ಶನಿವಾರ, ಮೇ 28, 2022
28 °C

ಹಿಂದೆ ಸರಿದ ಎಚ್‌ಡಿಕೆ: ನಾಗರಾಜ್‌ಗೆ ಟಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ:  ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ. ಬದಲಿಗೆ ಪಕ್ಷದ ಸ್ಥಳೀಯ ಮುಖಂಡ ಸಿಂ.ಲಿಂ.ನಾಗರಾಜು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ‘ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಸಿಲುಕಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದಾಗಿ ಒಂದೆರೆಡು ಬಾರಿ ಹೇಳಿಕೆ ನೀಡಿರುವೆ. ಆದರೆ ಈ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ ಎಂದು  ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದರು.‘ಸಿಂ.ಲಿಂ.ನಾಗರಾಜು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಈ ವೇಳೆಯಲ್ಲಿ ನಾನು ಚನ್ನಪಟ್ಟಣಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೆ ಕಾರ್ಯಕರ್ತರು ಪುನಃ ಒತ್ತಡ ಹೇರಿ ಗಲಾಟೆ ಮಾಡುತ್ತಾರೆ. ಹಾಗಾಗಿ ಸ್ಥಳೀಯ ಮುಖಂಡರ ಜತೆಗೂಡಿ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವರು’ ಎಂದು ಹೇಳಿದರು. ಕಾರ್ಯಕರ್ತರ ಒತ್ತಡ ಏಕೆ?: ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮಯದಲ್ಲಿ ಚನ್ನಪಟ್ಟಣದ ಜನತೆ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮುಂದಿನ ಉಪ ಚುನಾವಣೆಯಲ್ಲಿ ತಾನೇ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು.ಇದಕ್ಕೆ ಪೂರಕವಾಗಿ ಚನ್ನಪಟ್ಟಣದ ಮತದಾರರು ಐದಕ್ಕೆ ಐದು ಜಿ.ಪಂ ಕ್ಷೇತ್ರಗಳಲ್ಲಿ ಹಾಗೂ 19ರಲ್ಲಿ 15 ತಾ.ಪಂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು.

ಕುಮಾರಸ್ವಾಮಿ ಅವರ ಮಾತಿನಂತೆ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಆರಿಸಿದ್ದೇವೆ. ಹಾಗಾಗಿ ಅವರು ತಾವು ಕೊಟ್ಟ ಮಾತಿನಂತೆ ಚನ್ನಪಟ್ಟಣದಿಂದ ಕಣಕ್ಕಿಳಿಯಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹೇರಿದ್ದರು. ಆದ್ದರಿಂದ ಕುಮಾರಸ್ವಾಮಿ ಅವರು ತಾವೇ ಸ್ಪರ್ಧಿಸುವುದಾಗಿ ದೆಹಲಿ, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಟೀಕೆ ಮಾಡಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದವರು ಬಿಟ್ಟರೆ ಬೇರೆ ಯಾರಿಗೂ ಜೆಡಿಎಸ್‌ನಲ್ಲಿ ಅಭ್ಯರ್ಥಿಯಾಗುವ ಸಾಮರ್ಥ್ಯ ಇಲ್ಲವೇ ಎಂದು ಛೇಡಿಸಿದ್ದರು. ದೇವೇಗೌಡ ಅವರು ಸಹ ಕುಮಾರಸ್ವಾಮಿ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು.ಇದರಿಂದ ಕ್ಷೇತ್ರದ ಮತದಾರರಲ್ಲಿ ಗೊಂದಲ ಉಂಟಾಗಿತ್ತು. ಇದೀಗ ಸ್ಥಳೀಯ ಮುಖಂಡರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಹೇಳುವ ಮೂಲಕ ಮತದಾರರಲ್ಲಿನ ಗೊಂದಲವನ್ನು ಕುಮಾರಸ್ವಾಮಿ ನಿವಾರಣೆ ಮಾಡಿದ್ದಾರೆ.ಸಿಂ.ಲಿಂ.ನಾಗರಾಜು ಯಾರು ?: ಚನ್ನಪಟ್ಟಣ ಬಳಿಯ ಸಿಂಗರಾಜೀಪುರದ ಲಿಂಗಪ್ಪನವರ ಮಗ ನಾಗರಾಜು ಅವರು ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ತಾಲ್ಲೂಕಿನಲ್ಲಿ ಪಕ್ಷ ಸಂಘಟಿಸಿದವರು ಇವರು. ಈ ಭಾಗದಲ್ಲಿ ನಡೆದ ರೈತ ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಂ.ಲಿಂ.ನಾಗರಾಜು ಅವರು, ‘ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಪಕ್ಷದ ಮುಖಂಡರಿಂದ ಮಂಗಳವಾರ ಮಧ್ಯಾಹ್ನ ನನಗೆ ಸೂಚನೆ ಬಂದಿದೆ. ಅದರಂತೆ ಈಗ ಸಿದ್ಧತೆ ನಡೆಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದರು. ಮಧ್ಯಾಹ್ನದಿಂದಲೇ ಅವರು ತಮ್ಮ ಆಪ್ತ ವಲಯದವರ ಜತೆಗೂಡಿ ಸಭೆಗಳನ್ನು ಮಾಡಿ ಕಾರ್ಯತಂತ್ರ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದರು.ನಾಲ್ಕು ನಾಮಪತ್ರ


ಪಕ್ಷೇತರರಾಗಿ ನಾಲ್ವರು ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದರು. ಅಶ್ರಫ್, ಜೆ.ಟಿ.ಪ್ರಕಾಶ್, ಸುಜೇಂದ್ರ ರಾಜೇ ಅರಸ್ ಹಾಗೂ ಮೌಲಾ ವಿಜಮಿರುದ್ದೀನ್ (ನ್ಯಾಷನಲ್ ಡೆವೆಲಪ್ ಪಾರ್ಟಿ) ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ 8 ಜನ 10 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಕಾಂಗ್ರೆಸ್ ಅಭ್ಯರ್ಥಿ ರಘುನಂದನ್ ರಾಮಣ್ಣ ಹಾಗೂ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಜಗಳೂರು ಕ್ಷೇತ್ರದಿಂದ ಹುಚ್ಚವನಹಳ್ಳಿ ಮಂಜುನಾಥ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದ್ದು, ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.