ಮಂಗಳವಾರ, ಮೇ 24, 2022
31 °C

ಹಿಂದುಳಿದ ಮಕ್ಕಳಲ್ಲಿ ಕಲಿಕೆಯ ಕಾಮನಬಿಲ್ಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತರಗತಿಯಲ್ಲಿ ಮುದುಡಿಕೊಂಡು ಅಂಜಿಕೆಯಿಂದ ಕುಳಿತಿದ್ದ ಜಯಂತನನ್ನು ಮಾತನಾಡಿಸಲು ಶಶಾಂಕ್ ಪದೇ ಪದೇ ಪ್ರಯತ್ನಿಸುತ್ತಿದ್ದ. ಜಯಂತನದ್ದು ಮೌನವೇ ಉತ್ತರ. ಇವತ್ತು ಮನೆಗೆ ಹೋಗುವ ಮೊದಲು ಈತನನ್ನು ಗೆಳೆಯನನ್ನಾಗಿ ಮಾಡಿಕೊಳ್ಳಬೇಕು ಎಂಬ ಪಣ ತೊಟ್ಟ ಶಶಾಂಕ್ ಚಾಕಲೇಟ್ ಕೊಟ್ಟ. ಸ್ವಲ್ಪ ಹೊತ್ತಿನಲ್ಲಿ ಜಯಂತನ ಭಯ, ಆತಂಕ, ಮುಜುಗರ ಕಡಿಮೆಯಾಗಿತ್ತು. ತರಗತಿಯಿಂದ ಹೊರಬರುವಾಗ ಇಬ್ಬರಲ್ಲೂ ಸ್ನೇಹಭಾವ ಮೂಡಿತ್ತು.ನಗರದ ಬನಶಂಕರಿಯ ವಿದ್ಯಾಪೀಠದ ಸಮೀಪದ ಅನುದಾನರಹಿತ ಶಾಲೆಯೊಂದರಲ್ಲಿ ಮಂಗಳವಾರ ಮಧ್ಯಾಹ್ನ ಕಂಡು ಬಂದ ಅಪರೂಪದ ಸನ್ನಿವೇಶವಿದು.ಶಶಾಂಕ್ ಉದ್ಯಮಿಯೊಬ್ಬರ ಪುತ್ರ. ಖಾಸಗಿ ಕಂಪೆನಿಯೊಂದರ ಕಾರ್ಮಿಕ ರಂಗಣ್ಣ ಎಂಬವರ ಪುತ್ರ ಜಯಂತ. ಶಾಲೆ ಆರಂಭವಾಗಿ ಎರಡು ವಾರ ಕಳೆದ ಬಳಿಕ ತರಗತಿಗೆ ಬಂದ ಜಯಂತನನ್ನು ಗೆಳೆಯನನ್ನಾಗಿ ಮಾಡಿಕೊಳ್ಳಲು ಶಶಾಂಕ್ ಪಟ್ಟ ಶ್ರಮ ಇದು. ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯ ಅಡಿಯಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳು ನಗರದ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಸೇರ್ಪಡೆಯಾಗಿದ್ದು, ಸೋಮವಾರದಿಂದ ತರಗತಿಗೆ ಬರಲಾರಂಭಿಸಿದ್ದಾರೆ.

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಬಡವರ ಬಹುಕಾಲದ ಕನಸು ಕಾಯ್ದೆಯ ಮೂಲಕ ನನಸಾಗಿದೆ.ನಗರದ ಶಾಲೆಗಳಲ್ಲಿ ಮಕ್ಕಳು ಯಾವುದೇ ಭೇದ-ಭಾವ ಇಲ್ಲದೆ ಕಲಿಯುವ ಅಪೂರ್ವ ಸನ್ನಿವೇಶ ನಿರ್ಮಾಣವಾಗಿದೆ. ಸಮವಸ್ತ್ರ ತೊಟ್ಟು ಶಾಲೆಗೆ ಹೊರಡುವಾಗ ಈ ಮಕ್ಕಳ ಸಂಭ್ರಮ ಮೇರೆ ಮೀರಿತ್ತು. ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿದ ಪೋಷಕರ ಮನದಲ್ಲಿ ಸಂತಸದ ಭಾವ ಮೂಡಿತ್ತು. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಶಿಕ್ಷಣ ಸಂಸ್ಥೆಗಳು ಕೊನೆಗೂ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿವೆ.  ಕನಸು ನನಸಾಗಿದೆ

`ಪಕ್ಕದ ಮನೆಯ ಮಗು ಚೆಂದದ ಸಮವಸ್ತ್ರ ತೊಟ್ಟು ದೊಡ್ಡ ಬ್ಯಾಗ್ ಹೊತ್ತು ಪ್ರತಿಷ್ಠಿತ ಶಾಲೆಗೆ ಹೋಗುವುದನ್ನು ಕಂಡು ನನ್ನ ಮಗ ಸಹ ಅದೇ ಶಾಲೆಗೆ ಹೋಗಬೇಕು ಎಂದು ಆಸೆ ಪಡುತ್ತಿದ್ದ. ಆತನಿಗೆ ಹಾರಿಕೆಯ ಉತ್ತರ ಕೊಟ್ಟು ಸಾಕಾಗುತ್ತಿತ್ತು. ಬಡತನ ನೆನೆದು ಕಣ್ಣೀರು ಬರುತ್ತಿತ್ತು.ಆರ್‌ಟಿಇಯಿಂದಾಗಿ ನನ್ನ ಮಗನಿಗೂ ಉತ್ತಮ ಶಾಲೆಯಲ್ಲಿ ಸೀಟು ಸಿಕ್ಕಿದೆ. ಮಗ ಮೊದಲ ದಿನ ಶಾಲೆಗೆ ಹೊರಡುವಾಗ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಶಾಲೆಯಿಂದ ಬಂದವ ಇಡೀ ದಿನ ಸಮವಸ್ತ್ರ ಹಾಕಿಕೊಂಡೇ ಸುತ್ತಾಡಿದ್ದ.ನಿದ್ದೆ ಮಾಡುವಾಗ ಶಾಲಾ ಬ್ಯಾಗ್ ಹಾಸಿಗೆಯ ಪಕ್ಕವೇ ಇಟ್ಟುಕೊಂಡಿದ್ದ~ ಎಂದು ಬನಶಂಕರಿಯ ನಿವಾಸಿ ವನಿತಾ ಅವರು ಮಗನ ಸಂಭ್ರಮವನ್ನು ಬಣ್ಣಿಸಿದ್ದು ಹೀಗೆ. ಆರ್‌ಟಿಇಯಿಂದಾಗಿ ಆಕೆಯ ಪುತ್ರ ಶಂಕರ ಪರಿಸರದ ಹೆಸರುವಾಸಿ ಶಾಲೆಯೊಂದಕ್ಕೆ ಸೇರ್ಪಡೆಯಾಗುವಂತಾಗಿದೆ.ವಾರಕ್ಕೆ ಮೊದಲೇ ಸಂಭ್ರಮ

`ಶಾಲೆಗೆ ಸೇರುವ ಒಂದು ವಾರದ ಮೊದಲೇ ಮಗನ ಸಂಭ್ರಮ ಆರಂಭವಾಗಿತ್ತು. ನಿದ್ದೆಯಲ್ಲೂ ಶಾಲೆಯ ಬಗ್ಗೆ ಕನವರಿಸುತ್ತಿದ್ದ. ಸಾಮಾನ್ಯವಾಗಿ ಬೆಳಿಗ್ಗೆ ಏಳೂವರೆಗೆ ಮೊದಲು ಹಾಸಿಗೆ ಬಿಟ್ಟು ಏಳದಿದ್ದವ ಸೋಮವಾರ ಬೆಳಿಗ್ಗೆ ಆರೂವರೆಗೆ ಎದ್ದಿದ್ದ. ಊಟ, ಸ್ನಾನ ಮಾಡುವಾಗ ರಗಳೆ ಮಾಡುತ್ತಿದ್ದವ ಸದ್ದಿಲ್ಲದೆ ಸಿದ್ಧನಾಗಿದ್ದ.

 

ಸಂಜೆ ಮನೆಗೆ ಬಂದವ ಒಂದೇ ಉಸಿರಿನಲ್ಲಿ ಶಾಲೆಯ ವಿದ್ಯಮಾನಗಳನ್ನು ತಿಳಿಸಿದ. ಆತನ ಸಂತಸ ನೋಡಿ ಧನ್ಯತಾಭಾವ ಮೂಡಿದೆ~ ಎಂಬುದು ಶ್ರೀನಗರದ ಲಕ್ಷ್ಮೀ ಅವರ ಸಂತಸದ ನುಡಿ. ಪತಿ ಶ್ರೀನಗರದಲ್ಲಿ ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾರೆ. ಮಗನನ್ನು ಉತ್ತಮ ಶಾಲೆಗೆ ಸೇರಿಸಬೇಕೆಂಬ ಹಂಬಲ ಅವರಿಗೆ ಇತ್ತು. ಆದರೆ, ಖಾಸಗಿ ಶಾಲೆಗಳ ಶುಲ್ಕ ನೋಡಿ ದಿಗಿಲುಗೊಂಡಿದ್ದರು. ಈಗ ಇಷ್ಟದ ಶಾಲೆಯಲ್ಲೇ ಮಗನಿಗೆ ಸೀಟು ಸಿಕ್ಕಿದೆ.15ರೊಳಗೆ ಮಕ್ಕಳ ಪಟ್ಟಿ ಸಲ್ಲಿಕೆಗೆ ಸೂಚನೆ

 ಆರ್‌ಟಿಇ ಅಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಖಾಸಗಿ ಅನುದಾನರಹಿತ ಹಾಗೂ ಅನುದಾನಿತ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದೇ 15ರೊಳಗೆ ಸಲ್ಲಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.`ಶಾಲೆಗಳಲ್ಲಿ ಲಭ್ಯವಿರುವ ಸೀಟು ಹಾಗೂ ದಾಖಲಾದ ಮಕ್ಕಳ ಮಾಹಿತಿಯನ್ನು ಜೂನ್ 10ರೊಳಗೆ ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಬಿಇಒಗಳಿಂದ ಡಿಡಿಪಿಐಗಳು ಮಾಹಿತಿ ತರಿಸಿಕೊಂಡು ಇಲಾಖೆಗೆ ಸಲ್ಲಿಸಬೇಕು. ಅಲ್ಲದೆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.

 

ಇಲಾಖೆಗೆ ಮಾಹಿತಿ ನೀಡುವಲ್ಲಿ ವಿಳಂಬ ಮಾಡಬಾರದು~ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎ.ದೇವಪ್ರಕಾಶ್ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಹೀಗಾಗಿ ರಾಜ್ಯದಾದ್ಯಂತ ಆರ್‌ಟಿಇ ಅಡಿಯಲ್ಲಿ ಸೇರ್ಪಡೆಯಾಗಿರುವ ಮಕ್ಕಳ ಸಮಗ್ರ ಮಾಹಿತಿ ಜೂನ್ 15ರ ಬಳಿಕ ಲಭ್ಯವಾಗಲಿದೆ.` 659 ಅರ್ಜಿ ತಿರಸ್ಕೃತ~

ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಉಪನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಆರ್‌ಟಿಇ ಅಡಿಯಲ್ಲಿ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇತ್ತು. ಬಂದಿರುವ ಅರ್ಜಿಗಳು 2,527. ಇದರಲ್ಲಿ ತಿರಸ್ಕೃತಗೊಂಡ ಅರ್ಜಿಗಳು 659!ನಗರದ ಶಾಲೆಗಳಲ್ಲಿ ಶೇ 25 ಮೀಸಲಾತಿ ಅಡಿಯಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಶಾಲೆ ಆರಂಭಗೊಳ್ಳಲು ಒಂದು ತಿಂಗಳು ಇರುವಾಗ ಆರ್‌ಟಿಇ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಹಾಗೂ ಮಾಹಿತಿಯ ಕೊರತೆಯ ಕಾರಣ ಎಂಬುದು ಶಾಲೆಗಳ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ.`ಆರ್‌ಟಿಇ ಪ್ರಕಾರ ಒಂದನೇ ಹಾಗೂ ಪೂರ್ವ ಪ್ರಾಥಮಿಕ ತರಗತಿಗೆ ಮಾತ್ರ ಸೇರ್ಪಡೆಗೆ ಅವಕಾಶ ಇದೆ. ಕಾಯ್ದೆ ಬಗ್ಗೆ ಸಮರ್ಪಕ ಮಾಹಿತಿ ಪಡೆಯದೆ ಒಂದರಿಂದ ಏಳನೇ ತರಗತಿವರೆಗೆ ಮಕ್ಕಳ ಸೇರ್ಪಡೆಗೆ ಅರ್ಜಿ ಸಲ್ಲಿಸಿದವರು ಸಾಕಷ್ಟು ಮಂದಿ. ಖಾಸಗಿ ಶಾಲೆಯಲ್ಲಿ ಸುಲಭದಲ್ಲಿ ಸೀಟು ಸಿಗುತ್ತದೆ ಎಂಬ ಆಸೆಯಿಂದ ಸಣ್ಣ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಅರ್ಜಿ ಸಲ್ಲಿಸಿದವರು ಇದ್ದಾರೆ.ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈಗ ಶಾಲೆಗಳಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇದೇ 16ರವರೆಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ~ ಎಂದು ಬೆಂಗಳೂರು ಉತ್ತರ ಡಿಡಿಪಿಐ ಕಚೇರಿಯ ನೋಡಲ್ ಅಧಿಕಾರಿ ಜಯಸಿಂಹ `ಪ್ರಜಾವಾಣಿ~ಗೆ ತಿಳಿಸಿದರು.`ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ 1,600 ಮಕ್ಕಳ ಸೇರ್ಪಡೆಗೆ ಅವಕಾಶ ಇತ್ತು. ಬಂದಿರುವ ಅರ್ಜಿಗಳು 849. ಕೆಲವು ಶಾಲೆಗಳಿಗೆ ಒಂದೇ ಒಂದು ಅರ್ಜಿ ಬಂದಿಲ್ಲ. ಶಾಲೆಗಳ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸೇರಿಸಿಕೊಳ್ಳಲು ಸಿದ್ಧರಿದ್ದಾರೆ. ಸಾಕಷ್ಟು ಮಾಹಿತಿ ನೀಡಿದರೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ~ ಎಂದು ಗ್ರಾಮಾಂತರ ಡಿಡಿಪಿಐ ವೆಂಕಟೇಶಪ್ಪ ತಿಳಿಸಿದರು.`ಶಾಲಾ ಶುಲ್ಕವಾಗಿ ಇಲಾಖೆ ವರ್ಷಕ್ಕೆ ರೂ. 11,848 ಪಾವತಿಸುತ್ತದೆ. ಶಾಲಾ ಸಮವಸ್ತ್ರ, ಸಾಗಣೆ ವೆಚ್ಚ, ಪುಸ್ತಕಗಳನ್ನು ಇಲಾಖೆಯೇ ನೀಡಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಗೊಂದಲ ಇದೆ. ಜನರಿಗೆ ಉತ್ತರ ಹೇಳಿ ಸಾಕಾಗಿದೆ. ಪೋಷಕರು ಕಾಯ್ದೆಯನ್ನು ಅರ್ಥ ಮಾಡಿಕೊಂಡು ವ್ಯವಹರಿಸಬೇಕು. ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ನಿರೀಕ್ಷೆ ಮಾಡಿದರೆ ಹೇಗೆ~ ಎಂದು ಅವರು ಪ್ರಶ್ನಿಸಿದರು.`ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಬಂದ ಅರ್ಜಿಗಳ ಸಂಖ್ಯೆ ಕಡಿಮೆ. ಮಂಗಳವಾರ ಸಂಜೆ ವೇಳೆಗೆ ಸೇರ್ಪಡೆಯಾದ ಮಕ್ಕಳ ಮಾಹಿತಿ ದೊರಕಲಿದೆ. ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿರುವ ಕುರಿತು ನಮಗೆ ಯಾವುದೇ ದೂರು ಬಂದಿಲ್ಲ.

ಹಿಂದುಳಿದ ವಿದ್ಯಾರ್ಥಿಗಳ ಸೇರ್ಪಡೆಗೆ ನಿರಾಕರಿಸಿದ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಮನವರಿಕೆ ಮಾಡಿಕೊಡುತ್ತಿದ್ದಾರೆ. ಕಾಯ್ದೆಯಡಿ ನೋಟಿಸ್ ನೀಡಿ ಶಾಲೆಯ ಮಾನ್ಯತೆ ರದ್ದುಪಡಿಸಲು ಅವಕಾಶ ಇದೆ. ಹೀಗಾಗಿ ಖಾಸಗಿ ಶಾಲೆಗಳು ಸಮಸ್ಯೆ ಮೈಮೇಲೆ ಎಳೆದುಕೊಳ್ಳಲು ಇಷ್ಟ ಪಡುವುದಿಲ್ಲ~ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.`ಜರಗನಳ್ಳಿಯ ಸಿಇಎಸ್ ಶಾಲೆಯಲ್ಲಿ ಶೇ 22ರಷ್ಟು ವಿದ್ಯಾರ್ಥಿಗಳು ಮಾತ್ರ ಬಂದಿದ್ದಾರೆ. ಕಾಯ್ದೆಯ ಬಗ್ಗೆ ಜನರಿಗೆ ಅರಿವಿಲ್ಲ. ಜಾಗೃತಿ ಮೂಡಿಸಬೇಕಿದೆ~ ಎಂದು ಶಾಲೆಯ ಶಿಕ್ಷಕಿ ಗಿರಿಜಮ್ಮ ಅಭಿಪ್ರಾಯಪಟ್ಟರು.`ಬಾಗಲಗುಂಟೆಯ ಬ್ಲಾಸಂ ಶಾಲೆಗೆ ಬಂದಿರುವ ಅರ್ಜಿಗಳು ಎರಡು ಮಾತ್ರ. ಈ ಪೈಕಿ ಒಬ್ಬ ವಿದ್ಯಾರ್ಥಿ ಸೇರ್ಪಡೆಯಾಗಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಬರುವ ಲಕ್ಷಣ ಕಾಣುತ್ತಿಲ್ಲ. ಪೋಷಕರು 2-3 ಶಾಲೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಂತಿಮವಾಗಿ ಒಂದು ಶಾಲೆ ಆಯ್ಕೆ ಮಾಡಿಕೊಳ್ಳುತ್ತಾರೆ. ನಗರದ ಶೇ 60ರಷ್ಟು ಶಾಲೆಗಳಿಗೆ ಐದಕ್ಕಿಂತ ಕಡಿಮೆ ಅರ್ಜಿಗಳು ಬಂದಿವೆ~ ಎಂದು ಶಾಲೆಯ ಮುಖ್ಯಸ್ಥ ಶಶಿಕುಮಾರ್ ತಿಳಿಸಿದರು.`ಆಂಗ್ಲ ಮಾಧ್ಯಮಕ್ಕೆ ಒಲವು~

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಒಲವು ವ್ಯಕ್ತಪಡಿಸಿರುವುದು ಬಹಿರಂಗಗೊಂಡಿದೆ.`ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ ಡಿಡಿಪಿಐ ಕಚೇರಿ ವ್ಯಾಪ್ತಿಯಲ್ಲಿ ಶೇ 60ಕ್ಕೂ ಅಧಿಕ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. ಅದರಲ್ಲೂ ಅನುದಾನಿತ ಶಾಲೆಗಿಂತ ಅನುದಾನರಹಿತ ಶಾಲೆಯ ಕಡೆಗೆ ಆಸಕ್ತಿ ವಹಿಸಿದ್ದಾರೆ~ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.`ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಲ್ಲಿ ಪರಿಶಿಷ್ಟ ಜಾತಿಗೆ ಶೇ 7.5, ಪರಿಶಿಷ್ಟ ಪಂಗಡಕ್ಕೆ ಶೇ 1.5, ಅನಾಥರು, ಅಲೆಮಾರಿಗಳು, ಶೇ 40ರಷ್ಟು ನ್ಯೂನತೆಯುಳ್ಳ ವಿಶೇಷ ಮಕ್ಕಳು, ಎಚ್‌ಐವಿ ಪೀಡಿತರ ಮಕ್ಕಳು, ಕೊಳೆಗೇರಿಯ ಮಕ್ಕಳೂ ಸೇರಿದಂತೆ ಹಿಂದುಳಿದ ವರ್ಗದ ಮಕ್ಕಳಿಗೆ ಶೇ 16 ಮೀಸಲು ಇಡಲಾಗಿತ್ತು. ಮಕ್ಕಳ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಮಕ್ಕಳ ವರ್ಗವಾರು ಮಾಹಿತಿ ಲಭ್ಯ ಇಲ್ಲ. ಯಾವ ಮಾಧ್ಯಮಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಮಾಹಿತಿ 15ರ ಬಳಿಕ ಲಭಿಸಲಿದೆ~ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ಮಂಗಳವಾರ ತಿಳಿಸಿದರು.`ಶ್ರೀನಗರದ ಶ್ರೀನಿಧಿ ವಿದ್ಯಾಸಂಸ್ಥೆಯಲ್ಲಿ ಒಂದನೇ ತರಗತಿಗೆ 12 ಮಕ್ಕಳ ಸೇರಿಸಿಕೊಳ್ಳಲು ಅವಕಾಶ ಇತ್ತು. ಆದರೆ ಒಂದೇ ಒಂದು ಅರ್ಜಿ ಬಂದಿಲ್ಲ. ಪೋಷಕರಿಗೆ ಸಾಕಷ್ಟು ಮಾಹಿತಿ ನೀಡಲಾಗಿತ್ತು. ನಗರದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಮೊದಲ ಆದ್ಯತೆ. ಅಲ್ಲಿ ಸೀಟು ಸಿಗದಿದ್ದಾಗ ಅನಿವಾರ್ಯವಾಗಿ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುತ್ತಾರೆ~ ಎಂದು ಶಾಲೆಯ ಮುಖ್ಯ ಶಿಕ್ಷಕ ನಂಜಪ್ಪ ಬೇಸರ ವ್ಯಕ್ತಪಡಿಸಿದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.