ಹಿಂದುಳಿದ ಜಿಲ್ಲೆಯ ಶೈಕ್ಷಣಿಕ ಕಾಳಜಿಗೆ ಬದ್ಧ: ಕಿಮ್ಮನೆ

7

ಹಿಂದುಳಿದ ಜಿಲ್ಲೆಯ ಶೈಕ್ಷಣಿಕ ಕಾಳಜಿಗೆ ಬದ್ಧ: ಕಿಮ್ಮನೆ

Published:
Updated:

ಕೊಪ್ಪಳ: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸೂಕ್ತ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಕಾಳಜಿ ವಹಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು, ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಅನೇಕ ಸಮಸ್ಯೆಗಳು ಇವೆ. ಅವುಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಮುಖ್ಯವಾಗಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಈ ಸೌಲಭ್ಯಗಳ ಕೊರತೆ ಇರುವ ಶಾಲೆಗಳ ಪಟ್ಟಿ ತಯಾರಿಸಿ ಪ್ರಸ್ತಾವ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಶಾಲೆಗೆ ಕರೆತನ್ನಿ: ಜಿಲ್ಲೆಯಲ್ಲಿ 983 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಮತ್ತೆ ಶಾಲೆಗೆ ಕರೆತರಲು ಮಾನಸಿಕವಾಗಿ ಸಿದ್ಧಗೊಳಿಸಬೇಕು. ಈಗಾಗಲೇ ಎಸೆ್ಸೆಸೆ್ಸಲ್ಸಿ ಫಲಿತಾಂಶದಲ್ಲಿ 16ನೇ ಸ್ಥಾನದಲ್ಲಿರುವ ಜಿಲ್ಲೆ ಮುಂದಿನ ಬಾರಿ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಬೇಕು ಎಂದು ಸಚಿವರು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್‌.ವೀರಣ್ಣ ಅವರಿಗೆ ಸೂಚಿಸಿದರು.ಫಲಿತಾಂಶ ವೃದ್ಧಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಡಿಡಿಪಿಐ, ಪ್ರೌಢಶಾಲೆಗಳ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ಶಿಕ್ಷಕರಿಗೆ ವಿಷಯವಾರು ವಿಶೇಷ ಕಾರ್ಯಾಗಾರ ನಡೆಸಲಾಗಿದೆ. ಮಕ್ಕಳಿಗೂ ಪರೀಕ್ಷಾ ಭಯ ನಿವಾರಿಸಲು ತರಬೇತಿ ನೀಡಲಾಗಿದೆ. ಅಧ್ಯಯನ ಸಂಬಂಧಿಸಿದಂತೆ ಜೂನ್‌ ಆರಂಭದಲ್ಲಿಯೇ ಸಾಕಷ್ಟು ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು.ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಕಾಳಜಿ ವಹಿಸುತ್ತಾರೆ. ಅಂಥ ಕ್ರಮಗಳು ಇಲ್ಲಿಯೂ ಅನುಷ್ಠಾನಗೊಂಡರೆ ಉತ್ತಮ ಎಂದು ಸಲಹೆ ಮಾಡಿದರು.ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಜಿಲ್ಲೆಗೆ ಪ್ರಸಕ್ತ ವರ್ಷ ಯಾವುದೇ ಆರ್‌ಎಂಎಸ್‌ ಶಾಲೆಗಳು ಮಂಜೂರಾಗಿಲ್ಲ. ಯಲಬುರ್ಗಾ ತಾಲ್ಲೂಕಿನಲ್ಲಿ ಇಂಗ್ಲಿಷ್‌ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ಕೆಲವೆಡೆ ಹುದ್ದೆಗಳನ್ನೇ ಸೃಷ್ಟಿಸಿಲ್ಲ. ಇದೆಲ್ಲವನ್ನೂ ನಿವಾರಿಸಲು ಯಲಬುರ್ಗ ತಾಲ್ಲೂಕಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಸಮುದಾಯ ಪಾಲ್ಗೊಳ್ಳಲಿ: ಶಿಕ್ಷಣ ವ್ಯವಸ್ಥೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯ. ಪೋಷಕರು, ಸಾರ್ವಜನಿಕರು, ಜನಪ್ರತಿನಿಧಿಗಳನ್ನು ಪ್ರತಿ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸುವಂತಾಗಬೇಕು. ಇದು ಕೇವಲ ಸರ್ಕಾರದ ಜವಾಬ್ದಾರಿ ಎಂಬಂತಾಗಬಾರದು ಎಂದು ಸೂಚಿಸಿದರು.ಶಿಕ್ಷಕರ ಹೊರೆ ತಗ್ಗಿಸಲು ಕ್ರಮ: ಶಿಕ್ಷಕರಿಗೆ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗೆ ಹೆಚ್ಚಿನ ಹೊರೆ ಬೀಳುತ್ತಿರುವುದು ನಿಜ. ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಶಿಕ್ಷಕೇತರ ಸಿಬ್ಬಂದಿಯನ್ನು ನೇಮಕ ಮಾಡಿ ಈ ಜವಾಬ್ದಾರಿಯನ್ನು ಅವರಿಗೆ ವರ್ಗಾಯಿಸುವ ಬಗ್ಗೆಯೂ ಚಿಂತನೆಯಿದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.ಆಡಳಿತಾತ್ಮಕ ಸಮಸ್ಯೆ ನಿವಾರಣೆ: ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲ­ರಿಗೂ ಉಪ ಪ್ರಾಂಶುಪಾಲರಿಗೂ ಆಡಳಿತಾತ್ಮಕ ಸಂಬಂಧ ಇಲ್ಲದಿರುವುದು, ಇಂಥ ಶಾಲೆಗಳಲ್ಲಿ ಎರಡು ಶಾಲಾಭಿವೃದ್ಧಿ ಸಮಿತಿಗಳು ಇರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಪಿಯು ಕಾಲೇಜು ಸಮಸ್ಯೆ ಚರ್ಚೆ: ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ, ಪಾಳಿ ವ್ಯವಸ್ಥೆಯ ತರಗತಿಗಳಿಗಾಗುತ್ತಿರುವ ತೊಂದರೆ ಚರ್ಚೆಗೆ ಬಂದವು.ಇದೇ ವೇಳೆ ಪಿಯು ಫಲಿತಾಂಶ ವೃದ್ಧಿಗೂ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರಿಗೆ ಸೂಚ್ಯವಾಗಿ ಹೇಳಿದರು.ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್‌, ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣಾ ಕಂದಕೂರಪ್ಪ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಉದಪುಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry