ಹಿಂಗಾರು ಬೆಳೆಯಾದರೂ ಕೈಗೆ ಸಿಕ್ಕೀತೆ?

7

ಹಿಂಗಾರು ಬೆಳೆಯಾದರೂ ಕೈಗೆ ಸಿಕ್ಕೀತೆ?

Published:
Updated:
ಹಿಂಗಾರು ಬೆಳೆಯಾದರೂ ಕೈಗೆ ಸಿಕ್ಕೀತೆ?

ಬೆಳಗಾವಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತತ್ತರಿಸಿರುವ ಜಿಲ್ಲೆಯ ರೈತರು, ಹಿಂಗಾರು ಬೆಳೆಯಾದರೂ ಕೈಗೆಟುಕಬಹುದೇ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಹಿಂಗಾರು ಬಿತ್ತನೆಗೆ ಅಗತ್ಯ ಮಳೆಯೂ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬೀಳದಿರುವುದು ರೈತರ ಬಾಳಲ್ಲಿ `ಕಾರ್ಮೊಡ~ ಕವಿದಂತಾಗಿದೆ.ಈಗಾಗಲೇ ಬರ ಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿರುವ ಅಥಣಿ, ಸವದತ್ತಿ ಮತ್ತು ತೀವ್ರ ಬರವನ್ನು ಎದುರಿಸುತ್ತಿರುವ ರಾಯಬಾಗ, ರಾಮದುರ್ಗದಲ್ಲಿ ಅಗತ್ಯಕ್ಕಿಂತ ಕಡಿಮೆ ಹಿಂಗಾರು ಮಳೆಯಾಗಿದೆ. ಈ ತಾಲ್ಲೂಕುಗಳಲ್ಲಿ ಈಗಾಗಲೇ ಬಿತ್ತನೆ ನಡೆಸಿದ ರೈತರು ಮಳೆಗಾಗಿ ಕಾತರದಿಂದ ಕಾಯುವಂತಾಗಿದೆ. ಹಿಂಗಾರು ಮಳೆಯೂ ಕೈಕೊಟ್ಟರೆ, ಬಿತ್ತಿದ ಬೀಜ ಮೊಳೆಕೆಯೊಡೆಯುವುದೂ ಕಷ್ಟ.ರಾಯಬಾಗ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿರುವುದರಿಂದ 18,125 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಶೇ 11 ರಷ್ಟು (1729 ಹೆಕ್ಟೇರ್ ನೀರಾವರಿ ಹಾಗೂ 189 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ) ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಸಮರ್ಪಕವಾಗಿ ಮಳೆ ಬೀಳದಿರುವುದರಿಂದ ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯುವ ಲಕ್ಷಣಗಳೂ ಕಾಣುತ್ತಿಲ್ಲ.ಇನ್ನೊಂದು ತಿಂಗಳಿನಲ್ಲಿ ಅಗತ್ಯವಿರುವಷ್ಟು ಮಳೆಯಾಗದಿದ್ದರೆ, ಹಿಂಗಾರು ಬೆಳೆಯೂ ಸಿಗುವುದಿಲ್ಲ ಎಂಬ ಆತಂಕ ರಾಯಬಾಗ ತಾಲ್ಲೂಕಿನ ರೈತರನ್ನು ಕಾಡುತ್ತಿದೆ.ಸವದತ್ತಿ ತಾಲ್ಲೂಕಿನಲ್ಲಿ 57925 ಹೆಕ್ಟೇರ್ ಗುರಿಯಲ್ಲಿ ಶೇ. 34ರಷ್ಟು ಬಿತ್ತನೆಯಾಗಿದ್ದು (2108 ಹೆಕ್ಟೇರ್ ನೀರಾವರಿ, 17680 ಹೆ. ಮಳೆಯಾಶ್ರಿತ), ಮಳೆಯ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

 

ಗೋಕಾಕ ತಾಲ್ಲೂಕಿನಲ್ಲಿ 37525 ಹೆಕ್ಟೇರ್ ಗುರಿಯಲ್ಲಿ ಶೇ. 28 (5228 ಹೆ. ನೀರಾವರಿ, 5363 ಹೆ. ಮಳೆಯಾಶ್ರಿತ) ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ 50850 ಹೆ. ಗುರಿಯಲ್ಲಿ ಶೇ. 47ರಷ್ಟು (3430 ಹೆ. ನೀರಾವರಿ, 20707 ಹೆ. ಮಳೆಯಾಶ್ರಿತ) ಮಾತ್ರ ಬಿತ್ತನೆಯಾಗಿದೆ.ಮುಂಗಾರಿನ ಕೊರತೆಯಿಂದಾಗಿ ತೀವ್ರ ಬರವನ್ನು ಎದುರಿಸಿದ ಅಥಣಿ ತಾಲ್ಲೂಕಿನಲ್ಲಿ 97270 ಹೆಕ್ಟೇರ್ ಗುರಿಯಲ್ಲಿ ಶೇ. 63 (10712 ಹೆ. ನೀರಾವರಿ, 50210 ಹೆ. ಮಳೆಯಾಶ್ರಿತ) ಬಿತ್ತನೆಯಾಗಿದೆ. ಆದರೆ, ಆರಂಭದಲ್ಲಿ ಒಂದೆರಡು ಮಳೆ ಚನ್ನಾಗಿ ಬಿದ್ದಿರುವುದರಿಂದ ಅಥಣಿಯಲ್ಲಿ ಬಿತ್ತನೆ ಕಾರ್ಯ ಚುರುಕಿನಿಂದ ನಡೆದಿತ್ತು. ಆದರೆ, ಅದಾದ ಬಳಿಕ ಮತ್ತೆ ಸರಿಯಾಗಿ ಮಳೆಯಾಗದಿರುವುದು ರೈತರು ಮುಗಿಲಿನತ್ತ ನೋಡುವಂತಾಗಿದೆ.

 

ಸದ್ಯಕ್ಕೆ ಕನಿಷ್ಠ ಎರಡು-ಮೂರು ದೊಡ್ಡ ಮಳೆಯಾದರೂ ಬರಬೇಕು. ಇಲ್ಲದಿದ್ದರೆ ಈಗ ಬಿತ್ತನೆ ಮಾಡಿರುವ ಬಿಳಿ ಜೋಳ, ಗೋಧಿ, ಕಡಲೆ ಬೆಳೆಗೆ ಅಗತ್ಯ ನೀರು ಸಿಗದೆ, ಹಿಂಗಾರು ಬೆಳೆಯೂ ವಿಫಲವಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.ರೈತರ ಅಳಲು: “ಮುಂಗಾರಿಗೆ ಎರಡು ಎಕರೆಯಲ್ಲಿ ಸುಮಾರು 10 ಸಾವಿರ ರೂಪಾಯಿ ಖರ್ಚು ಮಾಡಿ ತೊಗರಿ, ಶೇಂಗಾ ಬಿತ್ತನೆ ಮಾಡಿದ್ದೆ. ಮಳೆ ಕೈಕೊಟ್ಟಿದ್ದರಿಂದ ತೊಗರಿ ಹೂವು ಬಿಟ್ಟಿಲ್ಲ, ಶೇಂಗಾ ಕಾಳು ಕಟ್ಟಿಲ್ಲ. 15 ದಿನಗಳ ಹಿಂದೆ ಮಳೆಯಾಗಿದ್ದರಿಂದ ಮೂರು ಎಕರೆಯಲ್ಲಿ ಬಿಳಿ ಜೋಳ ಬಿತ್ತನೆ ಮಾಡಿದ್ದೇನೆ.ಆದರೆ, ಈಗ ಮಳೆಯೇ ಆಗುತ್ತಿಲ್ಲ. ನಾಲ್ಕೈದು ಮಳೆ ಉತ್ತಮ ಆದರೆ ಮಾತ್ರ ಬೆಳೆ ಸರಿಯಾಗಿ ಕೈಗೆ ಬರಬಹುದು” ಎಂದು ಅಥಣಿ ತಾಲ್ಲೂಕಿನ ಕಟಗೇರಿ ಗ್ರಾಮದ ರೈತ ಮಲ್ಲಪ್ಪ ಗಿರಮಲ್ಲಪ್ಪ ತುಬಚಿ `ಪ್ರಜಾವಾಣಿ~ಗೆ ತಿಳಿಸಿದರು.“ಸುಮಾರು 25 ಸಾವಿರ ಖರ್ಚು ಮಾಡಿ ಒಂದು ಎಕರೆಯಲ್ಲಿ ಗೋವಿನ ಜೋಳ, ಇನ್ನೊಂದು ಎಕರೆಯಲ್ಲಿ ಅರಿಷಿನ ಬೆಳೆಯನ್ನು ಹಾಕಿದ್ದೆ.ಮುಂಗಾರು ಮಳೆ ಬೀಳದಿರುವುದರಿಂದ ಗೋವಿನ ಜೋಳ ಬೆಳೆ ಕೈಗೆ ಬರಲಿಲ್ಲ. ಒಣಗಿದ ದಂಟನ್ನು ಕಿತ್ತು ದನಕರುಗಳಿಗೆ ಹಾಕಬಹುದಷ್ಟೇ. ಅರಿಷಿನ ಬೆಳೆಯೂ ಕೈಗೆಟಕುವ ಲಕ್ಷಣ ಕಾಣುತ್ತಿಲ್ಲ” ಎಂದು ಅಥಣಿ ತಾಲ್ಲೂಕಿನ ಕೋಕಟನೂರ ಗ್ರಾಮದ ರೈತ ಲಕ್ಕಪ್ಪ ಕಂಬಾರ ಅವರು ಒಣಗಿ ನಿಂತ ಜೋಳದ ಬೆಳೆಯನ್ನು ತೋರಿಸುತ್ತಾರೆ.“ಹಿಂಗಾರಿಗೆ ಎರಡು ಎಕರೆಯಲ್ಲಿ ಗೋಧಿ ಬಿತ್ತನೆ ಮಾಡಬೇಕು ಎಂದುಕೊಂಡಿದ್ದೇನೆ. ಸರಿಯಾಗಿ ಮಳೆ ಬೀಳುವುದನ್ನು ಕಾಯುತ್ತಿದ್ದೇನೆ. ಈಗಲೂ ಮಳೆ ಕೈಕೊಟ್ಟರೆ ಈ ವರ್ಷ ಊಟಕ್ಕೂ ತತ್ವಾರ ಆಗಲಿದೆ” ಎಂದು ಲಕ್ಕಪ್ಪ ಕಂಬಾರ ಅಳಲು ತೋಡಿಕೊಂಡರು.ಮುಂಗಾರು ವಿಫಲದಿಂದ ಈಗಾಗಲೇ ಜಿಲ್ಲೆಯಲ್ಲಿ ಅಥಣಿ, ಸವದತ್ತಿ, ರಾಯಬಾಗ, ರಾಮದುರ್ಗದಲ್ಲಿ ತೀವ್ರ ಬರದ ಛಾಯೆ ಆವರಿಸಿತ್ತು. ಇದೀಗ ಹಿಂಗಾರು ಸಹ ವಿಫಲವಾದರೆ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry