ಮಂಗಳವಾರ, ಮೇ 18, 2021
31 °C

ಹಿತ್ತಲ ಗಿಡ ಮದ್ದಲ್ಲ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಇಡೀ ಭಾರತ ಚಿತ್ರರಂಗ ಅವರನ್ನು ಗೌರವಿಸುತ್ತದೆ. ಬಾಲಿವುಡ್‌ನ ಹಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಅತ್ಯುತ್ತಮ ಚಿತ್ರಗಳನ್ನು ನೀಡಿದ ಅವರನ್ನು ಹಿಂದಿ ಚಿತ್ರರಂಗ ಗೌರವಿಸುತ್ತದೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಕನ್ನಡ ಚಿತ್ರರಂಗ ಅವರನ್ನು ನಿರ್ಲಕ್ಷಿಸುತ್ತದೆ. ಅವರಿಗೆ ಷೋಕಾಸ್ ನೋಟಿಸ್ ನೀಡುತ್ತದೆ~- ನಿರ್ದೇಶಕ ಸುಧೀರ್ ಅತ್ತಾವರ್ ಮಾತಿನಲ್ಲಿ ನೋವಿತ್ತು. ಅವರು ಮಾತನಾಡುತ್ತಿದ್ದದ್ದು ನಿರ್ದೇಶಕ ಎಂ.ಎಸ್.ಸತ್ಯು ಅವರ ಬಗ್ಗೆ.

ಭಾರತೀಯ ಚಿತ್ರರಂಗ 100 ವರ್ಷ ತುಂಬಿ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಅಂತಹ ಸಂದರ್ಭದಲ್ಲಿ ನಟ ಅಮೀರ್ ಖಾನ್ ಇಂಗ್ಲಿಷ್ ನಿಯತಕಾಲಿಕೆಯೊಂದಕ್ಕೆ ಬರೆದ ಲೇಖನದಲ್ಲಿ `ಗರಮ್ ಹವಾ~ದಂತಹ ಚಿತ್ರ ನೀಡಿದ ಸತ್ಯು ಅವರನ್ನು ನೆನೆಸಿಕೊಂಡಿದ್ದಾರೆ. ಇದೇ ವೇಳೆ ಕನ್ನಡ ಚಿತ್ರರಂಗದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಬಗ್ಗೆ ಮಾತನಾಡಿದ್ದಕ್ಕೆ ನೋಟಿಸ್ ನೀಡಲಾಗಿದೆ. ಇದು ವಿಪರ್ಯಾಸವಲ್ಲದೆ ಮತ್ತೇನು ಎಂಬುದು ಸುಧೀರ್ ಪ್ರಶ್ನೆ.

ಸುಧೀರ್ ಅತ್ತಾವರ್ ಅವರ ಈ ಬೇಸರದ ಮಾತಿನ ನಡುವೆಯೂ ಸಂಭ್ರಮವಿತ್ತು. ಅವರು ನಿರ್ದೇಶಿಸಿದ ಮೊದಲ ಚಿತ್ರ `ಪರಿ~ ಬಾಂಬೆಯಲ್ಲಿ ಬಾಲಿವುಡ್‌ನ ಹಿರಿಯ ಕಲಾವಿದರು, ನಿರ್ದೇಶಕರ ಸಮ್ಮುಖದಲ್ಲಿ ಪ್ರದರ್ಶನಗೊಂಡಿದೆ. ಹಿಂದಿ ನಟ ಅಖಿಲೇಂದ್ರ ಮಿಶ್ರಾ, ರಂಜೀತ್, ಅಂಜನ್ ಶ್ರೀವಾಸ್ತವ್, ನಟಿ ಅನುರಾಧಾ ಪಟೇಲ್, ಸುಲಭ ಆರ್ಯ, ಗಾಯಕ ಉದಿತ್ ನಾರಾಯಣ್, ಗಾಯಕಿ ಸಾಧನಾ ಸರ್ಗಮ್, ನಿರ್ದೇಶಕ ರಮೇಶ್ ತಲ್ವಾರ್, ಬಿಜನ್ ದಾಸ್ ಗುಪ್ತಾ ಹೀಗೆ ಸುಮಾರು 50ಕ್ಕೂ ಅಧಿಕ ಬಾಲಿವುಡ್ ಮಂದಿ `ಪರಿ~ ನೋಡಿ ಪ್ರಶಂಸೆಯ ಮಾತುಗಳನ್ನಾಡಿದ್ದಾರಂತೆ.

ನಟ ರಾಕೇಶ್ ಮತ್ತು ಶ್ರೀನಾಥ್ ಅಭಿನಯದ ಕುರಿತಂತೂ ಅದ್ಭುತ ಪ್ರತಿಕ್ರಿಯೆ ಬಂದಿದೆ. ಕೆಲವು ದೋಷಗಳನ್ನು ಅವರು ಗುರುತಿಸಿದ್ದಾರೆ. ಒಟ್ಟಾರೆ ಎಲ್ಲರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎನ್ನುವ ಖುಷಿ ಸುಧೀರ್ ಅತ್ತಾವರ್ ಅವರದು. ಭಾರತ ಚಿತ್ರರಂಗಕ್ಕೆ 100 ವರ್ಷ ತುಂಬಿದ ಸಂಭ್ರಮವನ್ನು ಕನ್ನಡದ ಮಟ್ಟಿಗೆ ಅರ್ಥವತ್ತಾಗಿ ಆಚರಿಸುವ ಯೋಗ ತಮಗೆ ಲಭಿಸಿತು ಎಂದು ಅವರು ಪುಳಕಿತರಾದರು.

ಅಲ್ಲಿ ಸೇರಿದ್ದ ಗಣ್ಯರು ನೀನ್ಯಾರೆಂದು ನಮಗೆ ಗೊತ್ತಿಲ್ಲ. ಆದರೆ ಸತ್ಯು ಮೇಲಿನ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇವೆ ಎಂದವರು, ಚಿತ್ರ ವೀಕ್ಷಿಸಿದ ಬಳಿಕ ಸುಧೀರ್ ಅವರ ನಿರ್ದೇಶನವನ್ನು ಮೆಚ್ಚಿಕೊಂಡರಂತೆ. ಸತ್ಯು ಅವರ ತಂಡದ ಆಭರಣ ಎಂದು ಅಂಜನ್ ಶ್ರೀವಾಸ್ತವ್ ಅವರಿಂದ ಸುಧೀರ್ ಬೆನ್ನುತಟ್ಟಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ದೇಶದಲ್ಲಿ ಮಾರುಕಟ್ಟೆ ಇಲ್ಲ ಎಂಬುದು ಸುಳ್ಳು ಎಂಬುದು ಇದರಿಂದ ಸಾಬೀತಾಗಿದೆ. ಉತ್ತಮ ಸಿನಿಮಾ ಮಾಡಿದಾಗ ದೇಶದ ಎಲ್ಲೆಡೆ ಜನ ಖಂಡಿತಾ ನೋಡುತ್ತಾರೆ ಎನ್ನುವುದು ಸುಧೀರ್ ಅನುಭವದ ಮಾತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.