ಮಂಗಳವಾರ, ಮೇ 11, 2021
24 °C
5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬರಗೂರು ಪ್ರಶ್ನೆ

ಹಿಂದಿಯಷ್ಟು ಮನ್ನಣೆ ಇತರ ಭಾಷೆಗಳಿಗೆ ಏಕಿಲ್ಲ?

ಪ್ರಜಾವಾಣಿ ವಾರ್ತೆ/ ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ದಾವಣಗೆರೆ (ಮುದೇನೂರು ಸಂಗಣ್ಣ ವೇದಿಕೆ): `ದೇಶದಲ್ಲಿ ಹಿಂದಿಗೆ ಸಿಕ್ಕಿರುವ ಮನ್ನಣೆ ದೇಶ ಇತರ ಭಾಷೆಗಳಿಗೆ ಇದುವರೆಗೂ ಸಿಕ್ಕಿಲ್ಲ. ಅದನ್ನು ಯಾರೂ ಸಹ ಪ್ರಶ್ನೆ ಮಾಡಲು ಮುಂದಾಗುತ್ತಿಲ್ಲ' ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.ನಗರದಲ್ಲಿ ನಡೆದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸಂವಿಧಾನದ 344ರಿಂದ 351ನೇ ವಿಧಿಯಲ್ಲಿ ಹಿಂದಿ ಭಾಷೆಗೆ ಮನ್ನಣೆ ನೀಡಲಾಗಿದೆ. ಜಗತ್ತಿನ ಎ್ಲ್ಲಲಾ ಭಾಷೆಗಳು ಒಂದೇ ಎಂದು ಹೇಳಿದರೆ ಮಾತ್ರ ಭಾಷಿಕ ಸಮಾನತೆ, ಸಂಸ್ಕೃತಿಯ ಸಮಾನತೆ ಆಗುತ್ತದೆ. ಜಾಗತೀಕರಣದ ಪ್ರಭಾವದಿಂದ ದೇಶದ ಇತರ ಭಾಷೆಗಳು ಸೊರಗುತ್ತಿವೆ. ನಾವು ಕೊರಳಿನ ಕನ್ನಡಾಭಿಮಾನಿ ಆಗಿದ್ದೇವೆ ಹೊರತು; ಕರುಳಿನ ಕನ್ನಡಾಭಿಮಾನಿ ಆಗಿಲ್ಲ' ಎಂದು ವಿಶ್ಲೇಷಿಸಿದರು.`ಅಂತರ್ಜಾಲದಲ್ಲಿ ಶೇ 68ರಷ್ಟು ಇಂಗ್ಲಿಷ್ ಇದೆ. ಕನ್ನಡ ಭಾಷೆಯ ಕಂಪ್ಯೂಟರೀಕರಣ ಇಂದಿನ ಅಗತ್ಯವಿದೆ. ಇಂಗ್ಲಿಷ್‌ಮಯದಿಂದ ಸಣ್ಣ-ಪುಟ್ಟ ಭಾಷೆಗೆ ಹಿನ್ನಡೆ ಆಗಿದೆ. ಇದು ಜಾಗತೀಕರಣದ ಆರ್ಥಿಕ ಪ್ರಭುತ್ವದಿಂದ ಉಂಟಾದ ಸಮಸ್ಯೆ' ಎಂದು ವ್ಯಾಖ್ಯಾನಿಸಿದರು.`ನಾಡಿನ ಬಹುತ್ವ ನಾಶವಾದರೆ ಅಲ್ಲಿನ ವೈವಿಧ್ಯವೂ ಇರುವುದಿಲ್ಲ. ಭಾಷೆ ಎಂಬುದು ಆಯಾ ಪ್ರದೇಶದ ವೈವಿಧ್ಯ, ಸಂಸ್ಕೃತಿ, ಆಚರಣೆ ಬಿಂಬಿಸುತ್ತದೆ. ಜಗತ್ತು ಒಂದೇ ರೀತಿಯಿದ್ದರೆ ಅದು `ಇಸ್ತ್ರೀ' ಮಾಡಿದ ಬಟ್ಟೆಯಂತೆ. ಏಕಮುಖಿ ಆರ್ಥಿಕತೆ ಹಾಗೂ ಧಾರ್ಮಿಕತೆ ಪ್ರಭಾವ ಭಾಷೆಗಳ ಮೇಲೂ ಆಗಿದೆ' ಎಂದು ಹೇಳಿದರು.`ಇಂಗ್ಲಿಷ್ ಭಾಷೆಯನ್ನು ತಂತ್ರಜ್ಞಾನದಲ್ಲಿ ಅಳವಡಿಸಿದಂತೆ ಕನ್ನಡವನ್ನು ಅಳವಡಿಸಬೇಕು. ಜಾಗತೀಕರಣದ ಪ್ರಭಾವ ಕನ್ನಡ ಭಾಷೆಯ ಮೇಲೂ ಆಗಿದೆ. ಕನ್ನಡ ಭಾಷೆ ಆಧುನಿಕ ತಂತ್ರಜ್ಞಾನದ ಜತೆಗೆ ಮುಖಾಮುಖಿ ಆಗಬೇಕು' ಎಂದು ಹೇಳಿದರು.`ಭಾಷೆ ಮತ್ತು ಬದುಕನ್ನು ಒಟ್ಟಿಗೆ ನೋಡಬೇಕು. ಸತ್ಯ ಹೇಳುವ ಕೆಲಸ ಸಾಹಿತ್ಯದ ಕೆಲಸ ಆಗಬೇಕು. ಸಾಹಿತ್ಯ ಬರೆಯುವ ಮೊದಲು ಸಾಹಿತಿಗಳು ಮನುಷ್ಯರಾಗಬೇಕು. ಜಾಗತೀಕರಣದ ಪ್ರಭಾವದಿಂದ `ಕಾರ್ಪೋರೇಟ್' ಸಂಸ್ಕೃತಿ ಹುಟ್ಟಿದೆ. ಅದರಿಂದ ಸುಧಾಮೂರ್ತಿ, ಕಿರಣ್ ಮಜುಂದಾರ್ ಅಂತಹ ವ್ಯಕ್ತಿಗಳು ಮಾದರಿ ಆಗುತ್ತಿದ್ದಾರೆ. ಅಂಬೇಡ್ಕರ್, ಮಹಾತ್ಮ ಗಾಂಧಿ ನಮಗೆ ಮಾದರಿ ಆಗುತ್ತಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು.`ದೇಶದಲ್ಲಿ ಮನುಷ್ಯನನ್ನು ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಇದು ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರದ ಸವಾಲು ಕೂಡ. 80ರ ದಶಕದಲ್ಲಿ ಸಾಂಸ್ಕೃತಿಕ ನಾಯಕತ್ವದ ಶಕ್ತಿ ನಾಶವಾಗಿಲ್ಲ; ಅದು ಶಿಥಿಲಗೊಂಡಿದೆ. ಸಾಮಾಜಿಕ ನಾಯಕತ್ವ ರಾಜ್ಯದಲ್ಲಿ ಜಾತಿ ನಾಯಕತ್ವವಾಗಿ ರೂಪಾಂತರಗೊಂಡಿದೆ. ರಾಜಕೀಯ ನಾಯಕತ್ವ ಇಡೀ ರಾಷ್ಟ್ರದಲ್ಲಿ ಆರ್ಥಿಕ ನಾಯಕತ್ವದ ಎದುರು `ಮಂಡಿಯೂರಿ' ಕುಳಿತಿದೆ. ಬಂಡವಾಳ ಬಂದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ನಾನು ಬಂಡವಾಳ ತೊಡಗಿಸಲು ವಿರೋಧಿ ಅಲ್ಲ.ಸ್ವದೇಶಿ ಬಂಡವಾಳವೇ ಇರಲಿ; ಅದು ವಿದೇಶಿ ಬಂಡವಾಳವೇ ಇರಲಿ. ಅದು ನಮ್ಮ ನೆಲಕ್ಕೆ ಬರುವಾಗ ಭಗವಂತನಾಗಿ ಬಾರದೇ ಭಕ್ತನಾಗಿ ಬರಬೇಕು' ಎಂದು ಹೇಳಿದರು. ಸೈದ್ಧಾಂತಿಕ ಭಾಗವನ್ನು ಸ್ವಾರ್ಥತೆ ಆವರಿಸಿಕೊಂಡಿದೆ. ಅದು ಕೂಡ ಈ ಸಮಾಜದ ದುರಂತ ಎಂದು ವಿಶ್ಲೇಷಿಸಿದರು.ಕನ್ನಡದ ಸೇವೆ ಅಗತ್ಯ: ಕುಂಬಾಸ

ದಾವಣಗೆರೆ: `ಕನ್ನಡದ ಬಗ್ಗೆ ಅಭಿಮಾನ ಇದ್ದರೆ ಸಾಲದು; ಅದರ ಸೇವೆ ಮಾಡಬೇಕು' ಎಂದು 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕುಂ.ಬಾ.ಸದಾಶಿವಪ್ಪ ಸಲಹೆ ನೀಡಿದರು.

ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಮಾತನಾಡಿದ ಅವರು, `ನಮ್ಮ ದುಡಿಮೆಯ ಅಲ್ಪ ಆದಾಯವನ್ನು ಕನ್ನಡದ ಏಳಿಗೆಗೆ ಖರ್ಚು ಮಾಡಬೇಕು. ಬೀದರ್, ಮಂಡ್ಯ, ಮೈಸೂರು, ಮಂಗಳೂರು, ಧಾರವಾಡ ಭಾಗದ ಕನ್ನಡ ಬಳಕೆ ವಿಭಿನ್ನವಾಗಿದೆ. ಆದರೆ, ದಾವಣಗೆರೆ ಕನ್ನಡ ಎಲ್ಲಾ ಕಡೆಗೂ ಹೊಂದಿಕೊಂಡು ಹೋಗುವ ಭಾಷೆ' ಎಂದು ಪ್ರತಿಪಾದಿಸಿದರು.`ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂತೋಷವಾಗಿದೆ' ಎಂದು ಹೇಳಿದರು.

ಶಾಸಕ ಎಂ.ಪಿ.ರವೀಂದ್ರ ಮಾತನಾಡಿ, `ಧರ್ಮ, ಜಾತಿ, ರಾಜಕೀಯ ಹೊರತುಪಡಿಸಿ ಕಸಾಪ ಕೆಲಸಮಾಡಬೇಕು. ಸಮ್ಮೇಳನದಲ್ಲಿ ನಡೆದ ಗೋಷ್ಠಿಗಳ ವಿಷಯವನ್ನು ಜನರಿಗೆ ತಲುಪಿಸುವ ಕೆಲಸ ಆಗಲಿ. ಅದಕ್ಕೆ ವೈಯಕ್ತಿಕ ಹಾಗೂ ಸರ್ಕಾರದಿಂದ ನೆರವು ಕೊಡಿಸುವುದಾಗಿ' ಭರವಸೆ ನೀಡಿದರು.ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, `ಅಂಕಲ್'-`ಆಂಟಿ' ಪ್ರಭಾವದಿಂದ ಅಜ್ಜ-ಅಜ್ಜಿ, ದೊಡ್ಡಮ್ಮ-ದೊಡ್ಡಪ್ಪ, ಚಿಕ್ಕಮ್ಮ- ಚಿಕ್ಕಪ್ಪ ಎಂಬ ಭಾವನಾತ್ಮಕ ಸಂಬಂಧಗಳು ನಶಿಸಿ ಹೋಗುತ್ತಿವೆ ಎಂದ ಅವರು, ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆ ಆಗಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಶೇ 16ರಷ್ಟು ಮಂದಿ ಹೋದರೆ, ದೇಶದಲ್ಲಿ ಶೇ 13ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ' ಎಂದು ವಿಷಾದ ವ್ಯಕ್ತಪಡಿಸಿದರು.ಸಮ್ಮೇಳನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಪತ್ರಕರ್ತ ಮಲ್ಲಿಕಾರ್ಜುನ ಕಬ್ಬೂರು ಮಾತನಾಡಿದರು.ಸನ್ಮಾನಿತ ಸಾಧಕರು...

ಸಾಧಕರಾದ ಪ್ರೊ.ಎಸ್.ಎಚ್.ಪಟೇಲ್, ಎನ್.ಎಂ.ಜೆ.ಬಿ. ಆರಾಧ್ಯ, ಬಿ.ಸಿ.ಉಮಾಪತಿ, ಜಿ.ಸುರೇಶ್‌ಗೌಡ, ಪದ್ಮಜಾ ಶೇಷಗಿರಿರಾವ್, ಎಸ್.ಬಿ.ಜಿನದತ್ತ, ಕೆ.ಏಕಾಂತಪ್ಪ, ಎಂ.ಆರ್. ಸತ್ಯನಾರಾಯಣ, ಬಿ.ಜಿ.ಕೊಟ್ರಪ್ಪ, ಬೆಳವನೂರು ನಾಗರಾಜಪ್ಪ, ಡಿ.ಹೇಮಂತ್‌ರಾಜ್, ಎಚ್.ಎಂ. ವೀರಭದ್ರಯ್ಯ, ಜಿ.ಮುದ್ದು ವೀರಸ್ವಾಮಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ದಾವಣಗೆರೆಗೆ ಎರಡನೇ ರಾಜಧಾನಿ ಸ್ಥಾನ- ನಿರ್ಣಯ

ದಾವಣಗೆರೆಯನ್ನು ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಏಳು ನಿರ್ಣಯಗಳನ್ನು ಭಾನುವಾರ ಮುಕ್ತಾಯವಾದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ.

ನಗರದ ಬಾಪೂಜಿ ಸಭಾಂಗಣದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಗೌರವ ಕೋಶಾಧ್ಯಕ್ಷ ಎಂ.ಪಿ.ಚಂದ್ರಪ್ರ ನಿರ್ಣಯಗಳನ್ನು ಮಂಡಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎ.ಆರ್.ಉಜ್ಜನಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಡನೆಯಾದ ನಿರ್ಣಯಗಳನ್ನು ಚಪ್ಪಾಳೆ ತಟ್ಟುವ ಮೂಲಕ ಅಂಗೀಕರಿಸಲಾಯಿತು.ಪ್ರಮುಖ ನಿರ್ಣಯಗಳು

ಕನ್ನಡ ಪರ ಹೋರಾಟಗಾರರ ಮೇಲೆ ಹಾಕಲಾದ ಮೊಕದ್ದಮೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ವಾಪಸ್ ಪಡೆಯಬೇಕು.* ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲು ನಿವೇಶನ ನೀಡಿ, ಸರ್ಕಾರ ಧನಸಹಾಯ ಮಾಡಬೇಕು.* ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಲ್ಲಿ ಸಂಶೋಧನೆಗೆ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಶಾಖೆ ತೆರೆಯಬೇಕು.* `ಮಾದರಿ ಪಬ್ಲಿಕ್ ಶಾಲೆ'ಗಳನ್ನು  ತೆರೆಯುವುದರ ಬದಲಿಗೆ ಪ್ರತಿ ಗ್ರಾಮದಲ್ಲಿಯೂ ಇರುವ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಬೇಕು.* ದಾವಣಗೆರೆ ನಗರ ಪಾಲಿಕೆ ವ್ಯಾಪ್ತಿಯ ವೃತ್ತಗಳು ಹಾಗೂ ರಸ್ತೆಗಳಿಗೆ ಜಿಲ್ಲೆಯ ಹಿರಿಯ ಕವಿಗಳ ಹಾಗೂ ಪ್ರಾಚೀನ ಕವಿಗಳ ಹೆಸರು ನಾಮಕರಣ ಮಾಡಬೇಕು.* ಜಿಲ್ಲೆಯ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಸಿ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು.* ದಾವಣಗೆರೆಯನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಸರ್ಕಾರ ಘೋಷಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.