ಸೋಮವಾರ, ಮೇ 23, 2022
26 °C

ಹಿಂದುಳಿದವರ ತುಳಿದ ಪಟ್ಟಭದ್ರರು: ಮಲ್ಲಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟ ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಬದಲು ಪಟ್ಟಭದ್ರ ಹಿತಾಸಕ್ತಿಗಳು ಇನ್ನಷ್ಟು ತುಳಿಯುವ ಕೆಲಸ ಮಾಡಿದರು. ರಾಜ್ಯದ ಲೇಖಕರೂ ಅವರನ್ನು ಗುರುತಿಸುವ ಕೆಲಸ ಮಾಡಲಿಲ್ಲ ಎಂದು ಮಾಜಿ ಶಾಸಕ ಕೆ. ಮಲ್ಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಕನಕ ನೌಕರರ ಬಳಗ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಕನಕದಾಸರು ನಾಡಿನ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಹೆಸರಿನಲ್ಲೇ ಕುರುಬ ಸಮಾಜ ಸಂಘಟಿತವಾಗಿದೆ. ಮಠಗಳನ್ನೂ ಕಟ್ಟಿಕೊಳ್ಳಲಾಗಿದೆ. ಸಮಾಜದ ಜನರಿಗೆ ಕನಕರು ಶಕ್ತಿ ತುಂಬಿದ್ದಾರೆ ಎಂದು ಶ್ಲಾಘಿಸಿದರು.ರಾಜ್ಯ ಲೋಕಸೇವಾ ಆಯೋಗದ ಸದಸ್ಯ ಎಂ. ನಾಗರಾಜ್ ಮಾತನಾಡಿ, ಯಾವುದೇ ಸಮಾಜ ರಾಜಕೀಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೊಂದಿದರೆ ಸಾಲದು. ಅದು ಸಾಂಸ್ಕೃತಿಕ, ಶೈಕ್ಷಣಿಕವಾಗಿಯೂ ಅಭಿವೃದ್ಧಿ ಕಾಣಬೇಕು. ಸಿದ್ದರಾಮಯ್ಯ ಜತೆಗೆ, ಪೋಟೊ ತೆಗೆಸಿಕೊಳ್ಳುವುದೇ ಸಾಧನೆ ಎನ್ನುವ ಭ್ರಮೆಯಿಂದ ಯುವಜನತೆ ಹೊರಬರಬೇಕು ಎಂದರು.ರಾಜ್ಯದ ಮೂರನೇ ದೊಡ್ಡ ಸಮಾಜವಾದ ಕುರುಬರು, ಇತರೆ ಸಮಾಜಗಳಿಗೂ ಮಾರ್ಗದರ್ಶನ ನೀಡಬೇಕು. ಆದರೆ, ದುರದೃಷ್ಟವಶಾತ್ ನಮಗೇ ಮಾರ್ಗದರ್ಶನ ಇಲ್ಲದಂತಹ ಸ್ಥಿತಿ ತಂದುಕೊಂಡಿದ್ದೇವೆ ಎಂದು ವಿಷಾದಿಸಿದರು.ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ ಮಾತನಾಡಿ, ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆಯಲ್ಲಿ ಉತ್ತರ ಹಾಗೂ ದಕ್ಷಿಣ ಭಾಗದ ಸಮಾಜದ ಜನರನ್ನು ಒಂದುಗೂಡಿಸುವ ಕೆಲಸವನ್ನು ಸಂಘಟಕರು ಮಾಡಬೇಕು ಎಂದು ಕೋರಿದರು.ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ. ದಿಳ್ಳೆಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್, ಅಬಕಾರಿ ಅಧೀಕ್ಷಕ ಟಿ. ನಾಗರಾಜ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೆ.ಆರ್. ರುದ್ರಪ್ಪ, ಬಿ. ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕನಕ ನೌಕರರ ಬಳಗದ ಅಧ್ಯಕ್ಷ ಪ್ರೊ.ಬಾಗೂರು ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ವಿವಿಧ ಗಣ್ಯರನ್ನು ನೌಕರರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.