ಹಿಂದೂ ಉಗ್ರರು: ಪ್ರಧಾನಿ ಎಚ್ಚರಿಕೆ

7

ಹಿಂದೂ ಉಗ್ರರು: ಪ್ರಧಾನಿ ಎಚ್ಚರಿಕೆ

Published:
Updated:

ನವದೆಹಲಿ (ಪಿಟಿಐ): ಧಾರ್ಮಿಕ ಮೂಲಭೂತವಾದವೂ ಒಳಗೊಂಡು ವಿವಿಧ ಮೂಲಗಳು ದೇಶದಲ್ಲಿ ಸೃಷ್ಟಿಸುತ್ತಿರುವ ಆತಂಕಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಈ ಮೂಲಕ ಬಲಪಂಥೀಯ ಗುಂಪುಗಳ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.‘ಆಂತರಿಕ ಭದ್ರತೆ’ ಕುರಿತ ಮುಖ್ಯಮಂತ್ರಿಗಳ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಲೆಗಾಂವ್, ಸಮ್‌ಜೋತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸೀದಿ, ಅಜ್ಮೀರ್ ಸ್ಫೋಟದಂತಹ ಘಟನೆಗಳಲ್ಲಿ ಇತ್ತೀಚೆಗೆ ಕೇಳಿಬಂದಿರುವ ಬಲಪಂಥೀಯ ಸಂಘಟನೆಗಳ ಪಾತ್ರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.2010ರಲ್ಲಿ ಎಡಪಂಥೀಯ ಉಗ್ರರು ನಡೆಸಿರುವ ನಾಗರಿಕರ ಹತ್ಯೆಯ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಆದರೆ ಹಿಂಸಾತ್ಮಕ ಘಟನೆಗಳು ಮತ್ತು ಭದ್ರತಾ ಸೈನಿಕರ ಸಾವಿನ ಸಂಖ್ಯೆ ತಗ್ಗಿಸಿದೆ ಎಂದರು.

ಚಿದಂಬರಂ ಗುಡುಗು

ಗೃಹ ಸಚಿವ ಪಿ.ಚಿದಂಬರಂ ಮಾತನಾಡಿ, ‘ಭಯೋತ್ಪಾದಕ ಕೃತ್ಯಗಳಿಗೆ ಭಾರತ ಇನ್ನೂ ಬಲಿಯಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿರುವ ಕೆಲ ಭಯೋತ್ಪಾದಕ ಚಟುವಟಿಕೆಗಳ ಹಿಂದೆ ಹೊಸ ಸಂಘಟನೆಗಳ ಕೈವಾಡದ ಶಂಕೆ ಇದೆ’ ಎಂದರು.ಭಾರತ- ಪಾಕಿಸ್ತಾನದ ಗಡಿಯ ಮೂಲಕ ದೇಶದ ಒಳಗೆ ನುಸುಳುವ ಪ್ರಯತ್ನ ಇನ್ನೂ ನಿಂತಿಲ್ಲ. ಇದರ ಜೊತೆಗೆ ದೇಶದ ಒಳಗೇ ಹಲವಾರು ಭಯೋತ್ಪಾದಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ’ ಎನ್ನುವ ಮೂಲಕ ಬಲಪಂಥೀಯ ಸಂಘಟನೆಗಳ ಬಗ್ಗೆ ಪ್ರಧಾನಿ ಅವರ ಪರೋಕ್ಷ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು.‘ಇಂತಹ ಸಂಘಟನೆಗಳ ಹೆಸರು ಅಥವಾ ಅವುಗಳ ಉದ್ದೇಶವನ್ನು ನಾವು ಬಯಲು ಮಾಡದೇ ಬಿಡುವುದಿಲ್ಲ. ಯಾವ ಧರ್ಮಕ್ಕೇ ಅವು ಒಳಪಟ್ಟಿರಲಿ ಸಂದೇಹಾಸ್ಪದವಾದ ಧಾರ್ಮಿಕ ಅಥವಾ ಮೂಲಭೂತವಾದದ ಗುರಿಗಳನ್ನು ಹೊಂದಿದ್ದರೆ ಅದನ್ನು ಖಂಡಿಸಲು ನಾನು ಹಿಂಜರಿಯಲಾರೆ. ಪ್ರತಿ ಭಯೋತ್ಪಾದಕ ಸಂಘಟನೆ ಮತ್ತು ಭಯೋತ್ಪಾದಕರನ್ನು ಕಾನೂನಿನ ಅಡಿ ಶಿಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಎಚ್ಚರಿಸಿದರು.ಪ್ರಾಜ್ಞರ ಮೌನಕ್ಕೆ ವಿಷಾದ: 323 ಮಂದಿ ‘ಪೊಲೀಸ್ ಮಾಹಿತಿದಾರರು’ ಸೇರಿದಂತೆ 718 ನಾಗರಿಕರನ್ನು ಎಡಪಂಥೀಯ ಉಗ್ರರು ಕಳೆದ ವರ್ಷ ಕೊಂದು ಹಾಕಿದ್ದಾರೆ. ನಮ್ಮ ಭದ್ರತಾ ಪಡೆಗಳಂತೆ ನಕ್ಸಲ್ ಕೇಡರ್‌ಗಳಿಗೆ ಕಾನೂನಿನ ಹಂಗಿಲ್ಲ. ಕೆಲ ಪ್ರದೇಶಗಳಲ್ಲಿ ಅವು ನ್ಯಾಯಾಧೀಶರು, ತೀರ್ಪುಗಾರರು, ಕೊಲೆಗಾರರಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಅವು ನಡೆಸುವ ಇಂತಹ ಕ್ರೂರ ನಾಗರಿಕ ಹತ್ಯೆಗಳು, ಲೂಟಿಯಂತಹ ವಿಷಯಗಳನ್ನು ತನಿಖೆಗೆ ಒಳಪಡಿಸಲು ನಾಗರಿಕ ಸಮಾಜದ ಯಾವೊಬ್ಬ ಪ್ರತಿನಿಧಿಯೂ ಕರೆ ನೀಡದಿರುವುದು ವಿಷಾದನೀಯ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry