ಹಿಮಾಲಯದಲ್ಲಿ ನೂಕುನಗ್ಗಲು !

7

ಹಿಮಾಲಯದಲ್ಲಿ ನೂಕುನಗ್ಗಲು !

Published:
Updated:
ಹಿಮಾಲಯದಲ್ಲಿ ನೂಕುನಗ್ಗಲು !

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚರಿತ್ರೆಯಲ್ಲಿ ಅವರೊಂದು ದಾಖಲೆಯನ್ನೇ ಬರೆಯುತ್ತಿದ್ದರು. ಇನ್ನೂರು ಮಂದಿ ಒಟ್ಟಿಗೆ ಪರ್ವತಾರೋಹಣಕ್ಕೆ ಮುಂದಾಗಿದ್ದು ಎವರೆಸ್ಟ್ ಚರಿತ್ರೆಯಲ್ಲಿ ಅದೇ ಮೊದಲು. ಆದರೆ ಅವರ ಆಸೆ ಈಡೇರಲಿಲ್ಲ.ಹಿಮಾಲಯದ ಮೇಲೆ ಆ ಪರಿ ಜನಸಂದಣಿ ಉಂಟಾಗಿದ್ದು ಸಹಿಸಲು ಪ್ರಕೃತಿಗೆ ಅಸಾಧ್ಯವಾಯಿತೇನೋ! ಒಂದೇ ದಿನ (2012ರ ಮೇ 24) ನಾಲ್ವರು ಪರ್ವತಾರೋಹಿಗಳು ಅಸುನೀಗಿದರು. ಅವರಲ್ಲಿ ಕೆನಡಾದ 33 ವರ್ಷದ ಮಹಿಳೆಯೊಬ್ಬರಿದ್ದರು, ಜರ್ಮನಿಯ 61 ವರ್ಷದ ಹಿರಿಯ ನಾಗರೀಕರಿದ್ದರು.ಇನ್ನೂರು ಪರ್ವತಾರೋಹಿಗಳಲ್ಲಿ ಅಂತಿಮವಾಗಿ ಗೌರಿಶಂಕರದ ತುದಿ ಮುಟ್ಟಿದ್ದು 82 ಜನ ಮಾತ್ರ. ಇದು ನೇಪಾಳಿ ಅಧಿಕಾರಿಗಳ ಹೇಳಿಕೆ.ಪರ್ವತಾರೋಹಿಗಳು ಕಿಕ್ಕಿರಿಯಲು ಕಾರಣ ಇಲ್ಲದಿರಲಿಲ್ಲ. ಸಾಮಾನ್ಯವಾಗಿ ಪ್ರತಿವರ್ಷದ ಮಾರ್ಚ್‌ನಿಂದ ಜೂನ್ ತಿಂಗಳ ಮೊದಲ ವಾರದವರೆಗೆ ಎವರೆಸ್ಟ್ ಏರಲು ಸೂಕ್ತ ಸಮಯ. ಆದರೆ ಈ ಬಾರಿ ಪ್ರಕೃತಿಯ ಪಂಚಾಂಗದಲ್ಲಿ ಬೇರೆಯದೇ ಪುಟವಿತ್ತು. ಹವಾಮಾನದಲ್ಲಿ ಏರುಪೇರು; ಹಾಗಾಗಿ ಈ ವರ್ಷ ಪರ್ವತ ಏರಲು ಮೇ 25 ಕಡೆಯ ದಿನ ಎಂದು ಘೋಷಿಸಲಾಯಿತು. ಹಾಗಾಗಿ, ಮೇ ತಿಂಗಳ ಕೊನೆಯ ವಾರ ಎವರೆಸ್ಟ್ ಏರುವ ದಾರಿಯಲ್ಲಿ ನೂಕುನುಗ್ಗಲು ಕಾಣಿಸಿಕೊಂಡಿತ್ತು.ದೂರದ ಬೆಟ್ಟ ನುಣ್ಣಗೆ...

ಜೀವನದಲ್ಲಿ ಒಮ್ಮೆಯಾದರೂ ಎವರೆಸ್ಟ್ ಏರಬೇಕು -ಇದು ಚಾರಣಪ್ರಿಯರ, ಪರ್ವತಾರೋಹಿಗಳ ಹೆಬ್ಬಯಕೆ. ಹಿಮಾಲಯದ ನೆತ್ತಿಯಲ್ಲಿ ನಿಂತು ಪತಾಕೆ ಹಾರಿಸುವವರಿಗೆ, ಕೇಕೆ ಹಾಕುವವರಿಗೆ, `ಅಂತೂ ತಲುಪಿದೆವಲ್ಲಾ~ ಎಂದು ಏದುಸಿರು ಬಿಡುವವರಿಗೆ, ವಿಶ್ವವನ್ನು ಗೆದ್ದಷ್ಟು ಸುಖ. ಆದರೆ ಎವರೆಸ್ಟ್‌ನ ಹಾದಿ ಹಿಮದಷ್ಟು ಮೆದುವಲ್ಲ.ಸಮುದ್ರ ಮಟ್ಟದಿಂದ ಎವರೆಸ್ಟ್ ಶಿಖರದ ಎತ್ತರ 8,848 ಮೀಟರ್. ಅಡಿಗಳಲ್ಲಿ ಹೇಳುವುದಾದರೆ 29,035 ಅಡಿ. ಮೊದಲ ಬೇಸ್ ಕ್ಯಾಂಪ್ 5,334 ಮೀಟರ್ ಎತ್ತರದಲ್ಲಿದ್ದರೆ, ಕೊನೆಯ ಹಂತದ ಬಿಡಾರ 8,000 ಮೀಟರ್ ಎತ್ತರದಲ್ಲಿದೆ. ಇದರ ಮಧ್ಯೆ ಮೂರು ಬಿಡಾರಗಳಿರುತ್ತವೆ. ಅವು ಕ್ರಮವಾಗಿ 5,943, 6,400 ಮತ್ತು 7,162 ಮೀಟರ್ ಎತ್ತರದಲ್ಲಿವೆ.ಮೇ 24ರ ಗುರುವಾರ. ರಾತ್ರಿ ಪ್ರಾರಂಭವಾದ ಶಿಖರಗಾಮಿಗಳ ಕೊನೆ ಹಂತದ (8000 ಮೀ. ಎತ್ತರದಿಂದ) ಚಾರಣ ದಕ್ಷಿಣ ದಿಕ್ಕಿನ ಕಡೆಯಿಂದ ಹಿಮ ಪರ್ವತಗಳ ನಡುವೆ ಸಾಗಿತ್ತು. ಗುರುವಾರ ಇಡೀ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವದವರೆಗೂ ನಡೆದ ಕೆಲವರು ಕೊನೆಯ ಹಂತದ ಬಿಡಾರ ತಲುಪಿದ್ದರು.ಇನ್ನೂ ಕೆಲವರು ಅಲ್ಲಿಗೆ ತಲುಪಿದಾಗ ಮಧ್ಯಾಹ್ನವಾಗಿತ್ತು. ದಕ್ಷಿಣ ದಿಕ್ಕಿನ ಈ ಏರು ರಸ್ತೆ `ಡೆತ್ ಝೋನ್~ (ಮರಣ ವಲಯ) ಎಂದೇ ಕುಖ್ಯಾತಿ. ಅತ್ಯಂತ ಕಡಿದಾದ, ಸಾವಿರಾರು ಮೀಟರ್ ಹಿಮ ಕವಿದ, ಭೀಕರ ಹಮಾಮಾನ ವೈಪ್ಯರೀತ್ಯದ ವಲಯ ಇದು. ಕನಿಷ್ಠ ಬೆಳಿಗ್ಗೆ ಹನ್ನೊಂದು ಗಂಟೆಯೊಳಗೆ ಈ ಪ್ರದೇಶ ತಲುಪಿ ಅಲ್ಲಿಂದ ಎವರೆಸ್ಟ್ ಪರ್ವತದ ಕಡೆಗೆ ಪ್ರಯಾಣ ಮಾಡಬೇಕೆಂದು ಪರ್ವತಾರೋಹಿಗಳಿಗೆ ಎಚ್ಚರಿಕೆ ನೀಡಲಾಗಿತ್ತು.ಆದರೆ ಬಹಳಷ್ಟು ಜನರು ಮಧ್ಯಾಹ್ನ 2:30ರವರೆಗೂ ಅಲ್ಲಿಯೇ ಇದ್ದರು. ತಡವಾಗಿ ಇಲ್ಲಿಗೆ ತಲುಪಿದ ಪರ್ವತಾರೋಹಿಗಳು ಬಹಳ ಹೊತ್ತು ಸುಧಾರಿಸಿಕೊಂಡಿದ್ದರು. ಬಹುತೇಕರು ತಾವು ಹೊತ್ತು ತಂದಿದ್ದ ಆಮ್ಲಜನಕವನ್ನು ಅಲ್ಲಿಯೇ ಉಸಿರಾಡಿ ಮುಗಿಸಿದ್ದರು. ಅಂತಿಮವಾಗಿ 82 ಶಿಖರಾರೋಹಿಗಳು ಗೌರಿಶಂಕರದ ತುದಿ ಮುಟ್ಟಿದರು. ಅವರ ಜೀವಮಾನದ ಕನಸೊಂದು ನನಸಾಗಿತ್ತು.ಶಿಖರ ಏರಿದ್ದೇನೋ ಸರಿ. ಹಿಮಾಲಯದಲ್ಲಿ ಏರುವ ದಾರಿಯಷ್ಟೇ ಇಳಿಯುವ ದಾರಿಯೂ ದುರ್ಗಮ. ವಿಪರೀತ ದಣಿದಿದ್ದ ಶಿಖರಾರೋಹಿಗಳ ಪೈಕಿ ನಾಲ್ವರು ಮಾರ್ಗ ಮಧ್ಯದಲ್ಲಿ ಕುಸಿದುಬಿದ್ದರು. ಯಾವ ಆಸರೆಯೂ ಅವರ ಚೇತರಿಕೆಗೆ ಸಾಕಾಗಲಿಲ್ಲ. ಯಶಸ್ವಿಯಾಗಿ ಹಿಮಾಲಯದ ನೆತ್ತಿಯೇರಿದರೂ, ಆ ನಾಲ್ವರಿಗೆ ವಾಪಸ್ಸಾಗುವ ಅದೃಷ್ಟವಿರಲಿಲ್ಲ. ಹಿಮಾಲಯದ ರುದ್ರಭೂಮಿಯ ಲೆಕ್ಕಕ್ಕವರು ಜಮೆಯಾದರು.

ಮರಣ ಮೃದಂಗ

ಕಡಿಮೆ ಹವೆಯ ಒತ್ತಡದಿಂದ ಸಮುದ್ರ ಮಟ್ಟದ ನೆಲದಲ್ಲಿ ದೊರಕುವ ಶೇ 33 ಭಾಗದಷ್ಟು ಆಮ್ಲಜನಕ ಮಾತ್ರ ಇಲ್ಲಿ ದೊರೆಯುತ್ತದೆ. ಹಿಮಾಲಯದಲ್ಲಿ ಒಬ್ಬ ಸಾಮಾನ್ಯ ಮನುಷ್ಯ 12 ಗಂಟೆಗಳಿಗೆ ಕೇವಲ 1.72 ಕಿ.ಮೀ. ದೂರ ಕ್ರಮಿಸುವುದೂ ಕಷ್ಟ. ಇದಕ್ಕೂ ಹೆಚ್ಚು ದೂರ ಕ್ರಮಿಸಬೇಕೆಂದರೆ ಒಬ್ಬ ವ್ಯಕ್ತಿ ಒಂದೂವರೆ ಎರಡು ತಿಂಗಳ ಕಾಲ ಈ ವಲಯದಲ್ಲಿ ತರಬೇತಿ ಪಡೆದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.ವಾತಾವರಣದಲ್ಲಿ ಆಮ್ಲಜನಕ ಕಡಿಮೆ ದೊರೆತಾಗಲೆಲ್ಲಾ ರಕ್ತದಲ್ಲಿ ಜೀವವಾಯುವೆನಿಸಿದ ಆಮ್ಲಜನಕದ ಮಟ್ಟ ಕಡಿಮೆಯಾಗಿ ಉಸಿರಾಟ ಏರುಪೇರಾಗುತ್ತದೆ. ನಿಮಿಷಕ್ಕೆ ಸರಾಸರಿ 72 ಸಲ ಉಸಿರಾಡುವವರು 80-90 ಬಾರಿ ಉಸಿರಾಡುತ್ತಾರೆ. ಈ ವಲಯದ ಸಾಮಾನ್ಯ ಉಷ್ಣಾಂಶ -35 ಡಿಗ್ರಿ ಸೆಲ್ಷಿಯಸ್. ದೇಹದ ಯಾವುದೇ ಭಾಗ ಗಾಳಿಗೆ ತೆರೆದುಕೊಂಡರೆ ಕೆಲವೇ ನಿಮಿಷಗಳಲ್ಲಿ ಮರಗಟ್ಟಿ ಆ ಭಾಗದಲ್ಲಿ ರಕ್ತ ಚಲನೆ ನಿಂತುಹೋಗುತ್ತದೆ. ಆ ಅಂಗವನ್ನೇ ಕತ್ತರಿಸಬೇಕಾಗುತ್ತದೆ. ಇಂಥ ದುರ್ಗಮ ವಲಯದಲ್ಲಿ ಹೆಲಿಕ್ಯಾಪ್ಟರ್‌ಗಳು ಹಾರುವುದು ಕೂಡ ಕಷ್ಟ.1953ರಲ್ಲಿ ನ್ಯೂಜಿಲೆಂಡ್‌ನ ಎಡ್ಮಂಡ್ ಹಿಲ್ಲರಿ ಮತ್ತು ಭಾರತದ ತೇನ್‌ಸಿಂಗ್ ನೋರ್ಗೆ ಮೊದಲ ಬಾರಿಗೆ ಎವರೆಸ್ಟ್ ಶಿಖರವನ್ನು ಮೆಟ್ಟಿನಿಂತರು. ಅಂದಿನಿಂದ ಇಂದಿನವರೆಗೆ 5,104 ಪರ್ವತಾರೋಹಿಗಳು ಎವರೆಸ್ಟ್ ಏರಲು ಪ್ರಯತ್ನಿಸಿದ್ದಾರೆ. ಅವರಲ್ಲಿ 3,142 ಅದೃಷ್ಟವಂತರಷ್ಟೇ ಶಿಖರವನ್ನು ಮೆಟ್ಟಿ ನಿಂತಿದ್ದಾರೆ.1953ರಿಂದ 1974ರವರೆಗೆ ಕೇವಲ ಏಳು ಮಂದಿ ಮಾತ್ರ ಈ ಶಿಖರದ ತುದಿ ಮುಟ್ಟಿದ್ದರು. 2007ರ ಒಂದೇ ವರ್ಷದಲ್ಲಿ 633 ಪರ್ವತಾರೋಹಿಗಳು ಏರಿದ್ದರು. ಇವರಲ್ಲಿ 350 ಜನ ಪರ್ವತಾರೋಹಿಗಳಾದರೆ, 253 ಜನ ಶೇರ್ಪಾಗಳು. ಶೇರ್ಪಾಗಳೆಂದರೆ ಪರ್ವತಾರೋಹಿಗಳ ಜೊತೆಗೆ ಸಹಾಯ ಮಾಡಲು ತೆರಳುವ ನೇಪಾಳದ ಒಂದು ಜನಾಂಗ.ಇದುವರೆಗೂ ಎವರೆಸ್ಟ್ ದಾರಿಯಲ್ಲಿ 219 ಅಪಘಾತಗಳಾಗಿವೆ. ದಾಖಲೆಗಳ ಪ್ರಕಾರ ವರ್ಷಕ್ಕೆ ಸರಾಸರಿ 4-5 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 1996ರ ಮೇ 10ರ ಒಂದೇ ದಿನ 8 ಜನರು ಭೀಕರ ಹಿಮಗಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡರು. ಸುಮಾರು 225 ಮೃತ ದೇಹಗಳು ಶಿಖರದ ದಾರಿಯಲ್ಲಿ ಮತ್ತು ಸುತ್ತಮುತ್ತಲಿನ ಕೊರಕಲುಗಳಲ್ಲಿ ಹೂತುಹೋಗಿವೆ. ಈ ಎಲ್ಲಾ ಹೆಣಗಳು ಕೊಳೆಯದೆ ಹಿಮರಾಶಿಯ ಕೆಳಗೆ ಹಾಗೆ ಉಳಿದುಕೊಂಡಿವೆ. ಈ ಕಾರಣದಿಂದಲೇ ಈ ವಲಯವನ್ನು `ಎವರೆಸ್ಟ್ ಮಸಣ~ ಎಂದು ಕರೆಯುತ್ತಾರೆ.ಎವರೆಸ್ಟ್ ಸಂತೆಯಲ್ಲಿ...

ಪ್ರಸ್ತುತ ಹಿಮಾಲಯ ಪರ್ವತಾರೋಹಿಗಳಿಗೆ ತರಬೇತಿ ನೀಡುವ 27 ಶಾಲೆಗಳು, ಎರಡು ಆಸ್ಪತ್ರೆಗಳು ಮತ್ತು ಹನ್ನೆರಡು ಔಷಧ ಅಂಗಡಿಗಳು ಎವರೆಸ್ಟ್ ದಾರಿಯಲ್ಲಿವೆ. ನದಿ ಕಣಿವೆಗಳ ನಡುವೆ ನೂರಾರು ಸೇತುವೆಗಳನ್ನು ಕಟ್ಟಲಾಗಿದ್ದು ನದಿ, ಝರಿಗಳಿಗೆ ನೀರಿನ ಕೊಳಾಯಿಗಳನ್ನು ಅಳವಡಿಸಲಾಗಿದೆ.ಪ್ರಸ್ತುತ ಎವರೆಸ್ಟ್ ಏರುವ ಪ್ರತಿಯೊಬ್ಬರಿಗೆ ಸುಮಾರು 10 ಸಾವಿರದಿಂದ 25 ಸಾವಿರ ಅಮೆರಿಕನ್ ಡಾಲರ್ (ಅಂದಾಜು 5ರಿಂದ 13 ಲಕ್ಷ ರೂಪಾಯಿ) ಖರ್ಚಾಗುತ್ತದೆ. 3 ಸಾವಿರ ಡಾಲರ್ (ಒಂದೂವರೆ ಲಕ್ಷ ರೂ) ಆಮ್ಲಜನಕಕ್ಕೆ ಖರ್ಚಾಗುತ್ತದೆ. ಉಳಿದ ಖರ್ಚುಗಳು ಆಹಾರ, ಟೆಂಟು, ಹಗ್ಗ, ಔಷಧ, ಜೊತೆಗೆ ಬರುವ ಕೂಲಿ ಆಳುಗಳು ಮತ್ತು ಗೈಡ್‌ಗಳಿಗೆ ಮೀಸಲು. ಕಠ್ಮಂಡುವಿನಿಂದ ಬೇಸ್ ಕ್ಯಾಂಪ್‌ಗೆ 100 ಕಿ.ಮೀ. ದೂರವಾದರೆ, ಟಿಬೆಟ್‌ನ ಲಾಸಾದಿಂದ 300 ಕಿ.ಮೀ. ಅಂತರ.ಹಾದಿಯ ಎಲ್ಲಾ ಬಿಡಾರಗಳಲ್ಲೂ ಆಮ್ಲಜನಕ ದೊರಕುತ್ತದೆ. ಹಿಮಾಲಯ ಏರಿ ಸುಸ್ತಾಗಿ ಬರುವವರಿಗೆ ಹಾಸಿಗೆ ಹಾಸಿ ಕೊಡುವವರೂ ಅಡುಗೆ ಮಾಡುವವರೂ ಇಲ್ಲಿದ್ದಾರೆ. ಎರಡು ಅಥವಾ ಮೂರು ನಿಮಿಷವಷ್ಟೇ ಎವರೆಸ್ಟ್ ಶಿಖರದ ಮೇಲೆ ಇದ್ದು ಬರಲು ನೂರಾರು ಜನ ಲಕ್ಷಾಂತರ ಡಾಲರ್ ಹಣ ಖರ್ಚು ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಈ ಶಿಖರಾರೋಹಿಗಳು ಹಿಂಜರಿಯುವುದಿಲ್ಲ. ಹಿಮಾಲಯದ ಆಕರ್ಷಣೆಗೆ ಮೇರೆಯೇ ಇಲ್ಲ.ಆ ಹಸಿರು ಕಾಡು ಕಣಿವೆ, ಪಾತಾಳದ ಕೊರಕಲುಗಳು, ಬೆಟ್ಟಗಳನ್ನು ಕಡಿದು ಸಾಗುವ ನದಿಗಳು, ಹಿಮಚ್ಛಾದಿತ ಶಿಖರ ಮಾಲೆಗಳು, ಆಕಾಶದೊಂದಿಗೆ ಹಾಡುಕಟ್ಟಿ ಸಾಗುವ ಮೋಡ ಸಾಲು... ಒಂದೇ ಎರಡೇ. ಹಿಮಾಲಯವನ್ನು ವರ್ಣಿಸುವುದು ಅಸಾಧ್ಯ. ಅದೊಂದು ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕಾದ ಪ್ರಕೃತಿಯ ಅದ್ಭುತ.ಅಂದಹಾಗೆ, 3300 ಕಿ.ಮೀ ಉದ್ದ ಮತ್ತು 200 ರಿಂದ 350 ಕಿ.ಮೀ. ಅಗಲದ ಇಡೀ ಹಿಮಾಲಯ ಪರ್ವತ ಒಂದು ಕಾಲದಲ್ಲಿ ಟೆಥೀಸ್ ಎಂಬ ಮಹಾಸಾಗರ ಆಗಿತ್ತು. ಈ ಪರ್ವತ ಶ್ರೇಣಿಗಳ ಪದರು ಶಿಲೆಗಳಲ್ಲಿ ಸಮುದ್ರದಲ್ಲಿ ದೊರಕುವ ಬಹಳಷ್ಟು ಪ್ರಾಣಿಗಳ ಪಳೆಯುಳಿಕೆಗಳು ಕಂಡುಬಂದಿವೆ.ಈಚಿನ ವರ್ಷಗಳಲ್ಲಿ ಹಿಮಾಲಯವನ್ನು ಏರಲು ಪ್ರಯತ್ನಿಸುವ ಕನಸುಗಾರರ ಸಂಖ್ಯೆ ಹೆಚ್ಚಾಗಿದೆ. ಜನರ ದಟ್ಟಣೆಯಿಂದ ನಗರಗಳು, ವಾಹನಗಳ ದಟ್ಟಣೆಯಿಂದ ರಸ್ತೆಗಳು ಕಿಕ್ಕಿರಿದಿರುವ ದಿನಗಳಿವು. ಈ ದಟ್ಟಣೆ ಹಿಮಾಲಯದಲ್ಲೂ ಸಣ್ಣ ಪ್ರಮಾಣದಲ್ಲಿ ಕಾಣಿಸುತ್ತಿದೆ. ಹಾಗಾಗಿಯೇ ಆತಂಕಗಳೂ ಹಿಂದೆಂದಿಗಿಂತಲೂ ಹೆಚ್ಚಾಗಿವೆ.

 
ಎಚ್ಚರವಿದ್ದರೆ ಅಪಾಯವಿಲ್ಲ

ನಾನು ಇತ್ತೀಚಿಗೆ ಮೌಂಟ್ ಎವರೆಸ್ಟ್‌ನ ಬೇಸ್‌ಕ್ಯಾಂಪ್‌ವರೆಗೆ ಹೋಗಿದ್ದೆ. ನನ್ನೊಂದಿಗೆ ಇನ್ನೂ ಮೂವರು ಉತ್ಸಾಹಿಗಳು ಇದ್ದರು. ಮೈಸೂರಿನಿಂದ ಹೊರಡುವ ಮುನ್ನವೇ ಅವರಿಗೆ ಸಾಕಷ್ಟು ತರಬೇತಿ ನೀಡಿದ್ದೆ. ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಿಸಿದ್ದೆ. ದಿನವೂ ಚಾಮುಂಡಿ ಬೆಟ್ಟಕ್ಕೆ ಚಾರಣ ಕೈಗೊಳ್ಳುತ್ತಿದ್ದೆವು. ಇದರಿಂದಾಗಿ ಕಠಿಣ ಹಾದಿಯನ್ನು ಕ್ರಮಿಸುವುದು ಅವರಿಗೆ ಸುಲಭವಾಯಿತು.ಮೈಸೂರಿನಿಂದ ರೆಕ್ಸೌಲ್ ಮಾರ್ಗವಾಗಿ ಕಠ್ಮಂಡುವಿಗೆ ಹಾಗೂ ಅಲ್ಲಿಂದ ಬೇಸ್‌ಕ್ಯಾಂಪ್‌ಗೆ ತಲುಪಿದ್ದೆವು. ಮೌಂಟ್ ಎವರೆಸ್ಟ್ ತುದಿಯೇರಲು ಪ್ರತಿ ತಂಡ ನೇಪಾಳ ಸರ್ಕಾರಕ್ಕೆ ಐವತ್ತು ಲಕ್ಷ ರೂಪಾಯಿ ಹಿಂತಿರುಗಿಸಲಾಗದ ಠೇವಣಿ ಇಡಬೇಕು. ನಂತರ ಪರ್ವತಾರೋಹಿಗಳನ್ನು ಗುರಿಮುಟ್ಟಿಸುವ ಮರಳಿ ಕರೆತರುವ ಜವಾಬ್ದಾರಿ ಅಲ್ಲಿನ ಸರ್ಕಾರದ್ದು. ನಮಗೆ ಅಷ್ಟೆಲ್ಲಾ ಹಣ ವಿನಿಯೋಗಿಸಲು ಸಾಧ್ಯವಿರಲಿಲ್ಲ.ಹಾಗಾಗಿ ಬೇಸ್‌ಕ್ಯಾಂಪ್‌ನಿಂದ ಮರಳಲು ನಿರ್ಧರಿಸಿದೆವು. ಬೇಸ್‌ಕ್ಯಾಂಪ್ ಸಮುದ್ರ ಮಟ್ಟದಿಂದ ಸುಮಾರು 5,334 ಮೀ ಎತ್ತರದಲ್ಲಿದೆ. ಕ್ಯಾಂಪ್‌ಗೆ ತೆರಳಿದರೂ ಎವರೆಸ್ಟ್ ನಮಗೆ ದರ್ಶನ ನೀಡುವುದೇ ಇಲ್ಲ. ಅಲ್ಲಿಗೆ ಸಮೀಪದ ಗೋರಖ್‌ಶೆಪ್‌ನ ಕಾಲಾಪತ್ತರ್ ಪರ್ವತವೇರಿದಾಗ ಮಾತ್ರ ಎವರೆಸ್ಟ್‌ನ ತುದಿ ಕಾಣಸಿಗುತ್ತದೆ.

ನಮ್ಮದು 21 ದಿವಸಗಳ ಪ್ರಯಾಣವಾಗಿತ್ತು. ಮಳೆ, ಹಿಮಪಾತ ಮುಂತಾದ ಅಡ್ಡಿ ಆತಂಕಗಳು ಎದುರಾಗಲಿಲ್ಲ.ಚಾರಣಿಗರು ಅನುಭವಿಗಳಾದ್ದರಿಂದ ಅವರಿಗೆ ದೈಹಿಕ ತೊಂದರೆಗಳೂ ಕಾಣಿಸಿಕೊಳ್ಳಲಿಲ್ಲ. ಜೋರಾಗಿ ಬೀಸುವ ತಣ್ಣನೆ ಗಾಳಿಯನ್ನು ಸಹಿಸಿಕೊಂಡು ಹತ್ತು ಹದಿನೈದು ನಿಮಿಷ ಮಾತ್ರ ಕಾಲಾಪತ್ತರ್‌ನಲ್ಲಿ ಉಳಿಯಲು ಸಾಧ್ಯವಾಯಿತು. ದೂರದಿಂದಲೇ ಮೌಂಟ್ ಎವರೆಸ್ಟ್‌ನ ಫೋಟೊ ತೆಗೆದುಕೊಂಡು ಮರಳಿದೆವು. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಯಾವುದೇ ಅಪಾಯ ಸಂಭವಿಸದು.

-ಸುರೇಶ್ ಜಿ.ಡಿ

ಚಾರಣಿಗ, ಯೂತ್ ಹಾಸ್ಟೆಲ್ ಅಸೋಸಿಯೇಷನ್, ಗಂಗೋತ್ರಿ ಘಟಕ, ಮೈಸೂರು.
ಪರ್ವತವೊಂದೇ! ನಾಮ ಹಲವು!

ಮೌಂಟ್ ಎವರೆಸ್ಟ್‌ಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರು. ಡಾರ್ಜಿಲಿಂಗ್‌ನಲ್ಲಿ ದೇವದುಂಗ, ಟಿಬೆಟ್‌ನಲ್ಲಿ ಚೋಮೊಲುಂಗ್ಮ, ನೇಪಾಳ ಸೇರಿದಂತೆ ಹಲವೆಡೆ ಗೌರಿಶಂಕರ ಎಂದು ಅನೂಚಾನವಾಗಿ ಕರೆಯಲಾಗುತ್ತಿದೆ. ಇದು ಬ್ರಿಟಿಷ್ ಟ್ರಿಗ್ನಾಮೆಟ್ರಿಕ್ ಸರ್ವೇಕ್ಷಕ ಆಂಡ್ರೂ ವಾಗ್ ಅವರನ್ನು ಗೊಂದಲಕ್ಕೀಡು ಮಾಡಿತು.ಹೀಗಾಗಿ 1808ರಲ್ಲಿ, ಬ್ರಿಟಿಷ್ ಸರ್ವೆ ಜನರಲ್ ಆಫ್ ಇಂಡಿಯಾದ ತನ್ನ ಗುರು ಕರ್ನಲ್ ಜಾರ್ಜ್ ಎವರೆಸ್ಟ್ ಅವರ ಹೆಸರನ್ನು ಈ ಶಿಖರಕ್ಕೆ ಸೂಚಿಸಿದ್ದರು. ಆದರೆ ಸ್ವತಃ ಎವರೆಸ್ಟ್ ಅವರಿಗೇ ಈ ಬಗ್ಗೆ ಸಹಮತವಿರಲಿಲ್ಲ.ಇಂಗ್ಲೆಂಡ್‌ನ ಪ್ರತಿಷ್ಠಿತ ರಾಯಲ್ ಜಿಯಾಗ್ರಫಿಕ್ ಸೊಸೈಟಿಗೆ 1857ರಲ್ಲಿ ಪತ್ರ ಬರೆದ ಅವರು, `ತಮ್ಮ ಹೆಸರನ್ನು ಹಿಂದಿಯಲ್ಲಾಗಲೀ ಅಥವಾ ಇತರೆ ಸ್ಥಳೀಯ ಭಾಷೆಗಳಲ್ಲಿ ಉಚ್ಛರಿಸುವುದಾಗಲೀ ಸಾಧ್ಯವಿಲ್ಲ. ಆ ಕಾರಣದಿಂದಾಗಿ ಪರ್ವತಕ್ಕೆ ತಮ್ಮ ಹೆಸರು ಬೇಡ~ ಎಂದಿದ್ದರು. ಅನೇಕ ಚರ್ಚೆಗಳು ನಡೆದ ಬಳಿಕ 1865ರಲ್ಲಿ ಎವರೆಸ್ಟ್ ಅವರ ಹೆಸರನ್ನೇ ಅಂಗೀಕರಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry