ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾವಿರ ಕೋಟಿ

7

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾವಿರ ಕೋಟಿ

Published:
Updated:

ಬೆಂಗಳೂರು: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಈ ವರ್ಷದ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭಾನುವಾರ ಇಲ್ಲಿ ಹೇಳಿದರು.ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 385ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ 760 ಕೋಟಿ ರೂಪಾಯಿಗಳನ್ನು ಒದಗಿಸಿತ್ತು. ಈ ವರ್ಷ ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲು ಪ್ರಯತ್ನ ನಡೆಸಲಿದೆ ಎಂದರು.ಈ ಹಿಂದಿನ ಸರ್ಕಾರಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೇವಲ 100ರಿಂದ 150 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದವು. ಆದರೆ, ಬಿಜೆಪಿ ಸರ್ಕಾರ ಈ ವರ್ಗಗಳನ್ನು ಮೇಲೆತ್ತುವ ಉದ್ದೇಶದಿಂದ ಹೆಚ್ಚಿನ ಅನುದಾನ ಒದಗಿಸುತ್ತಿದೆ ಎಂದರು.ಕ್ಷತ್ರಿಯ ಮರಾಠ/ ಮರಾಠ ಜನಾಂಗವನ್ನು 2 (ಎ) ಪ್ರವರ್ಗಕ್ಕೆ ಸೇರಿಸಲು ಸರ್ಕಾರ ಪರಿಶೀಲಿಸಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು, ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಸಮಾರಂಭವನ್ನು ಉದ್ಘಾಟಿಸಿದ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ, `ಶಿವಾಜಿ ರಾಷ್ಟ್ರದ ಒಬ್ಬ ಮಹಾನ್ ಯುಗಪುರುಷ.ಭಾರತದ ಇತಿಹಾಸದಲ್ಲಿ ಸಂಪುಟ ವ್ಯವಸ್ಥೆ, ವಿದೇಶಾಂಗ ವ್ಯವಹಾರ, ಗುಪ್ತಚರ ಹಾಗೂ ಆಡಳಿತ ಸುಧಾರಣೆಗೆ ಅಂದೇ ಶಿವಾಜಿ ಭದ್ರ ಬುನಾದಿ ಹಾಕಿಕೊಟ್ಟರು. ಅವರ ಆದರ್ಶ, ರಾಷ್ಟ್ರ ಪ್ರೇಮ, ಕೆಚ್ಚು ರೋಮಾಂಚನವುಂಟು ಮಾಡುವಂಥದ್ದು. ಹೀಗಾಗಿ, ಶಿವಾಜಿ ಜಾತಿ-ಮತ ಮೀರಿ ಬೆಳೆದ ದೇಶದ ಶ್ರೇಷ್ಠ ಸಾಮ್ರಾಟ~ ಎಂದು ಬಣ್ಣಿಸಿದರು.`ಆಂತರಿಕ ಪ್ರಜಾಪ್ರಭುತ್ವದಲ್ಲಿ ಜನರ ಮನಸ್ಸಿನಲ್ಲಿ ಶ್ರೇಷ್ಠವಾದ ಮೌಲ್ಯಗಳನ್ನು ಬಿತ್ತಿದ ಶಿವಾಜಿ ಅವರ ಆದರ್ಶಗಳನ್ನು ಮರಾಠ ಸಮಾಜ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವುದು ಪ್ರಶಂಸನೀಯ~ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯಸಭಾ ಸದಸ್ಯ ಅನಿಲ್ ಎಚ್. ಲಾಡ್, `ಮರಾಠ ಜನಾಂಗದಲ್ಲಿ ರಾಜಕೀಯವಾಗಿ ಬೆಳೆಯುವಂತಹ ಮುಖಂಡರ ಕಾಲೆಳೆಯುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಸಮಾಜ ಸವಲತ್ತುಗಳಿಂದ ವಂಚಿತವಾಗುತ್ತಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡುವಾಗ ವೈಯಕ್ತಿಕ ಲಾಭ ಹಾಗೂ ಸ್ವಾರ್ಥವನ್ನು ತ್ಯಜಿಸಬೇಕು. ನಾನು ಕೂಡ ತಪ್ಪು ಮಾಡಿದಾಗ ಜನಾಂಗದವರು ಪತ್ರ ಬರೆದು ನಡವಳಿಕೆ ತಿದ್ದಿಕೊಳ್ಳುವಂತೆ ಸಲಹೆ ಮಾಡಬಹುದು~ ಎಂದು ಕೋರಿದರು.`ನಾವು ಶಿವಾಜಿ ಮಹಾರಾಜರ 385ನೇ ಜಯಂತ್ಯುತ್ಸವ ಆಚರಿಸುತ್ತಿದ್ದರೂ ಸಮಾಜ ಇನ್ನೂ ಸಂಘಟನೆಯಾಗಿಲ್ಲ. ಮೊದಲು ಸಮಾಜ ಒಗ್ಗೂಡಬೇಕು. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಒಬ್ಬ ಸಚಿವ ಅಥವಾ ಮುಖ್ಯಮಂತ್ರಿಯಾಗುವುದಕ್ಕೂ ಎಲ್ಲ ಜನರ ಆಶೀರ್ವಾದ ಬೇಕು. ಇಂತಹ ಸ್ಥಿತಿಯಲ್ಲಿ ಮರಾಠ ಜನಪ್ರತಿನಿಧಿಗಳ ಬಗ್ಗೆ ಸಮಾಜ ಅಭಿಮಾನ ಪ್ರದರ್ಶಿಸಬೇಕು~ ಎಂದು ಮನವಿ ಮಾಡಿದರು.ಸಮಾಜ ಉದ್ಧಾರ ಸಾಧ್ಯವಿಲ್ಲ: ಜೆಡಿಎಸ್‌ನ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ, `ರಾಜಕೀಯ ಮುಖಂಡರಿಂದಲೇ ಸಮಾಜದ ಉದ್ಧಾರವಾಗುತ್ತದೆಂಬ ಭ್ರಮೆಯನ್ನು ಜನ ಬಿಡಬೇಕು. ಹೊಲಸಾಗಿರುವ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ಸಜ್ಜನ ರಾಜಕಾರಣಿಗಳಿರುವುದೇ ಪವಾಡ.ಇಂತಹ ಸನ್ನಿವೇಶದಲ್ಲಿ ಸಮಾಜವು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಆರ್ಥಿಕ ಸಬಲರಾಗಲು ಪ್ರಯತ್ನಿಸಬೇಕು~ ಎಂದು ಕರೆ ನೀಡಿದರು.ಇನ್ನು ಕಾಲೆಳೆಯುವ ಪ್ರವೃತ್ತಿ ಬಿಡುವಂತೆ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, `ನಾವು ಹೇಡಿಗಳ ರೀತಿ ಯಾರ ಕಾಲೆಳೆಯುವ ಕೆಲಸ ಮಾಡುವುದಿಲ್ಲ.ರಾಜಕೀಯದಲ್ಲಿ ಇನ್ನೂ ಉತ್ತಮ ಭವಿಷ್ಯವಿರುವ ಅನಿಲ್ ಲಾಡ್ ಅವರೇ ಸಮಾಜದ ನಾಯಕತ್ವ ವಹಿಸಿಕೊಂಡು ಮುನ್ನಡೆಸಬೇಕು. ಬಹಳ ಚಿಕ್ಕ ವಯಸ್ಸಿನಲ್ಲೇ ಲಾಡ್‌ಗೆ ಅಧಿಕಾರ ಸಿಕ್ಕಿದೆ. ಹಣಕಾಸಿನ ವ್ಯವಸ್ಥೆಯೂ ಉತ್ತಮವಾಗಿದೆ. ಅಂತಹ ವ್ಯಕ್ತಿಗೆ ಸಮಾಜ ಕೂಡ ಹಿಂದೆ ನಿಂತು ಬೆಳೆಸಲು ಮುಂದಾಗಬೇಕು~ ಎಂದು ಕೋರಿದರು.ಗವಿಪುರಂನ ಗೋಸಾಯಿ ಮರಾಠ ಮಠದ ಸುರೇಶ್ವರಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಅಧ್ಯಕ್ಷ ವಿ.ಎ. ರಾಣೊಜಿರಾವ್ ಸಾಠೆ, ಮಾಜಿ ಶಾಸಕ ಎಂ.ಜಿ. ಮೂಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಶಿವಾಜಿರಾವ್ ಜಾದವ್, ಗೌರವ ಖಜಾಂಚಿ ಬೈನೋಜಿರಾವ್ ಮೋರೆ ಮತ್ತಿತರರು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry