ಮಂಗಳವಾರ, ಜೂನ್ 15, 2021
26 °C

ಹಿಂದುಳಿದವರ ಕಲ್ಯಾಣಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ 1000 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.2011-12ನೇ ಸಾಲಿನ ಬಜೆಟ್‌ನಲ್ಲಿ ಈ ವರ್ಗದವರಿಗೆ 760 ಕೋಟಿ ರೂಪಾಯಿ ನೆರವು ಒದಗಿಸಲಾಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಇಷ್ಟೊಂದು ಬೃಹತ್ ಮೊತ್ತವನ್ನು ನಿಗದಿಪಡಿಸಿರುವುದು ಇದೇ ಮೊದಲು.ಹಿಂದುಳಿದ ವರ್ಗಗಳ ಗಂಗಾ ಕಲ್ಯಾಣ ಯೋಜನೆಗಾಗಿ 95 ಕೋಟಿ ರೂಪಾಯಿಗಳನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆ ಮೂಲಕ ಈಗಾಗಲೇ ಕೊರೆದಿರುವ 7,290 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಒತ್ತು ನೀಡಲು ಉದ್ದೇಶಿಸಲಾಗಿದೆ.ಈ ಸಾಲಿನಲ್ಲಿ 80 ಕೋಟಿ ರೂಪಾಯಿ ವೆಚ್ಚದಲ್ಲಿ 80 ಹಿಂದುಳಿದ ವರ್ಗಗಳ ವಸತಿ ನಿಲಯಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ. ಅಲ್ಲದೆ, ತಲಾ 100 ವಿದ್ಯಾರ್ಥಿಗಳ ಸಾಮರ್ಥ್ಯದ 50 ನೂತನ ವಸತಿ ನಿಲಯಗಳ ಸ್ಥಾಪನೆ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳ ಸಾಮರ್ಥ್ಯವನ್ನು ಇನ್ನೂ ಐದು ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಈ ಕ್ರಮದಿಂದ ಒಟ್ಟು 10 ಸಾವಿರ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿದಂತಾಗಲಿದೆ.ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 35 ಕಾಮಗಾರಿ ಪೂರ್ಣಗೊಳಿಸಲು ಹಾಗೂ 15 ಮಂಜೂರಾದ ಶಾಲೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಹೆಚ್ಚಿಸಲಾಗಿದೆ. ಹಿಂದುಳಿದ ವರ್ಗಗಳಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ನೀಡುತ್ತಿರುವ ಅನುದಾನವನ್ನು 100 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುತ್ತದೆ.ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಕ್ಷೇಮಾಭಿವೃದ್ಧಿಗಾಗಿ ವಿಶೇಷವಾಗಿ ನಾಲ್ಕು ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಗಳನ್ನು ಪ್ರತಿ ಕಂದಾಯ ವಿಭಾಗಗಳಲ್ಲಿ ಪ್ರಾರಂಭಿಸಲಾಗುತ್ತದೆ.

ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ರೂ. 75ರಿಂದ 250 ಹಾಗೂ 8ರಿಂದ 10ನೇ ತರಗತಿವರೆಗೆ 100ರಿಂದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.ಬಾಲಕಿಯರಿಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು 100ರಿಂದ 600 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ವಿದ್ಯಾರ್ಥಿ ವೇತನ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 44,500 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರ್ಣಗೊಳಿಸಲು 50 ಕೋಟಿ ರೂಪಾಯಿ ಅನುದಾನ; ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿಗಾಗಿ ವಾರ್ಷಿಕ  ರೂ. 50 ಕೋಟಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನಕ್ಕೆ ರೂ. 10 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.