`ಹಿಮಯುಗ'ದ ಹಾದಿಯಲ್ಲಿ

7

`ಹಿಮಯುಗ'ದ ಹಾದಿಯಲ್ಲಿ

Published:
Updated:
`ಹಿಮಯುಗ'ದ ಹಾದಿಯಲ್ಲಿ

ವಿವಿಧ ಪ್ರದೇಶಗಳ ತಾಪಮಾನದ ಏರಿಳಿತ, ಋತುಮಾನಗಳ ಆಗಮನ - ನಿರ್ಗಮನ, ಮಳೆ ಮಾರುತಗಳ ಆವರ್ತನ, ಹಿಮಪಾತ - ಬಿರುಗಾಳಿ - ಚಂಡಮಾರುತಗಳ ಪುನರಾವರ್ತನ .... ಇಂಥ ಹವೆಯ ನಡವಳಿಕೆಗಳೆಲ್ಲ ನಿಯಮಬದ್ಧ ನಿರ್ದಿಷ್ಟಾವಧಿಯ ಚಕ್ರವನ್ನೇ ಪ್ರತಿ ವರ್ಷ ಅನುಸರಿಸುತ್ತಿರುವುದು ಎಲ್ಲ ಜನರ ಅನುಭವಕ್ಕೂ ಬಂದಿರುವ ವಿಷಯ.ಇಂಥ ಹ್ರಸ್ವ ಚಕ್ರಗಳಿಗೆ ಹೋಲಿಸಲಾಗದ ಬಹು ದೀರ್ಘ ಅವಧಿಗಳ ಚಕ್ರೀಯ ವಿದ್ಯಮಾನಗಳೂ ಭೂ ಹವೆಯಲ್ಲಿ ಸಂಭವಿಸುತ್ತಿರುವುದು ಧರೆಯ ದೀರ್ಘ ಇತಿಹಾಸದಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಅಂತಹ ಒಂದು ಪ್ರಧಾನ ವಿದ್ಯಮಾನವೇ `ಹಿಮಯುಗ' (ಐಸ್ ಏಜ್).ಇಡೀ ಧರೆಗೆ ಶೀತ ಮುಸುಕಿ, ಭುವಿಯ ಬಹುಭಾಗವನ್ನು ಹಿಮದ ಹಾಳೆ - ಚಪ್ಪಡಿಗಳು ಆವರಿಸಿ ನಿಲ್ಲುವ ಕಾಲಾವಧಿ ಅದು (ಚಿತ್ರ - 7). ವಾಯುಮಂಡಲದ ತಾಪ ಕ್ರಮೇಣ ಕುಸಿದು, ಕಡಲ ನೀರೆಲ್ಲ ತಣಿದು, ಮಂಜಿನ ಮಳೆ ಸುರಿದು, ಹಿಮದ ಹಾಳೆಗಳು ನೆಲದ ಮೇಲೆಲ್ಲ ಸುರಿದು ಜೀವಜಾಲವಿಡೀ ಗಡಗಡ ನಡುಗುವಂತಾಗುವ ಸುದೀರ್ಘ ಅವಧಿಯ ವಿಶಿಷ್ಟ ಭೂ ವಿದ್ಯಮಾನವೇ ಹಿಮಯುಗ (ಕ್ರಮವಾಗಿ ಚಿತ್ರ - 4, 5, 6, 3 ಗಮನಿಸಿ).ಸುಮಾರು ಐದು ನೂರು ಕೋಟಿ ವರ್ಷಗಳ ತನ್ನ ಇತಿಹಾಸದಲ್ಲಿ ನಮ್ಮ ಭೂಮಿ ಹೇರಳ ಹಿಮಯುಗಗಳನ್ನು ಅನುಭವಿಸಿದೆ. ಪ್ರತಿ ಹಿಮಯುಗವೂ ಲಕ್ಷಾಂತರ ವರ್ಷ ಉಳಿದಿದ್ದು ನಂತರ ನಿಧಾನವಾಗಿ ಮುಗಿದು ಹತ್ತು - ಇಪ್ಪತ್ತು ಸಾವಿರ ವರ್ಷ ಅವಧಿಯ `ಬೆಚ್ಚನೆಯ ಯುಗ' ಜಾರಿಗೊಳ್ಳುತ್ತದೆ. ನಾವೀಗ ಇರುವುದು ಇಂಥದೊಂದು ಬೆಚ್ಚನೆಯ ಯುಗದಲ್ಲೇ.ಭೂಮಿಯ ಇತಿಹಾಸದ ಅತ್ಯಂತ ಇತ್ತೀಚಿನ ಹಿಮಯುಗ ಈಗ್ಗೆ ಸುಮಾರು ಹದಿನೆಂಟು ಸಾವಿರ ವರ್ಷ ಹಿಂದೆ ಸಂಭವಿಸಿತ್ತು. ಆಗ ಧರೆಯಲ್ಲಿದ್ದ ಜೀವಿಗಳೆಲ್ಲ ತೀವ್ರ ಚಳಿಯ ಪರಿಸರಕ್ಕೇ ಹೊಂದಿಕೊಂಡಿದ್ದವು. (ಚಿತ್ರ - 12) ಆಗ ಇದ್ದ ಮನುಷ್ಯರು ನಮ್ಮ ಪ್ರಾಚೀನ ಪೂರ್ವಜರಷ್ಟೇ (ಚಿತ್ರ - 13) ಆಧುನಿಕ ಮನುಷ್ಯರಾರೂ ಆಗಿರಲಿಲ್ಲ.ಆ ಹಿಮಯುಗ ಈಗ್ಗೆ ಹನ್ನೆರಡು ಸಾವಿರ ವರ್ಷ ಹಿಂದಿನ ಸುಮಾರಿಗೆ ಅಂತ್ಯಗೊಳ್ಳತೊಡಗಿ ಬೆಚ್ಚನೆಯ ಯುಗ ಕಳೆದ ಹತ್ತು ಸಾವಿರ ವರ್ಷಗಳಿಂದ ಜಾರಿಯಲ್ಲಿದೆ. ಅತೀ ಹಿಮಯುಗದ ಹಿಮರಾಶಿಯದೇ ಶಾಶ್ವತ ದಾಸ್ತಾನು ಈಗಲೂ ಎತ್ತರದ ಆರ್ಕಟಿಕ್ ಪ್ರದೇಶಗಳಲ್ಲೂ (ಚಿತ್ರ - 9, 10) ದಕ್ಷಿಣದ ಇಡೀ ಅಂಟಾರ್ಕ್ಟಿಕಾದಲ್ಲೂ (ಚಿತ್ರ - 2) ಮತ್ತಿತರ ಕೆಲ ನೆಲೆಗಳಲ್ಲೂ ಉಳಿದಿದೆ (ಚಿತ್ರ - 1, ಭೂಪಟದ ಬಿಳಿ ಭಾಗಗಳು ಈಗಿನ ಹಿಮಾವೃತ ನೆಲೆಗಳಾಗಿವೆ).ಭೂಮಿಯ ಬೆಚ್ಚನೆಯ ಹವಾಗುಣ ಹಿಮಯುಗದ ಹಾದಿ ಹಿಡಿಯಲು ಅಥವಾ ಹಿಮಯುಗ ಕರಗಿ ಬಿಸಿಯುಗ ತಲೆ ಹಾಕಲು ವಾಯುಮಂಡಲದ ಉಷ್ಣತೆಯಲ್ಲಿ ಭಾರೀ ಬದಲಾವಣೆ ಆಗಬೇಕಾದ್ದೇನಿಲ್ಲ. ಈಗಿರುವ ತಾಪಮಾನ ಕೆಲ ವರ್ಷಗಳ ಕಾಲ ಸರಾಸರಿ ಎರಡು ಡಿಗ್ರಿ ಕುಸಿದು ಉಳಿದಿದ್ದರೆ ಸಾಕು. ಅಷ್ಟಕ್ಕೇ ಹಿಮಯುಗ ಆರಂಭವಾಗುತ್ತದೆ. ಅಲ್ಲಿಂದಾಚೆಗೆ ವರ್ಷದಿಂದ ವರ್ಷಕ್ಕೆ ವಾತಾವರಣದ ಉಷ್ಣತೆ ತಂತಾನೇ ಕ್ರಮೇಣ ಕಡಿಮೆಯಾಗುತ್ತ ಈಗಾಗಲೇ ವಿವರಿಸಿರುವಂತಹ ಪೂರ್ಣ ಪ್ರಮಾಣದ ಹಿಮಯುಗ ಮೈದಳೆಯುತ್ತದೆ.ಭೂ ವಾತಾವರಣದ ತಾಪಮಾನ ತಗ್ಗುವುದು ಏಕೆ? ಹಾಗಾದಾಗ ಹುಟ್ಟಿಕೊಳ್ಳುವ ಹಿಮಯುಗ ಅಂತ್ಯಗೊಳ್ಳುವುದು ಹೇಗೆ? ಮತ್ತೆ ಮತ್ತೆ ಮರುಕಳಿಸುವುದು ಹೇಗೆ?ಪೃಥ್ವಿಯಲ್ಲಿ ಹಿಮಯುಗದ ಆವರ್ತವನ್ನು ನಿರ್ಧರಿಸುವ ಮತ್ತು ನಿಯಂತ್ರಿಸುವ ಮೂರು ಸ್ಪಷ್ಟ ಚಕ್ರಗಳನ್ನು ಯುಗೋಸ್ಲಾವಿಯಾದ ಪವನ ವಿಜ್ಞಾನಿ `ಮಿಲ್ಯೂಷಿನ್ ಮಿಲಾನ್ಕೋವಿಚ್' ಪ್ರಥಮವಾಗಿ ಸೂಚಿಸಿದ. `ಸೂರ್ಯನ ಸುತ್ತ ಭೂ ಪರಿಭ್ರಮಣ, ಭೂ ಅಕ್ಷದ ವಾಲುವಿಕೆ ಹಾಗೂ ಸೂರ್ಯನ ಸುತ್ತಲಿನ ಭೂಪಥದ ದೀರ್ಘತ್ವ - ಈ ಮೂರೂ ಅಂಶಗಳು ನಿರ್ದಿಷ್ಟ ಕಾಲಾಂತರಗಳಲ್ಲಿ ಚಕ್ರೀಯವಾಗಿ ಬದಲಾಗುತ್ತವೆ ಎಂಬುದನ್ನು ಪತ್ತೆಹಚ್ಚಿದ್ದ.ಈ ಕಾರಣಗಳಿಂದ ಕ್ರಮವಾಗಿ ಇಪ್ಪತ್ತೆರಡು ಸಾವಿರ, ನಲವತ್ತೊಂದು ಸಾವಿರ ಮತ್ತು ಒಂದು ಲಕ್ಷ ವರ್ಷಗಳಿಗೊಮ್ಮೆ ಧರೆಯನ್ನು ತಲುಪುವ ಸೂರ್ಯರಶ್ಮಿಯ ಪ್ರಮಾಣ ಕುಸಿಯುತ್ತದೆ. ಈ ಮೂರು ಚಕ್ರಗಳು ಮೇಳೈಸಿದಾಗಲೆಲ್ಲ ಅವುಗಳ ಒಟ್ಟೂ ಪರಿಣಾಮವಾಗಿ ಹಿಮಯುಗವೊಂದು ಆರಂಭಗೊಳ್ಳುತ್ತದೆ. ಸುಮಾರು ಒಂದೆರಡು ಲಕ್ಷ ವರ್ಷಗಳ ಅಂಥ ಯುಗದ ಅಂತ್ಯದಲ್ಲಿ ಭೂಮಿಗೆ ಬೀಳುವ ಸೂರ್ಯರಶ್ಮಿಯ ಪ್ರಮಾಣ ಅಧಿಕಗೊಳ್ಳುತ್ತ, ಕ್ರಮೇಣ ಧರೆಯನ್ನಾವರಿಸಿದ ಹಿಮಹಾಸುಗಳೂ ಕರಗಿ ಬೆಚ್ಚನೆಯ `ಹಿತಯುಗ' ಆರಂಭವಾಗುತ್ತದೆ.ಹಿಮಯುಗಕ್ಕೆ ಕಾರಣವಾಗುವ ಮತ್ತೂ ಒಂದು ಕಾರಣ ಇದೆ. ನಮ್ಮ ಇಡೀ ಸೌರವ್ಯೆಹ ಅದರ ಮೂಲ ಗ್ಯಾಲಕ್ಸಿಯಾದ ಕ್ಷೀರಪಥದ ಕೇಂದ್ರವನ್ನು ಹದಿನೈದು ಕೋಟಿ ವರ್ಷಗಳಿಗೊಮ್ಮೆ ಪರಿಭ್ರಮಿಸುತ್ತಿದೆ. ಈ ಪ್ರತಿ ಆವರ್ತದಲ್ಲೂ ಸೌರವ್ಯೆಹ ನಮ್ಮ ಕ್ಷೀರಪಥದಲ್ಲಿ ವಿಪರೀತ `ಧೂಳು' ದಟ್ಟೈಸಿರುವ ಪ್ರದೇಶವೊಂದನ್ನು ಹಾಯ್ದು ಸಾಗುತ್ತದೆ. ಸೌರವ್ಯೆಹ ಆ ನೆಲೆಯಲ್ಲಿ ಇರುವಷ್ಟೂ ಕಾಲ - ಲಕ್ಷಾಂತರ ವರ್ಷ - ಭೂಮಿಗೆ ಒದಗುವ ಸೌರಶಕ್ತಿ ಕಡಿಮೆಯಾಗಿ ಹಿಮಯುಗ ಕಾಲಿಡುತ್ತದೆ.ಹೀಗೆ ಪ್ರತಿ 22000 ವರ್ಷ ಮತ್ತು 41000 ವರ್ಷಗಳಿಗೊಮ್ಮೆ ಸಂಭವಿಸಿರುವ ಲಘು ಹಿಮಯುಗಗಳ ಹಾಗೂ ಒಂದು ಲಕ್ಷ ಮತ್ತು ಹದಿನೈದು ಕೋಟಿ ವರ್ಷಗಳಿಗೊಮ್ಮೆ ಆವರ್ತಗೊಂಡಿರುವ ತಿವ್ರ ಹಿಮಯುಗಗಳ ದಾಖಲೆಗಳು ಲಭ್ಯವಾಗಿವೆ. ಅಂಟಾರ್ಕ್ಟಿಕಾದ ಹಿಮಹಾಸಿನ ಪದರಗಳಲ್ಲಿ ಹಾಗೂ ಪದರ ಶಿಲಾಸ್ತರಗಳಲ್ಲಿ ಆ ದಾಖಲೆಗಳು ಸ್ಪಷ್ಟವಾಗಿ ಕಾಣಸಿಕ್ಕಿವೆ.ಈ ಎಲ್ಲ ಆಧಾರ - ಲೆಕ್ಕಾಚಾರಗಳ ಪ್ರಕಾರ ಕೆಲ ವಿಜ್ಞಾನಿಗಳ ಪ್ರಕಾರ ಇನ್ನು ಒಂದೆರಡು ಸಾವಿರ ವರ್ಷಗಳಲ್ಲಿ, ಮತ್ತೆ ಕೆಲ ವಿದ್ವಾಂಸರು ಹೇಳುವಂತೆ ಮುಂದಿನ ಒಂದೆರಡು ನೂರು ವರ್ಷಗಳಲ್ಲೇ ಮುಂದಿನ ಹಿಮಯುಗ ಆರಂಭವಾಗಲಿದೆ. ಭುವಿಗೆ ಹಿಮದ ಹಚ್ಚಡ ಹೊದಿಸಿ ಆಗಿನ ಜೀವಜಾಲಕ್ಕೆ ನೂರು ಬಗೆಯ ನವ ಅನುಭವಗಳನ್ನು ನೀಡಲಿದೆ.ಆ ವರೆಗೂ ಮನುಷ್ಯ ಈ ಭೂಮಿಯನ್ನು ಉಳಿಸಿದ್ದರೆ ಅಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry