ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

7

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

Published:
Updated:

ಅಲಹಾಬಾದ್, ಉತ್ತರ ಪ್ರದೇಶ (ಪಿಟಿಐ): ಉತ್ತರ ಪ್ರದೇಶ ಲೋಕಸೇವಾ ಆಯೋಗದ  (ಯುಪಿಪಿಎಸ್‌ಸಿ) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ‘ದಮನ’ಗೊಳಿಸಲು ಪೊಲೀಸರು ಗುರುವಾರ ಲಾಠಿ ಬೀಸುವ ಜೊತೆಗೆ ಜಲಫಿರಂಗಿಗಳನ್ನು ಪ್ರಯೋಗಿಸಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದರು. ಅಲ್ಲದೇ  ಡಿಎಸ್‌ಪಿ ವಾಹನಕ್ಕೆ ಬೆಂಕಿ ಹಚ್ಚಿದರು.

‘ಭ್ರಷ್ಟಾಚಾರ ಮುಕ್ತಿ ಮೋರ್ಚಾ’ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು, ಅಲಹಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಧ್ಯಾಹ್ನದ ವೇಳೆಗೆ  ಪ್ರತಿಭಟನೆ ಆರಂಭಿಸಿದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ  ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.

ಆದರೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ಅಲ್ಲಿಂದ ಕೆಲ ಕಿಲೋ ಮೀಟರ್‌ಗಳಷ್ಟು ದೂರುವಿರುವ ಯುಪಿಪಿಎಸ್‌ಸಿ ಪ್ರಧಾನ ಕಚೇರಿಯತ್ತ ಹೊರಟರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದ ಪೊಲೀಸರು, ವಿದ್ಯಾರ್ಥಿಗಳ ಗುಂಪಿಗೆ ಚದುರುವಂತೆ ಕೋರಿದರು.

ಇದರಿಂದ ಕೆರಳಿದ ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್  ಹಾಗೂ ಜಲ ಫಿರಂಗಿ ಪ್ರಯೋಗಿಸಿದ್ದಾರೆ.

ಅದಾಗ್ಯೂ, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಘಟನೆಯಲ್ಲಿ ಕೆಲ ಪೊಲೀಸರು , ವಿದ್ಯಾರ್ಥಿಗಳು ಸೇರಿದಂತೆ  ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಿನ್ನೆಲೆ: ಯುಪಿಪಿಎಸ್‌ಸಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬಗ್ಗೆ  ಸಿಬಿಐ ತನಿಖೆ ನಡೆಸುವಂತೆ ಹಾಗೂ ಆಯೋಗದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ  ವಿದ್ಯಾರ್ಥಿಗಳನ್ನೊಳಗೊಂಡ ‘ಮೋರ್ಚಾ’ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿತ್ತು.

ಪ್ರತಿಭಟನೆಗೆ ಬಿಜೆಪಿ ಹಾಗೂ ಆಮ್‌ ಆದ್ಮಿ ಪಕ್ಷದ ಸ್ಥಳೀಯ ಮುಖಂಡರು ನೈತಿಕ ಬೆಂಬಲ ಸೂಚಿಸುವ ಮೂಲಕ ಅದು ರಾಜಕೀಯ ಸ್ವರೂಪ ಪಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry