ಹಿಂದುಳಿಯಲು ಜಾತೀಯತೆ ಕಾರಣ

ಶನಿವಾರ, ಜೂಲೈ 20, 2019
22 °C

ಹಿಂದುಳಿಯಲು ಜಾತೀಯತೆ ಕಾರಣ

Published:
Updated:

ಚನ್ನಪಟ್ಟಣ: ಆಳವಾಗಿ ಬೇರೂರಿರುವ ಜಾತೀಯತೆ ಮತ್ತು ಆರ್ಥಿಕ ಅಸಮಾನತೆಗಳನ್ನು ನಿರ್ಮೂಲನೆ ಮಾಡಿದಾಗ ಮಾತ್ರ ದೇಶದ ಪ್ರಗತಿಯಾಗಲು ಸಾಧ್ಯ ಎಂದು ಮೈಸೂರಿನ ಉರಿಲಿಂಗ ಪೆದ್ದೇಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಅನುಗ್ರಹ ಕನ್‌ವೆನ್‌ಷನ್ ಹಾಲ್‌ನಲ್ಲಿ ಶನಿವಾರ ನಡೆದ ಜ್ಯೋತಿಬಾ ಫುಲೆ ಕುರಿತ ವಿಚಾರ ಸಂಕಿರಣ ಹಾಗೂ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಶೂದ್ರರ ಜೀವನಮಟ್ಟ ಸುಧಾರಿಸಿಲ್ಲ. ಸಮುದಾಯದಲ್ಲಿನ ಒಡಕನ್ನು ಕೆಲವು ಪಟ್ಟಭದ್ರರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರು ಇನ್ನೂ ಹಿಂದುಳಿಯುವಂತೆ ಮಾಡಲಾಗಿದೆ. ದಲಿತರು ಇನ್ನು ಮುಂದಾದರೂ ಒಂದಾಗದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದರು.ಉದ್ಘಾಟನೆ ನೆರವೇರಿಸಿದ ಬಮುಲ್ ನಿರ್ದೇಶಕ ಲಿಂಗೇಶ್ ಕುಮಾರ್ ಮಾತನಾಡಿ, ಜ್ಯೋತಿಬಾ ಫುಲೆಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಕಾರ್ಯಕ್ರಮಗಳ ಮೂಲಕ ಪುಣ್ಯಪುರುಷರ ವಿಚಾರಗಳನ್ನು ತಿಳಿಸುತ್ತಿರುವುದು ಸ್ವಾಗತಾರ್ಹ ಎಂದರು.ಉಪನ್ಯಾಸಕ ಸುರೇಶ್ ಗೌತಮ್ ಅವರು, `ಜ್ಯೋತಿಬಾ ಪುಲೆ ಮತ್ತು ಪ್ರಸ್ತುತ ಶಿಕ್ಷಣ~ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, `ಬುದ್ಧನ ಕಾಲದಿಂದಲೂ ಎಲ್ಲರೂ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಯಾವ ರೀತಿಯ ಶಿಕ್ಷಣ ಅವಶ್ಯಕ, ಶಿಕ್ಷಣದ ಮಹತ್ವವೇನು, ನಮ್ಮ ಶಿಕ್ಷಣ ಎಂತಹದ್ದು ಎಂಬುದರ ಬಗ್ಗೆ ಚರ್ಚಿಸುತ್ತಿಲ್ಲ~ ಎಂದು ವಿಷಾದಿಸಿದರು.

 

ಮಾಜಿ ಶಾಸಕ ಕೆ.ಅನ್ನದಾನಿ, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಲಿಂಗದೇವರು, ತೋಟಗಾರಿಕಾ ಸಹಾಯಕ ನಿರ್ದೇಶಕ ಬೆಳ್ಳೂರು ಕೃಷ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರಾಂಪುರ ರಾಜಣ್ಣ, ಉಪನ್ಯಾಸಕ ಕೆ.ಎಂ.ಮಾಯಿಗೇ ಗೌಡ ಮುಂತಾದವರು ಭಾಗವಹಿಸಿದ್ದರು.ಟ್ರಸ್ಟ್‌ನ ಕಾರ್ಯದರ್ಶಿ ಬಿ.ಪಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಶಿವಕುಮಾರ್ ನಿರೂಪಿಸಿದರು. ಸುಜೇಂದ್ರಬಾಬು ಮತ್ತು ತಂಡ ನೃತ್ಯರೂಪಕ ನಡೆಸಿಕೊಟ್ಟರು. ಇದೇ ವೇಳೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.ಸ್ಫೂರ್ತಿ ಸಾಮಾಜಿಕ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry