು.

 

ಓಟಕ್ಕೆ ಮೊದಲು ಅವರನ್ನು ಕರೆದು ನಿಮ್ಮ ಫಿಟ್‌ನೆಸ್ ರಹಸ್ಯವೇನು ಎಂದು ವಿಚಾರಿಸಿದರೆ ಅವರು- `ಎಂಚಿನ ಸಾಮಿ ಫಿಟ್‌ನೆಸ್, ಕಂಬಳ ಮುಗೀನ ಮನತಾನಿಯೇ ಬಜ್ಜೈ ದೆಪ್ಪೆರೆ ಪೋಪೆ, ಪಂಡಿ ಬೇಲೆ ಮಾಳ್ಪೆ..~ (ಏನು ಫಿಟ್‌ನೆಸ್ ಸ್ವಾಮಿ, ಕಂಬಳ ಮುಗಿದ ಮರುದಿನವೇ ಅಡಿಕೆ ಕೊಯ್ಯಲು ಹೋಗುತ್ತೇನೆ, ಹೇಳಿದ ಕೆಲಸ ಮಾಡುತ್ತೇನೆ). ಅವರ ಈ ಒಂದು ಮಾತಲ್ಲಿ ಬಹಳ ಅರ್ಥ ಅಡಗಿತ್ತು.

 

ಕಂಬಳ ಕೋಣಗಳ ಮಾಲೀಕರು ಶ್ರೀಮಂತರು ಇರಬಹುದು, ಆದರೆ ಕೋಣಗಳನ್ನು ಓಡಿಸುವವರು ಬಡವರು, ಅವರು ಜಿಮ್ಮಿಗೆ ಹೋಗಿ, ಜಾಗಿಂಗ್ ಮಾಡಿ ದೇಹವನ್ನು ಸುಸ್ಥಿತಿಯಲ್ಲಿ ಇಡುವವರಲ್ಲ, ಅಂತಹ ಶಕ್ತಿಯೂ ಅವರಲ್ಲಿಲ್ಲ. ಕಷ್ಟಪಟ್ಟು ದುಡಿಯುವುದೇ ಎಲ್ಲಾ ಫಿಟ್‌ನೆಸ್‌ನ ಮೂಲಮಂತ್ರ ಎಂಬ ಹತ್ತಾರು ಅರ್ಥಗಳು ಅದರಲ್ಲಿದ್ದವು.ರವಿ ಈಗಾಗಲೇ ಮೂರು ಮಕ್ಕಳ ತಂದೆ. ಕಳೆದ ಹತ್ತು ವರ್ಷಗಳಲ್ಲಿ ಅವರು ಕಂಬಳ ಕೋಣಗಳನ್ನು ಓಡಿಸಿ ಗಳಿಸಿದ ಪದಕಗಳ ಸಂಖ್ಯೆ 161. ಗಳಿಸುವ ಪದಕದ ಮೇಲೆ ಕೋಣ ಓಡಿಸುವವನ ಬೇಡಿಕೆ ಇರುತ್ತದೆ. ಕೋಣಗಳ ಮಾಲೀಕರು ರವಿ ಅವರಂತಹ ಯುವಕರನ್ನು ತಮ್ಮ ಕೋಣಗಳನ್ನು ಓಡಿಸಲು ದುಂಬಾಲು ಬೀಳುತ್ತಾರೆ.ಹೀಗಿದ್ದರೂ ಒಂದು ಸೀಸನ್‌ನಲ್ಲಿ ಕೋಣ ಓಡಿಸುವವರಿಗೆ ಸಿಗುವ ಸಂಭಾವನೆ ಈಗಲೂ ಸಹ 1 ಲಕ್ಷ ರೂಪಾಯಿ ಮೀರುವುದಿಲ್ಲ. ಇದೊಂದು ಘನತೆ, ಗೌರವದ ಪ್ರಶ್ನೆಯಷ್ಟೇ. ಹೊಲ, ಗದ್ದೆ ಇದ್ದವರಿಗೆ ಪರವಾಗಿಲ್ಲ, ರವಿ ಅವರಂತಹ ಸಾಹಸಿಗಳು ದಿನದ ಊಟ, ಬಟ್ಟೆಗಾಗಿ ದೇಹ ದಂಡಿಸಿ ದುಡಿದರಷ್ಟೇ ಮುಂದಿನ ಸೀಸನ್‌ಗೆ ಕೋಣ ಓಡಿಸುವ ಶಕ್ತಿ ಉಳಿಸಿಕೊಳ್ಳಲು ಸಾಧ್ಯ.`ಗಂಜಿ, ಚಟ್ನಿಯಷ್ಟೇ ನಮ್ಮ ಆಹಾರ. ಹಾಲು ಸಹ ಕುಡಿಯುವುದಿಲ್ಲ. ನಮ್ಮಂತಹವರಿಗೆ ಹಾಲು ಎಲ್ಲಿ ಕೈಗೆಟುಕಲು ಸಾಧ್ಯ ಹೇಳಿ. ಕೋಣ ಓಡಿಸಲು ಇದ್ದಾಗ ಕಂಬಳಕ್ಕೆ ಬರುತ್ತೇನೆ, ಮರುದಿನದಿಂದಲೇ ಕೂಲಿ ಕೆಲಸಕ್ಕೆ ಹೋಗುತ್ತೇನೆ.ಮರ ಹತ್ತುವುದು ಇರಲಿ, ಅಡಿಕೆ ಕೊಯ್ಯುವುದು ಇರಲಿ, ಮಣ್ಣು ಹೊರುವುದು ಇರಲಿ, ಎಲ್ಲಾ ಕೆಲಸ ಮಾಡುತ್ತೇನೆ. ಹೀಗಾಗಿ ನನ್ನ ದೇಹ ಎಂದೂ ಜಡವಾಗಿದ್ದಿಲ್ಲ. ನಾನು ಈಗಲೂ ಕೋಣಗಳ ಜತೆಗೆ ನೂರು ಮೀಟರ್ ಟ್ರ್ಯಾಕ್‌ನಲ್ಲಿ ಸುಮಾರು 13 ಸೆಕೆಂಡ್‌ನಲ್ಲೇ ಗುರಿ ಮುಟ್ಟುವುದು ಸಾಧ್ಯವಾಗಿದೆ~ ಎಂದು ರವಿ ಹೇಳುತ್ತಾರೆ. ಅವರ ಪತ್ನಿ ಕೂಡ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರ ಸಂಪಾದನೆಯಿಂದಲೇ ಮೂವರು ಮಕ್ಕಳ ಓದು, ಬಟ್ಟೆ, ಬರೆ, ಹೊಟ್ಟೆಗೆ ಹಿಟ್ಟು ಆಗಬೇಕು.ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವರ್ಷಕ್ಕೆ ಸುಮಾರು 25 ಕಂಬಳಗಳು ನಡೆಯುತ್ತವೆ. ಈ ಪೈಕಿ ದ.ಕ. ಉಡುಪಿ ಜಿಲ್ಲೆಗಳಲ್ಲಿ 20ರಷ್ಟು ಕಂಬಳಗಳು ನಡೆಯುತ್ತವೆ. ಇದೂ ಒಂದು ರೀತಿಯ ಕುದುರೆ ರೇಸ್ ಎನ್ನಬೇಕು. ಅಲ್ಲಿ ಕುದುರೆ ಮಾಲೀಕನಿಗೆ ಗೌರವ, ಇ್ಲ್ಲಲಿ ಪ್ರಶಸ್ತಿ ಗೆಲ್ಲುವ ಕೋಣಗಳ ಮಾಲೀಕರಿಗೆ ಪುರಸ್ಕಾರ.ಕೋಣವನ್ನು ಓಡಿಸುವರಿಗೂ ಒಂದು ಗೌರವವಿದೆ. ಆದರೆ ಅವರಿಗೆ ಬೇಡಿಕೆ ಬರಬೇಕಾದರೆ ಕೋಣದ ವೇಗದಲ್ಲಿ ಅದನ್ನು ಹಿಂಬಾಲಿಸುವ ಶಕ್ತಿ ಇರಬೇಕು. ಆಗಸ್ಟ್‌ನಿಂದ ಮಾರ್ಚ್‌ವರೆಗಿನ ಕಂಬಳ ಸೀಸನ್ ಮಾತ್ರವಲ್ಲ, ಉಳಿದ ಸಮಯದಲ್ಲೂ ಕೋಣಗಳಂತೆ ತಾವೂ ದೇಹವನ್ನು ಕಾಯ್ದುಕೊಳ್ಳಬೇಕು. ದೇಹಕ್ಕೆ ಜಡತ್ವ ಅಂಟದಂತೆ ನೋಡಿಕೊಳ್ಳಬೇಕು.ತೀರಾ ಇತ್ತೀಚಿನವರೆಗೂ ಕಂಬಳದಲ್ಲಿ ಕೋಣಗಳನ್ನು ಓಡಿಸುವ ಕಲೆ ಜಾನಪದೀಯವಾಗಿಯೇ ಉಳಿದಿತ್ತು. ಕಂಬಳದ ಸೀಸನ್‌ನಲ್ಲಿ ಕೋಣ ಓಡಿಸುವುದು ಉಳಿದ ಅವಧಿಯಲ್ಲಿ ಮೈಮುರಿಯುವಂತೆ ದುಡಿಯುವುದೇ ಫಿಟ್‌ನೆಸ್ ಕಾಯ್ದುಕೊಳ್ಳುವ ತಂತ್ರವಾಗಿತ್ತು. ಇತ್ತೀಚೆಗೆ ಈ ಕಲೆಯನ್ನು ಶಾಸ್ತ್ರೀಯವಾಗಿ ಕಲಿಯುವ ಅವಕಾಶವನ್ನೂ ಕಲ್ಪಿಸಲಾಗಿದೆ.

 ಸುಮಾರು ನಾಲ್ಕು ದಶಕಗಳಿಂದ ಕಂಬಳ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಗುಣಪಾಲ ಕಡಂಬ ಮತ್ತು ಅವರಂತಹ ಇತರ ಆಸಕ್ತರ ಪರಿಶ್ರಮದಿಂದ `ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ~ ಆರಂಭವಾಗಿದೆ.

 

ಕಳೆದ ಏಳೆಂಟು ತಿಂಗಳಿಂದ 18ರಿಂದ 25 ವರ್ಷದೊಳಗಿನ ಆಸಕ್ತ ಸುಮಾರು 50 ಮಂದಿ ಯುವಕರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಕಂಬಳ ಕೋಣಗಳ ಓಟದ ತರಬೇತಿ ನೀಡಲಾಗುತ್ತಿದೆ. ಗುಣಪಾಲ ಕಡಂಬರಂಥ ಉತ್ಸಾಹಿಗಳು ಈ ಸಾಹಸಕ್ಕೆ ಮುಂದಾದುದಕ್ಕೂ ಕಾರಣವಿದೆ.

 

ದಿನಕಳೆದಂತೆ ಕೋಣ ಓಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ಸಹ ಈ ಸಂಪ್ರದಾಯ ಉಳಿಯಬೇಕು ಎಂಬ ಆಶಯ ಅವರದ್ದು. ಹೀಗೆ ತರಬೇತಿ ಪಡೆದ ಯುವಕ ಕಲ್ಲಾಪು ವಕ್ವಾಡಿಗೋಳಿಯ ಶಶಿಧರ ಶೆಟ್ಟಿ (27) ಅವರನ್ನು ಮಾತನಾಡಿಸಿದಾಗ ಬದಲಾಗುತ್ತಿರುವ ಕಂಬಳದ ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು.`ಬೆಳಿಗ್ಗೆ ಯೋಗ ಮಾಡುತ್ತೇನೆ, ವ್ಯಾಯಾಮವಂತೂ ಇದ್ದೇ ಇದೆ. ನಾನು ದೈಹಿಕವಾಗಿ ಸಮರ್ಥನಾಗಿರಲು ಎಂತಹ ಆಹಾರ ಸೇವಿಸಬೇಕು ಎಂಬ ಪರಿಕಲ್ಪನೆ ನನಗೆ ಇದೆ. ಅನುಭವಸ್ಥರಿಂದ ನಮಗೆ ಸೂಕ್ತ ಮಾರ್ಗದರ್ಶನ ಸಿಕ್ಕಿದೆ. ಈಗ 15 ಸೆಕೆಂಡ್‌ಗಳಲ್ಲಿ ಓಟ ಮುಗಿಸುವುದು ನನಗೆ ಸಾಧ್ಯವಾಗಿದೆ.

 

ಹೊಟ್ಟೆಪಾಡಿಗಿಂತಲೂ ಮುಂದಿನ ತಲೆಮಾರಿಗೆ ಈ ಗ್ರಾಮೀಣ ಕ್ರೀಡೆಯನ್ನು ಉಳಿಸಬೇಕು ಎಂಬ ಸ್ಪಷ್ಟ ಪರಿಕಲ್ಪನೆ ನನಗೆ ಇದೆ. ಅದಕ್ಕಾಗಿಯೇ ಮನೆಯಲ್ಲಿನ ಕೃಷಿ, ಕಾರ್ಯಗಳ ಜತೆಗೆ ಕೋಣ ಓಡಿಸುವುದನ್ನು ಹವ್ಯಾಸವಾಗಿ ಇಟ್ಟುಕೊಂಡಿದ್ದೇನೆ~ ಎಂದು ಅವರು ಹೇಳಿದರು.ಇರ್ವತ್ತೂರಿನ ಆನಂದ (30) ಅವರದು ಮಿರಮಿರ ಮಿಂಚುವ ದೇಹ. ಕಪ್ಪು ಬಣ್ಣದ, ಸಾಧಾರಣ ಎತ್ತರದ ಅವರು ಕಂಬಳಕ್ಕೆ ಇಳಿದರೆ ಕೋಣಗಳ ಓಟ ಅವರಿಗೆ ಲೆಕ್ಕಕ್ಕೇ ಇಲ್ಲ. `ನಮಗೆಂ ಹ ತರಬೇತಿ ಹೇಳಿ, ಕೋಣಗಳ ಹಿಂದೆ ಓಡುವುದಕ್ಕೆ ನಾವು ನಮ್ಮ ದೇಹದಲ್ಲಿ ಶಕ್ತಿ ಉಳಿಸಿಕೊಂಡಿರಬೇಕು, ಸಾಮಾನ್ಯ ಊಟದಲ್ಲೇ ನಮಗೆ ಇದನ್ನು ನಿಭಾಯಿಸುವುದು ಸಾಧ್ಯವಿದೆ~ ಎಂದು ಅವರು ಹೇಳಿದರು.ಸಿದ್ದಕಟ್ಟೆಯ ಸಚಿನ್ (27) ಕಳೆದ ಮೂರ್‌ನಾಲ್ಕು ವರ್ಷಗಳಿಂದ ಕೋಣ ಓಡಿಸುವುದನ್ನು ಆರಂಭಿಸಿದ್ದಾರೆ. `ನಮ್ಮ ಹತ್ರ ಏನು ಅನುಭವ ಕೇಳ್ತೀರಿ ಸ್ವಾಮಿ, ಹತ್ತುಹದಿನೈದು ವರ್ಷಗಳಿಂದ ಪಳಗಿದವರ ಮುಂದೆ ನಾವೇನೂ ಇಲ್ಲ ಬಿಡಿ. ಇದಕ್ಕೆ ತರಬೇತಿ ಪಡೆಯಲೇಬೇಕೆಂದಿಲ್ಲ, ಗದ್ದೆಯಲ್ಲಿ ನಾವೇ ಸಾಗುವಳಿ ಮಾಡುವುದಾದರೆ ನಮಗೆ ಕೋಣಗಳನ್ನು ಹಿಡಿದು, ಕಟ್ಟಿ, ಓಡಿಸಿ ಅಭ್ಯಾಸ ಇರುತ್ತದೆ.ಆದರೆ ಟಿಲ್ಲರ್, ಟ್ರ್ಯಾಕ್ಟರ್ ಕ್ರಾಂತಿಯಿಂದಾಗಿ ನಮ್ಮ ಬೇಸಾಯಗಾರರಿಗೂ ಈ ಕೋಣ ನಿಭಾಯಿಸುವ ಕಲೆ ಎಲ್ಲಿ ಮರೆತು ಹೋಗಿಬಿಡುತ್ತದೋ ಎಂಬ ಆತಂಕ ನನ್ನದು~ ಎಂದು ಹೇಳುತ್ತಲೇ ಅವರು ಜೋಡಿ ಕೋಣಗಳನ್ನು ಹಿಂಬಾಲಿಸಿದರು.ಕಂಬಳ ಓಡಿಸುವವರನ್ನು ದೊಡ್ಡ ಸಂಖ್ಯೆಯಲ್ಲಿ ಒಂದೇ ಕಡೆ ನೋಡಲು ಸಾಧ್ಯವಿರುವುದು ಕಂಬಳಗಳಲ್ಲಿ ಮಾತ್ರ. ಶಕ್ತಿಶಾಲಿ ರಟ್ಟೆಗಳು, ತೊಡೆಗಳು, ವೇಗವಾಗಿ ಓಡುವ ಚಾಕಚಕ್ಯತೆ, ಬಾರುಕೋಲಿನಿಂದ ಕೋಣಗಳಿಗೆ ಹೊಡೆಯುತ್ತಲೇ ಅವುಗಳ ಓಟದ ವೇಗವನ್ನು ಇನ್ನಷ್ಟು ಹೆಚ್ಚಿಸುವ ಈ ಓಟಗಾರರು ಯಾವ ಒಲಿಂಪಿಕ್ ಅಥ್ಲೀಟ್‌ಗೂ ಕಡಿಮೆ ಇದ್ದಂತೆ ತೋರುವುದಿಲ್ಲ.

 

ಇವರು ಟ್ರ್ಯಾಕ್ ಶೂ ಹಾಕಿಕೊಂಡು ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಓಡುವವರಲ್ಲ, ಇವರ ಎಡಗೈಯಲ್ಲಿ ಇರುವುದು ರಿಲೇ ಬೇಟನ್ ಅಲ್ಲ, ಬದಲಿಗೆ ನೇಗಿಲು ಅಥವಾ ಹಗ್ಗ. ಅದನ್ನು ಹಿಡಿದುಕೊಂಡು ಅವರು ಓಡಬೇಕಿರುವುದು ನೀರು ತುಂಬಿದ ಕೆಸರು ಗದ್ದೆಯಲ್ಲಿ.

 

ಕೆಲವೊಂದು ಕಡೆಗಳಲ್ಲಿ ಕೃತಕ ಕಂಬಳ ಟ್ರ್ಯಾಕ್‌ಗಳನ್ನು ನಿರ್ಮಿಸಿ ಅಲ್ಲಿ ಕೋಣಗಳ ಓಟ ನಡೆಯುತ್ತಿದೆ. ಆದರೂ ನೀರಲ್ಲಿ ಓಡುವುದು ಎಷ್ಟು ಕಷ್ಟ ಎಂಬುದು ನೀರಲ್ಲಿ ಓಡಿದವರಿಗೆ ಮಾತ್ರ ತಿಳಿದೀತು.ಎಲ್ಲವೂ ಖುಷಿಗಾಗಿ

ಕಂಬಳದಲ್ಲಿ ಕೋಣಗಳನ್ನು ಓಡಿಸುವವರು ಈ ಕೆಲಸ ಮಾಡುವುದು ಜೀವನ ನಿರ್ವಹಣೆಗಾಗಿ ಅಲ್ಲ ಬದಲಿಗೆ ಕಂಬಳದ ಮೇಲಿನ ಪ್ರೀತಿಯಿಂದ. ಅದಕ್ಕಾಗಿಯೇ ಕಂಬಳ ಮುಗಿದ ಬಳಿಕ ಅವರು ತಮ್ಮ ಮೂಲ ಕಸುಬನ್ನೇ ಅಪ್ಪಿಕೊಳ್ಳುತ್ತಾರೆ.ಇದೀಗ 50 ಮಂದಿ ತರಬೇತಿ ಪಡೆದಿದ್ದಾರಲ್ಲಾ? ಅವರಲ್ಲಿ ಕೃಷಿಕರಿದ್ದಾರೆ, ವ್ಯಾಪಾರಿಗಳಿದ್ದಾರೆ, ಕಮ್ಮಾರರು ಇದ್ದಾರೆ, ಕಂಪ್ಯೂಟರ್ ತರಬೇತಿ ಪಡೆದವರಿದ್ದಾರೆ, ವಿಡಿಯೊಗ್ರಾಫರ್‌ಗಳಿದ್ದಾರೆ.

ಅವರೆಲ್ಲರೂ ತಮ್ಮ ಮೂಲ ವೃತ್ತಿಯನ್ನು ಖಂಡಿತ ಮರೆತು ಇಲ್ಲಿಗೆ ಬಂದಿಲ್ಲ. ಕಂಬಳದ ಮೇಲಿನ ಪ್ರೀತಿ ಅವರನ್ನು ಇತ್ತ ಸೆಳೆದಿದೆ. ಕಂಬಳ, ಅದಕ್ಕೆ ಮೊದಲು ಮಾಡುವ ಟ್ರಯಲ್‌ಗಳಲ್ಲೆಲ್ಲ ಭಾಗವಹಿಸುತ್ತಾರೆ, ರೆಫ್ರಿಗಳಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ.`ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಒಂದು ವೃತ್ತಿಪರ ಕ್ರೀಡೆಯ ರೂಪದಲ್ಲಿ ಬೆಳೆಸುವುದು, ಅದಕ್ಕೊಂದು ಸಂವಿಧಾನದ ಚೌಕಟ್ಟು ಒದಗಿಸುವುದು ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಉದ್ದೇಶ.ಯುವಕರ ಒಲವು ಕಂಡಾಗ ಈ ಉದ್ದೇಶ ಈಡೇರುವ ಆಶಯ ಕಾಣಿಸುತ್ತಿದೆ. ಜೀವನ ನಿರ್ವಹಣೆಗೆ ಅವರ ಮೂಲ ವೃತ್ತಿಯಂತೂ ಇದ್ದೇ ಇದೆ. ಕಂಬಳದ ಮೂಲಕ ಅವರು ತಮ್ಮ ಫಿಟ್‌ನೆಸ್‌ಗೆ ಆದ್ಯತೆ ಕೊಡುತ್ತಾರೆ.

 

ಯುವಕರ ಆರೋಗ್ಯದೊಂದಿಗೆ ಕಂಬಳದ ಆರೋಗ್ಯವೂ ಸುಧಾರಿಸಿದರೆ ನಮ್ಮ ಉದ್ದೇಶ ಈಡೇರಿದಂತೆಯೇ ಅಲ್ಲವೇ?~ ಹೀಗೆ ಪ್ರಶ್ನಿಸುವ 60 ಮೀರಿ ಮುನ್ನಡೆದಿರುವ ಗುಣಪಾಲ ಕಡಂಬ ಅವರ ಉತ್ಸಾಹ ನೋಡಿದರೆ ಕೋಣ ಓಡಿಸುವ ಯುವಕರು ಸಹ ತಮ್ಮ ಬೆನ್ನು ಮುಟ್ಟಿ ನೋಡಿಕೊಳ್ಳಬೇಕು.ಏನಿದು ಕಂಬಳ?

ರಾಜ್ಯದ ದಕ್ಷಿಣ ಕರಾವಳಿ ಜಿಲ್ಲೆಗಳು ಮತ್ತು ಕೇರಳದ ಉತ್ತರ ಭಾಗದಲ್ಲಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಕೋಣಗಳನ್ನು ಬಳಸಿಕೊಂಡು ಮಾಡುವ ಗ್ರಾಮೀಣ ಕ್ರೀಡೆಯೇ ಕಂಬಳ. ಎರಡು ಕೋಣಗಳ ಕುತ್ತಿಗೆಗೆ ನೊಗ ಇಟ್ಟು ಎರಡೂ ಕೋಣಗಳೂ ಕೆಸರು ಗದ್ದೆಯಲ್ಲಿ ಅಥವಾ ನೀರಿನಲ್ಲಿ ಸಮನಾದ ವೇಗದಲ್ಲಿ ಓಡಿಸುವುದೇ ಕಂಬಳದ ವಿಶೇಷ.

 

ಹೀಗೆ ಓಡಿಸುವಾಗ ಚಿಮ್ಮುವ ನೀರು, ಗುರಿ ತಲುಪುವ ಸಮಯಗಳ ಆಧಾರದಲ್ಲಿ ಬಹುಮಾನ ನಿರ್ಧಾರವಾಗುತ್ತದೆ. 1969ರಿಂದ ಈಚೆ ಕಂಬಳಕ್ಕೆ ಸ್ಪರ್ಧಾ ರೂಪ ಸಿಕ್ಕಿತು. ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ ಈ ಸಂಪ್ರದಾಯ ಆರಂಭವಾಯಿತು.

 

ಅಲ್ಲಿಂದೀಚೆಗೆ ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಮತ್ತು ಹಗ್ಗ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಆರಕ್ಕಿಂತ ಕಡಿಮೆ ಹಲ್ಲುಗಳಿರುವ ಕೋಣಗಳನ್ನು ಕಿರಿಯ ಕೋಣಗಳೆಂದು ವಿಂಗಡಿಸಲಾಗುತ್ತದೆ. ಹೀಗಾಗಿ ಹಗ್ಗ ಹಿರಿಯ, ಹಗ್ಗ ಕಿರಿಯ ಹಾಗೂ ನೇಗಿಲು ಹಿರಿಯ ಮತ್ತು ನೇಗಿಲು ಕಿರಿಯ ಎಂಬ ಉಪವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.ಕಂಬಳ ಟ್ರ್ಯಾಕ್ ಇಂತಿಷ್ಟೇ ಉದ್ದ ಇರಬೇಕೆಂಬ ನಿಯಮ ಇಲ್ಲ. ಗದ್ದೆ ಅಥವಾ ಬಯಲಿನ ಲಭ್ಯತೆ ಆಧಾರದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಾಣಗೊಂಡಿರುತ್ತದೆ. ಹೆಚ್ಚಿನ ಟ್ರ್ಯಾಕ್‌ಗಳು 100 ಮೀಟರ್‌ಗಿಂತ ಉದ್ದವೇ ಇರುತ್ತವೆ.ಎರಡು ಟ್ರ್ಯಾಕ್‌ಗಳು ಇರುವ ಕಂಬಳಗಳಾದರೆ ಜತೆ ಜತೆಯಾಗಿ ಎರಡೂ ಟ್ರ್ಯಾಕ್‌ಗಳಲ್ಲಿ ಎರಡು ಜತೆ ಕೋಣಗಳನ್ನು ಓಡಿಸಿ ಮೊದಲಾಗಿ ಗುರಿ ತಲುಪುವ ಕೋಣಗಳನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಒಂದೇ ಟ್ರ್ಯಾಕ್ ಇರುವಲ್ಲಿ ಸೆಕೆಂಡ್ ಆಧಾರದಲ್ಲಿ ಫಲಿತಾಂಶ ನಿರ್ಧರಿಸಲಾಗುತ್ತದೆ.ಕನೆ ಹಲಗೆ ಮತ್ತು ಅಡ್ಡಹಲಗೆ ವಿಭಾಗಗಳಲ್ಲಿ ನಿಶಾನೆಗೆ ನೀರು ಹಾರುವುದೇ ಮುಖ್ಯ ಮಾನದಂಡ. ಈ ಎರಡು ವಿಭಾಗಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳ ಕಡಿಮೆ. ನೇಗಿಲು ಕಿರಿಯ ವಿಭಾಗದಲ್ಲಿ ಸಾಮಾನ್ಯವಾಗಿ ಹೆಚ್ಚು ಜತೆ ಕೋಣಗಳು ಪಾಲ್ಗೊಳ್ಳುತ್ತವೆ. 200ಕ್ಕಿಂತಲೂ ಅಧಿಕ ಕೋಣಗಳು ಪಾಲ್ಗೊಳ್ಳುವ ಕಂಬಳಗಳು ಸಹ ನಡೆಯುತ್ತವೆ.ಹೀಗಾಗಿ ಅಂತಹ ಕಡೆ ಎರಡು ದಿನಗಳವರೆಗೆ ಕಂಬಳ ಮುಂದುವರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಗುವಳಿ ಮಾಡುವ ಕೋಣಗಳ ಬದಲಿಗೆ ಕಂಬಳಕ್ಕೆಂದೇ ಕೋಣಗಳನ್ನು ಸಾಕುವ ಪರಿಪಾಠ ಹೆಚ್ಚುತ್ತಿದೆ.ಒಂದು ಜತೆ ಕೋಣಗಳ ಸಾಕಣೆಗೆ ಹಾಗೂ ಕಂಬಳಗಳಿಗೆ ಅವುಗಳನ್ನು ಸಜ್ಜುಗೊಳಿಸುವುದಕ್ಕೆ ವರ್ಷಕ್ಕೆ 3 ಲಕ್ಷ ರೂಪಾಯಿಗಿಂತ ಅಧಿಕ ವೆಚ್ಚ ತಗುಲುತ್ತದೆ. ಹೀಗಾಗಿಯೇ ಕಂಬಳ ಕೋಣ ಇಟ್ಟುಕೊಂಡವರು ನಿಜವಾದ ಆರ್ಧದಲ್ಲಿ `ಧನಿ~ಕರಾಗಿಯೇ ಇರುತ್ತಾರೆ. ~ಕಂಬಳದ ಕೋಣ ಇಟ್ಟುಕೊಂಡವ~ ಎನ್ನುವುದೇ ಒಂದು ಪ್ರತಿಷ್ಠೆಯ ಸಂಗತಿ.ಗೆದ್ದರೆ ರೂ.30 ಸಾವಿರ

ಕಂಬಳದಲ್ಲಿ ಓಡಿ ಕೋಣಗಳನ್ನು ಗೆಲ್ಲಿಸಿದರೆ ಓಟಗಾರನಿಗೆ ಸಿಗುವುದು 15ರಿಂದ 30 ಸಾವಿರ ರೂಪಾಯಿ ಮಾತ್ರ. ಈ ಮೊದಲು ಒಂದು ಪವನ್ ಚಿನ್ನ, ಅರ್ಧ ಪವನ್ ಚಿನ್ನ, ಕಾಲು ಪವನ್ ಚಿನ್ನ ಹೀಗೆ ಚಿನ್ನದ ಪದಕ ನೀಡಲಾಗುತ್ತಿತ್ತು. ಇದೀಗ ಚಿನ್ನದ ಬೆಲೆ ಹೆಚ್ಚಾದುದರಿಂದ ನಗದು ಪ್ರಶಸ್ತಿ ನೀಡಲಾಗುತ್ತದೆ.ಕೋಣ ಓಡಿಸುವಾಗ ಎಲ್ಲಾ ಕಂಬಳಗಳಲ್ಲೂ ಮೊದಲಿಗನಾಗಿಯೇ ಇರುತ್ತಾನೆ ಎಂದು ಹೇಳುವುದು ಸಾಧ್ಯವೇ ಇಲ್ಲ. ಆತನ ಯಶಸ್ಸು ಏನಿದ್ದರೂ ಓಡುವ ಕೋಣಗಳ ಮೇಲೆ. ಆತ ಎಷ್ಟೇ ಉತ್ಸಾಹದಿಂದ ಓಡಿದರೂ ಆತನ ಕೋಣಗಳು ಅಂದು ಸ್ವಲ್ಪ ನಿಧಾನಗತಿಯಲ್ಲಿ ಓಡಿದರೂ ಆತನ ಕನಸು ನುಚ್ಚುನೂರು.

 

ಹೀಗಾಗಿ ಕಂಬಳ ಓಟಗಾರರ ಸಂಪಾದನೆ ಯಾವತ್ತೂ ಅತಂತ್ರದಲ್ಲೇ ಇರುತ್ತದೆ. ವರ್ಷಕ್ಕೆ ನಾಲ್ಕೈದು ಕಂಬಳಗಳಲ್ಲಿ ಗೆದ್ದರೆ ಆತನ ಆದಾಯ ಒಂದು ಲಕ್ಷ ಮೀರಬಹುದು. ಆದರೆ ಅದೆಲ್ಲ ಕೋಣಗಳ ಒಡೆಯನ ಔದಾರ್ಯತೆಯ ಮೇಲೆ ನಿಂತಿರುತ್ತದೆ.

 

ಇತ್ತೀಚಿನ ದಿನಗಳಲ್ಲಿ ಕೋಣ ಓಡಿಸುವವರಿಗೆ ಸ್ವಲ್ಪ ಬೇಡಿಕೆ ಇರುವುದರಿಂದ ಅವರು ಒಬ್ಬ ಧಣಿಯನ್ನೇ ಅವಲಂಬಿಸಿ ಇರುವುದಿಲ್ಲ. ಉತ್ತಮ ಅವಕಾಶ ಸಿಕ್ಕಿದಾಗ ಬೇರೊಬ್ಬ ಧಣಿಯಲ್ಲಿಗೆ ತೆರಳುತ್ತಾರೆ. ಏನೇ ಆದರೂ ಕೋಣ ಓಡಿಸುವವರಿಗೆ ಅದನ್ನೇ ನಂಬಿ ಜೀವನ ಸಾಗಿಸಲಂತೂ ಸಾಧ್ಯವಿಲ್ಲ.ಹೀಗಾಗಿಯೇ ಅವರಿಗೆ ಇದೊಂದು ಹವ್ಯಾಸ ಅಥವಾ ಸೈಡ್ ಬಿಸಿನೆಸ್ ಮಾತ್ರ. ಕೆಸರಲ್ಲಿ ಮಿಂಚಿನ ವೇಗದಲ್ಲಿ ಓಡಿ ಜನ ಚಪ್ಪಳೆ ತಟ್ಟಿದಾಗ ಅವರಿಗೆ ಸಿಗುವ ಬೆಲೆಯನ್ನು ಲೆಕ್ಕಕ್ಕೆ ಇಡಲು ಸಾಧ್ಯವೇ. ಸದ್ಯ ಎಲ್ಲರ ಮನದಲ್ಲೂ ಇರುವುದೂ ಇದೇ ಭಾವನೆ.ಚಿತ್ರಗಳು: ಚಂದ್ರಹಾಸ ಕೋಟೆಕಾರ್

ಪ್ರತಿಕ್ರಿಯಿಸಿ (+)