ಮಂಗಳವಾರ, ಅಕ್ಟೋಬರ್ 15, 2019
26 °C

ಹಿಮೋಫಿಲಿಯಾ ರೋಗಿಗಳಿಗೆ ನಿಯಮದ ಅಡ್ಡಿ

Published:
Updated:

ದಾವಣಗೆರೆ: ಗಂಭೀರ ಕಾಯಿಲೆಯಾದ `ಹಿಮೋಫಿಲಿಯಾ~ ಚಿಕಿತ್ಸೆಗೆ ಅಗತ್ಯವಾದ ದುಬಾರಿ ಔಷಧಗಳನ್ನು ರಾಜ್ಯದ ಜಿಲ್ಲಾ ಆಸ್ಪತ್ರೆಗಳಿಗೆ ಸರ್ಕಾರ ಪೂರೈಸುತ್ತಿದೆಯಾದರೂ ಅವುಗಳನ್ನು ಪಡೆದುಕೊಳ್ಳಲು ಬಿಪಿಎಲ್ ಪಡಿತರ ಚೀಟಿ ಕಡ್ಡಾಯಗೊಳಿಸಿರುವುದು ಮತ್ತು ಅಗತ್ಯ ಪ್ರಮಾಣದ ಔಷಧಿಗಳನ್ನು ಸರಬರಾಜು ಮಾಡದಿರುವುದರಿಂದ ಈ ಸೌಲಭ್ಯ ಬಹಳಷ್ಟು ರೋಗಿಗಳಿಗೆ ದೊರೆಯುತ್ತಿಲ್ಲ.ನಿರಂತರ ರಕ್ತಸ್ರಾವ ತಡೆಗಟ್ಟಲು ರೋಗಿಗಳಿಗೆ ಬೇಕಾದ ಫ್ಯಾಕ್ಟರ್-8 ಮತ್ತು ಫ್ಯಾಕ್ಟರ್-9 ಔಷಧಿಗಳು ದುಬಾರಿಯಾಗಿದ್ದು, ಬಡ ರೋಗಿಗಳ ಕೈಗೆಟುಕುವಂತಿಲ್ಲ. ಈ ಕಾರಣಕ್ಕಾಗಿ 2005ರಿಂದ ಸರ್ಕಾರ ಜಿಲ್ಲಾ ಆಸ್ಪತ್ರೆಗಳಿಗೆ ಈ ಔಷಧಿಗಳನ್ನು ಪೂರೈಸುತ್ತಾ ಬಂದಿದೆ.ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ರಾಜ್ಯದಲ್ಲಿ 6 ಸಾವಿರ ಹಿಮೋಫಿಲಿಯಾ ರೋಗಿಗಳಿದ್ದು, ಇದುವರೆಗೆ 2 ಸಾವಿರ ರೋಗಿಗಳನ್ನು ಗುರುತಿಸಲಾಗಿದೆ. ಆದರೆ ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಮಾತ್ರ ಈ ಔಷಧಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಔಷಧಿ ಖರೀದಿಸಲು ಸಾಧ್ಯವಾಗದ ಮಧ್ಯಮ ವರ್ಗದ ರೋಗಿಗಳು, ಎಪಿಎಲ್ ಪಡಿತರ ಚೀಟಿ ಹೊಂದಿರುವ ಹಿಮೋಫಿಲಿಯಾ ಪೀಡಿತರಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲ.`ಗ್ರಾಮಾಂತರ ಪ್ರದೇಶದ ಇನ್ನೂ ಕೆಲವು ರೋಗಿಗಳು ಬಡತನ ರೇಖೆಗಿಂತ ಕೆಳಗಿದ್ದರೂ, ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳುವ ವಿಧಾನ ತಿಳಿಯದವರೂ ಇದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಔಷಧಿಗಳು ಅವರನ್ನು ತಲುಪುತ್ತಿಲ್ಲ.ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಆಸ್ಪತ್ರೆಗಳಿಗೆ ಬಿಡುಗಡೆಯಾದ ಔಷಧಿಗಳು ವಾಪಸ್ ಹೋಗಿರುವುದೂ ಉಂಟು. ಇನ್ನೂ ಕೆಲವು ಕಡೆಗಳಲ್ಲಿ ಔಷಧಿಗಳ ಅವಧಿ (ಎಕ್ಸ್‌ಪೈರಿ ಡೇಟ್) ಮುಗಿದುಹೋದ ಉದಾಹರಣೆಗಳೂ ಇವೆ~ ಎನ್ನುತ್ತಾರೆ ದಾವಣಗೆರೆ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ ಹನಗವಾಡಿ.ಔಷಧಿಗಳು ನಿರಂತವಾಗಿ ಲಭ್ಯ ಆಗಬೇಕು.. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಔಷಧಿ ಪೂರೈಸಬೇಕು. ಬ್ಬ ರೋಗಿಗೆ ಒಂದು ವರ್ಷಕ್ಕೆ 10 ಸಾವಿರ ಯೂನಿಟ್‌ಗಳಷ್ಟು ಫ್ಯಾಕ್ಟರ್ (ಔಷಧಿ) ದೊರೆಯುವ ವ್ಯವಸ್ಥೆ ಆಗಬೇಕು. ಹಿಮೋಫಿಲಿಯಾ ಗಂಭೀರ ಕಾಯಿಲೆಯಾಗಿರುವ ಕಾರಣ, ಜಿಲ್ಲಾಸ್ಪತ್ರೆಗಳಲ್ಲಿ ಔಷಧಿ ಉಚಿತವಾಗಿ ಪಡೆಯಲು ಮಾನವೀಯ ದೃಷ್ಟಿಯಿಂದ ಬಿಪಿಎಲ್ ಕಾರ್ಡ್ ಕಡ್ಡಾಯಗೊಳಿಸಬಾರದು ಎಂಬುದು ಅವರ ಒತ್ತಾಯ.ಸರ್ಕಾರವೇನೋ ಜಿಲ್ಲಾಸ್ಪತ್ರೆಗಳಿಗೆ ಔಷಧಿ ಬಿಡುಗಡೆ ಮಾಡುತ್ತದೆ. ಆದರೆ ಚಿಕಿತ್ಸೆ ನಿಡುವ ಬಹಳಷ್ಟು ವೈದ್ಯರಿಗೆ ಅಪರೂಪದ ಈ ಕಾಯಿಲೆಯ ಬಗ್ಗೆ ಮಾಹಿತಿ ಇಲ್ಲ. ರೋಗಿಯ ತೂಕ ಮತ್ತಿತರ ಅಂಶಗಳ ಆಧಾರದ ಮೇಲೆ ಫ್ಯಾಕ್ಟರ್ ನೀಡಬೇಕಾಗುವುದರಿಂದ ಈ ಬಗ್ಗೆ ಅಂಥ ವೈದ್ಯರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಾಗಾರ, ನಿರಂತರ ವೈದ್ಯಕಿಯ ಶಿಕ್ಷಣದಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸುತ್ತಾರೆ.ಇನ್ನು ಜಿಲ್ಲಾಸ್ಪತ್ರೆಯವರು ತಮ್ಮ ಬಜೆಟ್‌ನಲ್ಲೇ ಸರ್ಕಾರದಿಂದ ನಿಗದಿತ ಪ್ರಮಾಣದ ಔಷಧಿ ಪಡೆದುಕೊಳ್ಳಬೇಕಾಗುತ್ತದೆ. ಹಿಮೋಫಿಲಿಯಾ ಔಷಧಿ ದುಬಾರಿಯಾದ ಕಾರಣ ಬಜೆಟ್‌ನ ಹೆಚ್ಚು ಮೊತ್ತ ಇದಕ್ಕೇ ಖರ್ಚಾಗಿ ಬಿಡುತ್ತದೆ. ಆಗ ಇತರ ಔಷಧಿಗಳನ್ನು ಪಡೆಯಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬಹಳಷ್ಟು ಜಿಲ್ಲಾಸ್ಪತ್ರೆಗಳಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ.ಜಿಲ್ಲಾಸ್ಪತ್ರೆಗಳಿಗೆ ನೀಡಲಾಗುವ ಔಷಧಿಗಳ ಪ್ರಮಾಣ ಕಡಿಮೆ ಎನ್ನುವ ವಾದವೂ ಇದೆ. `ವರ್ಷದ ಆರಂಭದ ಮೂರು ತಿಂಗಳಲ್ಲೇ ಔಷಧಿಗಳು ರೋಗಿಗಳಿಗೆ ಪೂರೈಕೆಯಾಗಿ ಬಿಡುತ್ತವೆ. ಬೇಡಿಕೆ ಮಾತ್ರ ಜಾಸ್ತಿ ಇದೆ~ ಎಂದು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪರಶುರಾಮಪ್ಪ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ಈ ಔಷಧಿಗಳ ಪೂರೈಕೆಯಾಗಬೇಕು ಎನ್ನುವ ಒಂದು ಬೇಡಿಕೆಯೂ ಇದೆ. ತಮಿಳುನಾಡಿನಲ್ಲಿ ಆ ವ್ಯವಸ್ಥೆಯಾಗಿದೆ. ಆದರೆ ಇಲ್ಲಿ, ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ್ದು ಎಂಬ ಕಾರಣಕ್ಕಾಗಿ ಆರೋಗ್ಯ ಇಲಾಖೆಯವರು ಔಷಧಿ ನೀಡಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ.

Post Comments (+)