ಹಿಮಗಾಳಿಗೆ ಅಮೆರಿಕ ತತ್ತರ

ವಾಷಿಂಗ್ಟನ್ (ಎಎಫ್ಪಿ): ಭಾರಿ ಹಿಮ ಗಾಳಿಗೆ ಸಂಪೂರ್ಣ ಅಮೆರಿಕ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರಮುಖ ರಸ್ತೆಗಳಲ್ಲಿ ಮೊಣಕಾಲುದ್ದದವರೆಗೆ ಮಂಜು ಆವರಿಸಿಕೊಂಡಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪ್ರಕೃತಿಯ ಮುನಿಸಿನಿಂದ ಅಮೆರಿಕದ ವಿವಿಧ ರಾಜ್ಯಗಳಿಂದ ಹೊರಡಬೇಕಿದ್ದ 3,700ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ.
ಉತ್ತರ ಧ್ರುವ ಪ್ರದೇಶದಿಂದ ಬೀಸುತ್ತಿರುವ ಜೋರಾದ ಗಾಳಿಯಿಂದ ಅಮೆರಿಕದ ಪೂರ್ವ ಪ್ರದೇಶ ಶೀತ ಗಾಳಿಗೆ ತತ್ತರಿಸಿದೆ. ಈ ಕುರಿತು ರಾಷ್ಟ್ರೀಯ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು.
ಜಾರ್ಜಿಯಾದಿಂದ ದಕ್ಷಿಣ ಕರೊಲಿನಾ ವರೆಗೆ 2.5 ಸೆಂಟಿ ಮೀಟರ್ ವರೆಗೆ ಹಿಮ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಅಲ್ಬಾಮಾದಿಂದ ವರ್ಜಿನಿಯಾದವರೆಗೆ ಒಂದು ಅಡಿಯಷ್ಟು ಹಿಮ ಆವರಿಸಿಕೊಂಡಿದೆ. ಇದರಿಂದ ಉತ್ತರ ಕರೊಲಿನಾದ ಹಲವು ಕಡೆ ಅಪಘಾತ ಸಂಭವಿಸಿದೆ. ದಿನಕಳೆದಂತೆ ಹಿಮಗಾಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಒಂದುವೇಳೆ ನೀವು ಬೆಚ್ಚನೆಯ ಸ್ಥಳದಲ್ಲಿದ್ದರೆ, ಅಲ್ಲಿಯೇ ಇರುವುದು ಸುರಕ್ಷಿತ. ಈಗಾಗಲೇ ಎರಡು ಜೀವ ಕಳೆದುಕೊಂಡಿದ್ದೇವೆ’ ಎಂದು ಉತ್ತರ ಕರೊಲಿನಾ ಗವರ್ನರ್ ಪ್ಯಾಟ್ ಮ್ಯಾಕ್ಕ್ರೊರಿ ಹೇಳಿದ್ದಾರೆ. ಜಾರ್ಜಿಯಾದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆದರೆ, ಸರ್ಕಾರದಿಂದ ಈವರೆಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಎರಡು ವಾರಗಳಿಂದ ಬೀಸುತ್ತಿರುವ ಶೀತ ಗಾಳಿಯಿಂದಾಗಿ ಅಟ್ಲಾಂಟಾದಲ್ಲಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪುನರಾರಂಭಕ್ಕೆ ಇನ್ನಷ್ಟು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.