ಬುಧವಾರ, ಮಾರ್ಚ್ 3, 2021
22 °C
ಕಾಶ್ಮೀರ ವಿಚಾರದಲ್ಲಿ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ

ಹಿಂಸಾಚಾರ ತ್ಯಜಿಸಲು ಯುವಕರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂಸಾಚಾರ ತ್ಯಜಿಸಲು ಯುವಕರಿಗೆ ಮನವಿ

ಭಾಬ್ರಾ, ಮಧ್ಯಪ್ರದೇಶ (ಪಿಟಿಐ): ಕಾಶ್ಮೀರ ಹಿಂಸಾಚಾರದ ಬಗ್ಗೆ ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ ಅವರು ‘ವಾಜಪೇಯಿ ಅವರ ಮಂತ್ರವಾದ ಮಾನವಿಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿಯತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ’ ಎಂದು ಹೇಳಿದರು.ಕಳೆದ ಒಂದು ತಿಂಗಳಿಂದ ಕಾಶ್ಮೀರದಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದು, ಇದುವರೆಗೆ 55 ಜನರು ಸತ್ತಿದ್ದಾರೆ. ಪ್ರಧಾನಿ ಅವರು ಇಲ್ಲಿಯವರೆಗೆ ಈ ಬಗ್ಗೆ ಯಾವುದೆ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ. ಈಗ ಭಾಷಣದ ಮೂಲಕ ಕಾಶ್ಮೀರದ ಜನತೆಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.‘ಲ್ಯಾಪ್‌ಟಾಪ್ ಮತ್ತು ಕ್ರಿಕೆಟ್ ಬ್ಯಾಟ್ ಹಿಡಿಯಬೇಕಾಗಿದ್ದ ಯುವಕರ ಕೈಯಲ್ಲಿ  ಕಲ್ಲುಗಳು ಇರುವುದು ಭಾರಿ ನೋವಿನ ಸಂಗತಿ. ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಲು ದಯವಿಟ್ಟು ಸಹಕರಿಸಿ ಎಂದು ಮೋದಿ ಯುವಕರಲ್ಲಿ ಮನವಿ ಮಾಡಿದರು.‘ಕಾಶ್ಮೀರದಲ್ಲಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿಲ್ಲ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ರಾಜ್ಯದ ಸಂಕಷ್ಟ ನಿವಾರಣೆಗೆ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಕೆಲವು ಜನರು ಇದನ್ನು ಸಹಿಸಿಕೊಳ್ಳದೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಮೋದಿ ಅವರು ಆರೋಪಿಸಿದರು.‘ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿಯತೆಯ ಮಾರ್ಗ ಅನುಸರಿಸಿ ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗೆ ಶ್ರಮಿಸಿದ್ದರು. ನಾವೂ ಇದೇ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಅವರು ಹೇಳಿದರು.‘ಶಾಂತಿ, ಒಗ್ಗಟ್ಟು ಮತ್ತು ಸೌಹಾರ್ದವನ್ನು ಕಾಪಾಡುವ ಮೂಲಕ ಕಾಶ್ಮೀರದ ಯುವಕರು ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗ ಎಂಬ ಹೆಗ್ಗಳಿಕೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು.  ಮಾನವೀಯತೆ ಮತ್ತು ಕಾಶ್ಮೀರಿಯತೆ ಹಾಳಾಗಲು ಬಿಡಬಾರದು.  ಮಾತುಕತೆಯ ಮೂಲಕ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ’ ಎಂದು ತಿಳಿಸಿದರು.

ಹಿಂಸಾಚಾರ ನಡೆಯುತ್ತಿದ್ದರೂ ಅಮರನಾಥ್ ಯಾತ್ರೆಗೆ ಧಕ್ಕೆಯಾಗದಂತೆ ನೋಡಿಕೊಂಡ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಕ್ರಮವನ್ನು ಪ್ರಧಾನಿ ಶ್ಲಾಘಿಸಿದರು.ಪಾಕ್‌  ಹೈಕಮಿಷನರ್‌ ವಾಪಸ್‌  ಕರೆದು ಪ್ರತಿಭಟನೆ  ದಾಖಲಿಸಿದ  ಭಾರತ

ನವದೆಹಲಿ (ಪಿಟಿಐ):
ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವ ಬಗ್ಗೆ ಪಾಕಿಸ್ತಾನದ ಹೈಕಮಿಷನರ್‌ ಬಳಿ ಭಾರತ ಬುಧವಾರ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್ ಬಸಿತ್‌ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಜೈಶಂಕರ್ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.ಕಾಶ್ಮೀರದಲ್ಲಿ ಜುಲೈ 25ರಂದು ಬಂಧಿಸಲಾಗಿರುವ ಲಷ್ಕರ್‌ ಎ ತಯಬಾ (ಎಲ್‌ಇಟಿ) ಉಗ್ರ ಬಹದೂರ್‌ ಅಲಿಯ ವಿಷಯವನ್ನು ಜೈಶಂಕರ್‌ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.‘ಪಾಕಿಸ್ತಾನದ ಬಗ್ಗಾ ಗ್ರಾಮದವನಾದ  ಅಲಿ ಬಳಿ ಎಕೆ47 ರೈಫಲ್, ಗ್ರನೇಡ್ ಮತ್ತು ಗ್ರನೇಡ್‌ ಲಾಂಚರ್ ಇತ್ತು. ಎಲ್‌ಇಟಿ ಮೂಲಕ ತರಬೇತಿ ಪಡೆದಿರುವುದಾಗಿ ಹಾಗೂ ಭಾರತಕ್ಕೆ ನುಸುಳಿದ ಮೇಲೆ ಎಲ್‌ಇಟಿ ಜತೆ ಸಂಪರ್ಕದಲ್ಲಿ ಇದ್ದುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಭಾರತದಲ್ಲಿ ದಾಳಿ ನಡೆಸಲು ಬಂದಿದ್ದಾಗಿ ಆತ ವಿಚಾರಣೆ ವೇಳೆ ಹೇಳಿದ್ದಾನೆ’ ಎಂದು ಅವರು ಪ್ರತಿಭಟನೆ ವೇಳೆ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.