ಹಿಂದುಳಿದವರಿಗೆ ಮೀಸಲಾತಿ ನೀಡಿ’

7

ಹಿಂದುಳಿದವರಿಗೆ ಮೀಸಲಾತಿ ನೀಡಿ’

Published:
Updated:

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂದುಳಿದ ವರ್ಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸರ್ಕಾರಿ ಹುದ್ದೆಯಲ್ಲಿ, ವಿದ್ಯಾರಂಗದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಲಿ ಎಂದು  ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸವಾಲು ಹಾಕಿದರು.ನಗರದ ದೈವಜ್ಞ ಸಮುದಾಯ ಭವನದಲ್ಲಿ ಶುಕ್ರವಾರ ಜೆಡಿಎಸ್‌ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರು ಕೇವಲ ಮಾತಿನಲ್ಲಿ ಅಹಿಂದ ಶಬ್ದ ಬಳಸುತ್ತಾರೆ. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಶ್ರಮಿಸಬೇಕು ಎಂಬ ಮನಸ್ಸು ಇಲ್ಲ ಎಂದು ದೂರಿದರು.‘ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ನನ್ನ ಆಸ್ತಿ. ಅವರ ಅಭಿವೃದ್ಧಿಗೆ ನಾನು ಅಧಿಕಾರದಲ್ಲಿ ಇದ್ದ ಅಲ್ಪ ಅವಧಿಯಲ್ಲಿ ಕೊಟ್ಟ ಕಾರ್ಯಕ್ರಮಗಳನ್ನು ಇಂದಿಗೂ ಯಾವ ಪಕ್ಷಗಳಿಗೂ ಕೊಡಲು ಸಾಧ್ಯವಾಗಿಲ್ಲ’ ಎಂದರು. ಲೋಕಸಭೆ ಉಪಚುನಾವಣೆಯಲ್ಲಿ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಸೋಲು ಕಂಡಿದ್ದು, ಬರಲಿರುವ ಚುನಾವಣೆ ಎರಡನೇ ಅಗ್ನಿಪರೀಕ್ಷೆ. ಇದಕ್ಕಾಗಿ ಅಕ್ಟೋಬರ್‌ ತಿಂಗಳಲ್ಲಿ 28 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ, ಯುವ ಕಾರ್ಯಕರ್ತರು ಕೆಲಸ ಮಾಡುವಂತೆ ಪ್ರೇರೇಪಿಸುತ್ತೇನೆ ಎಂದು ಹೇಳಿದರು.ದೇಶದಲ್ಲಿ ಹದಗೆಟ್ಟ ವ್ಯವಸ್ಥೆ ಇದೆ. ಒಬ್ಬ ಹಳ್ಳಿ ರೈತನಿಗೆ ದೇಶಕ್ಕೆ ಏನು ಮಾಡಬೇಕು ಎಂಬುದು ಚೆನ್ನಾಗಿ ಗೊತ್ತು. ಆದ್ದರಿಂದ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇನೆ. 2005ರಲ್ಲಿ 5 ತಿಂಗಳು ಹಾಸಿಗೆ ಹಿಡಿದಿದ್ದೆ. ಸಾವು ಬದುಕಿನ ಹೋರಾಟ ಮಾಡಿ ಗೆದ್ದು ಬಂದೆ. ಈಗ  ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಋಣ ತೀರಿಸಿಯೇ ಹೋಗುತ್ತೇನೆ ಎಂದರು.ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ  ಎ.ಕೃಷ್ಣಪ್ಪ ಮಾತನಾಡಿ, ಲೋಕಸಭೆ ಉಪ ಚುನಾವಣೆಯಲ್ಲಿ ಸೋತ ಕಾರಣ ಜೆಡಿಎಸ್‌ಗೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಪಕ್ಷ ಸಂಕಷ್ಟದಲ್ಲಿ ಇದ್ದಾಗ ಹೊಸ ನಮೂನೆಯ ನಾಯಕತ್ವ ಆರಂಭಿಸಬೇಕು. ಹೊಸ ಕಾರ್ಯತಂತ್ರ ರೂಪಿಸಬೇಕಿದೆ. ಇದಕ್ಕಾಗಿ ಶಿವಮೊಗ್ಗ ಲೋಕಸಭೆ ಚುನಾವಣಾ ಪ್ರಚಾರದ ನೇತೃತ್ವವನ್ನು ಎಂ.ಜೆ.ಅಪ್ಪಾಜಿ ವಹಿಸಬೇಕು ಎಂದು ಪಕ್ಷದ ವರಿಷ್ಟರು ಆಶಿಸಿದ್ದಾರೆ ಎಂದು ಹೇಳಿದರು.ಜೆಡಿಎಸ್‌ ಯುವ ಘಟಕದ ರಾಜಯ ಘಟಕದ ಅಧ್ಯಕ್ಷ  ಮಧು ಬಂಗಾರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್‌ ಖಾತೆ ತೆರೆಯುವುದಿಲ್ಲ ಎಂದು ಹೇಳಿದ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಕೆಜೆಪಿ ಯಾವ ಮನೆ ಸೇರಿಕೊಳ್ಳಬೇಕು ಎಂಬ ಗೊಂದಲದಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗಿಂತ ನಾವು 10ಸಾವಿರ ಮತಗಳಲ್ಲಿ ಮಾತ್ರ ಹಿಂದೆ ಇದ್ದೇವೆ. ಪಕ್ಷದ ಸಂಘಟನೆ ಮಾಡಿದರೆ ಸಂಸತ್‌ ಚುನಾವಣೆಯಲ್ಲಿ ಪಕ್ಷ ಗೆಲ್ಲುತ್ತದೆ. ಆದ್ದರಿಂದ ಶಾಸಕ ಎಂ.ಜೆ.ಅಪ್ಪಾಜಿ ಅವರು  ಜಿಲ್ಲೆಯಲ್ಲಿ ನಾಯಕತ್ವ ವಹಿಸಿಕೊಂಡು ಯುವಸಮೂಹವನ್ನು ಆಕರ್ಷಿಸಿ, ಕಾರ್ಯಕರ್ತರನ್ನು ಸಂಘಟಿಸಬೇಕು ಎಂದರು.ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, ಎಚ್‌.ಡಿ.ಕುಮಾರ ಸ್ವಾಮಿ ಅವರು ಬಂದಾಗ ಮಾತ್ರ ಜನ ಸೇರುತ್ತಾರೆ. ಅವರ ಬಗ್ಗೆ ಜನರಲ್ಲಿರುವ ಒಲವು ಮತಗಳಾಗಿ ಪರಿವರ್ತನೆ ಆಗುವುದಿಲ್ಲ ಎಂಬ ಮಾತಿದೆ. ಉತ್ತಮ ಅಭಿವೃದ್ಧಿ ಆಗಬೇಕಾದರೆ ನಮ್ಮವರೇ ಆದ ಸಂಸತ್‌ ಸದಸ್ಯರು ಇರಬೇಕು. ಇದಕ್ಕಾಗಿ ಒಳ್ಳೆಯ ಅಭ್ಯರ್ಥಿಯ ಆಯ್ಕೆ ಆಗಬೇಕಿದೆ ಎಂದು ತಿಳಿಸಿದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಶಾರದಾ ಪೂರ್‍ಯಾನಾಯ್ಕ, ವಿಧಾನ ಪರಿಷತ್ತು ಮಾಜಿ ಉಪ ಸಭಾಪತಿ ಡೇವಿಡ್‌ ಸಿಮಿಯೋನ್‌, ಪಿ.ಬಳಿಗಾರ್‌, ನಗರಸಭೆ ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್‌, ಮುಖಂಡರಾದ ಜಿ.ಮಾದಪ್ಪ, ಎಂ.ಡಿ.ಶಿವಣ್ಣ,  ಎಚ್‌.ವಿ.ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry