ಹಿಂದುಳಿದವರಲ್ಲಿ ವೈಚಾರಿಕತೆ ಕೊರತೆ

7

ಹಿಂದುಳಿದವರಲ್ಲಿ ವೈಚಾರಿಕತೆ ಕೊರತೆ

Published:
Updated:

ಬೆಂಗಳೂರು: `ಸಮಾಜದಲ್ಲಿ ಹಿಂದುಳಿದ ವರ್ಗದ ಮಂದಿ ತಮ್ಮದೇ ಆದ ಒಂದು ಸಾಮಾಜಿಕ ಹಾಗೂ ಸೈದ್ಧಾಂತಿಕ ಚೌಕಟ್ಟಿಗೆ ಒಳಗೊಳ್ಳುವವರೆಗೆ ಸಾಮಾಜಿಕ ಕ್ರಾಂತಿ ಅಸಾಧ್ಯ~ ಎಂದು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಮೌಲಾನಾ ಆಜಾದ್ ಆಂತರಿಕ ಮತ್ತು ಬಾಹ್ಯ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕಾಂಚಾ ಐಲಯ್ಯ ಪ್ರತಿಪಾದಿಸಿದರು.ನಗರದ ಯವನಿಕ ಸಭಾಂಗಣದಲ್ಲಿ ಭಾನುವಾರ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನ ಉದ್ಘಾಟಿಸಿ ಅವರು ಮಾತನಾಡಿ `ಡಾ.ಬಿ.ಆರ್.ಅಂಬೇಡ್ಕರ್ ಅವರ ಸೈದ್ಧಾಂತಿಕ ಹಾಗೂ ತಾತ್ವಿಕ ನಿಲುವುಗಳಿಗೆ ದಲಿತರು ಬದ್ಧರಾಗಿದ್ದಾರೆ. ಆದರೆ ಹಿಂದುಳಿದ ವರ್ಗದ ಮಂದಿ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದು, ತಮ್ಮ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಯಾವುದೇ ಸೂಕ್ತ ಮಾದರಿಗಳಿಲ್ಲದೆ ಮೇಲ್ವರ್ಗದವರ ಆಕಾಂಕ್ಷೆಗೆ ತಕ್ಕಂತೆ ಬದುಕುತ್ತಿದ್ದಾರೆ~ ಎಂದರು.`ಹಿಂದುಳಿದ ವರ್ಗದವರಲ್ಲಿ ವೈಚಾರಿಕ ಶಕ್ತಿಯ ಕೊರತೆ ಇದೆ. ಹೆಚ್ಚಿನ ಶಿಕ್ಷಣ ಪಡೆದು ಓದಿನಲ್ಲಿ ತೊಡಗುವ ಮೂಲಕ ಅವರು ಬ್ರಾಹ್ಮಣಶಾಹಿಯ ಸಂಚನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಲವು ಶತಮಾನಗಳ ಕಾಲ ಬ್ರಾಹ್ಮಣರ ಪದತಲದಲ್ಲೇ ಕುಳಿತುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳಿಗೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಅವಶ್ಯಕತೆ ಇದೆ. ಅದು ಜಾತಿಯಾಧಾರಿತ ಹಿಂದೂ ಧರ್ಮದಿಂದ ಅಸಾಧ್ಯ. ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಸೇರುವ ಅವಶ್ಯಕತೆ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.`ದೇಶದ ಸಂಪನ್ಮೂಲ ಸೃಷ್ಟಿಯಲ್ಲಿ ಹಿಂದುಳಿದ ವರ್ಗದ ಜನರ ಶ್ರಮ ಅಪಾರವಾದುದು. ಆದರೆ ಆ ಸಂಪತ್ತು ಬ್ರಾಹ್ಮಣರು ಹಾಗೂ ಬನಿಯಾಗಳ ಕೈವಶವಾಗಿದ್ದು, ಮಾರುಕಟ್ಟೆ, ಉದ್ಯಮ, ದೇವಸ್ಥಾನ ಮತ್ತು ಮಠಗಳಲ್ಲಿ ಗುಪ್ತಧನವಾಗಿ ಸಂಗ್ರವಾಗಿದೆ. ಈ ದೇಶದ ಪಟ್ಟಭದ್ರರು ಸುಮಾರು 3 ಸಾವಿರ ವರ್ಷಗಳಿಂದ ಹಿಂದುಳಿದ ವರ್ಗಗಳು ಉತ್ಪಾದಿಸಿದ ಎಲ್ಲಾ ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ. ಈಗ ಆ ವರ್ಗಗಳನ್ನೇ ನಾಶ ಮಾಡಲು ಹೊರಟಿದ್ದಾರೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.`ಕರಕುಶಲಕರ್ಮಿಗಳಾದ ಕ್ಷೌರಿಕರು, ಧೋಬಿ ಗಳು, ಕುಂಬಾರರು, ಚಮ್ಮಾರರು , ಕಬ್ಬಿಣ, ಚಿನ್ನ ಮುಂತಾದ ಕೆಲಸ ಮಾಡುತ್ತಿರುವವರು ಹಿಂದುಳಿದ ವರ್ಗದ ಜನರೇ ಆಗಿದ್ದು, ಇವರೇ ನಿಜವಾದ  ಎಂಜಿನಿಯರ್‌ಗಳು. ಆದರೆ ಇಂದು ಇವರನ್ನೆಲ್ಲ ತಮ್ಮ ಕುಲಕುಸುಬುಗಳಿಂದ ವಂಚಿಸುತ್ತಿರುವ ಬ್ರಾಹ್ಮಣಶಾಹಿ ವ್ಯವಸ್ಥೆ ಈ ವರ್ಗಗಳಿಗೆ ಐಐಟಿ, ಐಐಎಂನಂತಹ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ವಿರೋಧ ವ್ಯಕ್ತಪಡಿಸುತ್ತಿದೆ. ಜತೆಗೆ ಹಿಂದುಳಿದ ವರ್ಗಗಳನ್ನು ವಂಚಿಸಲು ಅಲ್ಲಿನ ಉಪನ್ಯಾಸಕರ ನಿವೃತ್ತಿ ವಯಸ್ಸನ್ನು 60ರಿಂದ 70 ವರ್ಷಕ್ಕೆ ಏರಿಸುವ ಸಂಚು ನಡೆಯುತ್ತಿದೆ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಗೋಮಾಂಸ ನಮ್ಮ ಹಕ್ಕು: `ಶಂಕರಾಚಾ ರ್ಯರಿಂದ ಹಿಡಿದು ಇಲ್ಲಿಯವರೆಗೂ ಈ ದೇಶದ ಬಹು ಸಂಸ್ಕತಿ ಹಾಗೂ ಬಹು ಆಹಾರ ಪದ್ಧತಿಯ ಮೇಲೆ ದಬ್ಬಾಳಿಕೆಗಳು ನಡೆಯುತ್ತಲೇ ಬಂದಿವೆ. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಮೇಳಕ್ಕೆ ಹಿಂದೂ ಮೂಲಭೂತವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಗೋಮಾಂಸ ತಿನ್ನುವುದು ಈ ದೇಶದ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ ಹಕ್ಕು. ಬೇರೆಯವರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತಮ್ಮ ಹಬ್ಬಗಳನ್ನು ಆಚರಿಸುವಂತೆ ನಾವು ಗೋಮಾಂಸ ಮೇಳವನ್ನು ಆಚರಿಸುತ್ತೇವೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ~ ಎಂದು ಅವರು ಕಟುವಾಗಿ ನುಡಿದರು.ಆ ಬಳಿಕ ನಡೆದ ಸಂವಾದದಲ್ಲಿ ಬೆಂಗಳೂರು ವಿವಿಯ ಇಂಗ್ಲಿಷ್ ಪ್ರಾಧ್ಯಾಪಕ ಡಾ.ನಟರಾಜ್ ಹುಳಿಯಾರ್, ಇತಿಹಾಸ ಪ್ರಾಧ್ಯಾಪಕಿ ಡಾ.ಎಂ. ವಿ.ವಸು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.

 

`ಹಿಂದುಳಿದವರು ಒಂದಾಗಬೇಕು~
`ದೇಶದಲ್ಲಿ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರು ಒಂದಾಗದೆ ಕೇವಲ ಹಿಂದುಳಿದ ವರ್ಗಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ~ ಎಂದು `ಪ್ರಜಾವಾಣಿ~ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಪ್ರತಿಪಾದಿಸಿದರು.

ಪ್ರತಿಷ್ಠಾನದ ಉದ್ಘಾಟನೆಯ ಬಳಿಕ ನಡೆದ ಸಂವಾದದಲ್ಲಿ ಅವರು ಮಾತನಾಡಿ, `ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ದಲಿತರು ಮತ್ತು ಬ್ರಾಹ್ಮಣರು ಒಂದಾಗುವುದಾದರೆ, ದಲಿತರು ಹಾಗೂ ಹಿಂದುಳಿದ ವರ್ಗಗಳ ಹೊಂದಾಣಿಕೆ ಏಕೆ ಸಾಧ್ಯವಿಲ್ಲ? ಬೌದ್ಧಿಕವಾಗಿ ದಾಸ್ಯದಿಂದ ಬಿಡುಗಡೆಯಾಗದ ಹೊರತು ಹಿಂದುಳಿದವರ ಬಿಡುಗಡೆ ಅಸಾಧ್ಯ~ ಎಂದರು.`ಹಿಂದುಳಿದ ವರ್ಗಗಳಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಇಂದಿಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಅವರ ಆಶಯ ಉತ್ತಮವಾದುದು. ಅದನ್ನು ಸಾಧಿಸಲು ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇದೆ. ಅರಸು ಅವರದ್ದು ಅವಸರದ ಕ್ರಾಂತಿಯಾಗಿದ್ದು, ಅದು ಚಳವಳಿಯ ಉತ್ಪನ್ನವಾಗಿ ಬರುವಲ್ಲಿ ವಿಫಲವಾಯಿತು. ಆ ಬಳಿಕ ಬಂದ ಈ ವರ್ಗದ ನಾಯಕರ ವಿವಿಧ ರಾಜಕೀಯ ಕಾರಣಗಳಿಂದಾಗಿ ಇಂದು ಹಿಂದುಳಿದ ವರ್ಗಗಳ ಜನರು ಸಂಘಪರಿವಾರದ ಕಡೆಗೆ ವಾಲುವಂತಾಗಿದೆ. ಹಿಂದುಳಿದ ವರ್ಗಗಳ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಅಗತ್ಯವಿದೆ~ ಎಂದರು.  ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, `ಹಿಂದುಳಿದ ವರ್ಗಗಳು ಎಲ್ಲಿಯವರೆಗೆ ವೈದಿಕರ ಹಿಡಿತದಲ್ಲಿರುತ್ತವೆಯೋ, ಎಲ್ಲಿಯವರೆಗೆ ತಮ್ಮದೇ ಆದ ಧಾರ್ಮಿಕ ಮತ್ತು ಸಾಮಾಜಿಕ ಪರ್ಯಾಯವನ್ನು ಕಟ್ಟಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ಜನಾಂಗದ ಮುಕ್ತಿ ಹಾಗೂ ಏಕತೆ ಸಾಧ್ಯವಿಲ್ಲ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry