ಹಿತ್ತಲ ಅವರೆ: ಕೆ.ಜಿ.ಗೆ ರೂ. 400!

7

ಹಿತ್ತಲ ಅವರೆ: ಕೆ.ಜಿ.ಗೆ ರೂ. 400!

Published:
Updated:

ತುರುವೇಕೆರೆ: ಅವರೆಗೊಂದು ಕಾಲವಿದ್ದರೆ; ಹಿತ್ತಲ ಅವರೆಗೂ ಒಂದು ಕಾಲ ಎಂಬುದು ಸೋಮವಾರ ಸಂತೆಯಲ್ಲಿ ತರಕಾರಿ ಕೊಳ್ಳಲು ಬಂದವರಿಗೆಲ್ಲಾ ಅರ್ಥವಾಯಿತು. ಹಿತ್ತಿಲವರೆ ದರ ಕೇಳಿ ಜನ ದಳ ದಳ ಬೆವತರೆ, ಪಟ್ಟದರಸಿ ಎಂದುಕೊಂಡಿದ್ದ ಸೊಗಡವರೆ ನಾಚಿ ಮುದುಡಿಹೋಯಿತು.ಸೊಗಡವರೆ ಕೆ.ಜಿ.ಗೆ ರೂ. 30ಕ್ಕೆ ಮಾರಾಟವಾದರೆ, ಹಿತ್ತಲ ಅವರೆ ಕೆ.ಜಿ.ಗೆ ರೂ. 400ರಂತೆ ಮಾರಾಟವಾಗಿ ಸರ್ವಕಾಲೀನ ದಾಖಲೆ ಸ್ಥಾಪಿಸಿತು.ಮಂಗಳವಾರ, ಶುಕ್ರವಾರ ಮತ್ತು ಶನಿವಾರ ತಾಲ್ಲೂಕಿನಾದ್ಯಂತ ನಾಗರಹಬ್ಬ ಆಚರಿಸುವ ಹಿನ್ನಲೆಯಲ್ಲಿ ಹಿತ್ತಲವರೆಗೆ ಭಾರಿ ಬೇಡಿಕೆ ಬಂದಿತ್ತು. ಹಾಗೆಯೇ ದರವೂ ಏರಿತ್ತು. ಹಿತ್ತಲಲ್ಲಿ ಬೆಳಿದಿದ್ದೆಲ್ಲಾ ನಗಣ್ಯ ಎಂಬಂತೆ ಅವಗಣನೆಗೆ ಒಳಗಾಗಿದ್ದ ಹಿತ್ತಲ ಅವರೆಗೆ ಸಂತೆಯಲ್ಲಿ ದಿಢೀರ್ ರಾಜಯೋಗ ಬಂದಿತ್ತು.ಸಂತೆಗೆ ಮಾರಾಟಕ್ಕೆ ಬಂದಿದ್ದೇ 4 ಕೆ.ಜಿ. ಹಿತ್ತಲವರೆ. ಅದೂ ಶಂಕರಪ್ಪ ಎಂಬ ಒಬ್ಬರೇ ರೈತರೊಬ್ಬರಿಂದ ಕೆ.ಜಿ.ಗೆ 350ರಂತೆ ಕೊಂಡುತಂದಿದ್ದರು. ಅದನ್ನು ಕೆ.ಜಿ.ಗೆ 400ರಂತೆ ಮಾರಿದರು. ಹಿತ್ತಲ ಅವರೆ ಹುಡುಕಿ ಬಂದ ಜನ ಬೆಲೆ ಕೇಳಿ ಬೆಚ್ಚಿಬಿದ್ದರು. ಆದರೂ ಕೈಕೊಡವಿ ಕೊಂಡು ಮುಂದೆ ಹೋಗುವಂತಿರಲಿಲ್ಲ. ನಾಗರ ಹಬ್ಬದಲ್ಲಿ ಶಾಸ್ತ್ರಕ್ಕಾದರೂ ಹಿತ್ತಲವರೆ ಬೇಕೇ ಬೇಕು ಎಂಬ ಕಾರಣದಿಂದ ಚೌಕಾಸಿಗಿಳಿದರು. ಚೌಕಾಸಿ ಗಿಟ್ಟದಾದಾಗ 50 ಗ್ರಾಂ, 25 ಗ್ರಾಂ ಕೊಂಡು ಚಿನ್ನದಂತೆ ಜೋಪಾನದಿಂದ ಚೀಲದಲ್ಲಿರಿಸಿಕೊಂಡು ನಿಟ್ಟುಸಿರಿಟ್ಟರು.

ಸಾರಿಗೆಹಳ್ಳಿ ಕೃಷಿಕ ವೆಂಕಟಪ್ಪ ಪ್ರಜಾವಾಣಿಯೊಂದಿಗೆ ಮಾತನಾಡಿ, ಎಲ್ಲೂ ಹಿತ್ತಲವರೆ ಬೆಳೆ ಇಲ್ಲ. ಜನ ಹಿತ್ತಲವರೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ನಾಗರಹಬ್ಬ ಇರುವುದರಿಂದ ಬೇಡಿಕೆ ಬಂದಿದೆ. ಕೆ.ಜಿ.ಗೆ ರೂ. 150, 200 ಇದ್ದದ್ದು ಕಂಡಿದ್ದೆ. 400 ಆಗಿದ್ದು ಕೇಳಿತ್ತಿಲ್ಲ ಎಂದರು.ಸಂಕ್ರಾಂತಿ ಹಬ್ಬ ಮುಗಿದಿದೆ. ತರಕಾರಿಗಳ ಬೆಲೆ ಕಮ್ಮಿ ಇರುತ್ತದೆ ಎಂದು ಸಂತೆಗೆ ಬಂದವರು ತರಕಾರಿಗಳ ಬೆಲೆ ಕೇಳಿ ಗಾಬರಿ ಬಿದ್ದರು. ಈರುಳ್ಳಿಗೆ ಪೈಪೋಟಿ ನೀಡುವಂತೆ ಇತರ ತರಕಾರಿಗಳ ಬೆಲೆಗಳೂ ಗಗನಕ್ಕೇರಿತ್ತು. ಹುರುಳಿಕಾಯಿ ಕೆ.ಜಿ.ಗೆ ರೂ. 60, ಹೀರೇಕಾಯಿ 30, ನವಿಲುಕೋಸು ರೂ. 40, ಟೊಮೊಟೊ 30, ಹೂಕೋಸು ರೂ. 30, ಹಾಗಲಕಾಯಿ ರೂ. 30, ಕ್ಯಾರೆಟ್ 40, ಸೌತೇಕಾಯಿ ಒಂದಕ್ಕೆ ರೂ. 10, ಮೂಲಂಗಿ, ಬದನೆ, ಸೀಮೆಬದನೆ, ಆಲೂಗಡ್ಡೆ ತಲಾ ಕೆ.ಜಿ.ಗೆ ರೂ. 20.ಹೀಗೆ ಎಲ್ಲ ತರಕಾರಿಗಳ ಬೆಲೆ ಕೇಳಿದರೆ ಶಾಕ್ ಹೊಡೆಯುವಂತಿತ್ತು. ಸಾಮಾನ್ಯ ವರ್ಗದ ಜನ ಸೊಪ್ಪು, ಸೆದೆ, ಮೂಲಂಗಿ, ಬದನೆಕಾಯಿ ಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ವಾಪಸ್ಸಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry