ಮಂಗಳವಾರ, ಜನವರಿ 21, 2020
29 °C
ಅವಳಿ ಗ್ರಾಮ ಅವಳಿ ಧರ್ಮ

ಹಿಂದೂ ಕ್ರೈಸ್ತ ಸಮುದಾಯ ಸಮಾಗಮ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾದಾಮಿ ತಾಲ್ಲೂಕಿನ ಗುಳೇದಗುಡ್ಡ ಸಮೀಪ ಹರಿಯುವ ಮಲಪ್ರಭಾ ನದಿ ದಂಡೆಯ ಮೇಲಿರುವ ಆಸಂಗಿ–ಕಟಗಿನಹಳ್ಳಿ ಎಂಬ ಅವಳಿ ಗ್ರಾಮಗಳು ಹಿಂದೂ ಮತ್ತು ಕ್ರೈಸ್ತ ಅವಳಿ ಧರ್ಮೀಯರ ಸಮಾಗಮ ತಾಣವಾಗಿದೆ. ಧರ್ಮಾನುಸರಣೆಯಲ್ಲಿ ಬೇರೆಬೇರೆಯಾಗಿದ್ದರೂ ಭಾಷೆ, ಆಚರಣೆ, ಸಂಪ್ರದಾಯ, ಉಡುಗೆ, ತೊಡುಗೆ, ನಡೆ, ನುಡಿಯಲ್ಲಿ ಕ್ರೈಸ್ತರು ಹಿಂದುಗಳೊಂದಿಗೆ, ಹಿಂದೂಗಳು ಕ್ರೈಸ್ತರೊಂದಿಗೆ ಬೆರೆತುಹೋಗಿದ್ದಾರೆ. ಗ್ರಾಮದ ‘ಕೃಷಿ ಸಂಸ್ಕೃತಿ’ ವಿಭಿನ್ನ ಧರ್ಮೀಯರನ್ನು ಪರಸ್ಪರ ಒಟ್ಟುಗೂಡಿಸಿದೆ.ಅವಳಿ ಗ್ರಾಮದಲ್ಲಿ ನೆಲೆಸಿರುವ ಕ್ರೈಸ್ತರೆಲ್ಲರೂ ಮೂಲತಃ ಹಿಂದೂ ಧರ್ಮದವಾಗಿದ್ದು, ಶತಮಾನದ ಹಿಂದೆ ಕಾರಣಾಂತರದಿಂದ ಕ್ರೈಸ್ತ ಧರ್ಮದ ಪ್ರಭಾವಕ್ಕೆ ಒಳಗಾಗಿ ಶೇ 50ಕ್ಕೂ ಅಧಿಕ ಹಿಂದೂ ಕುಟುಂಬಗಳು ಕ್ರೈಸ್ತ ಧರ್ಮದ ಅನುಯಾಯಿಗಳಾಗಿ ಮಾರ್ಪಾಟಾಗಿರುವುದು ಗ್ರಾಮದ ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಅವಳಿ ಗ್ರಾಮಗಳ ಜನರ ಧರ್ಮ ಬೇರೆಬೇರೆಯಾದರೂ ಮೂಲ ಸಂಬಂಧ ಇರುವ ಕಾರಣ ಇಬ್ಬರ ನಡುವೆ ಕೊಡು–ಕೊಳ್ಳುವ ಅನ್ಯೋನ್ಯತೆ ಇಂದಿಗೂ ಉಳಿದುಕೊಂಡಿದೆ.ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬ, ವಾಲ್ಮೀಕಿ, ಭಜಂತ್ರಿ, ಮಾದರ, ಕ್ಷತ್ರೀಯ ಸಮಾಜದ ಅನೇಖರು ಕ್ರೈಸ್ತ ಧರ್ಮಾನುಯಾಯಿಗಳಾಗಿ ಮಾರ್ಪಾಟಾದರೂ ಇಂದಿಗೂ ತಮ್ಮ ಮನೆತನದ ಅಡ್ಡ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.ಕ್ರಿಸ್‌ಮಸ್‌–ಕಾರ್ತಿಕೋತ್ಸವ, ಮರಿಯಮ್ಮ­ನವರ ಹಬ್ಬ– ಮಾರಿ ಹಬ್ಬ, ಭಜನಾ ಕಾರ್ಯಕ್ರಮ– ಮೊಹರಂ, ದುರ್ಗಾ– ದ್ಯಾಮವ್ವನ ಜಾತ್ರೆಯನ್ನು ಎರಡೂ ಧರ್ಮಿಯರು ಒಂದುಗೂಡಿ ಆಚರಿಸುತ್ತಾರೆ. ಗ್ರಾಮದ ಪ್ರತಿ ಮನೆಯಿಂದಲೂ ಪಟ್ಟಿ ಎತ್ತಿ (ಹಣ, ದವಸ, ಧಾನ್ಯ ಸಂಗ್ರಹಿಸಿ) ಹಬ್ಬ, ಉತ್ಸವ, ಕಾರ್ಯಕ್ರಮ ಆಚರಿಸುತ್ತಾರೆ. ಹಿಂದುಗಳು ಕ್ರೈಸ್ತರನ್ನು, ಕ್ರೈಸ್ತರು ಹಿಂದುಗಳನ್ನು ಮಾವ, ಕಾಕಾ, ಚಿಗವ್ವ, ಚಿಕ್ಕಪ್ಪ ಎಂಬ ಸಂಬಂಧ ಸೂಚಕವಾಗಿಯೇ ಕರೆಯುತ್ತಾರೆ.ಗ್ರಾಮದಲ್ಲಿ ಯಾವುದೇ ವಿವಾದ, ಭಿನ್ನಾಭಿಪ್ರಾಯ ಎದುರಾದರೂ ಪೊಲೀಸ್‌, ಕೋರ್ಟ್‌, ಕಚೇರಿಯ ಮೆಟ್ಟಿಲೇರುವ ಬದಲು ಗ್ರಾಮದ ಹಿರಿಯರ ಸಮ್ಮುಖದಲ್ಲೇ ಬಗೆಹರಿಸಿಕೊಳ್ಳುತ್ತಾರೆ.ಶತಮಾನದ ಹಿಂದೆ ಅವಳಿ ಗ್ರಾಮಕ್ಕೆ ಕ್ರೈಸ್ತ ಮಿಷನರಿ ಪ್ರವೇಶವಾದ ಬಳಿಕ ಜನರು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಸರ್ಕಾರಿ, ಖಾಸಗಿ ಉದ್ಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದಾರೆ.ಆಸಂಗಿ ಗ್ರಾಮದವರೇ ಆದ ಪುಷ್ಪಾಲತಾ ಜಯಮ್ಮ ಯರಗುಂಟಿ, ಜಯಶೀಲಾ ಶಾಂತವ್ವ ಯರಗುಂಟಿ, ಜ್ಯೋತಿ ಮರಿಯಪ್ಪ ಗೌಡರ ಅವರು ಕ್ರೈಸ್ತ ಸನ್ಯಾಸಿನಿಯರಾಗಿ ಸೇವೆಸಲ್ಲಿಸುತ್ತಿರುವುದು ವಿಶೇಷವಾಗಿದೆ.ಆಸಂಗಿಯ ಸೋಮನಗೌಡ ಅವರ ಮಕ್ಕಳಾದ ಇಸ್ರೇಲ್‌ಗೌಡ, ಭೀಮನಗೌಡ, ಬೈಲನಗೌಡ ಹಾಗೂ ಇಸ್ರೇಲ್‌ಗೌಡ ಅವರ ಮಗ ಶಾಂತಪ್ಪಗೌಡ, ಶಾಂತಪ್ಪಗೌಡ ಅವರ ಮಗ ಕಮಲಪ್ಪಗೌಡ, ಕಮಲಪ್ಪಗೌಡ ಅವರ ಮಗ ಪ್ರಕಾಶಗೌಡ ಮೂಲತಃ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಆದರೆ, ಇಂದು ಅವರ ಹೆಸರುಗಳು ಮಾತ್ರ ವಾಲ್ಮೀಕಿ ಜಾತಿಯನ್ನು ಸೂಚಿಸುತ್ತಿದ್ದರೂ ಕ್ರೈಸ್ತ ಧರ್ಮಿಯರಾಗಿ (ಪ್ರೊಟೆಸ್ಟೆಂಟ್‌) ಜೀವನ ಸಾಗಿಸುತ್ತಿದ್ದಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರಕಾಶ ಕಮಲಪ್ಪಗೌಡ, ನಮ್ಮ ಮುತ್ತಾತ (ನಾಲ್ಕು ತಲೆಮಾರು) ಸೋಮನಗೌಡ ಮೊದಲು ಕ್ರೈಸ್ತ ಧರ್ಮಕ್ಕೆ ಸೇರ್ಪಡೆಯಾದರು. ಅಂದಿನಿಂದ ನಮ್ಮ ಅಜ್ಜ, ಅಪ್ಪ, ದೊಡ್ಡಪ್ಪ ಕ್ರೈಸ್ತರಾಗಿಯೇ ಮುಂದುವರಿದಿದ್ದಾರೆ. ಹಿಂದುಗಳೊಂದಿಗೆ ವಿವಾಹ ಸಂಬಂಧ ಬೆಳಸುವುದಿಲ್ಲ ಆದರೆ, ಮನೆಯ ಮತ್ತೆಲ್ಲ ಆಚರಣೆ ಸಂಪ್ರದಾಯಗಳು ಹಿಂದು–ಕ್ರೈಸ್ತ ಸಮ್ಮಿಲನದಂತಿವೆ. ಗ್ರಾಮದಲ್ಲಿ ಮೂರ್ನಾಲ್ಕು ತಲೆಮಾರುಗಳ ಹಿಂದಿನವರು ಧರ್ಮಾಂತರವಾಗಿದ್ದಾರೆ. ಇದುವರೆಗೆ ಯಾವುದೇ ಮತಾಂತರ ಪ್ರಕ್ರಿಯೆಗಳು ನಡೆದಿಲ್ಲ ಎಂದರು.‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆಸಂಗಿ ಗ್ರಾಮದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಾಲಪ್ಪ ಬೈಲಪ್ಪ ಬಗಲಿ, ‘ಅವಳಿ ಗ್ರಾಮದಲ್ಲಿ ಅವಳಿ ಧರ್ಮಿಯರು ಜಾತಿಬೇಧವಿಲ್ಲದೇ ಒಂದೇ ಮನೆತನದವರಂತೆ ಬಾಳ್ವೆ ಮಾಡುತ್ತೇವೆ, ಅವರವರ ಮನೆಯಲ್ಲಿ ಅವರವರ ಧರ್ಮ, ಮನೆ ಹೊರೆಗೆ ಬಂದ ಮೇಲೆ ಎಲ್ಲರದೂ ಒಂದೇ ಧರ್ಮ ಎಂಬ ಮನೋಭಾವ ಗ್ರಾಮದ ಪ್ರತಿಯೊಬ್ಬರದ್ದಾಗಿದೆ. ಹಿಂದುಗಳ ಆಚರಣೆಯಲ್ಲಿ ಕ್ರೈಸ್ತರು, ಕ್ರೈಸ್ತರ ಆಚರಣೆಯಲ್ಲಿ ಹಿಂದೂಗಳು ಹಾಗೂ ಹಿಂದೂ–ಕ್ರೈಸ್ತರು ಸೇರಿ ಮೊಹರಂ ಆಚರಿಸುವಷ್ಟು ಸೌಹಾರ್ದತೆ ಗ್ರಾಮದಲ್ಲಿದೆ ಎಂದು ಹೇಳಿದರು.ಅವಳಿ ಗ್ರಾಮಗಳ ವೈಶಿಷ್ಟ್ಯತೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಆಸಂಗಿ ಕೆಥೋಲಿಕ್‌ ಚರ್ಚ್‌ನ ಧರ್ಮಗುರು ಫಾದರ್‌ ರಾಜಪ್ಪ ಅರುಳಪ್ಪ, 1901ರಲ್ಲಿ ಆಸಂಗಿಯಲ್ಲಿ ಕ್ರೈಸ್ತ ಮಿಷನರಿ ಆರಂಭಗೊಂಡಿತು. ಫಾದರ್‌ ಫ್ರಾಂಕೇನ್‌ ಮೊದಲ ಧರ್ಮಗುರುವಾಗಿ ನೇಮಕವಾಗಿದ್ದರು. 1901–02ರಲ್ಲೇ ಅವಳಿ ಗ್ರಾಮದಲ್ಲಿ 80 ಜನ ಕೆಥೋಲಿಕ್‌ ಕ್ರೈಸ್ತರಿದ್ದರು ಎಂದು ತಿಳಿದುಬಂದಿದೆ. 1905ರಲ್ಲೇ ಕನ್ನಡ ಮಾಧ್ಯಮದಲ್ಲಿ ಸಂತ ಝೆವಿಯರ್‌ ಶಾಲೆ, ಒಂದು ಅನಾಥಾಶ್ರಮವನ್ನು ಆಸಂಗಿಯಲ್ಲಿ ತೆರೆಯಲಾಗಿತ್ತು. ಬಳಿಕ ಶಾಲೆಯನ್ನು ಗುಳೇದಗುಡ್ಡಕ್ಕೆ 1914ರಲ್ಲಿ ಸ್ಥಳಾಂತರಿಸಲಾಯಿತು ಎಂದು ನೆನಪಿಸಿಕೊಂಡರು.ಆಸಂಗಿಯಲ್ಲಿ ಸಂತ ಫ್ರಾನ್ಸಿಸ್‌ ಝೆವಿಯರ್‌ ದೇವಾಲಯ (ಕೆಥೋಲಿಕ್‌) ಮತ್ತು ಮೈಗ್ಲೆ ಮೆಮೊರಿಯಲ್‌ ಸಿಎಸ್‌ಐ (ಪ್ರೊಟೆಸ್ಟೆಂಟ್‌) ಚರ್ಚ್‌ಗಳಿವೆ. ಪ್ರತಿನಿತ್ಯ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದರು.ಧರ್ಮರಹಿತ, ಜಾತಿರಹಿತ ಸೇವೆ, ಆರೋಗ್ಯ ಸೇವೆ, ಶೈಕ್ಷಣಿಕ ಸೇವೆಯ ಮೂಲಕ ಅವಳಿ ಗ್ರಾಮಸ್ಥರ ಮನದಲ್ಲಿ ಕ್ರೈಸ್ತ ಧರ್ಮ ಭದ್ರವಾಗಿ ಬೇರೂರಿದೆ. ಆಸಂಗಿಯಲ್ಲಿ 275, ಕಟಗಿನಹಳ್ಳಿಯಲ್ಲಿ 373 ಸೇರಿದಂತೆ ಒಟ್ಟು 648 ಜನ ಕ್ರೈಸ್ತ ಅನುನಾಯಿಗಳಿದ್ದಾರೆ.

ಕೆಥೋಲಿಕ್‌ ಚರ್ಚ್‌ ವತಿಯಿಂದ ಆಶಾದೀಪ ಆರೋಗ್ಯ ಕೇಂದ್ರ ಮತ್ತು ಸಮಾಜಸೇವಾ ಕೇಂದ್ರ, ಶಿಶುವಿಹಾರ, ಪ್ರಾಥಮಿಕ ಶಾಲೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.2009ರಲ್ಲಿ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗೆ ಆಸಂಗಿ ಕೆಥೋಲಿಕ್‌ ಚರ್ಚ್‌ ವತಿಯಿಂದ ವಸ್ತ್ರ, ಆಹಾರ, ಆಸರೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದು ಸ್ಮರಿಸಿದರು.ಇದೀಗ ಅವಳಿ ಗ್ರಾಮದ ಅವಳಿ ಚರ್ಚ್‌ಗಳು ವಿದ್ಯುತ್‌ದೀಪಗಳಿಂದ ಕಂಗೊಳಿಸುತ್ತಿವೆ. ಬಾಲ ಯೇಸುವಿನ ಪ್ರತಿಕೃತಿ, ಕ್ರಿಸ್‌ಮಸ್‌ ಟ್ರೀ ಹಳ್ಳಿಗರ ಕಣ್ಮನ ಸೆಳೆಯುತ್ತಿವೆ. ಪುಟ್ಟ ಹಳ್ಳಿಯ ಜನ ಕ್ರಿಸ್‌ಮಸ್‌ ಆಚರಣೆಯ ಸಂಭ್ರಮದಲ್ಲಿದ್ದಾರೆ.

 

ಪ್ರತಿಕ್ರಿಯಿಸಿ (+)