ಭಾನುವಾರ, ಆಗಸ್ಟ್ 25, 2019
24 °C
ಅಸ್ಸಾಂ: ಪ್ರತ್ಯೇಕ ಕರ್ಬಿ ಅಂಗ್ಲಾಂಗ್ ರಾಜ್ಯ ರಚನೆಗೆ ಆಗ್ರಹ

ಹಿಂಸಾಚಾರ ತೀವ್ರ, ಇಬ್ಬರ ಸಾವು

Published:
Updated:

ದಿಫು (ಅಸ್ಸಾಂ) (ಪಿಟಿಐ): ತೆಲಂಗಾಣ ರಾಜ್ಯ ರಚನೆ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ದೇಶದ ವಿವಿಧೆಡೆ ಪ್ರತ್ಯೇಕ ರಾಜ್ಯಗಳ ಬೇಡಿಕೆ ಹೆಚ್ಚುತ್ತಿದ್ದು ಅಸ್ಸಾಂನಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಪ್ರತ್ಯೇಕ ಕರ್ಬಿ ಅಂಗ್ಲಾಂಗ್ ರಾಜ್ಯ ರಚನೆ ಒತ್ತಾಯಿಸಿ ಅಸ್ಸಾಂನ ದಿಫುವಿನಲ್ಲಿ ನಡೆಯುತ್ತಿರುವ ಹಿಂಸಾಚಾರ ಗುರುವಾರ ತೀವ್ರಗೊಂಡಿದೆ. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂವನ್ನು ಮುಂದುವರಿಸಲಾಗಿದೆ.ಹಿಂಸಾಚಾರ ನಿಯಂತ್ರಣಕ್ಕೆ ತರಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಬುಧವಾರ ನಡೆದಿದ್ದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಅದೇ ದಿನ ತಡರಾತ್ರಿ ಸಾವನ್ನಪ್ಪಿದ್ದಾನೆ.ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಮ್ಮಿತಿಸುತ್ತಿರುವಂತೆಯೇ ಅಸ್ಸಾಂನಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಬುಧವಾರ ಆರಂಭಗೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಿದ್ದರು. ಆದರೆ, ಕರ್ಫ್ಯೂಗೆ ಬೆದರದ ಪ್ರತಿಭಟನಾಕಾರರು ಗುರುವಾರ ರಸ್ತೆಗಿಳಿದು ಹಿಂಸಾಚಾರದಲ್ಲಿ ತೊಡಗಿದರು. ಆಕಾಶವಾಣಿಯ ಆ್ಯಂಟೆನಾಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೇ ಹಲವು ಸರ್ಕಾರಿ ಕಟ್ಟಡ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರು. ಆ್ಯಂಟೆನಾಗೆ ಬೆಂಕಿ ಹಚ್ಚಿದ್ದರಿಂದ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಂಡಿತು ಎಂದು ಅಧಿಕಾರಿಗಳು    ತಿಳಿಸಿದರು.ದಿಫು-ದಿಮಾಪುರದ ನಡುವಿನ ರೈಲು ಮಾರ್ಗವನ್ನು ಪ್ರತಿಭಟನಾಕಾರರು ಕಿತ್ತು ಹಾಕಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗೌತಮ್ ತಿಮುಂಗ್ ಎಂಬಾತ ಮೃತಪಟ್ಟಿದ್ದಾನೆ. ಇದಕ್ಕೂ ಮೊದಲು, ಬುಧವಾರ ನಡೆದ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 22 ವರ್ಷ ವಯಸ್ಸಿನ ರಾಹುಲ್ ಸಿಗ್ನಾ ಎಂಬ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.ಲೋಕದಳ ವಿಶ್ವಾಸ (ಮಥುರಾ ವರದಿ): ತೆಲಂಗಾಣ ರಾಜ್ಯಕ್ಕೆ ಕೇಂದ್ರ ಒಪ್ಪಿಗೆ ಸೂಚಿಸಿರುವುದರಿಂದ ಮುಂದಿನ ಲೋಕಸಭೆ ಚುನಾವಣೆ ಒಳಗಾಗಿ ಹರಿತ್ ಪ್ರದೇಶದ ರಚನೆಗೆ ಸರ್ಕಾರ ಸಮ್ಮತಿಸಬಹುದು ಎಂಬ ವಿಶ್ವಾಸವನ್ನು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಗುರುವಾರ ವ್ಯಕ್ತಪಡಿಸಿದೆ. `ಹರಿತ್ ಪ್ರದೇಶದ ರಚನೆಗಾಗಿ ಹೆಚ್ಚಿನ  ಶ್ರಮ ವಹಿಸಬೇಕಾಗಿದೆ. ನಿರಂತರ ಹೋರಾಟವನ್ನೂ ನಡೆಸಬೇಕಾಗಿದೆ. 2014ರ ಲೋಕಸಭಾ ಚುನಾವಣೆ ಒಳಗಾಗಿ  ಹರಿತ್ ಪ್ರದೇಶ ರಾಜ್ಯದ ಕನಸು ನನಸಾಗಬಹುದು' ಎಂದು ಕೇಂದ್ರ ಸಚಿವ  ಮತ್ತು ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರು ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದರು.ಗ್ರೇಟರ್ ಜಾರ್ಖಂಡ್‌ಗೆ ಒತ್ತಾಯ (ಜಮ್ಷೆಡ್‌ಪುರ): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಜಾರ್ಖಂಡ್ ಪೀಪಲ್ಸ್ ಪಕ್ಷವು (ಜೆಪಿಪಿ) ತನ್ನ ಗ್ರೇಟರ್ ಜಾರ್ಖಂಡ್ ರಚನೆಯ ಬೇಡಿಕೆಯನ್ನು ಪುನಃ ಆರಂಭಿಸಿದೆ. ಪಶ್ಚಿಮಬಂಗಾಲ, ಒಡಿಶಾ ಮತ್ತು ಛತ್ತೀಸಗಢದ ಕೆಲವು ಭಾಗಗಳನ್ನು ಸೇರಿಸಿ ಗ್ರೇಟರ್ ಜಾರ್ಖಂಡ್ ರಾಜ್ಯ ರಚನೆ ಮಾಡಬೆಕು ಜೆಪಿಪಿ ಒತ್ತಾಯಿಸಿದೆ.ನಾಳೆಯಿಂದ ಅನಿರ್ದಿಷ್ಟಾವಧಿ ಬಂದ್ (ಡಾರ್ಜಿಲಿಂಗ್ ವರದಿ): ಪ್ರತ್ಯೇಕ ಗೋರ್ಖಾಲ್ಯಾಂಡ್ ರಾಜ್ಯ ರಚನೆಗೆ ಆಗ್ರಹಿಸಿ ಶನಿವಾರದಿಂದ (ಆ.3) ಅನಿರ್ದಿಷ್ಟಾವಧಿ ಬಂದ್ ಆಚರಿಸಲು ಕರೆ ನೀಡಿರುವ ಗೋರ್ಖಾ ಜನಮುಕ್ತಿ ಮೋರ್ಚಾ, ತನ್ನ ನಿರ್ಧಾರವನ್ನು ಸಡಿಲಿಸುವ ಬದಲಿಗೆ ಕಠಿಣ ನಿಲುವು ತಾಳಲು ಗುರುವಾರ ತೀರ್ಮಾನಿಸಿದೆ. ಗುಡ್ಡಗಾಡು ಪ್ರಾಂತ್ಯಕ್ಕೆ ಕೇಂದ್ರೀಯ ಪಡೆಗಳು ಆಗಮಿಸಿದ ಕೆಲವೇ ತಾಸಿನಲ್ಲಿ ಕಠಿಣ ನಿಲುವು ಅನುಸರಿಸುವ ನಿರ್ಧಾರವನ್ನು ಮೋರ್ಚಾ ನಾಯಕ ಹರ್ಕ ಬಹಾದೂರ್ ಚೆಟ್ರಿ ಸುದ್ದಿಗಾರರಿಗೆ ತಿಳಿಸಿದರು.ಬಂದ್‌ನ್ನು ಆಗಸ್ಟ್ 15ರಂದು ಒಂದು ದಿನ ಹಿಂತೆಗೆದುಕೊಂಡು, ಮತ್ತೆ 16ರಿಂದ ಹೊಸ ಕಾರ್ಯಕ್ರಮ ಪ್ರಕಟಿಸುವವರೆಗೆ ಮುಂದುವರಿಸಲಾಗುವುದೆಂದು ಹೇಳಿದ ಅವರು, `ಪಶ್ಚಿಮ ಬಂಗಾಳ ಸರ್ಕಾರ ಪ್ರಜಾಸತ್ತಾತ್ಮಕ ಚಳವಳಿ ಹತ್ತಿಕ್ಕಲು ಯತ್ನಿಸುತ್ತಿದೆ' ಎಂದು ಆರೋಪಿಸಿದರು.ಬೇಡಿಕೆ ಪರಿಶೀಲನೆಗೆ ಕೇಂದ್ರ ಸಿದ್ಧ

ನವದೆಹಲಿ (ಪಿಟಿಐ): ಪ್ರತ್ಯೇಕ ರಾಜ್ಯಕ್ಕಾಗಿ ದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿರುವಂತೆಯೇ ಶಾಂತಿ ಕಾಪಾಡುವುದಕ್ಕೆ ಮನವಿ ಮಾಡಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಪ್ರತ್ಯೇಕ ರಾಜ್ಯದ ಬೇಡಿಕೆಗಳನ್ನು `ಎಚ್ಚರಿಕೆ'ಯಿಂದ ಪರಿಶೀಲಿಸುವುದಾಗಿ ಹೇಳಿದ್ದಾರೆ.

ಆದರೆ, ಪ್ರತ್ಯೇಕ ರಾಜ್ಯದ ಬೇಡಿಕೆಗಳನ್ನು ಪರಿಶೀಲಿಸುವುದಕ್ಕಾಗಿ ಎರಡನೇ ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದರು.

Post Comments (+)