ಹಿಂದುಳಿದ ವರ್ಗಕ್ಕೆ ಅನ್ಯಾಯ: ಪ್ರತಿಭಟನೆ

7

ಹಿಂದುಳಿದ ವರ್ಗಕ್ಕೆ ಅನ್ಯಾಯ: ಪ್ರತಿಭಟನೆ

Published:
Updated:

ಮಸ್ಕಿ: ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯಲ್ಲಿ ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಇಲ್ಲಿಯ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಮಾಜಗಳ ಮುಖಂಡರು ಶುಕ್ರವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.ಭ್ರಮರಾಂಬ ದೇವಸ್ಥಾನದಿಂದ ಆರಂಭಗೊಂಡ ರ‌್ಯಾಲಿ ಕನಕವೃತ್ತ, ಮುಖ್ಯ ಬಜಾರ್, ಮುದಗಲ್ ವೃತ್ತ, ಹಳೇ ಬಸ್ ನಿಲ್ದಾಣ ಮೂಲಕ ವಿಶೇಷ ತಹಶೀಲ್ದಾರ ಕಚೇರಿಗೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಹಾಕಲಾಯಿತು.

 

ನಂತರ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಮುಖಂಡ ಅಬ್ದುಲ್ ಅಜೀಜ್, ಸರ್ಕಾರದ ಈಗಿನ ಮೀಸಲಾತಿ ಅವೈಜ್ಞಾನಿಕವಾಗಿದೆ. ಕೂಡಲೇ ಮೀಸಲಾತಿಯನ್ನು ಸರಿಪಡಿಸಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ನ್ಯಾಯ ದೊರಕದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಮೀಸಲಾತಿ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ವಿಶೇಷ ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ಒಕ್ಕೂಟದ ಮುಖಂಡರಾದ ಶಿವಶಂಕ್ರಪ್ಪ ಹಳ್ಳಿ, ನೇಕಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಬಿಜ್ಜಳ, ಯಮನಪ್ಪ ದೇವರಡ್ಡಿ ನೇತಋತ್ವ ವಹಿಸಿದ್ದರು. ಮುಸ್ಲಿಂ, ದೇವಾಂಗ, ಪದ್ಮಶಾಲಿ, ಗಾಣಿಗೇರ, ದರ್ಜಿ, ಕುರುವಿನಶೆಟ್ಟಿ, ಹಾಲುಮತ ಸಮಾಜ, ರಜಪೂತ, ಗಂಗಾಮತಸ್ಥ, ನಾಗಲಿಕರ ಸಮಾಜ ಸೇರಿದಂತೆ 20ಕ್ಕೂ ಹೆಚ್ಚು ಸಮಾಜಗಳ ಮುಖಂಡರು ಹಾಗೂ ಕಾರ್ಯಕರ್ತರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry