ಹಿತ್ತಲ ಗಿಡ ಹುಡುಕುತ್ತಾ...

7

ಹಿತ್ತಲ ಗಿಡ ಹುಡುಕುತ್ತಾ...

Published:
Updated:

ಹಾವೇರಿ ಜಿಲ್ಲೆಯ ಮಹಿಳಾ ಜನಪ್ರತಿನಿಧಿಗಳ ಮಟ್ಟಿಗೆ ಅದೊಂದು ಅವಿಸ್ಮರಣೀಯ ದಿನ. ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಘಟಕ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಯ ಆಯ್ದ ಸದಸ್ಯೆಯರಿಗಾಗಿ `ಮಹಿಳೆ ಮತ್ತು ವಿಜ್ಞಾನ~ ಕುರಿತು ಈಚೆಗೆ ಕಾರ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರ ಎಂದರೆ ಯಥಾಪ್ರಕಾರ ಗಣ್ಯರಿಂದ ಉದ್ಘಾಟನೆ, ಒಂದಿಷ್ಟು ಭಾಷಣ, ಉಪನ್ಯಾಸ ಎಂದುಕೊಂಡು ಒಲ್ಲದ ಮನಸ್ಸಿನಿಂದ ಭಾರದ ಹೆಜ್ಜೆ ಹಾಕುತ್ತಾ ಬಂದಿದ್ದ ಆ ಮಹಿಳೆಯರ ಊಹೆ ಒಮ್ಮೆಗೇ ಹುಸಿಯಾಯಿತು. ಸಂಘಟಕರು ಶಿಬಿರದ ಸಂಘಟನೆಯಲ್ಲಿ ಜಾಣ್ಮೆ ಮೆರೆದಿದ್ದರು. ನಾಲ್ಕು ಗೋಡೆಗಳ ಮಧ್ಯೆ ಮಹಿಳೆಯರನ್ನು ಕೂರಿಸಿ ಭಾಷಣದ ಬೋರು ಹೊಡೆಸುವ ಉಸಾಬರಿಗೆ ಅವರು ಹೋಗಲಿಲ್ಲ.ಮಹಿಳಾ ಬಳಗವನ್ನು ನೇರವಾಗಿ ಹಾವೇರಿ ನಗರದ ಹೊರ ವಲಯದಲ್ಲಿರುವ ಸಿಂದಗಿ ಶಾಂತವೀರೇಶ ಆಯುರ್ವೇದ ಮಹಾವಿದ್ಯಾಲಯದ ಔಷಧಿ ವನಕ್ಕೆ ಕರೆದೊಯ್ದರು. ವನ ಹೊಕ್ಕುತ್ತಿದ್ದಂತೆಯೇ ಶಿಬಿರಾರ್ಥಿಗಳಲ್ಲೆಲ್ಲ ಅದೇನೋ ಹೊಸತನ, ಹುರುಪು, ಹುಮ್ಮಸ್ಸು ತಂತಾನೇ ಆವರಿಸಿಕೊಂಡಿತು. ಹೊಸದೊಂದು ಪ್ರಪಂಚ ಪ್ರವೇಶಿಸಿದ ಅನುಭವ.ಶಾಂತವನದಲ್ಲಿನ ಪ್ರಶಾಂತಿ, ಆಹ್ಲಾದಕರ ವಾತಾವರಣ, ಹಚ್ಚ ಹಸುರಿನ ಔಷಧಿ ವನದ ಸಿರಿ ಮಹಿಳೆಯರ ಮನಸೂರೆಗೊಂಡಿತು. ಆಯುರ್ವೇದ ಮಹಾವಿದ್ಯಾಲಯದ ಔಷಧಿ ವನ ಎಂದ ಮೇಲೆ ಕೇಳಬೇಕೇ. ಎಲ್ಲೆಲ್ಲಿಂದಲೋ ಹುಡುಕಿ, ಕೆದಕಿ ತಂದು ಸಮೃದ್ಧವಾಗಿ ಬೆಳೆಸಿದ ಔಷಧಿ ವೃಕ್ಷಗಳ ತಾಣವದು. ಪ್ರತಿ ವೃಕ್ಷದ ಬಳಿಯೂ ಫಲಕ, ಅದರಲ್ಲಿ ವೃಕ್ಷದ ಸಾಮಾನ್ಯ ಹೆಸರು, ವೈಜ್ಞಾನಿಕ ಹೆಸರು, ಔಷಧಿಯ ಪ್ರಾಮುಖ್ಯತೆಯ ವಿವರಣೆ.ವನದ ಸಿರಿಯೊಳಗೆ ಕಾಲಿಡುತ್ತಿದ್ದಂತೆಯೇ ಶಿಬಿರಾರ್ಥಿಗಳಿಗೆ ಬಿಡುವಿಲ್ಲದ ಕೆಲಸ. ಕಣ್ಣಿಗೆ ಕಂಡ ಔಷಧಿ ವೃಕ್ಷದ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುವುದು, ಎಲೆ, ಕಾಂಡ, ಬೇರು, ತೊಗಟೆ, ಬೊಗಟೆ, ಮೊಗ್ಗು, ಬೀಜದಂತಹ ಎಲ್ಲ ಭಾಗಗಳನ್ನೂ ತೀಕ್ಷ್ಣವಾಗಿ ಅವಲೋಕಿಸಿ ವಾಸನೆ ಆಘ್ರಾಣಿಸುವುದು, ರುಚಿ ನೋಡುವುದರಲ್ಲಿ ಎಲ್ಲರೂ ಮಗ್ನ.`ಇದು ಶತಾವರಿ. ಸಾಮಾನ್ಯ ಭಾಷೆಯಲ್ಲಿ ಇದನ್ನು ಹಲವು ಮಕ್ಕಳ ತಾಯಿ ಬೇರು ಎಂತಲೂ ಹೇಳುತ್ತಾರೆ. ಬೇರುಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಹಾಲಿನ ಜೊತೆ ಸೇವಿಸಿದರೆ ಬಾಣಂತಿಯರ ಕ್ಷೀರಗ್ರಂಥಿಗಳು ಪ್ರಚೋದನೆಗೊಂಡು ಹಾಲಿನ ಉತ್ಪತ್ತಿ ಹೆಚ್ಚುತ್ತದೆ. ನರ ದೌರ್ಬಲ್ಯಕ್ಕೂ ಇದು ದಿವ್ಯ ಔಷಧಿ~ ಎಂದು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅಶ್ವಿನಿ ವಸ್ತ್ರದ ಅವರು ವಿವರಿಸುತ್ತಿದ್ದಂತೆಯೇ, ಮಹಿಳೆಯರಲ್ಲಿ ಪಟಾಪಟ್ ಅದನ್ನೆಲ್ಲಾ ಬರೆದಿಟ್ಟುಕೊಳ್ಳುವ ತವಕ.

`ಇದು ಅಮೃತಬಳ್ಳಿ. ಜ್ವರ, ಕೆಮ್ಮು, ನೆಗಡಿ, ಶೀತ, ಕಫ, ಚರ್ಮರೋಗ, ಮುಪ್ಪು, ಮಧುಮೇಹ... ಹೀಗೆ ಸರ್ವ ರೋಗಗಳನ್ನೂ ಉಪಶಮನ ಮಾಡುವ ಔದಾರ್ಯ ಈ ಬಳ್ಳಿಯ ಒಂದೊಂದು ಕಣದಲ್ಲೂ ಅಡಗಿದೆ. ಎಲೆಯ ರಸದ ಸಾರವನ್ನು ಅಮೃತ ಸತ್ವವನ್ನಾಗಿ ಬಳಸಿಕೊಳ್ಳಲಾಗುತ್ತಿದೆ~ ಎಂಬ ಸತ್ಯವನ್ನು ತಿಳಿದುಕೊಂಡ ಮಹಿಳೆಯರು `ನಮ್ಮ ಹಿತ್ತಲಲ್ಲೂ ಈ ಬಳ್ಳಿ ಇದೆ, ಆದರೆ ಇದು ಇಷ್ಟೊಂದು ಬಳಕೆಯೋಗ್ಯ ಎಂಬುದು ನಮಗೆ ಗೊತ್ತೇ ಇರಲಿಲ್ಲವಲ್ಲ?~ ಎಂದು ಮೂಗಿನ ಮೇಲೆ ಬೆರಳಿಟ್ಟರು.ಬಿಲ್ವ ಪತ್ರೆಯ ಹಣ್ಣಿನ ತಿರುಳು ತಿಂದರೆ ಅತಿಸಾರ ತಹಬಂದಿಗೆ ಬರುತ್ತದೆ. ಇದರ ಬೇರಿನ ಕಷಾಯ ಸೇವನೆ ವಾತಕ್ಕೆ ರಾಮಬಾಣ. ಇದರ ಎಲೆ ಮಧುಮೇಹಿಗಳಿಗೂ, ಸ್ಥೂಲದೇಹಿಗಳಿಗೂ ಹೇಳಿ ಮಾಡಿಸಿದ ಮದ್ದು. ಅಶ್ವಗಂಧದ ಬೇರು ನರದೌರ್ಬಲ್ಯ ನಿಯಂತ್ರಿಸುತ್ತದೆ, ಅಲ್ಲದೆ ವೀರ್ಯಾಣು ವೃದ್ಧಿಸಿ ನಪುಂಸಕತೆ ನಿವಾರಣೆಗೂ ಸೈ... ಹೀಗೆ ನೂರಾರು ವನಸ್ಪತಿಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡವರಲ್ಲಿ ಹೊಸದೇನನ್ನೋ ತಿಳಿದುಕೊಂಡ ಹುಮ್ಮಸ್ಸು ಎದ್ದು ಕಾಣುತ್ತಿತ್ತು.ಇದು ಸಾಲದೆಂಬಂತೆ ಮಹಾವಿದ್ಯಾಲಯದ `ಅಂಗರಚನಾ ಸಂಗ್ರಹಾಲಯ~ಕ್ಕೂ ಸಂದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಮೂತ್ರಪಿಂಡ, ಪಿತ್ತಜನಕಾಂಗ, ಮೇದೋಜೀರಕಾಂಗ, ಯಕೃತ್ತು, ಹೃದಯ, ಜಠರ, ಸಣ್ಣ ಕರುಳು, ದೊಡ್ಡ ಕರುಳು... ಹೀಗೆ ಮಾನವ ದೇಹ ಬಚ್ಚಿಟ್ಟುಕೊಂಡಿರುವ ಬಿಡಿ ಭಾಗಗಳ ಸಂಗ್ರಹದ ಮಾದರಿಗಳು, ತಿಂಗಳ ಪಿಂಡಗೂಸಿನಿಂದ ಹಿಡಿದು ಐದು ತಿಂಗಳವರೆಗಿನ ಭ್ರೂಣದ ಬೆಳವಣಿಗೆಯ ಹಂತ, ತಾಯಿಯಿಂದ ಗರ್ಭಸ್ಥ ಮಗುವಿಗೆ ಆಹಾರ ಪೂರೈಕೆ ಮಾದರಿಗಳನ್ನು ಕಣ್ಣು ಮಿಟುಕಿಸದಂತೆ ನೋಡಿ ಶಿಬಿರಾರ್ಥಿಗಳು ಪುಳಕಿತರಾದರು. ನಂತರ ಇಸ್ರೊ ನಿವೃತ್ತ ವಿಜ್ಞಾನಿ ಡಾ. ಪ್ರಭಾಕರ ಕುಲಕರ್ಣಿ ಅವರು ಮಿನುಗುತಾರೆ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ ಅವರಂತಹ ಭಾರತೀಯ ಮೂಲದ ದಿಟ್ಟ ಮಹಿಳೆಯರ ದೃಷ್ಟಾಂತಗಳೊಂದಿಗೆ `ಅಂತರಿಕ್ಷದಲ್ಲಿ ಮಹಿಳೆ~ ಕುರಿತು ನೀಡಿದ ಉಪನ್ಯಾಸ ಶಿಬಿರಾರ್ಥಿಗಳಿಗೆ ಕೂತ ಜಾಗದಲ್ಲೇ `ಅಂತರಿಕ್ಷ ಯಾನ~ ಮಾಡಿಸಿತು. ಹೀಗೆ ಹೊಸ ವಿಚಾರಗಳನ್ನು, ವೈಜ್ಞಾನಿಕ ಚಿಂತನೆಗಳನ್ನು ಹೊತ್ತು ಮಹಿಳೆಯರು ಹೆಮ್ಮೆಯಿಂದ ಮನೆಯತ್ತ ಹೆಜ್ಜೆ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry