ಹಿಂದುಳಿದವರಿಗೆ ಮನೆ ನಿರ್ಮಾಣ: ಹೈಕೋರ್ಟ್‌ಗೆ ಮೆವರಿಕ್ ಮಾಹಿತಿ

7

ಹಿಂದುಳಿದವರಿಗೆ ಮನೆ ನಿರ್ಮಾಣ: ಹೈಕೋರ್ಟ್‌ಗೆ ಮೆವರಿಕ್ ಮಾಹಿತಿ

Published:
Updated:

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಜನರಿಗೆ ಕೋರಮಂಗಲದ ಬಳಿ ಇರುವ ಈಜಿಪುರದಲ್ಲಿ ಇನ್ನು 24 ತಿಂಗಳ ಒಳಗೆ ಮನೆ ನಿರ್ಮಿಸಿಕೊಡಲು ಸಿದ್ಧ ಎಂದು `ಮೆವರಿಕ್~ ಸಂಸ್ಥೆ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

`ವಸತಿ ನಿರ್ಮಾಣಕ್ಕೆ ಅಗತ್ಯ ಇರುವ ಜಮೀನು ನೀಡಿದರೆ ಹಾಗೂ ಅದಕ್ಕೆ ಅಗತ್ಯ ಇರುವ ದಾಖಲೆಗಳನ್ನು ಒದಗಿಸಿದರೆ ಎರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು~ ಎಂದು ಸಂಸ್ಥೆ ತನ್ನ ವಕೀಲರ ಮೂಲಕ ತಿಳಿಸಿದೆ.

ಇಲ್ಲಿಯವರೆಗೆ ಯಾವುದೇ ಜಮೀನನ್ನು ಸಂಸ್ಥೆಗೆ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಂಡಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದರು.

ಮನೆಗಳನ್ನು ಶೀಘ್ರದಲ್ಲಿ ಕಟ್ಟಿ ಮುಗಿಸುವಂತೆ `ಮೆವರಿಕ್ ಸಂಸ್ಥೆ~ಗೆ ಆದೇಶಿಸುವಂತೆ ಕೋರಿ ಎಸ್.ಮೀನಾ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಅವರು ಈ ಮಾಹಿತಿ ನೀಡಿದರು.

ಅರ್ಜಿದಾರರ ದೂರು: `ಈ ಭಾಗದಲ್ಲಿ 2003ರಲ್ಲಿ ನಮಗೆ ಮನೆ ನಿರ್ಮಾಣ ಮಾಡಿಕೊಡಲಾಗಿತ್ತು. ಆದರೆ ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದ ಹಿನ್ನೆಲೆಯಲ್ಲಿ 2007ರಲ್ಲಿ ಬಹುತೇಕ ಮನೆಗಳು ಕುಸಿದಿವೆ. ಇದರಿಂದ ನಾವೆಲ್ಲ ಬೀದಿಪಾಲಾಗಿದ್ದೇವೆ. ಆದರೆ ಇದುವರೆಗೂ ಮನೆ ಕಟ್ಟಿಕೊಟ್ಟಿಲ್ಲ. ಮನೆ ಕಟ್ಟಿಕೊಡುವ ಕಾರ್ಯವನ್ನು ಈ ಸಂಸ್ಥೆಗೆ ವಹಿಸಲಾಗಿದೆ. ಆದರೆ ನಿಧಾನಗತಿಯಿಂದಾಗಿ ಸಮಸ್ಯೆ ಉಂಟಾಗಿದೆ. ಇದುವರೆಗೆ ಸೂಕ್ತ ಪರಿಹಾರವೂ ಸಿಕ್ಕಿಲ್ಲ~ ಎನ್ನುವುದು ಅರ್ಜಿದಾರರ ದೂರು.

ಈ ಅರ್ಜಿಗೆ ಆಕ್ಷೇಪಣೆಗಳು ಇದ್ದರೆ ಅದನ್ನು ಸಲ್ಲಿಸುವಂತೆ ಸಂಸ್ಥೆ ಹಾಗೂ ಬಿಬಿಎಂಪಿಗೆ ಪೀಠ ಸೂಚಿಸಿ ವಿಚಾರಣೆ ಮುಂದೂಡಿತು.

ಬೋಪಯ್ಯ: ಕಾಯ್ದಿರಿಸಿದ ತೀರ್ಪು

ಕೊಡಗು ಜಿಲ್ಲೆಯ ದೊಡ್ಡರೇಷ್ಮೆಹಡ್ಲು ಕೆರೆ ಕಾಮಗಾರಿಯಲ್ಲಿ ವಂಚನೆ ಎಸಗಿರುವ ಆರೋಪ ಹೊತ್ತ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.

ಈ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದತಿಗೆ ಕೋರಿ ಬೋಪಯ್ಯ ಸಲ್ಲಿಸಿರುವ ಅರ್ಜಿಯ ವಾದ, ಪ್ರತಿವಾದವನ್ನು ಆಲಿಸಿ ಮುಗಿಸಿರುವ ನ್ಯಾಯಮೂರ್ತಿ ಎನ್.ಆನಂದ ಅವರು ತೀರ್ಪು ಕಾಯ್ದಿರಿಸಿದರು.

ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಅವರು ಲೋಕಾಯುಕ್ತಕ್ಕೆ ನೀಡಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry