ಗುರುವಾರ , ಮೇ 19, 2022
20 °C

ಹಿಂದೂಗಳು ಒಂದಾಗಲು, ಒಗ್ಗಟ್ಟಾಗಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಎಲ್ಲ ಹಿಂದೂಗಳು ಒಂದಾಗಬೇಕು, ಒಗ್ಗಟ್ಟಾಗಬೇಕು~ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಪ್ರಾಂತ ಪ್ರಚಾರಕ ಶಂಕರಾನಂದ ಕರೆ ನೀಡಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವಿಜಯದಶಮಿ ಉತ್ಸವ ಅಂಗವಾಗಿ ಗುರುವಾರ ನಗರದಲ್ಲಿ ಏರ್ಪಡಿಸಿದ ಪಥಸಂಚಲನ ನಂತರ ನೆಹರು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು.`ಎಲ್ಲ ಸಜ್ಜನರು ಒಂದಾಗಬೇಕು. ಆಗ ಸಮಾಜದಲಿ ಶಾಂತಿ ನೆಲೆಸುತ್ತದೆ. ಜಗತ್ತಿನಲ್ಲಿ ಭಾರತ ಮೊದಲ ಸ್ಥಾನ ಬರಬೇಕಿದೆ. ಇದಕ್ಕಾಗಿ ಶಾಂತಿ ನೆಲೆಸಬೇಕು ಮತ್ತು ನೆಮ್ಮದಿಯ ಬಾಳು ಬೇಕು. ಆಗ ಈ ದೇಶದಲ್ಲಿಯ ಸಮಸ್ಯೆಗಳು ಬಗೆಹರಿಯುತ್ತವೆ~ ಎಂದು ಅವರು ಹೇಳಿದರು.`2500 ವರ್ಷಗಳಿಂದ ಈ ದೇಶವನ್ನು ನಾಶ ಮಾಡಲು ಯತ್ನಿಸಲಾಗುತ್ತಿದೆ. ಇಂಗ್ಲಿಷರಿಗಿಂತ ಮೊದಲು ಅನೇಕರು ಆಳಿದರು. ಎಲ್ಲರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಈ ದೇಶಕ್ಕಿದೆ. ಆದರೆ ಜಾತಿ ಹೆಸರಿಲ್ಲಿ ಕಚ್ಚಾಟ ನಡೆಯುತ್ತಿದೆ. ಮನುಷ್ಯರನ್ನು ಜಾತಿಯಿಂದ ಗುರುತಿಸುವುದು ಅಪರಾಧ ಮತ್ತು ಮಹಾ ಪಾಪ. ಇದಕ್ಕಾಗಿ ಜಾತಿಯಿಂದ ಯಾರನ್ನೂ ಅಳೆಯಬೇಡಿ. ಇದರೊಂದಿಗೆ ಅಸ್ಪೃಶ್ಯತೆ ಮತ್ತು ಭ್ರಷ್ಟಾಚಾರ ಈ ದೇಶದಲ್ಲಿ ಮಿತಿ ಮೀರಿ ಬೆಳೆದಿದೆ. ಹೀಗೆ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಈ ದೇಶದಲ್ಲಿ ಹೆಚ್ಚಿವೆ. ಇದಕ್ಕಾಗಿ ಸಜ್ಜನರು ಒಂದಾಗಬೇಕು. ಅವರೊಂದಿಗೆ ಶ್ರದ್ಧೆ ಹಾಗೂ ಭಕ್ತಿಯನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.`ನಿಸ್ಸಃತ್ವ ಹಾಗೂ ನಿರ್ವಿರ್ಯ ನಾಯಕತ್ವದ ರಾಜಕಾರಣಿಗಳನ್ನು ಬೈಯ್ದು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಸತ್ವಶಾಲಿಗಳಾಗಬೇಕು ಜೊತೆಗೆ ಶಕ್ತಿಶಾಲಿಗಳಾಗಬೇಕು. ಈ ಶಕ್ತಿಯ ಸಂದೇಶವನ್ನು ಪ್ರತಿ ಹೃದಯಕ್ಕೆ ಬಿತ್ತರಿಸುತ್ತದೆ ವಿಜಯದಶಮಿ. ದುಷ್ಟ ಮಹಿಷಾಸುರನನ್ನು ಸಂಹರಿಸಿದ ದಿನವಿದು. ಲಾಗಾಯ್ತಿನಿಂದಲೂ ಈ ದೇಶದಲ್ಲಿ ಶಕ್ತಿಯ ಆರಾಧನೆ ನಡೆಯುತ್ತಿದೆ.

 

ಹೀಗಾಗಿ ಎಲ್ಲ ಹಿಂದೂಗಳು ತಮ್ಮ  ನರನಾಡಿಗಳಲ್ಲಿ ಕ್ಷಾತ್ರ ಭಾವ ತುಂಬಿಕೊಂಡು ಎದ್ದೇಳಬೇಕು. ಇದಕ್ಕಾಗಿ ಸ್ವಾರ್ಥ ಹಾಗೂ ಪ್ರತಿಷ್ಠೆ ಬದಿಗಿಟ್ಟು ದುಡಿಯಬೇಕು. ಒಂದಾಗಿ ಯೋಚಿಸಬೇಕು ಮತ್ತು ಒಟ್ಟಾಗಿ ಮುನ್ನಡೆಯಬೇಕು ಎನ್ನುವ ಸಂದೇಶವನ್ನು 85 ವರ್ಷಗಳಿಂದ ಆರ್‌ಎಸ್‌ಎಸ್ ನೀಡುತ್ತಿದೆ~ ಎಂದು ಅವರು ವಿವರಿಸಿದರು.`ಈ ದೇಶಕ್ಕೆ ಸ್ವಾತಂತ್ರ್ಯ ಒಬ್ಬರಿಂದ ದೊರೆತಿಲ್ಲ. ಸಾವಿರಾರು ಜನರ ತ್ಯಾಗ ಹಾಗೂ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಈಗ ಸ್ವಾತಂತ್ರ್ಯ ಉಳಿಸಿಕೊಳ್ಳಲು ಪ್ರತಿ ನಿತ್ಯ ಶ್ರಮಿಸಬೇಕಿದೆ. ಜೊತೆಗೆ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರೆಂದು ಈ ದೇಶವನ್ನು ಇಬ್ಭಾಗವಾಗಿಸುವ ಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು~ ಎಂದರು.`ಜನವರಿ 27ರಿಂದ 29ರ ವರೆಗೆ ಹಿಂದೂ ಶಕ್ತಿ ಸಂಗಮ ಕರ್ನಾಟಕ ಉತ್ತರ ಪ್ರಾಂತದ ತರುಣ ಶಿಬಿರ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಇದು ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಶಿಬಿರ. ಈ ಬಗೆಯ ಶಿಬಿರಗಳು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಡೆದಿವೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದರಿಂದ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಸಾಮಾನ್ಯರೂ ಕಳವಳಗೊಂಡಿದ್ದಾರೆ. ಇದಕ್ಕಾಗಿ ಶಿಬಿರದಿಂದ ವಿಶ್ವಾಸ ಮತ್ತು ಉತ್ಸಾಹ ತುಂಬುವ ಕೆಲಸ ನಡೆಯಲಿದೆ~ ಎಂದರು.ಗುತ್ತಿಗೆದಾರ ಅಶೋಕ ಸುರೇಬಾನ ಅಧ್ಯಕ್ಷತೆ ವಹಿಸಿದ್ದರು. ನಗರ ಸಂಘ ಸಂಚಾಲಕ ಡಾ.ಗೋವಿಂದ ನರೇಗಲ್ ಹಾಜರಿದ್ದರು.ಇದಕ್ಕೂ ಮೊದಲು ನೆಹರು ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.