ಹಿಂಗಾರಿ ಬಿತ್ತನೆ ಸಾರ್ವಕಾಲಿಕ ದಾಖಲೆ

7
ಧಾರವಾಡ: ಕಡಲೆ ಬೆಳೆ ಪ್ರದೇಶದಲ್ಲಿ ಭಾರಿ ಏರಿಕೆ

ಹಿಂಗಾರಿ ಬಿತ್ತನೆ ಸಾರ್ವಕಾಲಿಕ ದಾಖಲೆ

Published:
Updated:

ಧಾರವಾಡ: ರಾಜ್ಯದೆಲ್ಲೆಡೆ ಮಳೆ ಕೊರತೆಯಿಂದ ವಿವಿಧ ಜಿಲ್ಲೆಗಳಲ್ಲಿ ಬಿತ್ತನೆ ಕುಂಠಿತಗೊಂಡಿದ್ದರೆ ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಅದರಲ್ಲೂ ಕಡಲೆ ಬೆಳೆಯ ಬಿತ್ತನೆ ಹೊಸ ದಾಖಲೆಯನ್ನೇ ಬರೆದಿದೆ.ಜಿಲ್ಲೆಯಲ್ಲಿ  2,48,200 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿ ಬೆಳೆ ಬಿತ್ತನೆ ಗುರಿ ಇತ್ತು. ಈ ಪೈಕಿ 2,35,835 ಹೆಕ್ಟೇರ್ ಪ್ರದೇಶದಲ್ಲಿ (ಶೇ 95.01) ಬಿತ್ತನೆ ಆಗಿದೆ.ಮುಂಗಾರು ಕೈಕೊಟ್ಟಿದ್ದರಿಂದ ಬೇಸತ್ತ ರೈತರು, ಸಜ್ಜುಗೊಳಿಸಿದ್ದ ಹೊಲವನ್ನು ಹಾಗೆಯೇ ಬಿಟ್ಟಿದ್ದರು. ಕಲಘಟಗಿ ಹಾಗೂ ಧಾರವಾಡ ತಾಲ್ಲೂಕನ್ನು ಹೊರತುಪಡಿಸಿ ಉಳಿದ ಮೂರು ತಾಲ್ಲೂಕುಗಳಲ್ಲಿ ಮುಂಗಾರಿ ಬಿತ್ತನೆ ಗಣನೀಯವಾಗಿ ಕುಂಠಿತಗೊಂಡಿತ್ತು. ಅದರಲ್ಲೂ ನವಲಗುಂದ ತಾಲ್ಲೂಕಿನಲ್ಲಿ ಕೇವಲ ಶೇ 2ರಷ್ಟು ಬಿತ್ತನೆಯಾಗಿತ್ತು.ಆದರೆ ತಮಿಳುನಾಡಿನ `ನೀಲಂ' ಚಂಡಮಾರುತ ಧಾರವಾಡದ ರೈತರಲ್ಲಿ ವರದಾನವಾಯಿತು. ಚಂಡಮಾರುತದ ಪರಿಣಾಮವಾಗಿ 3-4 ದಿನಗಳ ಕಾಲ ಚೆನ್ನಾಗಿ ಮಳೆ ಸುರಿಯಿತು. ಮೊದಲೇ ಹದ ಮಾಡಿ ಇಟ್ಟುಕೊಂಡಿದ್ದ ಹೊಲದಲ್ಲಿ ರೈತರು ಚುರುಕಾಗಿ ಬಿತ್ತನೆ ಕೈಗೊಂಡರು. ಜತೆಗೆ ಚಳಿಗಾಲವೂ ಬೇಗನೇ ಆರಂಭವಾದುದರಿಂದ ಜಿಲ್ಲೆಯಲ್ಲಿ ಇದೀಗ ಬಿಸಿಲಿನ ಝಳವೂ ಅಷ್ಟಾಗಿ ಇಲ್ಲ.ವಾತಾವರಣ ಕಡಲೆ, ಸೂರ್ಯಕಾಂತಿ, ಹತ್ತಿ, ಕುಸುಬೆಯಂತಹ ವಾಣಿಜ್ಯ ಹಾಗೂ ಎಣ್ಣೆ ಕಾಳು ಬೆಳೆಗೆ ಪೂರಕವಾಗಿದೆ. ಕುಂದಗೋಳ ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬೆಳೆಯುವ ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ (ಈರುಳ್ಳಿ) ಬೆಳೆ ಪ್ರಮಾಣ ಈ ವರ್ಷ  ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂಕಿ ಅಂಶಗಳು ತಿಳಿಸುತ್ತವೆ.`ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಯ ಬದಲು ರೈತರು ಕಡಲೆ ಹಾಗೂ ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಈ ಬಗೆಯ ಬದಲಾವಣೆ ಜಿಲ್ಲೆಯ ಇತಿಹಾಸದಲ್ಲಿಯೇ ಒಂದು ದಾಖಲೆ' ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಗಡಾದ.

ಕಡಲೆ ಬೆಳೆ ಬಿತ್ತನೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಗಣನೀಯ ಸಾಧನೆಯಾಗಿದೆ.ಈ ಬಾರಿ 94,520 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 57,710 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಧಾರವಾಡ ತಾಲ್ಲೂಕಿನಲ್ಲಿ 27,000 ಹೆಕ್ಟೇರ್‌ನಲ್ಲಿ ಕಡಲೆ ಬೆಳೆವ ಗುರಿ ಇತ್ತಾದರೂ 29,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.ಹುಬ್ಬಳ್ಳಿ ತಾಲ್ಲೂಕಿನಲ್ಲಿ 19,000 ಹೆಕ್ಟೇರ್ ಗುರಿಯನ್ನು ಮೀರಿ 20,550 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕಲಘಟಗಿ ತಾಲ್ಲೂಕಿನಲ್ಲಿ ಮಾತ್ರ 500 ಹೆಕ್ಟೇರ್ ಬದಲಿಗೆ ಕೇವಲ 150 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬತ್ತ ಬೆಳೆಯುವ ಪ್ರದೇಶ ಈ ತಾಲ್ಲೂಕಿನಲ್ಲಿ ಹೆಚ್ಚು ಇರುವುದು ಇದಕ್ಕೆ ಕಾರಣ ಎಂದು ಅವರು ವಿವರ ನೀಡಿದರು.ಹಿಂಗಾರು ಹಂಗಾಮಿನಲ್ಲಿ ಏಕದಳ ಧಾನ್ಯ ಹಾಗೂ ದ್ವಿದಳ ಧಾನ್ಯಗಳ ಬಿತ್ತನೆ ಶೇ 100ರಷ್ಟು ಸಾಧ್ಯವಾಗಿದೆ. ಎಣ್ಣೆ ಕಾಳು ಬೆಳೆಗಳಾದ ಸೂರ್ಯಕಾಂತಿ, ಕುಸುಬೆ ಹಾಗೂ ಅಗಸೆ ಬೆಳೆ ಶೇ 76ರಷ್ಟು ಪ್ರದೇಶದಲ್ಲಿ ಬೆಳೆಯಲಾಗಿದೆ.`ನೀಲಂ ಚಂಡಮಾರುತದಿಂದ ಬಿದ್ದ ಮಳೆಯ ತೇವಾಂಶವೇ ಈ ಬೆಳೆಗಳಿಗೆ ಸಾಕು. ಕಡಲೆ ಕಾಳು ಕಟ್ಟುತ್ತದೆ. ಚಳಿ ವಾತಾವರಣದಲ್ಲಿಯೇ ಕಟಾವಿಗೆ ಬರುತ್ತದೆ' ಎನ್ನುತ್ತಾರೆ ಗಡಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry