ಹಿಮಾಚಲ ಪ್ರದೇಶ ಸಿಎಂ ಪಟ್ಟ; ವೀರಭದ್ರ ಹಾದಿ ಸುಗಮವಲ್ಲ

7

ಹಿಮಾಚಲ ಪ್ರದೇಶ ಸಿಎಂ ಪಟ್ಟ; ವೀರಭದ್ರ ಹಾದಿ ಸುಗಮವಲ್ಲ

Published:
Updated:

ಶಿಮ್ಲಾ (ಐಎಎನ್‌ಎಸ್): ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದೊರಕಿಸಿಕೊಟ್ಟರೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಅವರಿಗೆ ಮುಖ್ಯಮಂತ್ರಿ ಪಟ್ಟ ಸುಲಭವಾಗಿ ಒಲಿಯುವಂತೆ ಕಾಣುತ್ತಿಲ್ಲ.

ಪಕ್ಷದೊಳಗಿನ ಅವರ ವೈರಿಗಳು ವೀರಭದ್ರ ಸಿಂಗ್ ಮುಖ್ಯಮಂತ್ರಿಯಾಗದಂತೆ ತಡೆಯಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಸಿಂಗ್ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ವಾಣಿಜ್ಯ ಸಚಿವ ಆನಂದ್ ಶರ್ಮಾ ಸಹ ಮುಖ್ಯಮಂತ್ರಿ ಪದವಿಯ ಮೇಲೆ ಕಣ್ಣಿಟ್ಟಿದ್ದಾರೆ.ಗುರುವಾರ ರಾತ್ರಿ ಟಿವಿ ವಾಹಿನಿಗಳಿಗೆ ಸಂದರ್ಶನ ನೀಡಿರುವ ಆನಂದ್ ಶರ್ಮಾ, ತಾವು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿಲ್ಲ. ಆದರೆ, ಹೈಕಮಾಂಡ್ ನೀಡುವ  ಜವಾಬ್ದಾರಿಯನ್ನೂ ಹೊರಲು ಸಿದ್ಧ ಎಂದಿದ್ದಾರೆ.ಶರ್ಮಾ ಮತ್ತು ಅವರ ಬೆರಳೆಣಿಕೆಯಷ್ಟು ಬೆಂಬಲಿಗರು ವೀರಭದ್ರ ಸಿಂಗ್ ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಕೋರ್ಟ್ ದೋಷಾರೋಪವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.ಆದರೆ, ಸಿಂಗ್ ನಿಷ್ಠಾವಂತರು ಶರ್ಮಾ ಬೆಂಬಲಿಗರ ಆರೋಪ ತಳ್ಳಿಹಾಕಿದ್ದಾರೆ. ಹೊಸದಾಗಿ ಆಯ್ಕೆಯಾದ 36 ಶಾಸಕರ ಪೈಕಿ ವೀರಭದ್ರ ಅವರಿಗೆ 28 ಶಾಸಕರ ಬೆಂಬಲ ಇದೆ ಎನ್ನುತ್ತಿದ್ದಾರೆ.`ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸಿದ್ದೇವೆ. ಮತದಾರರು ವೀರಭದ್ರ ಸಿಂಗ್ ಅವರ ವಿರುದ್ಧದ ಆರೋಪದ ಕುರಿತು ತಲೆಕೆಡಿಸಿಕೊಂಡಿಲ್ಲ ಎಂಬುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. 25ಕ್ಕೂ ಹೆಚ್ಚು ಹಾಲಿ ಶಾಸಕರು ಮತ್ತು ಅಷ್ಟೇ ಸಂಖ್ಯೆಯ ಮಾಜಿ ಶಾಸಕರು ಶಿಮ್ಲಾಗೆ ಬರಲಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಸಿಂಗ್ ಅವರನ್ನೇ ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎಂಬ ಸಂದೇಶ ನೀಡಲಿದ್ದಾರೆ' ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ಶಾಸಕರೊಬ್ಬರು ಹೇಳುತ್ತಾರೆ.ಸುದ್ದಿಸಂಸ್ಥೆ ಜತೆ ಶುಕ್ರವಾರ ಮಾತನಾಡಿದ ವೀರಭದ್ರ ಸಿಂಗ್, ಪಕ್ಷ ನೀಡಿರುವ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ, ಮುಂದಿನದನ್ನು ಹೈಕಮಾಂಡ್ ಮತ್ತು ಸೋನಿಯಾ ಗಾಂಧಿ ಅವರು ನಿರ್ಧರಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಉತ್ತಮ ಫಲಿತಾಂಶ ಗಳಿಸಲು ಪ್ರಬಲ ನಾಯಕತ್ವ ಬೇಕಿದೆ ಎಂದು ಹೇಳಿದ್ದಾರೆ.ಪಕ್ಷದ ಕೆಲ ನಾಯಕರನ್ನು ಪರೋಕ್ಷವಾಗಿ ಟೀಕಿಸಿರುವ ವೀರಭದ್ರ ಸಿಂಗ್, ಕೆಲವರು ಉದ್ದೇಶಪೂರ್ವಕವಾಗಿ ಪ್ರಚಾರದಿಂದ ಹೊರಗಿದ್ದರು ಎಂದಿದ್ದಾರೆ.ಆನಂದ್ ಶರ್ಮಾ ಅವರಿಗೆ ಹತ್ತಿರವಾಗಿರುವ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೌಲ್ ಸಿಂಗ್ , ಮಾಜಿ ಸಚಿವರಾದ ಜಿ. ಎಸ್. ಬಾಲಿ ಹಾಗೂ ಆಶಾ ಕುಮಾರಿ ಅವರನ್ನು ಉಲ್ಲೇಖಿಸಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ.ಈ ಭಾರಿ ಜಯಭೇರಿಯ ಮೂಲಕ ವೀರಭದ್ರ ಸಿಂಗ್ ತಮ್ಮ ಮೇಲಿನ ಆರೋಪಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.  ಅಲ್ಲದೇ ತಾವೊಬ್ಬ ಜನಪ್ರಿಯ, ವರ್ಚಸ್ಸಿನ ನಾಯಕ ಎಂಬುದನ್ನೂ ಸಾಬೀತುಪಡಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

`ಪಕ್ಷದ ಸೋಲಿಗೆ ಅಭ್ಯರ್ಥಿಗಳ ಆಯ್ಕೆ ಕಾರಣ'

ಶಿಮ್ಲಾ (ಐಎಎನ್‌ಎಸ್): ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಸೋಲಪ್ಪಿರುವ ಬಿಜೆಪಿ ನಾಯಕ ಪ್ರೇಮ್ ಕುಮಾರ್ ಧುಮಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಪಾಲರಾದ ಉರ್ಮಿಳಾ ಸಿಂಗ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಧುಮಾಲ್, ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಸರಿಯಾಗಿ ಆರಿಸದೇ ಇದ್ದುದು ಬಿಜೆಪಿ ಸೋಲಿಗೆ ಕಾರಣ ಎಂದು ಅವರು ಹೇಳಿದರು.

ಪಕ್ಷದ ಸೋಲಿನ ಕಾರಣವನ್ನು ವಿಶ್ಲೇಷಿಸಲು ಶೀಘ್ರವೇ ಸಭೆ ನಡೆಸುವುದಾಗಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry