ಹಿನ್ನೀರು: ಮೀನುಗಾರಿಕೆಗೂ ಬಂತು ಬರ

7

ಹಿನ್ನೀರು: ಮೀನುಗಾರಿಕೆಗೂ ಬಂತು ಬರ

Published:
Updated:
ಹಿನ್ನೀರು: ಮೀನುಗಾರಿಕೆಗೂ ಬಂತು ಬರ

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಮೀನುಗಾರಿಗೆ ಬಂದಿರಗಿದೆ ಬರ. ಬಲೆಗೆ ಬೀಳುತ್ತಿಲ್ಲ ಮೀನು. ದಿನದಿಂದ ದಿನಕ್ಕೆ ತಳ ಸೇರುತ್ತಿದೆ ಜಲಾಶಯ. ಹೂಳಿನಿಂದ ತುಂಬಿರುವ ಹಿನ್ನೀರಿನಲ್ಲಿ ಮೀನುಗಾರಿಕೆಗೆ ತ್ರಾಸದಾಯಕ.ಹೌದು, ಸತತ ಎರಡು ವರ್ಷಗಳಿಂದ ತಲೆದೋರಿರುವ ಬರಗಾಲದ ಬಿಸಿ ಆಲಮಟ್ಟಿ ಹಿನ್ನೀರಿನಲ್ಲಿ ಮೀನುಗಾರಿಕೆಗೆ ತಟ್ಟಿದೆ. ಒಮ್ಮೆ ಬಲೆ ಬೀಸಿದರೇ ಕ್ವಿಂಟಾಲ್ ಗಟ್ಟಲೆ ಬೀಳುತ್ತಿದ್ದ ಮೀನುಗಳಿಗೆ ಇದೀಗ ದಿನಪೂರ್ತಿ ತಡಕಾಡಿದರೂ ಬಲೆಗೆ ಬೀಳುವ ಮೀನು ಕೆ.ಜಿ. ದಾಟುತ್ತಿಲ್ಲ. ಪರಿಣಾಮ ಬಾಗಲಕೋಟೆ, ಆಲಮಟ್ಟಿ, ಕೊಲ್ಹಾರ ಮೀನು ಮಾರುಕಟ್ಟೆ ಬಣಗುಡುತ್ತಿವೆ. ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಾವಿರಕ್ಕೂ ಅಧಿಕ ಮೀನುಗಾರರ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ.ಜಿಲ್ಲೆಯ ಆಲಮಟ್ಟಿ ಹಿನ್ನೀರು ವ್ಯಾಪ್ತಿಯ ಹೆರಕಲ್, ಬೆನ್ನೂರು, ಶಿರುಗುಪ್ಪ, ಇಲಾಳ, ತಳಗಿಹಾಳ, ಹೊದ್ಲೂರು, ಯತ್ನಟ್ಟಿ, ಕಂದಗಲ್, ಬೀರಕಬ್ಬಿ, ಕೊಲ್ಹಾರ, ಗಲಗಲಿ, ಮಾಚಕನೂರು, ಭಂಟನೂರ, ಬದನೂರು, ಸೊಕನಾದಗಿ, ಛಬ್ಬಿ, ಬಾವಲತ್ತಿ, ಕಾತರಕಿ, ಆಲಗುಂಡಿ, ಚಿಕ್ಕಾಲಗುಂಡಿ ಮತ್ತಿತರ ಭಾಗದಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ.ಹಿನ್ನೀರಿನಲ್ಲಿ ಸಿಗುವ ಬಾಳೆ ಮೀನು, ರವ್, ಮುಚ್ಚಾಲ, ಗೊಜಳೆ, ಕಟ್ಲ, ಹಾವು ಮೀನು, ಕಾಗೆ ಮೀನು, ಏಡಿ, ಸಿಗಡಿ ಮತ್ತಿತರ ಮೀನುಗಳನ್ನು ಪ್ರತಿನಿತ್ಯ ಹತ್ತಾರು ಕೆ.ಜಿ. ಹಿಡಿದು ಸಮೀಪದ ಬಾಗಲಕೋಟೆ, ವಿಜಾಪುರ ಸೊಲ್ಲಾಪುರ, ಹುಬ್ಬಳ್ಳಿ ಮಾರುಕಟ್ಟೆಗೆ ಕಳುಹಿಸುವ ಮೂಲಕ ಜೀವನ ಸಾಗಿಸು ತ್ತಿದ್ದಾರೆ.ಕಳೆದ ಎರಡು ವರ್ಷಗಳಿಂದ ಮಳೆಯಾಗದೇ ಬರ ತಲೆದೋರಿರುವುದರಿಂದ ಮೀನಿನ ಸಂತತಿ ಕಡಿಮೆಯಾಗಿದೆ. ಪರಿಣಾಮ ಬಲೆಗೆ ಮೀನುಗಳು ಬೀಳುತ್ತಿಲ್ಲ.ಕಳೆದ ಎರಡು ವರ್ಷದಲ್ಲಿ ಜೂನ್‌ನಲ್ಲಿ ಮಳೆಯಾಗದೇ ಕೈಕೊಟ್ಟಿರುವ ಕಾರಣ  ಮೀನುಗಳ ಸಂತಾನೋತ್ಪತ್ತಿಗೆ ಧಕ್ಕೆಯಾಗಿದೆ. ಮಳೆಯ ಕೊರತೆ ಜೊತೆಗೆ ಮೀನುಗಾರಿಕೆ ಇಲಾಖೆ ಅಗತ್ಯ ಪ್ರಮಾಣದಲ್ಲಿ ಮೀನಿನ ಮರಿಗಳನ್ನು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುತ್ತಿಲ್ಲ ಎಂಬ ಆರೋಪ ಕೂಡ ಮೀನುಗಾರರಿಂದ ವ್ಯಕ್ತವಾಗಿದೆ.ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಕಲಾದಗಿಯ ಮೀನುಗಾರ ಯಾಸಿನ್ ಎಂ.ಮುಜಾವರ, `ಆಲಮಟ್ಟಿ ಹಿನ್ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮೀನುಗಳು ಆಳ ನೀರಿನತ್ತ ಹೋಗುತ್ತಿವೆ. ಜಲಾಶಯದಲ್ಲಿ ಹೂಳು ಅಧಿಕವಾಗಿದೆ. ಇದರಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ದೋಣಿಗಳನ್ನು(ತೆಪ್ಪ) ನಡೆಸುವುದು ಕಷ್ಟವಾಗುತ್ತಿದೆ' ಎಂದರು.`ಮೀನುಗಾರಿಕೆಯನ್ನೂ ನಂಬಿಕೊಂಡಿರುವ ನಮ್ಮ ಜೀವನ ಸಾಗಿಸುವುದು ಕಷ್ಟಕರವಾಗಿದೆ. ತಕ್ಷಣ ಸಂಬಂಧ ಪಟ್ಟ ಇಲಾಖೆಯವರು ಹೂಳನ್ನು ತೆಗೆಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಮೀನು ಮರಿಗಳನ್ನು ಜಲಾಶಯಕ್ಕೆ ಬಿಡಬೇಕು' ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry