ಸೋಮವಾರ, ಮೇ 17, 2021
28 °C

ಹಿತಾಸಕ್ತಿ ಸಂಘರ್ಷದಲ್ಲಿ ದೋನಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ. `ರಿಟಿ ಸ್ಪೋರ್ಟ್ಸ್' ಎಂಬ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪೆನಿಯಲ್ಲಿ ದೋನಿ ಶೇ 15 ರಷ್ಟು ಷೇರು ಹೊಂದಿದ್ದಾರೆ ಎಂಬುದು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.ರಿಟಿ ಸ್ಪೋರ್ಟ್ಸ್ ದೋನಿ ಅವರ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಕಂಪೆನಿ. ಆದರೆ ಅದೇ ಕಂಪೆನಿಯಲ್ಲಿ ಷೇರು ಹೊಂದಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಿದೆ. ದೋನಿ ಕಂಪೆನಿಯಲ್ಲಿ ಷೇರು ಹೊಂದಿದ್ದಾರೆ ಎಂಬುದನ್ನು ಆಂಗ್ಲ ದಿನಪತ್ರಿಕೆಯೊಂದು ಸೋಮವಾರ ವರದಿ ಮಾಡಿತ್ತು.ಆದರೆ ಕಂಪೆನಿ ಈ ವರದಿಯನ್ನು ತಳ್ಳಿಹಾಕಿದ್ದು, `ದೋನಿ ಅಲ್ಪ ಅವಧಿಯವರೆಗೆ ಮಾತ್ರ ಷೇರು ಹೊಂದಿದ್ದರು. ಈಗ ಅವರ ಬಳಿಕ ಷೇರು ಇಲ್ಲ' ಎಂದು ಸ್ಪಷ್ಟಪಡಿಸಿದೆ. `ದೋನಿ ಯಾವುದೇ ಷೇರು ಹೊಂದಿಲ್ಲ. ಅವರಿಗೆ ಸುಮಾರು ಒಂದು ವರ್ಷದ ಮೊತ್ತ ನೀಡುವುದು ಬಾಕಿಯಿತ್ತು. ಈ ಕಾರಣ ಮಾರ್ಚ್ 22 ರಂದು ಕೆಲವು ಷೇರುಗಳನ್ನು ಅವರಿಗೆ ನೀಡಲಾಗಿತ್ತು' ಎಂದು ಕಂಪೆನಿಯ ಮುಖ್ಯಸ್ಥ ಅರುಣ್ ಪಾಂಡೆ ಹೇಳಿದ್ದಾರೆ.`ಭಾರತ ತಂಡದ ನಾಯಕನಿಗೆ ದೊರೆಯಬೇಕಿದ್ದ ಬಾಕಿ ಮೊತ್ತವನ್ನು ಏಪ್ರಿಲ್‌ನಲ್ಲಿ ನೀಡಲಾಯಿತು. ಏ. 26 ರಂದು ದೋನಿ ಎಲ್ಲ ಷೇರುಗಳನ್ನು ಕಂಪೆನಿಯ ಪ್ರವರ್ತಕರಿಗೆ ವಾಪಸ್ ಮಾಡಿದ್ದಾರೆ' ಎಂದಿದ್ದಾರೆ.ದೋನಿ ಅಲ್ಲದೆ ಭಾರತ ತಂಡದ ಇತರ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಮತ್ತು ಪ್ರಗ್ಯಾನ್ ಓಜಾ ಅವರ ವ್ಯವಹಾರಗಳನ್ನೂ ಇದೇ ಕಂಪೆನಿ ನೋಡಿಕೊಳ್ಳುತ್ತಿದೆ. ಇದರಲ್ಲಿ ಜಡೇಜ ಮತ್ತು ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು. ದೋನಿ ಅದೇ ಕಂಪೆನಿಯಲ್ಲಿ ಷೇರು ಹೊಂದಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿತ್ತು.ಕಂಪೆನಿ ಜೊತೆ ಸಂಬಂಧ ಇಲ್ಲ: ರಿಟಿ ಸ್ಪೋರ್ಟ್ಸ್ ಜೊತೆ ಯಾವುದೇ ಸಂಬಂಧ ಇಲ್ಲ ಎಂದು ವೇಗದ ಬೌಲರ್ ಆರ್‌ಪಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆರ್‌ಪಿ ಅವರ ವ್ಯವಹಾರಗಳನ್ನೂ ಇದೇ ಕಂಪೆನಿ ನೋಡಿಕೊಳ್ಳುತ್ತಿದೆ ಎಂದು ಪತ್ರಿಕೆ ವರದಿ ಮಾಡಿತ್ತು.`ಪತ್ರಿಕೆಯಲ್ಲಿ ಏನು ವರದಿಯಾಗಿದೆ ಎಂಬುದರ ಹೆಚ್ಚಿನ ವಿವರ ತಿಳಿದಿಲ್ಲ. ನನಗೆ ಕಂಪೆನಿ ಜೊತೆ ಸಂಬಂಧ ಇಲ್ಲ' ಎಂದು `ಟ್ವಿಟರ್'ನಲ್ಲಿ ಬರೆದಿದ್ದಾರೆ.ರಿಟಿ ಜೊತೆ ಒಪ್ಪಂದ...

ಕ್ರಿಕೆಟ್ ಆಟಗಾರರ ವ್ಯವಹಾರ ನೋಡಿಕೊಳ್ಳುತ್ತಿರುವ `ರಿಟಿ ಸ್ಪೋರ್ಟ್ಸ್' ಕಂಪೆನಿಯ ಮಾಲೀಕ ಅರುಣ್ ಪಾಂಡೆ. ಅವರು ದೋನಿಯ ಗೆಳೆಯನೂ ಹೌದು.ಭಾರತ ತಂಡದ ನಾಯಕ 2010 ರಲ್ಲಿ ಈ ಕಂಪೆನಿ ಜೊತೆ ್ಙ 210 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಭಾರತದ ಕ್ರಿಕೆಟ್ ಆಟಗಾರನೊಬ್ಬ ಇಷ್ಟು ದೊಡ್ಡ ಮೊತ್ತದ ಒಪ್ಪಂದ ಮಾಡಿಕೊಂಡದ್ದು ಇದೇ ಮೊದಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.