ಹಿಂಸೆಗೆ ತಿರುಗಿದ ಪ್ರತಿಭಟನೆ

7

ಹಿಂಸೆಗೆ ತಿರುಗಿದ ಪ್ರತಿಭಟನೆ

Published:
Updated:
ಹಿಂಸೆಗೆ ತಿರುಗಿದ ಪ್ರತಿಭಟನೆ

ನವದೆಹಲಿ(ಪಿಟಿಐ,ಐಎಎನ್‌ಎಸ್): ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಈ ಕೂಡಲೇ ಅತ್ಯುಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ರಾಜಧಾನಿಯಲ್ಲಿ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ನಡೆಸುತ್ತಿರುವ ಆಕ್ರೋಶಭರಿತ ಪ್ರತಿಭಟನೆಯ ಕಾವು ಭಾನುವಾರವೂ ತಣ್ಣಗಾಗಿಲ್ಲ.`ರೈಸಿನಾ ಹಿಲ್ಸ್'ನಲ್ಲಿ ಕೇಂದ್ರಿಕೃತವಾಗಿದ್ದ ಪ್ರತಿಭಟನೆ `ಇಂಡಿಯಾ ಗೇಟ್' ಹಾಗೂ `ಜಂತರ್ ಮಂತರ್'ಗೆ ಸ್ಥಳಾಂತರವಾಗಿದ್ದು, ಯುವತಿಯ ದೇಹಸ್ಥಿತಿ ಮತ್ತೆ ಬಿಗಡಾಯಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಹನೆ ಕಳೆದುಕೊಂಡ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿಹಿಂಸೆಗೆ ಇಳಿದಾಗ ಅವರನ್ನು ಚದುರಿಸಲು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಲಾಯಿತು.ಶನಿವಾರ `ರೈಸಿನಾ ಹಿಲ್ಸ್'ನಲ್ಲಿ ಕಂಡ ಆತಂಕಕಾರಿ ದೃಶ್ಯ ಈಗ ಇಂಡಿಯಾ ಗೇಟ್‌ನಲ್ಲಿ ಕಾಣುವಂತಾಗಿದೆ. `ರೈಸಿನಾ ಹಿಲ್ಸ್' ಪ್ರದೇಶದಲ್ಲಿ ಈಗ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಜಂತರ್ ಮಂತರ್‌ನಿಂದ ಇಂಡಿಯಾಗೇಟ್ ಕಡೆಗೆ ಈ ಗುಂಪು ಧಾವಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ಸಂದರ್ಭ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡರು.ಯುವತಿಗೆ ಚಿಕಿತ್ಸೆ ನೀಡುತ್ತಿರುವ ಸಫ್ದರ್‌ಜಂಗ್ ಆಸ್ಪತ್ರೆ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಂಡಿಯಾ ಗೇಟ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿದ ಪ್ರತಿಭಟನಾಕಾರರು ಮಧ್ಯಾಹ್ನ 2-30ರ ಸುಮಾರಿಗೆ `ರೈಸಿನಾ ಹಿಲ್ಸ್' ಕಡೆಗೆ ಮುನ್ನುಗ್ಗಿದಾಗ ಪೊಲೀಸರೊಂದಿಗೆ ಘರ್ಷಣೆ, ಕಲ್ಲು ತೂರಾಟ ನಡೆಯಿತು. ಆಗ ಉದ್ರಿಕ್ತರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಯಿತು.ಇನ್ನೇನು ಪ್ರತಿಭಟನೆ ಮುಗಿಯಿತು ಎನ್ನುವಷ್ಷರಲ್ಲಿ ಕೆಲವರು ಕಬ್ಬಿಣದ ಸಲಾಕೆಗಳೊಂದಿಗೆ ಪೊಲೀಸರ ಮೇಲೆ ದಾಳಿಗೆ ಮುಂದಾಗಿ ಕಲ್ಲು ತೂರಾಟ ನಡೆಸಿದಾಗ ಮತ್ತೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಲಾಯಿತು. ಉದ್ರಿಕ್ತರ ಕೈಗೆ ಸಿಕ್ಕ ಹಲವು ವಾಹನಗಳು, ಬ್ಯಾರಿಕೇಡ್‌ಗಳು ಜಖಂಗೊಂಡಿವೆ.

ಈ ನಡುವೆ, ಪ್ರತಿಭಟನಾನಿರತರಲ್ಲಿ ಕೆಲವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಲು ಸರ್ಕಾರದ ಮೇಲೆ ಒತ್ತಡ ತರಲು ಆಗ್ರಹಿಸಿದರು.ಸುಮಾರು 90 ನಿಮಿಷಗಳ ಕಾಲ ಸಮಾಲೋಚನೆ ನಡೆದಿದ್ದು ಈ ಸಂಬಂಧ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು. ಕಾನೂನಿಗೆ ತಿದ್ದುಪಡಿ ತರುವ ವಿಷಯದ ಕುರಿತೂ ಸಹ ಅವರು ಭರವಸೆ ನೀಡಿದರು ಎಂದು ಪ್ರತಿಭಟನಾಕಾರರು ತಿಳಿಸಿದರು. ಪ್ರತಿಭಟನೆ ಹಿಂಸೆಗೆ ಇಳಿಯಲು ಕೆಲ ಸ್ಥಾಪಿತ ಹಿತಾಸಕ್ತಿಗಳೂ ಇದರಲ್ಲಿ ಸೇರಿಕೊಂಡಿವೆ ಎಂಬ ಅನುಮಾನವನ್ನು ದೆಹಲಿ ಪೊಲೀಸರು ವ್ಯಕ್ತಪಡಿಸಿದ್ದಾರೆ.ಗಣ್ಯರ ಬೆಂಬಲ

ಯುವ ಸಮುದಾಯ ಬೆಂಬಲಿಸಿ ಬಾಲಿವುಡ್ ಜಗತ್ತಿನ ಶೇಖರ್ ಕಪೂರ್, ಶಬನಾ ಅಜ್ಮಿ, ಕಬೀರ್ ಬೇಡಿ, ಅನುಪಮ ಖೇರ್ ಮತ್ತಿತರರು ಹೇಳಿಕೆ ನೀಡಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಶೀಘ್ರ ಗುಣಮುಖರಾಗಲಿ ಎಂದು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಪಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಾರ್ಥಿಸಿದ್ದಾರೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಯುವತಿಗೆ ನ್ಯಾಯ ಒದಗಿಸಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಒತ್ತಾಯಿಸಿದ್ದಾರೆ.ಯುವತಿ ಸ್ವಗ್ರಾಮ ಉತ್ತರಪ್ರದೇಶದ ಬಲಿಯಾ ಬಳಿಯ ಮೆದ್ವಾರಾ ಕಲನ್ ಎಂಬಲ್ಲಿ ಗ್ರಾಮಸ್ಥರು ಭಾನುವಾರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಶೀಘ್ರ ಗುಣಮುಖರಾಗಲು ಪ್ರಾರ್ಥನೆ ಕೈಗೊಂಡರು.ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ತನಕ ತಮ್ಮ ಸಂಘರ್ಷ ನಿಲ್ಲಿಸುವುದಿಲ್ಲ ಎಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆ ಅಮೆರಿಕದ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದು ಈ ಕುರಿತು ಹಲವು ಪತ್ರಿಕೆಗಳಲ್ಲಿ ಶನಿವಾರ ಪ್ರಮುಖ ವರದಿಗಳು ಪ್ರಕಟವಾಗಿವೆ.ಯುವತಿಗೆ ಮತ್ತೆ ಜೀವರಕ್ಷಕ ಅಳವಡಿಕೆ

ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಅತ್ಯಾಚಾರಕ್ಕೆ ಒಳಗಾದ ಯುವತಿಯ ಸ್ಥಿತಿ ಭಾನುವಾರ ಬಿಗಡಾಯಿಸಿದ್ದರಿಂದ ಆಕೆಗೆ ಮತ್ತೆ ಜೀವರಕ್ಷಕ ಒದಗಿಸಲಾಗಿದೆ. ಶುಕ್ರವಾರ ಹಾಗೂ ಶನಿವಾರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಯುವತಿಯ ಸ್ಥಿತಿ ಭಾನುವಾರ ಸಂಜೆಯ ಹೊತ್ತಿಗೆ ಗಂಭೀರವಾಗಿದೆ.`ಸಹಜ ಉಸಿರಾಟ ಸಾಧ್ಯವಾಗದೇ ಇರುವುದರಿಂದ ಮತ್ತೆ ಜೀವರಕ್ಷಕ ಅಳವಡಿಸುವುದು ಅನಿವಾರ್ಯವಾಯಿತು. ಆಕೆಗೆ ನಾವು ಏನೆಲ್ಲ ಪರೀಕ್ಷೆಗಳನ್ನು ನಡೆಸುತ್ತಿದ್ದರೂ ಸ್ಥಿತಿ ಗಂಭೀರವಾಗೇ ಇದೆ. ನಂಜೇರುವ ಅಪಾಯ ಇರುವುದರಿಂದ ಯುವತಿಗೆ ಹೆಚ್ಚು ಪರಿಣಾಮಕಾರಿಯಾದ ನಂಜುನಿರೋಧಕ ಔಷಧಿ ನೀಡಲಾಗುತ್ತಿದೆ' ಎಂದು ಆಸ್ಪತ್ರೆ ಅಧೀಕ್ಷಕ ಡಾ. ಬಿ.ಡಿ. ಅಥಣಿ ತಿಳಿಸಿದ್ದಾರೆ.ಕೆಟ್ಟ ಕೆಲಸ ಮಾಡಿದ್ದೇವೆ ನೇಣಿಗೆ ಹಾಕಿ..

ಇಲ್ಲಿಯ ತಿಹಾರ್ ಜೈಲಿನಲ್ಲಿರುವ ಅತ್ಯಾಚಾರ ಘಟನೆಯ ಆರು ಜನ ಆರೋಪಿಗಳ ಪೈಕಿ ಮೂವರು ಗುರುತು ಪತ್ತೆಹಚ್ಚುವ ಪರೇಡ್‌ಗೆ ನಿರಾಕರಿಸಿದ್ದು ಅದರ ಬದಲು ಕೆಟ್ಟ ಕೆಲಸ ಮಾಡಿರುವ ತಮ್ಮನ್ನು ನೇಣುಗಂಬಕ್ಕೆ ಏರಿಸಿ ಎಂದು ಕೇಳಿಕೊಂಡಿದ್ದಾರೆ.`ನಾವು ಪರೇಡ್‌ಗೆ ಬರುವುದಿಲ್ಲ ಏಕೆಂದರೆ ತೀರಾ ಕೆಟ್ಟ ಕೆಲಸ ಮಾಡಿರುವ ನಮಗೆ ಮರಣದಂಡನೆ ವಿಧಿಸಿ' ಎಂದು ಆರೋಪಿಗಳಾದ ಪವನ್ ಹಾಗೂ ವಿನಯ್ ಮ್ಯಾಜಿಸ್ಟ್ರೇಟ್ ಸಮ್ಮುಖ ಹೇಳಿಕೆ ನೀಡಿದರು.ಈ ಮಧ್ಯೆ, ಘಟನೆ ಖಂಡಿಸಿ ಸಾಕೇತ್ ಜಿಲ್ಲಾ ನ್ಯಾಯಾಲಯದ ಸುಮಾರು 300 ವಕೀಲರು ರ‌್ಯಾಲಿ ನಡೆಸಿದ್ದು ಆರೋಪಿಗಳ ಪರ ವಕಾಲತ್ತು ನಡೆಸದೇ ಇರುವ ತೀರ್ಮಾನ ಕೈಗೊಂಡರು. ಈ ಘಟನೆ ತೀರ ಅಮಾನವೀಯ ಅಷ್ಟೇ ಕ್ರೂರ ಎನಿಸಿರುವುದರಿಂದ ಆರೋಪಿಗಳ ಪರ ವಕಾಲತು ಮಾಡುವುದಿಲ್ಲ ಎಂದರು.ತುರ್ತು ಸಂಪುಟ ಸಭೆ ನಡೆಸಿದ ದೀಕ್ಷಿತ್

ಸಾಮೂಹಿಕ ಅತ್ಯಾಚಾರ ಘಟನೆಯ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಉಂಟಾಗಿರುವ ತ್ವೇಷಮಯ ವಾತಾವರಣದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಭಾನುವಾರ ಸಂಜೆ ಸಚಿವ ಸಂಪುಟದ ತುರ್ತುಸಭೆ ನಡೆಸಿದರು.ಹಿಮಾಚಲ ಪ್ರದೇಶದಲ್ಲಿ ನೂತನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ದೆಹಲಿಗೆ ಹಿಂತಿರುಗಿದ ದೀಕ್ಷಿತ್ ಸಂಪುಟದ ಸಭೆ ನಡೆಸಿ ಕಾನೂನು ಸುವ್ಯವಸ್ಥೆಯ ಬಗ್ಗೆ ಸಮಾಲೋಚಿಸಿದರು.ಸರ್ವಪಕ್ಷ ಸಭೆಗೆ ಬಿಜೆಪಿ ಆಗ್ರಹ

ದೆಹಲಿ ವಿದ್ಯಮಾನಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಲೋಕಸಭೆಯ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಈ ಸಂಬಂಧ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳು ಶಾಂತಿ ಸಹನೆಯಿಂದ ವರ್ತಿಸಲು ಅವರು ಮನವಿ ಮಾಡಿಕೊಂಡರು. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಸ್ವತಃ ರಾತ್ರಿಹೊತ್ತಿನಲ್ಲಿ ವಿವಿಧ ಠಾಣೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲೂ ಅವರು ಸಲಹೆ ನೀಡಿದ್ದಾರೆ.

ದಿನದ ಬೆಳವಣಿಗೆ...

ಕಾಂಗ್ರೆಸ್  ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಜತೆ ಪ್ರತಿಭಟನಾಕಾರರ ಚರ್ಚೆ

ಯುವ ಸಮುದಾಯದ ಬೆಂಬಲಕ್ಕೆ ಗಣ್ಯರು

ಯುವತಿಯ ಆರೋಗ್ಯ ಏರುಪೇರು

ಯುವತಿ ಶೀಘ್ರ ಗುಣಮುಖಳಾಗಲು ಸ್ವಗ್ರಾಮದಲ್ಲಿ ಪ್ರಾರ್ಥನೆ

ಅಮೆರಿಕದ ಮಾಧ್ಯಮಗಳಲ್ಲೂ ಗಮನ ಸೆಳೆದ ಘಟನೆ

ಪೈಶಾಚಿಕ ಕೃತ್ಯಕ್ಕೆ ನೇಣು ಹಾಕಿ: 3 ಆರೋಪಿಗಳ ಮೊರೆ

ಆರೋಪಿಗಳ ಪರ ವಕಾಲತ್ತು ನಡೆಸಲು ಸಾಕೇತ್ ಜಿಲ್ಲಾ ನ್ಯಾಯಾಲಯದ ವಕೀಲರ ನಿರ್ಧಾರ

ಸರ್ವಪಕ್ಷಗಳ ಸಭೆ ಕರೆಯಲು ಸುಷ್ಮಾ ಸ್ವರಾಜ್ ಒತ್ತಾಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry