ಹಿಪ್ಪುನೇರಳೆಗೆ ಕೀಟ ಬಾಧೆ: ರೈತರಿಗೆ ಸಲಹೆ

7

ಹಿಪ್ಪುನೇರಳೆಗೆ ಕೀಟ ಬಾಧೆ: ರೈತರಿಗೆ ಸಲಹೆ

Published:
Updated:

ಮಂಡ್ಯ: ತಾಲ್ಲೂಕಿನ ಹಳೇ ಬೂದನೂರು, ಕಟ್ಟೆದೊಡ್ಡಿ, ಮಲ್ಲಯನದೊಡ್ಡಿ, ಬಿ.ಯರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಿಪ್ಪುನೇರಳೆ ಬೆಳೆಗೆ ಎಲೆ ಸುರುಳಿ ಕೀಟದ ಹಾವಳಿ ಕಂಡುಬಂದಿದೆ.ಈ ವರ್ಷ ಸುರಿದ ಅಕಾಲಿಕ ಮತ್ತು ಬಿಟ್ಟುಬಿಟ್ಟು ಬರುವ ಮಳೆಯಿಂದಾಗಿ ಎಲೆ ಸುರುಳಿ ಕೀಟದ ಹಾವಳಿ ಕಂಡು ಬಂದಿದ್ದು, ರೇಷ್ಮೆ ಇಲಾಖೆ ಶಿಫಾರಸು ಮಾಡಿದಂಥ ಔಷಧವನ್ನು ಬಳಸುವಂತೆ ರೈತರಿಗೆ ಸಲಹೆ ನೀಡಲಾಗಿದೆ.ಹತೋಟಿ ಕ್ರಮಗಳು: ಬಾಧೆ ತಗುಲಿದಂಥ ಭಾಗಗಳನ್ನು ಚಿವುಟಿ, ಹುಳುವಿನ ಸಮೇತ ಪಾಲಿಥೀನ್ ಚೀಲಗಳಲ್ಲಿ ಸಂಗ್ರಹಿಸಿ ಸುಡಬೇಕು. ಆಳವಾಗಿ ಉಳುಮೆ ಮಾಡುವುದು ಮತ್ತು ನೀರು ಹಾಯಿಸುವುದರಿಂದ ಮಣ್ಣಿನಲ್ಲಿರುವ ಕೀಟದ ಕೋಶಗಳನ್ನು ಕೊಲ್ಲಬಹುದಾಗಿದೆ. ಅಲ್ಲದೇ, ಬೆಳಕಿನ ಟ್ರ್ಯಾಪ್‌ಗಳನ್ನು ಉಪಯೋಗಿಸಿ, ಎಲೆ ಸುರಳಿ ಕೀಟದ ಪತಂಗಗಳನ್ನು ಆಕರ್ಷಿಸಿಸುವ ಮೂಲಕ ಕೊಲ್ಲಬಹುದು.ಈ ಔಷಧಗಳನ್ನು ಬಳಸಿ: 10 ಲೀಟರ್ ನೀರಿಗೆ 10 ಎಂ.ಎಲ್ ಡಿಡಿವಿಪಿ (ಶೇ 0.076) ಕೀಟನಾಶಕವನ್ನು ಕಡ್ಡಿ ಕಟಾವಾದ 10 ದಿನದ ನಂತರ ಮತ್ತು ಎರಡನೆ ಸಿಂಪರಣೆಯಾಗಿ. ಡಿಡಿವಿಪಿ ಅಥವಾ ಬೇವಿನ ಕೀಟನಾಟಕವನ್ನು (10 ಲೀ. ನೀರಿಗೆ 30 ಎಂ.ಎಲ್.) 20 ದಿನಗಳ ನಂತರ ಸಿಂಪಡಣೆ ಮಾಡಬೇಕಿದೆ.10-20 ದಿನಗಳ ಸುರಕ್ಷಿತ ಅವಧಿಯನ್ನು ಪಾಲಿಸಿ, ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡಬಹುದಾಗಿದೆ ಎಂದು ವಿಜ್ಞಾನಿ ಡಾ. ವಿನೋದ್ ಬ. ಮಾಥೂರ್ ತಿಳಿಸಿದ್ದಾರೆ.ಅಲ್ಲದೇ, ಟ್ರೈಕೊಗ್ರಾಮ ಕಿಲೂವಿಸ್ ಜೈವಿಕ ಮೊಟ್ಟೆ ಪರತಂತ್ರ ಜೀವಿಗಳನ್ನು (ಎಕರೆಗೆ 4 ಟ್ರೈಕೊ ಕಾರ್ಡ್‌ಗಳನ್ನು ವಾರಕ್ಕೊಂದರಂತೆ) ಬಿಡುಗಡೆಗೊಳಿಸಿ, ಜೈವಿಕ ವಿಧಾನದಲ್ಲೂ ಇದನ್ನು ನಿಯಂತ್ರಿಸಬಹುದು ಎನ್ನುತ್ತಾರೆ.ಟ್ರೈಕೊ ಕಾರ್ಡ್ ಅವಶ್ಯಕತೆ ಇರುವ ರೈತರು, ಮಂಡ್ಯದಲ್ಲಿನ ಪರತಂತ್ರ ಜೀವಿ ಪ್ರಯೋಗಾಲಯ ಮತ್ತು ಜೈವಿಕ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯದಲ್ಲಿನ ಕೃಷಿ ಅಧಿಕಾರಿಗಳನ್ನು (ದೂ.ಸ. 08232 238602) ಭೇಟಿ ಮಾಡಿ ಪಡೆಯಬಹುದು.ಮಾಹಿತಿಗೆ ಸಂಪರ್ಕಿಸಿ: ಮದ್ದೂರಿನ ಸಂಶೋಧನಾ ವಿಸ್ತರಣಾ ಕೇಂದ್ರ (08232 232633) ಹಾಗೂ ರೇಷ್ಮೆ ಉಪ ನಿರ್ದೇಶಕರ ಕಚೇರಿ (ದೂ.ಸಂ. 08232 220796) ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry