ಶನಿವಾರ, ಜೂನ್ 19, 2021
27 °C
ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣ: ಆಸ್ಟ್ರೇಲಿಯಾ ಉಪಗ್ರಹ ಸೆರೆ ಹಿಡಿದ ದೃಶ್ಯ

ಹಿಂದೂ ಮಹಾಸಾಗರದಲ್ಲಿ ಎರಡು ಶಂಕಾಸ್ಪದ ವಸ್ತು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್/ಕ್ವಾಲಾಲಂಪುರ (ಪಿಟಿಐ/­ಐಎಎನ್‌ಎಸ್‌): ನಿಗೂಢವಾಗಿ ಕಣ್ಮರೆ­ಯಾಗಿರುವ ಮಲೇಷ್ಯಾ ವಿಮಾನದ ಬಗ್ಗೆ ಗುರುವಾರ ಮಹತ್ವದ ಸುಳಿವು ದೊರಕಿದೆ ಎಂದು ಆಸ್ಟ್ರೇಲಿಯಾ ತಿಳಿಸಿದೆ. ಆದರೆ, ಉಪಗ್ರಹವು ಆಳ ಸಮುದ್ರದಲ್ಲಿ ಪತ್ತೆ ಮಾಡಿರುವ ದೊಡ್ಡ ಮತ್ತು ಚಿಕ್ಕ ಗಾತ್ರದ ಎರಡು ವಸ್ತುಗಳು ವಿಮಾನದ ಭಗ್ನಾವಶೇಷವೇ ಎನ್ನುವುದು ಖಾತರಿ ಪಟ್ಟಿಲ್ಲ.ಪರ್ತ್‌ ನಗರದ ನೈಋತ್ಯಕ್ಕೆ ಸುಮಾರು 2500 ಕಿ.ಮೀ. ದೂರದಲ್ಲಿ ಹಿಂದೂ ಮಹಾಸಾಗರದ ದಕ್ಷಿಣ ಭಾಗದ ಸಾವಿರಾರು ಮೀಟರ್‌ ಆಳ ಸಮುದ್ರದಲ್ಲಿ 24 ಮೀಟರ್‌ (80 ಅಡಿ) ಉದ್ದದ ಮತ್ತು ಐದು ಮೀಟರ್‌ (15 ಅಡಿ) ಉದ್ದದ ಎರಡು  ವಸ್ತು­ಗಳಿರುವ ಚಿತ್ರವನ್ನು ಉಪಗ್ರಹವು ನಾಲ್ಕು ದಿನದ ಹಿಂದೆ ಸೆರೆ ಹಿಡಿದಿದೆ. ದೊಡ್ಡ ಗಾತ್ರದ ವಸ್ತು ವಿಮಾನದ ರೆಕ್ಕೆಯ ಒಂದು ಭಾಗ ಇರಬಹುದು ಎಂದು ಶಂಕಿಸಲಾಗಿದೆ.ಪತ್ತೆಯಾಗಿರುವ ವಸ್ತುವನ್ನು ಹೆಕ್ಕಿ ತೆಗೆಯಲು ಆಸ್ಟ್ರೇಲಿಯಾ ರಾಯಲ್‌ ನೌಕಾಪಡೆಯ ‘ಹಮಾಸ್‌’ ಹಡಗು, ಸರಕು ಸಾಗಣೆ ಜಹಜುಗಳು ಹಾಗೂ ವಾಯುಪಡೆಯ ‘ಓರಿಯನ್‌’ ಸೇರಿ ನಾಲ್ಕು ವಿಮಾನಗಳು ತೆರಳಿವೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.ಈ ಮಧ್ಯೆ, ವಸ್ತುಗಳು ಪತ್ತೆಯಾದ ಸಾಗರ ಮಧ್ಯದ ಸ್ಥಳಕ್ಕೆ ನಾರ್ವೆ ದೇಶದ ಹಡಗೂ ಹೋಗಿದೆ. ಸಂಸತ್ತಿನಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಹೇಳಿಕೆ: ಸಂದೇಹಾಸ್ಪದ ವಸ್ತುಗಳ ಪತ್ತೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್‌ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಿ, ‘ನಾಪತ್ತೆಯಾದ ವಿಮಾನದ ಬಗ್ಗೆ ವಿಶ್ವಾಸಾರ್ಹ ಎನ್ನಬಹುದಾದ ಮಾಹಿತಿ ದೊರಕಿದೆ ಎಂದು ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌ ಅವರಿಗೆ  ತಿಳಿಸಲಾಗಿದೆ’ ಎಂದು ಹೇಳಿದರು.‘ಪತ್ತೆಯಾದ ವಸ್ತುಗಳು ನಾಪತ್ತೆ­ಯಾದ ವಿಮಾನದ ಅವಶೇಷಗಳಲ್ಲ­ದಿ­ರುವ ಸಾಧ್ಯತೆ ಇದೆ. ಈ ವಸ್ತುಗಳನ್ನು ಹೊರಕ್ಕೆ ತೆಗೆದ ನಂತರವಷ್ಟೆ ಇದು ಸ್ಪಷ್ಟಗೊಳ್ಳಲಿದೆ’ ಎಂದರು.ಮಹತ್ವದ ಪ್ರಗತಿ: ‘ನಾಪತ್ತೆಯಾದ ವಿಮಾನ ಶೋಧ ಕಾರ್ಯದಲ್ಲಿ ಇದು­ವರೆ­ಗಿನ ಮಹತ್ವದ ಪ್ರಗತಿ ಇದು’ ಎಂದು ಆಸ್ಟ್ರೇಲಿಯಾ ಕಡಲಗಡಿ ರಕ್ಷಣಾ ಪ್ರಾಧಿಕಾರ (ಎಎಂಎಸ್‌ಎ) ಅಧಿಕಾರಿ ಜಾನ್‌ ಯಂಗ್‌ ತಿಳಿಸಿದರು.ಆದರೆ, ಉಪಗ್ರಹ ಸೆರೆ ಹಿಡಿದಿರುವ ವಸ್ತುವು ಕಣ್ಮರೆಯಾದ ವಿಮಾನದ ಅವಶೇಷವೇ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕಿದೆ. ಏಕೆಂದರೆ ಸರಕು ಸಾಗಣೆ ಹಡಗುಗಳಿಂದಲೂ ಹಲವು ಬಾರಿ ಸಾಮಗ್ರಿಗಳ ಪೆಟ್ಟಿಗೆಗಳು ಸಮುದ್ರ­ದೊಳಗೆ ಬಿದ್ದಿರುತ್ತವೆ ಎಂದರು.‘ಉಪಗ್ರಹವು ಪತ್ತೆಹಚ್ಚಿರುವ ವಸ್ತು­ಗಳ ದೃಶ್ಯ ಅಸ್ಪಷ್ಟವಾಗಿದ್ದರೂ, ತಜ್ಞರು ವಸ್ತುಗಳು ಕಂಡಿರುವುದು ನಿಜ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ’ ಎಂದು ಹೇಳಿದರು.

ರಕ್ಷಣಾ ಪಡೆ ಮುಖ್ಯಸ್ಥರೊಂದಿಗೆ ರಜಾಕ್‌ ಸಭೆ: ಆಸ್ಟ್ರೇಲಿಯಾ ನೀಡಿರುವ ಸುಳಿವಿನ ಹಿನ್ನೆಲೆಯಲ್ಲಿ ಮಲೇಷ್ಯಾ ಪ್ರಧಾನಿ ಅಬ್ದುಲ್‌ ರಜಾಕ್‌ ಅವರು ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ.ಈ ಮಧ್ಯೆ, ‘ಪತ್ತೆಯಾಗಿರುವ ವಸ್ತು­ಗಳು ಕಣ್ಮರೆಯಾಗಿರುವ ‘ಎಂಎಚ್‌­370’ ವಿಮಾನಕ್ಕೆ ಸಂಬಂಧಿಸಿದ್ದೆ ಎಂಬುದನ್ನು ಖಾತರಿಗೊಳಿಸಿಕೊಳ್ಳ­ಬೇಕಿದೆ’ ಎಂದು ಮಲೇಷ್ಯಾದ ರಕ್ಷಣಾ ಮತ್ತು ಸಾರಿಗೆ ಸಚಿವ ಹಿಶಾಮುದ್ದೀನ್‌ ಹುಸೇನ್‌ ಅವರು ಗುರುವಾರ ಸುದ್ದಿ­ಗಾರರಿಗೆ ತಿಳಿಸಿದರು.‘ಈ ವಸ್ತುಗಳು ಪತ್ತೆಯಾದ ಸ್ಥಳಕ್ಕೆ ತೆರಳಿರುವ ಆಸ್ಟ್ರೇಲಿಯಾ ವಾಯು­ಪಡೆ­ಯ ಒಂದು ವಿಮಾನವು ಹವಾಮಾನ ವೈಪರೀತ್ಯ ಕಾರಣ ವಸ್ತುಗಳನ್ನು ಗುರು­ತಿ­ಸಲು ಆಗಿಲ್ಲ. ಆದರೆ, ಉಳಿದ ವಿಮಾನ­ಗಳು ಹುಡುಕಾಟದಲ್ಲಿ ತೊಡಗಿವೆ’ ಎಂದರು. ‘ಈ ವಿಮಾನಗಳು ವಸ್ತುಗಳು, ಪತ್ತೆಯಾದ ಸ್ಥಳದ ಗುರುತಿಗೆ ‘ಡಾಟಾ ಮಾರ್ಕರ್‌ ಬಾಲ್ಸ್‌’ಗಳನ್ನು (ತೇಲುತ್ತಿ­ರುವ ಇಲ್ಲವೆ ಮುಳುಗಿರುವ ವಸ್ತು ಅಥವಾ ರಾಸಾಯನಿಕಗಳು ಖಚಿತ­ವಾಗಿ ಏಲ್ಲಿವೆ ಎನ್ನುವುದನ್ನು ಪತ್ತೆ ಮಾಡುವ ವಿದ್ಯುನ್ಮಾನ ಸಾಧನ) ಹಾಕಲಿವೆ’ ಎಂದರು. ‘ಈ ವಸ್ತುಗಳು ನಾಪತ್ತೆ­ಯಾದ ವಿಮಾನದ ಅವಶೇಷವೇ ಆಗಿದ್ದ ಪಕ್ಷ­ದಲ್ಲಿ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಅನ್ನು ತುರ್ತಾಗಿ ಪತ್ತೆ ಮಾಡಬೇಕಾಗುತ್ತದೆ’ ಎಂದರು.ಅಧಿಕಾರಿಗಳ ಎಚ್ಚರಿಕೆ: ನಾಪತ್ತೆಯಾದ ವಿಮಾನದ ಬಗ್ಗೆ ಇದುವರೆಗೆ ಅನೇಕ ಸುಳಿವು, ಮಾಹಿತಿಗಳು ಕೇಳಿಬಂದಿವೆ. ಆದರೆ, ಅದ್ಯಾವುದು ಖಚಿತವಾದವಲ್ಲ. ಆದ್ದರಿಂದ ಈಗ ದೊರಕಿರುವ ವಸ್ತು­ಗಳನ್ನು ನಾಪತ್ತೆಯಾದ ವಿಮಾನದ್ದು ಎಂಬ ಆತುರದ ನಿರ್ಧಾರಕ್ಕೆ ಬರುವುದು ಬೇಡ ಎಂದು ಅಧಿಕಾರಿಗಳು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.‘ಪೈಲಟ್‌ ಜಹರಿ ಅಹ್ಮದ್‌ ಷಾ ಅವರ ಮನೆಯಲ್ಲಿ ವಶಪಡಿಸಿಕೊಂಡ ‘ಸಿಮ್ಯು­ಲೇಟರ್‌’ ಅನ್ನು (ಸಂಕೀರ್ಣ­ವಾದ ವ್ಯವ­ಸ್ಥೆ­ಯೊಂದರ ಕಾರ್ಯಾ­ಚರಣೆ­ಯನ್ನು ಅನುಕರಿಸುವ ಸಾಧನ) ದೇಶ ಮತ್ತು ವಿದೇಶಗಳ ತಜ್ಞರು ಪರಿಶೀಲಿಸು­ತ್ತಿ­ದ್ದಾರೆ. ಈ ಬಗ್ಗೆ ಮಾಹಿತಿ ದೊರೆತ­ಕೂಡಲೇ ಅದನ್ನು ಪ್ರಕಟಿಸ­ಲಾಗು­ವುದು’ ಎಂದು ಹಿಶಾಮುದ್ದೀನ್‌ ಹೇಳಿದರು.ಚೀನಾಕ್ಕೆ ತೆರಳಿದ ಉನ್ನತ ಮಟ್ಟದ ನಿಯೋಗ: ‘ಉನ್ನತ ಮಟ್ಟದ ನಿಯೋ­ಗವು ಗುರುವಾರ ಸಂಜೆ ಚೀನಾಕ್ಕೆ ಪ್ರಯಾಣ ಬೆಳೆಸಿದೆ. ವಿಮಾನದಲ್ಲಿದ್ದ ಚೀನಾ ಪ್ರಯಾಣಿಕರ ಕುಟುಂಬದವ­ರನ್ನು ಈ ನಿಯೋಗ ಭೇಟಿ ಮಾಡಿ, ಸಮಾಧಾನ ಹೇಳಲಿದೆ’ ಎಂದರು.ಈ ಮಧ್ಯೆ, ಪತ್ತೆಯಾಗಿರುವ ವಸ್ತು­ಗಳು ಕಣ್ಮರೆಯಾದ ವಿಮಾನದ್ದು ಎಂದು ಖಾತರಿ ಪಟ್ಟರೆ ಪ್ರಯಾಣಿಕರ ಸಮೀಪದ ಬಂಧುಗಳನ್ನು ಆಸ್ಟ್ರೇಲಿ­ಯಾಕ್ಕೆ ಕಳುಹಿಸಲಾಗುವುದು ಎಂದು ಮಲೇಷ್ಯಾ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಹ್ಮದ್ ಜೌಹರಿ ಯಾಹ್ಯಾ ತಿಳಿಸಿದರು.ನಾಪತ್ತೆಯಾದ ವಿಮಾನ ಆರಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಹಾರಾಟ ನಡೆಸಿರುವ ಸಾಧ್ಯತೆ ಇದ್ದರೂ ಪತ್ತೆಯಾಗಿಲ್ಲವೆಂದರೆ ಅದು ದಕ್ಷಿಣ ಭಾಗದ ಸಾಗರದಲ್ಲೇ ಇರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.26 ರಾಷ್ಟ್ರಗಳು ಅತ್ಯಾಧುನಿಕ ಸಾಧನಾ ಸಲಕರಣೆಯನ್ನು ಹೊಂದಿಸಿ­ಕೊಂಡು 13 ದಿನಗಳಿಂದ ಅವಿರತ ಶೋಧ ಕಾರ್ಯ ನಡೆಸುತ್ತಿವೆ.

ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಆಸ್ಟ್ರೇಲಿಯಾ ನೇತೃತ್ವದಲ್ಲಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ನ್ಯೂಜಿಲೆಂಡ್‌, ಅಮೆರಿಕ ತಂಡಗಳು ಭಾಗವಹಿಸಿವೆ. ಈ ವಲಯದಲ್ಲಿ ಆರು ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಿವೆ. ಒಟ್ಟಾರೆ  ಎಲ್ಲಾ ದೇಶಗಳ ವ್ಯಾಪ್ತಿಯಲ್ಲಿ ಇದು­ವರೆಗೆ 70.7 ಲಕ್ಷ ಚದರ ಕಿ.ಮೀ.ನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.ಇಂಡೊನೇಷ್ಯಾ ಪ್ರಯಾಣಿಕರಿಗೆ ಉಗ್ರರ ನಂಟಿಲ್ಲ

ನಾಪತ್ತೆಯಾದ ವಿಮಾನದಲ್ಲಿದ ತನ್ನ ಏಳು ಪ್ರಯಾಣಿಕರಿಗೆ ಉಗ್ರರ ನಂಟಿಲ್ಲ ಎಂದು ಇಂಡೊನೇಷ್ಯಾ ಗುರುವಾರ ಸ್ಪಷ್ಟಪಡಿಸಿದೆ.

‘ನಮ್ಮ ದೇಶದ ಪ್ರಯಾಣಿಕರಿಗೆ  ಉಗ್ರರ ನಂಟಿಲ್ಲ ಎಂಬುದನ್ನು ಯಾವುದೇ ಊಹಾಪೋಹಕ್ಕೆ ಅವಕಾಶ ಇಲ್ಲದಂತೆ ಮಲೇಷ್ಯಾಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದು ಇಂಡೊನೇಷ್ಯಾ ಅಧ್ಯಕ್ಷ ಸುಸಿಲೊ ಬಾಂಬಾಂಗ್‌ ಯುಧೊಯೊನೊ ಅವರು ತಿಳಿಸಿದ್ದಾರೆ.ಶೋಧ ಕಾರ್ಯಕ್ಕೆ ನಿಯೋಜನೆ– ಒಬಾಮ

(ವಾಷಿಂಗ್ಟನ್‌ ವರದಿ): ವಿಮಾನ ಪತ್ತೆಗೆ ಕೇಂದ್ರೀಯ ತನಿಖಾ ಸಂಸ್ಥೆ (ಎಫ್‌ಬಿಐ) ಸೇರಿದಂತೆ ಲಭ್ಯವಿರುವ ಸದೃಢವಾದ ಸಂಪನ್ಮೂಲಗಳನ್ನೇ ನಿಯೋಜಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ವಾಹಿನಿಗೆ ಬುಧವಾರ  ಸಂದರ್ಶನ ನೀಡಿದ ಅವರು,  ‘ವಿಮಾನ ನಾಪತ್ತೆಯಿಂದ ಆತಂಕಕ್ಕೆ ಒಳಗಾಗಿರುವ ಕುಟುಂಬಗಳಿಗೆ ನಮ್ಮ ಸಹಾನುಭೂತಿ ಇದೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.