ಹಿರಿತೆರೆಯಲ್ಲಿ ಮದುವೆ ವಿಡಿಯೋ (ಚಿತ್ರ: ಮೊದಲ ಮಿಂಚು)

ಬುಧವಾರ, ಜೂಲೈ 24, 2019
27 °C

ಹಿರಿತೆರೆಯಲ್ಲಿ ಮದುವೆ ವಿಡಿಯೋ (ಚಿತ್ರ: ಮೊದಲ ಮಿಂಚು)

ಎನ್.ಎ.ಎಂ. ಇಸ್ಮಾಯಿಲ್
Published:
Updated:

ನಿರ್ಮಾಪಕ/ ನಿರ್ದೇಶಕ: ವೆಸ್ಲಿ ಬ್ರೌನ್

ತಾರಾಗಣ: ಅಭಿ, ಸುಪ್ರೀತಾ, ದೊಡ್ಡಣ್ಣ, ಸಾಧುಕೋಕಿಲ, ಶರತ್, ಕುರಿ ಸುನಿಲ್, ಪದ್ಮಾ ವಾಸಂತಿ, ಮೈಕಲ್ ಮಧು, ಮುಂತಾದವರು.

ನಿಶ್ಚಿತಾರ್ಥ ಆದ ಹುಡುಗಿಯನ್ನು ಮತ್ತೊಬ್ಬ ಪ್ರೀತಿಸುವ ಕಥೆ ಭಾರತೀಯ ಚಿತ್ರೋದ್ಯಮಕ್ಕೆ ಹೊಸತೇನೂ ಅಲ್ಲ. ಡಿಡಿಎಲ್‌ಜೆಯಿಂದ ಆರಂಭಿಸಿ ಮುಂಗಾರು ಮಳೆಯ ತನಕವೂ ಬಹುದೊಡ್ಡ ಯಶಸ್ಸುಗಳ ಪಟ್ಟಿಯೇ ಇದೆ.

 

ಈ ಪಟ್ಟಿಗೆ `ಮೊದಲ ಮಿಂಚ~ನ್ನೂ ಸೇರಿಸಲು ನಿರ್ದೇಶಕ ಅಥವಾ ಚಿತ್ರ ನಿರ್ಮಾಣದ ಎಲ್ಲಾ ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ದುಡಿದಿರುವ ವೆಸ್ಲಿ ಬ್ರೌನ್ ಪ್ರಯತ್ನಿಸಿದ್ದಾರೆ. ಆದರೆ ಅವರು ಯಶಸ್ಸೆಂಬುದು ಸಿದ್ಧ ಸೂತ್ರಗಳಲ್ಲಿ ಪರಿಭಾವಿಸಿ ಕಾರ್ಯರೂಪಕ್ಕೆ ತರಲು ಸಾಧ್ಯವಿರುವಂಥದ್ದಲ್ಲ ಎಂಬುದನ್ನು ಮಾತ್ರ ಮರೆತಿದ್ದಾರೆ.ಚಿತ್ರ ಕೇವಲ ಮದುವೆ ವಿಡಿಯೋದಂತೆ ಕಾಣಬಾರದು ಎಂಬುದಕ್ಕೆ ನಿರ್ದೇಶಕರು ಬಹಳ ಸರ್ಕಸ್ ಮಾಡಿದ್ದಾರೆ. ದೊಡ್ಡಣ್ಣ ಮದುವೆಯ ಪಾವಿತ್ರ್ಯದಿಂದ ಆರಂಭಿಸಿ ಮುದ್ದೆಯ ಗಟ್ಟಿತನದ ತನಕದ ಹಲವು ಭಾಷಣ ಮತ್ತು ಪ್ರವಚನಗಳನ್ನು ನೀಡುತ್ತಾರೆ. ಒಂದು ಹಂತದ ತನಕ ಕುರಿ ಸುನಿಲ್ ಅವರ ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನವಿದೆ.ಅವರ ಪಾಳಿ ಮುಗಿದ ಮೇಲೆ ಮದುವೆ ಮನೆಯಲ್ಲಿ ಕಳ್ಳತನ ಮಾಡಲು ಬರುವ ಸ್ತ್ರೀ ವೇಷದ ಪುರುಷನೂ ಇದ್ದಾನೆ. ಜೊತೆಗೆ ಈ ಸ್ತ್ರೀವೇಷಧಾರಿಯಿಂದ ಆಕರ್ಷಿತನಾಗಲು ಸಾಧು ಕೋಕಿಲ ಕೂಡಾ ಇದ್ದಾರೆ. ಇದಿಷ್ಟೇ ಆದರೆ ಕಾಮಿಡಿ ಟ್ರಾಕ್ ಕೈಕೊಡುತ್ತದೆ ಎಂದು ಮೊದಲೇ ಮನಗಂಡಂತೆ ಮೈಕಲ್ ಮಧುವಿನ ಪಾತ್ರವೂ ಬಂದು ಹೋಗುತ್ತದೆ.ಇನ್ನು ತಾಂತ್ರಿಕ ಕೌಶಲವನ್ನು ಮೆರೆಯುವ ಪ್ರಯತ್ನವಂತೂ ಚಿತ್ರದ ಉದ್ದಕ್ಕೂ ಅಲ್ಲಲ್ಲಿ ಸಿಂಪಡಿಸಿದಂತೆ ಕಾಣ ಸಿಗುತ್ತದೆ. ತ್ರೀ ಡಿ ಅನಿಮೇಷನ್‌ನಲ್ಲಿ ಬರುವ ಇಲಿಗಳು, ಅಡುಗೆ ಮನೆಗಳೆರಡೂ ನಿರ್ದೇಶಕರಿಗೆ ಇರುವ ತಂತ್ರಜ್ಞಾನದ ಅರಿವನ್ನು `ತೋರಿಸಿ~ ಕೊಡುತ್ತದೆ. ಇದರ ಜೊತೆಗೆ ಸಂಪೂರ್ಣ ಸ್ಲೋಮೋಷನ್‌ನಲ್ಲಿ (ಒಂದು ಸಾವಿರ ಫ್ರೇಂನಲ್ಲಿ) ಒಂದು ಹಾಡೂ ಇದೆ.

 

ಇಷ್ಟೆಲ್ಲಾ ಆದ ಮೇಲೆ ಐಟಂ ಸಾಂಗ್ ಇಲ್ಲದಿದ್ದರೆ ಚೆನ್ನಾಗಿರುವುದಿಲ್ಲ ಎಂದು ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಹೀರೋಗಳಷ್ಟೇ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಟ್ರೆಂಡ್ ಅನ್ನು ಬದಲಾಯಿಸುವಂತೆ ನಿರ್ದೇಶಕರೇ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ್ದಾರೆ.ಹಿರಿತೆರೆಯಲ್ಲಿ ಮದುವೆ ವಿಡಿಯೋ ನೋಡಿ ಆಸ್ವಾದಿಸುವ ಧೈರ್ಯವಿರುವ ಯಾರು ಬೇಕಾದರೂ ಈ ಚಿತ್ರವನ್ನು ನೋಡಬಹುದು. ಇದಕ್ಕಿಂತ ಹೆಚ್ಚಿನ ನಿರೀಕ್ಷೆಗಳು ಪ್ರೇಕ್ಷಕರಿಗಿದ್ದರೆ ಅದಕ್ಕೆ ಯಾರೂ ಹೊಣೆಗಾರರಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry